ದೇವರು ಹೊರಟನು
‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಮರಾಠಿ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು, ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ ಮೂರ್ತಿಯ ಸುತ್ತಲೂ ಆಕಾರ ಪಡೆದ 'ಪಳಸಗಾಂವ' ಎಂಬ ಚಿಕ್ಕ ಊರಿನ ಒಂದು ದೊಡ್ಡ ಕುಟುಂಬದ ಭಾವ ಭಾವನೆಯ, ಒತ್ತಡ ತಲ್ಲಣಗಳ, ಆಕಾಂಕ್ಷೆ-ಉಪೇಕ್ಷೆಗಳ ಅನನ್ಯ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಮೊಕಾಶಿಯವರು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ. ಅರವತ್ತರ ದಶಕದಲ್ಲಿ ನಗರೀಕರಣ ಆರಂಭಗೊಂಡು ಉದರ ನಿರ್ವಹಣೆಗಾಗಿ -ಉದ್ಯೋಗ ವ್ಯವಸಾಯಕ್ಕಾಗಿ ಪಳಸಗಾಂವದಂಥ ಹಲವು ಪ್ರಾತಿನಿಧಿಕ ಊರು, ಅಲ್ಲಿಯ ಹಲವು ಪೀಳಿಗೆ, ಕೂಡಿ ಬಾಳುವ ಅವಿಭಕ್ತ ಕುಟುಂಬವನ್ನು ಅಪ್ಪುಗೆಯಲ್ಲಿ ಹಿಡಿವ 'ನರಹರಿ-ನರಸಿಂಹ' ಕೇವಲ ಒಂದು ಕುಟುಂಬದವನಾಗಿರದೆ, ಸಂಪೂರ್ಣ ಗ್ರಾಮ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದ್ದಾನೆ. ಇಂಥ ಕುಟುಂಬದವರ ಅನಿವಾರ್ಯ ಚೆದುರುವಿಕೆ, ಅವರವರ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ಆದ ಉತ್ಕರ್ಷ ಅಪಕರ್ಷ, ಈ ಏರಿಳಿತದಲ್ಲಿ ಗ್ರಾಮದ ಮನೆ- ಕುಟುಂಬವು ದಿಕ್ಕಾಪಾಲಾಗುವಾಗ' ನರಹರಿಯು ಯಾರೊಂದಿಗೆ ಹೋಗಬೇಕು, ಅಂದರೆ ಈ 'ಕುಲಾಚಾರ'ವನ್ನು ಮುಂದುವರಿಸಿಕೊಂಡು ಹೋಗುವವರು ಯಾರು-ಎನ್ನುವದೇ ಈ ಕಾದಂಬರಿಯ ಆಶಯದ್ರವ್ಯ. 'ದೇವರು ಮನುಷ್ಯ ಸಂಬಂಧ ವಿಚಿತ್ರವಾದುದು...ಹಲವು ಕಾರಣಗಳಿಂದ ಮನುಷ್ಯನಿಗೆ ದೇವರ ಅಗತ್ಯವಿದೆ... ಆದರೆ ದೇವರಿಗೆ ಮನುಷ್ಯನ ಅಗತ್ಯವಿದೆಯೇ- ಎನ್ನುವದು ಹೇಳಲು ಬರುವುದಲ್ಲ' -ಎಂಬ ಮನುಷ್ಯರ ಮತ್ತು ದೇವರ ಕಥೆಯಿದು!
ಈ ಕಾದಂಬರಿಯ ಕುರಿತಾಗಿ ತಮ್ಮ ಮಾತಿನಲ್ಲಿ ಅನುವಾದಕರಾದ ಚಂದ್ರಕಾಂತ ಪೋಕಳೆ ಹೇಳುವುದು ಹೀಗೆ… “ನಾನು ಭಾಷಾಂತರಕ್ಕಾಗಿ ಮರಾಠಿಯ ಮಹತ್ವದ ಕಥಾಲೇಖಕರನ್ನು ಹುಡುಕುವಾಗ ಹಳೆಯ ತಲೆಮಾರಿನ ಲೇಖಕರಲ್ಲಿ ನನ್ನ ಗಮನವನ್ನು ಸೆಳೆದವರೆಂದರೆ ದಿ.ಬಾ. ಮೊಕಾಶಿ, ನಾನು ಅವರ ಕೆಲವು ಕಥೆಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡು ಓದಿದೆ. ಅವರ ಕಥೆಗಳ ಆಶಯ ಮತ್ತು ಸರಳ ತಂತ್ರವು ನನ್ನನ್ನು ತುಂಬ ಸೆಳೆಯಿತು. ಅವರ ಮಹತ್ವದ ಕಥೆಗಳನ್ನು ಆಯ್ಕೆ ಮಾಡಲು ಅವರ ಮಗಳಾದ ಬಿಂಬಾ ಜೋಶಿಯವರು ಸಹಕರಿಸಿದರು ಮತ್ತು ಅನುಮತಿಯನ್ನೂ ನೀಡಿದರು. ಇದಕ್ಕಿಂತ ಮೊದಲು ಮೊಕಾಶಿಯವರ ಪಲ್ಲಕ್ಕಿ ಎಂಬ ಪ್ರವಾಸ ಕಥನವನ್ನು ಅನುವಾದ ಮಾಡಿದೆ. ಭಾಷಾ ಭಾರತಿಯವರು ಅದರ ಇ ಬುಕ್ ಮಾಡಲು ಮುಂದಾದರು. ಅನಂತರ ಮೊಕಾಶಿ ಅವರ ಆಯ್ದ ಕಥೆಗಳನ್ನು ಭಾಷಾಂತರ ಮಾಡಿದೆ. ಈಗ ನಿಮ್ಮ ಮುಂದೆ ಇರುವುದೇ ದೇವರು ಹೊರಟನು ಎಂಬ ಕಾದಂಬರಿ.
