ದನದ ಸೆಗಣಿಯ ಬೆರಣಿಗೆ ಬಂಗಾರದ ಬೆಲೆ

ದನದ ಸೆಗಣಿಯ ಬೆರಣಿಗೆ ಬಂಗಾರದ ಬೆಲೆ

ಈಗ ಇಂಟರ್ನೆಟ್ ಮಾರಾಟದ ಕಾಲ. ಅಲ್ಲಿ ಸಾಧ್ಯತೆಗಳು ವಿಪುಲ. ದನದ ಸೆಗಣಿಯ ಬೆರಣಿಗೂ ಈಗ ಬಂಗಾರದ ಬೆಲೆ! “ಇಬೇ.ಇನ್” ಎಂಬ ಇಂಟರ್ನೆಟ್ ಮಾರಾಟ ತಾಣದಲ್ಲಿ “ವಿಲೇಜ್ ಪ್ರಾಡಕ್ಟ್ಸ್” ಎಂಬ ಮಳಿಗೆ ೩೫ ಬೆರಣಿಗಳನ್ನು ರೂ.೫೨೫ಕ್ಕೆ ೨೦೧೬ರಲ್ಲೇ ಮಾರಾಟಕ್ಕಿಟ್ಟಿತ್ತು. ಆಗಲೇ “ಅಮೆಜಾನ್” ಮಾರಾಟ ತಾಣದಲ್ಲಿ “ಹವನ ಕುಂಡ” ಮಳಿಗೆಯಲ್ಲಿ ೯ ಬೆರಣಿಗಳ ಮಾರಾಟ ಬೆಲೆ ರೂ.೯೯೯.

ಜನವರಿ 2024ರ ಆರಂಭದಲ್ಲಿ ಅಂತರ್ಜಾಲದಲ್ಲಿ ಲಭ್ಯವಿದ್ದ ಕೆಲವು ದನದ ಸೆಗಣಿ ಬೆರಣಿಗಳ ಬೆಲೆ:
ಉತ್ಪಾದಕರ ಹೆಸರು            ಬೆಲೆ (ರೂ.)
ಗವ್ಯಮಾರ್ಟ್ ಡಾಟ್ ಇನ್        ೬೦/-
ಧೇನುಮ್                             ೬೫/-
ಗೋಕುಲ ಗೋಬರ್ ಉಪ್ಲ        ೧೦೦/-
ಶ್ರೀ ನಾರಾಯಣ್                   ೧೧೯/-
ಗಾವೋ ಹರ್-ಸಿದ್ಧ                ೮೦೦/-
ಕಾತ್ಯಾಯನಿ                     ೧,೯೫೦/-
ಬಿಗ್ ಬಾಸ್ಕೆಟ್ (೫ ಬೆರಣಿ)        ೧೬/-
ಶುದ್ಧಮ್ ಗೋಶಾಲಾ (೧೦೦ ಬೆರಣಿ)                             ೨೭೦/-
ಅಮೆಜಾನ್ ಡಾಟ್ ಇನ್ (೧೦೦ ಬೆರಣಿ)                        ೨೯೪/-
ಆರ್ ಎಫ್ ಎಲ್ (ಪ್ಲಿಫ್‌ಕಾರ್ಟ್ ಮೂಲಕ) (೨೫ ಬೆರಣಿ)     ೩೯೯/-
(ಗಮನಿಸಿ: ಈ ಉತ್ಪಾದಕರ ಬೆರಣಿಗಳ ಬೆಲೆಗಳನ್ನು ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ಯಾಕೆಟಿನ ತೂಕ ನಮೂದಿಸಿಲ್ಲ. ಕೊನೆಯ ನಾಲ್ಕು ಉತ್ಪಾದಕರು ಒಂದು ಪ್ಯಾಕೆಟಿನಲ್ಲಿರುವ ಬೆರಣಿಗಳ ಸಂಖ್ಯೆ ನಮೂದಿಸಿದ್ದರೂ, ಬೆರಣಿಯ ವ್ಯಾಸ ಮತ್ತು ತೂಕ ನಮೂದಿಸಿಲ್ಲ. ಗವ್ಯಮಾರ್ಟ್ ಹೊರತಾಗಿ ಇತರ ೯ ಉತ್ಪಾದಕರು “ಸಾಗಾಟ ಪುಕ್ಕಟೆ” ಎಂದು ನಮೂದಿಸಿದ್ದಾರೆ.)
