ದೊಡ್ಡವರ ಒತ್ತುವರಿಯೂ ತೆರವಾಗಲಿ

ಕೇರಳದ ವಯನಾಡು ದುರಂತ, ಶಿರೂರು ಮತ್ತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ. ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್ ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯಕ್ಕೆ ಕಾರ್ಯಪಡೆ ರಚಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಮಾಹಿತಿ ಪ್ರಕಾರ ೨೪ ಗಂಟೆಯಲ್ಲಿ ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೩೯ ಎಕರೆ ಒತ್ತುವರಿಯನ್ನು ತೆರವು ಮಾಡಲಾಗಿದೆ. ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ ೨೦೨೩ರಲ್ಲೇ ಅರಣ್ಯ ಇಲಾಖೆ ಟಿಪ್ಪಣಿ ಹೊರಡಿಸಿತ್ತು. ಆದರೆ, ಕಾರ್ಯಪಡೆ ರಚನೆಯಾಗಿರಲಿಲ್ಲ. ಈ ಬಾರಿಯ ಭಾರೀ ಮಳೆಯಲ್ಲಿ ಶಿರಾಡಿ, ಚಾರ್ಮಾಡಿ ಫಾಟಗಳು, ಶಿರೂರು, ಸಕಲೇಶಪುರ ಸೇರಿದಂತೆ ವಿವಿದೆಡೆ ಭೂಕುಸಿತ ಸಂಭವಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದ ೧೦ ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಒತ್ತುವರಿಯನ್ನು ತೆರವು ಮಾಡಲು ಸೂಚಿಸಿದೆ. ಅರಣ್ಯ ಸಚಿವರು ನೀಡಿದ ಮಾಹಿತಿ ಪ್ರಕಾರ ೨೪ ಗಂಟೆಗಳಲ್ಲಿ ನೂತನ ಕಾರ್ಯಪಡೆ ೩೧ ಎಕರೆ ಅರಣ್ಯ ಒತ್ತುವರಿ ತೆರವು ಮಾಡಿದೆ. ರಾಜ್ಯ ಸರಕಾರ ೨೦೧೫ಕ್ಕೆ ಮುನ್ನ ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಒತ್ತುವರಿ ಭೂಮಿ ಎರಡೂ ಸೇರಿ ೩ ಎಕರೆ ಮೀರದಿದ್ದರೆ ಅಂತಹ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಹೇಳಿದೆ.
ಅದೇ ರೀತಿ ಅರಣ್ಯ ಹಕ್ಕು ಕಾಯಿದೆಯಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರ ಯಾವುದೇ ಮನೆ, ಜಮೀನು ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಒತ್ತುವರಿ ಸಾಬೀತಾದ ಪ್ರಕರಣಗಳನ್ನು ತಕ್ಷಣ ತೆರವುಗೊಳಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಾರದಲ್ಲಿ ಎರಡು ದಿನ ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಸರಕಾರದ ಈ ನಿರ್ಧಾರ ಸ್ವಾಗತಾರ್ಹ ಆದರೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ದಟ್ಟ ಅರಣ್ಯದೊಳಗೆ ನೂರಾರು ಎಕರೆ ಎಸ್ಟೇಟ್ ಮಾಡಿಕೊಂಡವರು ಸುಪ್ರೀಂಕೋರ್ಟ್ ಸತತ ಕಾನೂನು ಹೋರಾಟ ಮಾಡಿ ತಮ್ಮ ಜಮೀನು ಉಳಿಸಿಕೊಂಡಿದ್ದಾರೆ. ಸರಕಾರದ ಇಂಥವರನ್ನೂ ಒಕ್ಕಲೆಬ್ಬಿಸಿ ಎಲ್ಲರಿಗೂ ಸ್ಪಷ್ಟ ಸಂದೇಶ ಸಾರಬೇಕು. ನಾಗರಹೊಳೆ, ಬಂಡೀಪುರದಲ್ಲಿ ಎಸ್ಟೇಟ್ ದಂಧೆ ನಡೆಸುತ್ತಿರುವ ಅನ್ಯ ರಾಜ್ಯಗಳ ದುಡ್ಡಿನ ಕುಳಗಳನ್ನು ನಿಯಂತ್ರಿಸಲು ಕಾನೂನು ರೂಪಿಸಬೇಕು. ಆಗ ಮಾತ್ರ ಸರಕಾರ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ರವಾನಿಸಲು ಸಾಧ್ಯ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೦-೦೮-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