ಒಂದೆರಡು ವರ್ಷಗಳ ಹಿಂದೆ ಮರಾಠಿಯ ಖ್ಯಾತ ಲೇಖಕಿಯಾದ ಶಾಂತಾ ಗೋಖಲೆಯವರ ಒಂದು ಸಂದರ್ಶನ ಓದುವಾಗ ಅವರು ದೇವರು ಹೊರಟನು ಕಾದಂಬರಿಯನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಲಿದ್ದೇನೆ ಎಂದು ಹೇಳಿದ್ದರು. ತಟ್ಟನೆ ನಾನೂ ಏಕೆ ಕನ್ನಡಕ್ಕೆ ತರಬಾರದು ಎಂಬ ಯೋಚನೆ ಮನದಲ್ಲಿ ಮೂಡಿತು. ಕೂಡಲೇ ಬಿಂಬಾ ಜೋಶಿಯವರನ್ನು ಸಂಪರ್ಕಿಸಿದೆ. ಆದರೆ ಪುಸ್ತಕ ಔಟ್ ಆಫ್ ಪ್ರಿಂಟ್ ಇದೆ ಎಂದು ಗೊತ್ತಾಯಿತು. ಮತ್ತೆ ಜೋಶಿಯವರಿಗೆ ನನ್ನ ಅಸಹಾಯಕತೆ ತೋಡಿಕೊಂಡೆ. ಅವರ ಹತ್ತಿರ ಮೂಲ ಪ್ರತಿಯಿತ್ತು. ಅದನ್ನು ಝರಾಕ್ಸ್ ಮಾಡಿಸಿ ಕಳಿಸಿದರು. ನೂರು ಪುಟಗಳ ಮಿತಿಯಲ್ಲಿರುವ ಆ ಕಾದಂಬರಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿತು ಸಾಮಾನ್ಯವಾಗಿ ಹಲವು ಕಾರಣಗಳಿಂದ ಮನುಷ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜೀವನೋಪಾಯಕ್ಕಾಗಿ ವಲಸೆ ಹೋಗುತ್ತಿರುತ್ತಾನೆ. ಅವನ ಸಂಗಡ ಅವನ ಕುಟುಂಬವೂ ಸ್ಥಳಾಂತರ ಮಾಡಬೇಕಾಗುತ್ತದೆ. ಆಗ ದೇವರನ್ನೂ ಹೊತ್ತುಕೊಂಡು ಹೋಗುತ್ತಾನೆ. ಈ ಕಾದಂಬರಿಯಲ್ಲಿಯೂ ನರಸಿಂಹ ದೇವರನ್ನು ಸ್ಥಳಾಂತರ ಮಾಡಬೇಕಾಗಿ ಬರುತ್ತದೆ. ಆಗ ಕುಟುಂಬದ ಎಲ್ಲ ಸದಸ್ಯರು ಒಂದುಗೂಡುತ್ತಾರೆ. ಪ್ರತಿಯೊಬ್ಬರ ಮನಸ್ಸು ಒಂದೊಂದು ಬಗೆಯಲ್ಲಿ ಯೋಚಿಸಿ ಅದು ಈ ಸಂದರ್ಭದಲ್ಲಿ ಹೊರಹಾಕಲ್ಪಡುತ್ತದೆ. ಅವರ ಹತ್ತಿಕ್ಕಲ್ಪಟ್ಟ ಭಾವನೆಗಳಲ್ಲಿ ಸಿಟ್ಟು, ಆಕ್ರೋಶ, ಅಸಹಾಯಕತೆ, ಮತ್ಸರ ಹಾಗೂ ಪ್ರೀತಿ ಪ್ರೇಮ ಸಹ ವ್ಯಕ್ತವಾಗುತ್ತದೆ. ಇದು ಓದುಗರನ್ನು ತುಂಬ ಡಿಸ್ಟರ್ಬ್ ಮಾಡುತ್ತದೆ, ಕಸಿವಿಸಿಗೊಳಿಸುತ್ತದೆ ಮತ್ತು ಯೋಚಿಸುವಂತೆಯೂ ಮಾಡುತ್ತದೆ. ಇದು ಬಹಳ ದಿನಗಳವರೆಗೆ ಕಾಡುವ ಆನನ್ಯ ಕಾದಂಬರಿ ಎಂದು ನನ್ನ ಭಾವನೆ.” ೯೬ ಪುಟಗಳ ಈ ಪುಟ್ಟ ಕಾದಂಬರಿ ಓದುಗನ ಮೇಲೆ ಮಾಡುವ ಪ್ರಭಾವ ಅನನ್ಯ.