 

ಉತ್ಪಾದನಾ ವೆಚ್ಚ ಪರಿಗಣಿಸಿದರೆ, ೬೦೦ ಗ್ರಾಮ್ ಸೆಗಣಿಯಿಂದ ತಯಾರಿಸಬಹುದಾದ ಐದಾರು ಬೆರಣಿಗಳ ಮಾರಾಟ ಬೆಲೆ ಕೇವಲ ರೂ.೨೦/-. ಆದರೆ ಇದನ್ನೇ ರೂ.೫೦೦ರಿಂದ ರೂ.೧೦೦೦/- ಬೆಲೆಗೆ ಇಂಟರ್ನೆಟ್ ಜಾಲದಲ್ಲಿ ಮಾರುತ್ತಿದ್ದಾರೆ! ಜನ ಮರುಳೋ ಜಾತ್ರೆ ಮರುಳೋ!
ಅದೇನಿದ್ದರೂ ಇದೆಲ್ಲದರಿಂದ ಬಡ ಗ್ರಾಮೀಣ ಕುಟುಂಬಗಳಿಗೆ ಸಹಾಯವಾಗಿದೆ. ಉತ್ತರಪ್ರದೇಶದ ಬುಲಂದ್-ಶಹರ್ ಜಿಲ್ಲೆಯ ಶಿಕೇರಾ ಗ್ರಾಮದ ಶಾಂತಿ ಸ್ಥಳೀಯರಿಗೆ ಬೆರಣಿ ಮಾರುತ್ತಿದ್ದಾಳೆ. ಒಬ್ಬ ಇಂಟರ್ನೆಟ್ ಮಾರಾಟಗಾರನಿಗೆ ಬೆರಣಿ ಒದಗಿಸುವ ವ್ಯಾಪಾರಿಯೊಬ್ಬನಿಗೆ ಬೆರಣಿ ಮಾರುವ ಶಾಂತಿಯ ಗಳಿಕೆ ಐದು ಪಟ್ಟು ಜಾಸ್ತಿಯಾಗಿದೆ.
ಇಂಟರ್ನೆಟ್ ಮಾರಾಟ ತಾಣಗಳಾದ ಇಬೇ.ಇನ್, ಅಮೆಜಾನ್.ಇನ್, ಪ್ಲಿಫ್‌ಕಾರ್ಟ್ ಇತ್ಯಾದಿ ೨೫ರಿಂದ ೧೦೦ ಬೆರಣಿಗಳ ಪೊಟ್ಟಣಗಳನ್ನು ಮಾರಾಟ ಮಾಡುತ್ತಿವೆ. ಹಳ್ಳಿಗಳಲ್ಲಿ ಬೆರಣಿ ಮಾಡುವವರಿಂದ ಖರೀದಿಸುವ ಸ್ಥಳೀಯ ವ್ಯಾಪಾರಿಗಳು ಅವನ್ನು ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ಇಂಟರ್ನೆಟ್ ಮಾರಾಟಗಾರರಿಗೆ ಮಾರುತ್ತಿದ್ದಾರೆ. ಅವರಿಂದ ಇಂಟರ್ನೆಟ್ ಮಾರಾಟ ತಾಣಗಳ ಮೂಲಕ ಬೆರಣಿಗಳ ಬಿಕರಿ. ಧಾರ್ಮಿಕ ಆಚರಣೆಗಳಿಗಾಗಿ ಸೆಗಣಿ ಬೇಕೆನ್ನುವವರೇ ಮುಖ್ಯ ಗ್ರಾಹಕರು. ಜಗತ್ತಿನಾದ್ಯಂತ ನೆಲೆಸಿರುವ ಅನಿವಾಸಿ ಭಾರತೀಯರೂ ಇಂಟರ್ನೆಟ್ ಮಾರಾಟಗಾರರಿಂದ ಬೆರಣಿ ಖರೀದಿಸುತ್ತಿದ್ದಾರೆ. ಪ್ರತಿಯೊಂದು ಇಂಟರ್ನೆಟ್ ಮಾರಾಟ ಜಾಲತಾಣವು ದಿನವೂ ನೂರಾರು ಬೆರಣಿ ಮಾರುತ್ತಿದ್ದು, ಅವರು ಗಳಿಸುತ್ತಿರುವ ಲಾಭ ಸುಮಾರು ಶೇಕಡಾ ೩೦.
