ತಮಿಳುನಾಡಿನಲ್ಲಿ ಕನ್ನಡಶಾಸನಗಳು
ಹಿಂದಿನ ಕಾಲದಲ್ಲಿ ರಾಜರು ತಮ್ಮ ಆಳ್ವಿಕೆಗೊಳಪಟ್ಟ ಪ್ರದೇಶದ ಜನರಿಗೆ ತಿಳಿಯಪಡಿಸಲೆಂದು ಹೊರಡಿಸುತ್ತಿದ್ದ ಆದೇಶಗಳನ್ನು ಕಲ್ಲಿನ ಮೇಲೆ ಕೊರೆಯಿಸಿ ದೇವಸ್ಥಾನ, ಸಂತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುತ್ತಿದರು. ರಾಜನ ಆದೇಶಗಳು ಶಿಲೆಯ ಮೇಲೆ ಕೆತ್ತಿದ್ದಾದರೆ ಶಿಲಾಶಾಸನವೆಂದೂ, ತಾಮ್ರ ಬೆಳ್ಳಿ ಚಿನ್ನದ ಮೇಲಾದರೆ ಲೋಹಶಾಸನವೆಂದೂ ಹೇಳಬಹುದು.
ಕಾವೇರಿಯಿಂದಂ ಆ ಗೋದಾವರಿವರಂ ಇರ್ದ ನಾಡು ಕನ್ನಡ .. ಎಂದು ಉಲ್ಲೇಖಿಸಿದಂತೆ ಕನ್ನಡ ರಾಜರು ಆಳಿದಲ್ಲೆಲ್ಲಾ ಅವರ ಶಾಸನಗಳು ಲಭ್ಯವಿವೆ. ಕನ್ನಡ ಶಾಸನಗಳ ವ್ಯಾಪ್ತಿ ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ನೇಪಾಳದವರೆಗೂ ಹಬ್ಬಿದೆ.
ಪ್ರಸ್ತುತ ಪುಸ್ತಕದಲ್ಲಿ ಲೇಖಕರಾದ ಡಾ. ಪಿ ವಿ ಕೃಷ್ಣಮೂರ್ತಿಯವರು ತಮಿಳುನಾಡಿನಾದ್ಯಂತ ಇರುವ ಕನ್ನಡ ಶಾಸನಗಳನ್ನು ಒಟ್ಟುಗೂಡಿಸಿ ವಿವರ ಒದಗಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಶಿಲಾಶಾಸನಗಳಾಗಿದ್ದು ಬಹುತೇಕವು ವಿವಿಧ ಪ್ರಚಾರಿಕೆಗಳಲ್ಲಿ ಬೆಳಕು ಕಂಡಿವೆ. ಅವೆಲ್ಲವನ್ನೂ ಒಂದೇ ಸಂಪುಟದಲ್ಲಿ ಪಟ್ಟೀಕರಿಸುವ ಪ್ರಯತ್ನವಿದು. ಇದರಲ್ಲಿ ಹೊಸದಾಗಿ ಪತ್ತೆ ಮಾಡಿದ ಶಾಸನಗಳೂ ಕೆಲವಿವೆ. ಮಾತ್ರವಲ್ಲದೆ ಕನ್ನಡ ಭಾಷೆಯ ಆದರೆ ತಮಿಳು ಲಿಪಿಯಲ್ಲಿರುವ ಹಾಗೂ ರಾಜಶಾಸನವಲ್ಲದ ಆದರೆ ಕನ್ನಡ ಲಿಪಿಯಲ್ಲಿರುವ ಇತರ ಸಾಮಾನ್ಯ ಶಾಸನಗಳೂ ಸೇರಿವೆ.
ಹಾಗೆಂದು ಇದೇ ಪರಿಪೂರ್ಣ ಅಲ್ಲ. ಈ ಪಟ್ಟಿಯಲ್ಲಿ ಸೇರದೇ ಹೋದ ಆದರೆ ಇನ್ನೂ ಹೊರಜಗತ್ತಿಗೆ ಸಿಗದೇ ಹೋದ ಕನ್ನಡ ಶಾಸನಗಳು ಎಷ್ಟೋ ಇರಬಹುದು. ಅವನ್ನು ಕಂಡವರು ಸಮೀಪದ ಇತಿಹಾಸ ತಜ್ಞರಿಗೋ, ಪ್ರಾಚ್ಯವಸ್ತು ಇಲಾಖೆಗೋ ತಿಳಿಯಪಡಿಸಿದರೆ ನಮ್ಮ ನಾಡಿನ ಇತಿಹಾಸದ ಪುನರ್ರಚನೆಗೊಂದು ಮಹತ್ ಉಪಕಾರ ಮಾಡಿದಂತಾಗುತ್ತದೆ.
ಒಟ್ಟಿನಲ್ಲಿ ಎಚ್ಎಎಲ್ ನಂತಹ ಕಾರ್ಖಾನೆಯ ಸಂಕೀರ್ಣ ಸಂದರ್ಭದಲ್ಲಿದ್ದುಕೊಂಡೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಪಿ ವಿ ಕೃಷ್ಣಮೂರ್ತಿಯವರು ಸದಾ ಅಭಿನಂದನೀಯರಾಗಿದ್ದಾರೆ.