ದಿಲ್ಲಿಯ ಯಮುನಾ ಪ್ರವಾಹ ದುಸ್ಥಿತಿ ಎಲ್ಲ ನಗರಗಳಿಗೆ ಪಾಠ
ದೆಹಲಿ ನಗರದೊಳಗೇ ಹರಿಯುವ ಯಮುನಾ ನದಿಯಲ್ಲೇ ೪೫ ವರ್ಷಗಳಲ್ಲೇ ಭೀಕರ ಎನ್ನಲಾದ ಪ್ರವಾಹ ಉಂಟಾಗಿದೆ. ಪರಿಣಾಮ, ದೆಹಲಿಯ ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಪ್ರಸಿದ್ಧ ಕೆಂಪುಕೋಟೆ ಜಲಾವೃತವಾಗಿದೆ. ಶಾಲೆ-ಕಾಲೇಜು ಹಾಗೂ ಬಹುತೇಕ ಸರ್ಕಾರಿ ಕಚೇರಿಗಳನ್ನು ಭಾನುವಾರದವರೆಗೆ ಮುಚ್ಚಲಾಗಿದೆ. ಬಹುತೇಕ ಖಾಸಗಿ ಕಂಪೆನಿಗಳು ನೌಕರರಿಗೆ ವರ್ಕ್ ಫ್ರಂ ಹೋಂ ನೀಡಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಸಮೀಪದಲ್ಲೂ ನೀರು ಹರಿಯುತ್ತಿದೆ. ರೈಲ್ವೇ ಹಳಿಗಳು ನೀರಿನಲ್ಲಿ ಮುಳುಗಿದ್ದು, ಕೆಲ ದಿನಗಳಿಂದ ಸುಮಾರು ೪೦೦ ರೈಲುಗಳನ್ನು ರದ್ದುಪಡಿಸಲಾಗಿದೆ. ನೀರಿನ ಶುದ್ಧೀಕರಣ ಘಟಕಗಳನ್ನು ಬಂದ್ ಮಾಡಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅನೇಕ ಆಸ್ಪತ್ರೆಗಳಿಂದ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ. ಪ್ರವಾಹದಿಂದ ಜನರನ್ನು ರಕ್ಷಿಸಲು ೧೨ ಎನ್ ಡಿ ಆರ್ ಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲ ಚಿತಾಗಾರಗಳನ್ನು ಕೂಡ ಬಂದ್ ಮಾಡಲಾಗಿದೆ. ನಗರದೆಲ್ಲಡೆ ಮೈಲುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪಂಜಾಬ್ ಮತ್ತು ಹರ್ಯಾಣದ ಕೆಲವು ಡ್ಯಾಮ್ ಗಳು ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿಯಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದೆ. ಒಟ್ಟಿನಲ್ಲಿ ಹಿಂದೆಂದೂ ಕೇಳರಿಯದ ಪ್ರವಾಹ ಸಂಬಂಧಿ ದುಸ್ಥಿತಿಯನ್ನು ದೆಹಲಿ ಎದುರಿಸುತ್ತಿದೆ.
ಹಾಗಂತ ಯಮುನಾ ನದಿಯಲ್ಲಿ ಪ್ರವಾಹ ಇದೇ ಮೊದಲಲ್ಲ. ಇದು ಹಿಮಾಲಯದಲ್ಲಿ ಹುಟ್ಟುವ ನದಿಯಾದುದರಿಂದ ತಾಪಮಾನ ಏರಿಕೆಯ ಬಳಿಕ ಪದೇ ಪದೇ ನದಿ ಉಕ್ಕೇರುತ್ತಿದೆ. ಆದರೆ, ಪ್ರವಾಹದಿಂದ ಈ ಪರಿಯ ಸಮಸ್ಯೆಗಳು ಎದುರಾಗಿರುವುದು ಇದೇ ಮೊದಲು. ಏಕೆಂದರೆ ಎಲ್ಲಾ ನಗರಗಳಂತೆ ದೆಹಲಿಯೂ ಅಸ್ತವ್ಯಸ್ತವಾಗಿ ಬೆಳೆದಿದೆ. ನಗರದೊಳಗೇ ಹರಿಯುವ ನದಿ ಉಕ್ಕೇರಿದರೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುವಂತೆ ಇಕ್ಕೆಲಗಳನ್ನು ಒತ್ತುವರಿಯಿಂದ ಮುಕ್ತವಾಗಿಸಿಕೊಳ್ಳಬೇಕು ಎಂಬ ಕನಿಷ್ಟ ಪ್ರಜ್ಞೆಯನ್ನೂ ಅಧಿಕಾರಿಗಳು ಹೊಂದಿಲ್ಲ ಎಂಬುದು ಢಾಳಾಗಿ ಗೋಚರಿಸುತ್ತಿದೆ. ಇದು ದೆಹಲಿ ಮಾತ್ರವಲ್ಲ, ದೇಶದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ, ನಗರ ನಿರ್ಮಾತೃಗಳಿಗೂ, ಎಲ್ಲಾ ರಾಜ್ಯ ಸರ್ಕಾರಗಳಿಗೂ ದೊಡ್ದ ಪಾಠ. ದೆಹಲಿಯಲ್ಲಿ ಮಾಲಿನ್ಯ, ನೆರೆ ಸೇರಿದಂತೆ ಏನೇ ವಿಪತ್ತು ಎದುರಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರರ ಕಡೆ ಬೆರಳು ತೋರಿಸುವ ಪರಿಪಾಠವಿದೆ. ಆದರೆ ಈಗಿನ ನೆರೆ ಅಂತಹ ಪಲಾಯನವಾದದ ರಾಜಕೀಯಕ್ಕೆ ಸಮಯವಲ್ಲ. ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಒಂದಾಗಿ ಈ ಆಪತ್ತಿನಿಂದ ಜನರನ್ನು ರಕ್ಷಿಸಬೇಕಿದೆ. ಇಂತಹ ಪ್ರವಾಹ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಬಹುದು ಎಂಬ ಎಚ್ಚರಿಕೆಯೊಂದಿಗೆ ಮುಂದಿನ ಹೆಜ್ಜೆಗಳನ್ನು ಇಡಬೇಕಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೪-೦೭-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