ಶಾಂತಿ ಬೆರಣಿ ಮಾರುತ್ತಿರುವುದು ಮೀರತಿನ ಒಂದು ಕಂಪೆನಿಗೆ. ಆ ಕಂಪೆನಿಯ ಪ್ರತಿನಿಧಿ ಮನೆಬಾಗಿಲಿಗೆ ಬಂದು ಬೆರಣಿ ಖರೀದಿ ಮಾಡುವ ಕಾರಣ ಆಕೆಗೆ ಸಾಗಾಟದ ವೆಚ್ಚವೂ ಇಲ್ಲ. ಅವಳು ಸೆಗಣಿಗೆ ಮಾತ್ರ ವೆಚ್ಚ ಮಾಡಿದರಾಯಿತು. ಒಂದು ಬೆರಣಿಗಾಗಿ ದನದ ಸೆಗಣಿಗೆ ೭೫ ಪೈಸೆ ವೆಚ್ಚವಾದರೆ, ಎಮ್ಮೆಯ ಸೆಗಣಿಗೆ ೪೫ರಿಂದ ೫೦ ಪೈಸೆ ವೆಚ್ಚ. ಪ್ರತಿ ದಿನ ೧೨೦ರಿಂದ ೧೫೦ ಬೆರಣಿಗಳನ್ನು ಆ ಕಂಪೆನಿಗೆ ಮಾರಿ ಆಕೆ ರೂ.೭೦ರಿಂದ ರೂ.೧೧೫ ಗಳಿಸುತ್ತಿದ್ದಾಳೆ. ತನ್ನ ಗಂಡನ ದಿನಮಜೂರಿ ಜೊತೆ ಈ ಆದಾಯವೂ ಸೇರಿ, ಇಬ್ಬರು ಮಕ್ಕಳನ್ನು ಸಾಕಲು ಅನುಕೂಲವಾಗಿದೆ ಎನ್ನುತ್ತಾಳೆ ಶಾಂತಿ. ಅದೇ ಬೆರಣಿಗಳನ್ನು ಸ್ಥಳೀಯ ವ್ಯಾಪಾರಿಗೆ ಮಾರಿದರೆ ತನಗೆ ಹತ್ತು ಬೆರಣಿಗಳಿಗೆ ಒಂದು ರೂಪಾಯಿ ಬೆಲೆಯೂ ಸಿಗೋದಿಲ್ಲ ಎಂಬುದವಳ ಹೇಳಿಕೆ.
ನಗರಗಳಲ್ಲಿ ಬೆರಣಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮಾರಾಟಗಾರರು. ತಮಿಳ್ನಾಡಿನಲ್ಲಿ ಬೆರಣಿ ಮಾರಾಟ ಮಾಡುವ ಭೂಷಣಂ ಎಂಟರ್-ಪ್ರೈಸಸಿನ ಮಾಲೀಕರಾದ ಟಿ. ಕನ್ನಾಭಿರಾಮನ್ ಪ್ರಕಾರ ಮಹಾನಗರಗಳಲ್ಲಿ ಬೆರಣಿಗೆ ಬೇಡಿಕೆ ಜಾಸ್ತಿ; ಯಾಕೆಂದರೆ ಅಲ್ಲಿ ಜಾನುವಾರುಗಳು ವಿರಳ. ಬೆರಣಿ ಉರಿಸುವುದು ಮಹಾನಗರಗಳಲ್ಲೊಂದು ಫ್ಯಾಷನ್ ಆಗಿದೆ ಎನ್ನುತ್ತಾರೆ ಅದರ ಸಹಮಾಲೀಕರಾದ ಎಂ. ಶಂಕರನ್. ನಗರಗಳಲ್ಲಿ ಬೆರಣಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ ಎಂಬುದನ್ನು ಅಮೆಜಾನ್ ಇಂಡಿಯಾದ ವಕ್ತಾರರೂ ಅನುಮೋದಿಸುತ್ತಾರೆ. ಒಣಗಿದ ಸೆಗಣಿ ಮತ್ತು ಕರ್ಪುರದ ಮಿಶ್ರಣ ಉರಿಸಿದರೆ ಪರಿಸರದ ಗಾಳಿ ಶುದ್ಧವಾಗುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಿದ್ದನ್ನು ಈ ಸಂದರ್ಭದಲ್ಲಿ ಗಮನಿಸಬೇಕು.
