ದೇಶಭಕ್ತಿಯ ಎರಡು ಗಝಲ್ ಗಳು
ಗಝಲ್ ೧
ಫೀನಿಕ್ಸ್ ಹಕ್ಕಿಯಂತೆ ವೈರಿಗಳ ಹುಡುಕಿ
ಕೊಲ್ಲುವನು ವೀರಯೋಧ
ಗರುಡ ಪಕ್ಷಿಯಂತೆ ದೇಶದ ಗಡಿಗಳಲಿ
ಕಾವಲು ಕಾಯುವನು ವೀರಯೋಧ||
ಅಭಿಮನ್ಯುವಾಗಿ ಶತೃಪಡೆಯೊಳಗೆ
ಶರವೇಗದಲ್ಲಿ ಧಾವಿಸುವನು
ಶಬ್ಧವೇಧಿಯಾಗಿ ಹಗೆಗಳ ರಣತಂತ್ರ ವಿಫಲ ಮಾಡುವನು ವೀರಯೋಧ||
ಸಮರದೊಳಗೆ ಸಂಬಂಧಗಳ ಲೆಕ್ಕಿಸದೆ
ದೇಶಪ್ರೇಮ ಮೆರೆಯುವನು,
ರಾಷ್ಟ್ರಕ್ಕಾಗಿ ಸತಿಸುತರನು ಬಿಟ್ಟು ರಾಷ್ಟ್ರಪ್ರೇಮ ತೋರುವನು ವೀರಯೋಧ||
ದೇಹದಿ ಕೊನೆ ಉಸಿರಿರುವರೆಗು ದುಷ್ಟರ ರುಂಡ ಚೆಂಡಾಡುವನು,
ಎದುರಾಳಿ ಎದೆಬಗೆದು ಭರತಮಾತೆಗೆ ನೆತ್ತರಾಭಿಷೆಕ ಗೈಯುವನು ವೀರಯೋಧ||
ಸಿಂಹಗರ್ಜನೆ ಮಾಡಿ ವೈರಿನೆಲದಲಿ ರಾಷ್ಟ್ರಧ್ವಜ ಹಾರಿಸುವನು
ನಾಡಕೀರ್ತಿ ಬೆಳಗಿ ಬಿಜಲಿಯ ಗಜಲ್ನಲಿ
ಅಜರಾಮರ ಆದವನು ವೀರಯೋಧ||
- ಶ್ರೀ ಈರಪ್ಪ ಬಿಜಲಿ
ಗಝಲ್ ೨
ಉಗ್ರರ ವಿರುದ್ದ ಸೆಣಸಾಡಿ
ಜಯವನು ಸಾಧಿಸುವೆ ಗೆಳೆಯ|
ಅಗ್ರಪಟ್ಟವನು ಭಾರತಕೆ ಕಟ್ಟುತ
ವೈರಿಗಳ ಶೋಧಿಸುವೆ ಗೆಳೆಯ||
ದೇಶಕ್ಕೆ ಸಂಚುತರುವ
ಭಯೋತ್ಪಾದಕರನ್ನು ಹಿಡಿದು ಮಟ್ಟಹಾಕುವೆ|
ಪಾಶವನು ಕೊರಳಿಗೆ ಹಾಕುತಲಿ
ರಣತಂತ್ರವ ಭೇಧಿಸುವೆ ಗೆಳೆಯ||
ಸಮರದಲಿ ಪಾಂಚಜನ್ಯದ
ಕಹಳೆಯ ಊದಿ ಯೋಧನಾಗಿ ನಿಲ್ಲುವೆ|
ನಮಿಸುತ್ತಲಿ ನೆತ್ತರ ಚೆಲ್ಲಿದ
ವೀರರ ಸಾಧನೆಯನ್ನು ಆಲಿಸುವೆ ಗೆಳೆಯ||
ಬೆಟ್ಟದ ತುದಿಯೆತ್ತರಕೆ ತ್ರಿವರ್ಣ
ಧ್ವಜವನು ಹಾರಿಸುವೆ ಸಂತಸದಿ|
ದಿಟ್ಟರಾಗಿ ಪ್ರಾಣತ್ಯಜಿಸಿದ ಮಹಾತ್ಮರ
ಚರಿತೆಯ ಬೋಧಿಸುವೆ ಗೆಳೆಯ||
ಭಾರತಾಂಬೆಯ ಮಡಿಲಲ್ಲಿ ಸದಾಕಾಲ
ಅಭಿನವ ಕಂದನಾಗಿ ಮೆರೆವೆನು|
ಮಾರಕ ಅಸ್ತ್ರಗಳಿಲ್ಲದೆ ಸತ್ಯ ಅಹಿಂಸೆಯಿಂದ
ಬಂಡುಕೋರರ ಛೇದಿಸುವೆ ಗೆಳೆಯ||
- ಶಂಕರಾನಂದ ಹೆಬ್ಬಾಳ