ಸಾವಯವ ಆಹಾರದ ಬಳಕೆ ಬಗ್ಗೆ ನಗರಗಳಲ್ಲಿ ಹಬ್ಬುತ್ತಿರುವ ಜಾಗೃತಿಯೂ ಬೆರಣಿಗಳಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದೆ. ರಕ್ಷಾ ಬರೂಚ ಮುಂಬೈಯಲ್ಲಿ ಕೈತೋಟದಲ್ಲಿ ತರಕಾರಿ ಬೆಳೆಸುತ್ತಿರುವ ಗೃಹಿಣಿ. ಆಕೆ ತನ್ನ ತರಕಾರಿ ಬೆಳೆಗೆ ಸಾವಯವ ಗೊಬ್ಬರವಾಗಿ ಇಂಟರ್ನೆಟ್ ಮೂಲಕ ಬೆರಣಿ ಖರೀದಿಸುತ್ತಾರೆ. “ಮುಂಬೈಯಂತಹ ಮಹಾನಗರದಲ್ಲಿ ನಮ್ಮ ಮನೆಯ ಹತ್ತಿರ ಡೈರಿ ಇಲ್ಲದಿರುವಾಗ ದನದ ಸೆಗಣಿ ಸಂಗ್ರಹಿಸುವುದು ಕಷ್ಟದ ಕೆಲಸ. ಹಾಗಾಗಿ ಇಂಟರ್ನೆಟ್ ಮೂಲಕ ಮನೆಬಾಗಿಲಿಗೆ ತರಿಸಿಕೊಳ್ಳುವುದು ಸುಲಭ” ಎನ್ನುತ್ತಾರೆ ಆಕೆ.

ಹೋಟೆಲಿನವರೂ ಬೆರಣಿ ಖರೀದಿಸುತ್ತಾರೆ ಎಂದರೆ ನಂಬುತ್ತೀರಾ? “ಪಾರಂಪರಿಕ ಮತ್ತು ನೈಸರ್ಗಿಕ ಆಹಾರ ತಯಾರಿಸಿ ಮಾರುವ ಕೊಯಂಬತ್ತೂರಿನ ಹೋಟೆಲಿನವರು ನಮ್ಮಿಂದ ಮೂಟೆಗಟ್ಟಲೆ ಬೆರಣಿ ಖರೀಸಿಸುತ್ತಾರೆ” ಎಂಬ ಮಾಹಿತಿ ನೀಡುತ್ತಾರೆ ಶಂಕರನ್. ಜೋಧಪುರದ ಮಹಾವೀರ್ ಉದ್ಯೋಗ್, ಧಾರ್ಮಿಕ ಪೂಜೆಗಳಿಗೆ ಬೇಕಾದ ವಸ್ತುಗಳನ್ನು ಉತ್ಪಾದಿಸುವ ಘಟಕ; ಅದರ ಮೆನೇಜರ್ ಶ್ರೀಜಿತ್ ಪಿಳ್ಳೈ ಅವರೂ ಇದೇ ಮಾತನ್ನು ಹೇಳುತ್ತಾರೆ. “ಆದರೆ ನಮಗೆ ಆರ್ಡರ್ ನೀಡುವ ಬಹುಪಾಲು ಜನರು ಬೆರಣಿ ಖರೀದಿಸುವುದು ಧಾರ್ಮಿಕ ಪೂಜೆಗಾಗಿ” ಎನ್ನುತ್ತಾರೆ ಅವರು. "ನಮ್ಮಿಂದ ಬೆರಣಿ ಖರೀದಿಸುವ ಗ್ರಾಹಕರು ಅದನ್ನು ಧಾರ್ಮಿಕ ಉದ್ದೇಶಕ್ಕಾಗಿ ಬಳಸುವ ಕಾರಣ ನಾವು ಅವರಿಗೆ ದನದ ಸೆಗಣಿಯ ಬೆರಣಿಗಳನ್ನೇ ಮಾರುತ್ತೇವೆ” ಎಂದು ವಿವರಿಸುತ್ತಾರೆ ಭೂಷಣಂ ಎಂಟರ್-ಪ್ರೈಸಸಿನ ಕನ್ನಾಭಿರಾಮನ್.

ಸೆಗಣಿಯಿಂದ ಗೊಬ್ಬರ ತಯಾರಿಸಿ ಬ್ರಾಂಡ್ (ವಾಣಿಜ್ಯ ಹೆಸರು) ಮಾಡಿ ಮೊತ್ತಮೊದಲು ಮಾರಾಟ ಮಾಡಿದ ಶ್ರೇಯಸ್ಸು ಸಲ್ಲಬೇಕಾದ್ದು ಗುಜರಾತಿನ ಆನಂದ್ ಜಿಲ್ಲೆಯ ನವಿ ಗ್ರಾಮದ ರೈತರಿಗೆ. ಭಾರತದ ಕ್ಷೀರಕ್ರಾಂತಿಯ ಮೂಲಸ್ಥಳವಾದ ಆನಂದ್.  ಅಲ್ಲಿ ಲಕ್ಷಗಟ್ಟಲೆ ಜಾನುವಾರುಗಳು ಹಾಗೂ ಹೇರಳ ಸೆಗಣಿ ಲಭ್ಯ. ಅಲ್ಲಿನ ಉದ್ಯಮಶೀಲರು ದನದ ಸೆಗಣಿಯನ್ನು ಕೋಳಿಹಿಕ್ಕೆ, ಹರಳೆಣ್ಣೆ ಹಿಂಡಿ, ಕಬ್ಬಿನ ಕಸ ಮತ್ತು ಜಿಪ್ಸಂ ಜೊತೆ ಮಿಶ್ರಣ ಮಾಡಿ, ಅದಕ್ಕೆ ಬ್ಯಾಕ್ಟೀರಿಯಾ ಸೇರಿಸಿ, ಹೊಂಡದಲ್ಲಿ ಕೊಳೆಸಿ, ಸಾವಯವ ಗೊಬ್ಬರ ತಯಾರಿಸಿ ೨೦೦೮- ೨೦೦೯ರಲ್ಲಿ ಮಾರತೊಡಗಿದರು. “ಹಿರಣ್ಯಂ ಸಾವಯವ ಗೊಬ್ಬರ” ಮತ್ತು “ಕೃಷಿ ಅಮಿ” ವಾಣಿಜ್ಯ ಹೆಸರಿನ ಆ ಗೊಬ್ಬರದ ಒಂದು ಮೂಟೆಯ ಬೆಲೆ ರೂ.೧೨೦ ಆಗಿತ್ತು. ರಾಸಾಯನಿಕ ಗೊಬ್ಬರದ ಒಂದು ಮೂಟೆಯ ಆಗಿನ ಬೆಲೆಗೆ (ಸುಮಾರು ರೂ.೫೦೦) ಹೋಲಿಸಿದಾಗ ಈ ಪರಿಸರಸ್ನೇಹಿ ಸಾವಯವ ಗೊಬ್ಬರ ಬಹಳ ಅಗ್ಗ. ಹಾಗಾಗಿ, ಇದು ಅಲ್ಲಿನ ರೈತರಲ್ಲಿ ಜನಪ್ರಿಯವಾಗಿ, ತಯಾರಕರು ತಿಂಗಳಿಗೆ ರೂಪಾಯಿ ಒಂದು ಲಕ್ಷದಿಂದ ರೂ.೧.೫ ಲಕ್ಷ ಲಾಭ ಗಳಿಸತೊಡಗಿದರು.

ಅಂತೂ, ಬೆರಣಿಗೂ ಇಂಟರ್ನೆಟ್ ಮಾರಾಟದ ಕಾಲ ಬಂದಿದೆ. ಇದರಿಂದಾಗಿ, ಹಳ್ಳಿಹಳ್ಳಿಗಳಲ್ಲಿ ಬೆರಣಿ ತಯಾರಿಸುವವರಿಗೂ ಒಳ್ಳೆಯ ಕಾಲ ಬರಲಿ.