ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿ....

ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿ....

ಬರಹ

ಸುಮಾರು ಒಂದು ವಾರದಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು ಮಾಡುವಪ್ರಯತ್ನಗಳಉ ತುಂಬಾ ಅಪಾಯಕಾರಿ ಮತ್ತು, ಅಸಹ್ಯಕರ. ಹಾಗೆಂದಮಾತ್ರಕ್ಕೆ, ಕೇವಲ ವರುಣ್ ಗಾಂಧಿಯೊಬ್ಬನೇ ಈ ರೀತಿಯ ರಾಜಕೀಯ ನಡೆಸುತ್ತಿದ್ದಾನೆಯೇ? ಬಿಹಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತುಂಬಾ ಹತ್ತಿರದಿಂದ ನೋಡಿದಾಗ, ಭಯವುಂಟಾಗುತ್ತದ.

ಲಾಲೂ ಪ್ರಸಾದರ ಹೇಳಿಕೆಯನ್ನು ನಾವು ಗಮನಿಸಿ -"ನಮ್ಮ ದೇಶದಲ್ಲಿ ಬ್ರಾಹ್ಮಣರನ್ನು ದೇವರೆಂದು ಪರಿಗಣಿಸುತ್ತೇವೆ. ಅವರ ಆಶೀರ್ವಾದವಿಲ್ಲದೇ, ಯಾರೊಬ್ಬರೂ ರಾಜರಾಗಲೂ ಸಾಧ್ಯವಿಲ್ಲ". ಹಿಂದೊಮ್ಮೆ ಪಕ್ಕಾ ಬ್ರಾಹ್ಮಣ ವಿರೋಧಿಯಾಗಿದ್ದ ಲಾಲೂ, ಈಗ ಬ್ರಾಹ್ಮಣ ಹಿತರಕ್ಷಕ. (ದಿ. ೩೦/೦೩/೨೦೦೯ ವಿಜಯ ಕರ್ನಾಟಕ ದಿನಪತ್ರಿಕೆಯೋದಿದರೆ, ನಿಮಗಿದು ಇನ್ನೂ ವಿವರದಲ್ಲಿ ತಿಳಿದೀತು. ಪುಟ ೯). ಮೊನ್ನೆ ಮೊನ್ನೆಯವರೆಗೂ ಬ್ರಾಹ್ಮಣರ ಬಗ್ಗೆ ಅಸಹ್ಯಕರವಾಗಿ ಮಾತನಾಡುತ್ತಿದ್ದ ಪಾಸ್ವಾನ್ ಇಂದು ಲಾಲುವಿನ ಮಾತಿಗೆ ತಲೆಯಾಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ಮಾಯಾವತಿ ಬ್ರಾಹ್ಮಣರಿಗೆ ಮೀಸಲಾತಿಯ ಆಶ್ವಾಸನೆ ಕೊಡುತ್ತಿದ್ದಾಳೆ. ಇದೆಲ್ಲಾ ಯಾಕೆ? ಇದು ಭಾರತೀಯ ಸಂವಿಧಾನದ ಉಲ್ಲಂಘನೆಯಲ್ಲವೇ?? ಅಥವಾ, ಕೊನೆಯ ಪಕ್ಷ, ಇದು, ಒಡೆದು ಆಳುವ ನೀತಿಯಲ್ಲವೇ? ಇವರನ್ನು ಯಾರೋ ಏಕೆ ಪ್ರಶ್ನಿಸುವದಿಲ್ಲ?

ನಾನು ಮಾತನಾಡುತ್ತಿರುವದು, BJPಯ ಪರವೂ ಅಲ್ಲ, ಇತರ ಪಕ್ಷಗಳ ವಿರೋಧಕ್ಕೂ ಅಲ್ಲ, ಅದು ಇಂದಿನ ರಾಜಕೀಯ ಎಂಥ ಪರಿಸ್ಥಿತಿಯಬಗ್ಗೆ. ನಮ್ಮಲ್ಲಿನ ವಿರೋಧಾಭಾಸಗಳನ್ನೇ ಗಮನಿಸಿ. ಯಾರಾದ್ರೂ BJPಯ ವಿರೋಧದಲ್ಲಿ ಮಾತನಾಡಿದರೆ, ಅವರನ್ನು ನಾವು ಕಾಂಗ್ರೆಸ್‍ನ್ ಬೆಂಬಲಿಗರೆಂದೋ, ಅಥವಾ ಕಮ್ಯುನಿಸ್ಟರೆಂದೋ ಗುರುತಿಸುತ್ತೇವೆ. ಅವರ ಮುಂದೆ, ಕಾಂಗ್ರೆಸನ್ನೋ, CPIಯನ್ನೋ ಬೈದು ಸಮಾಧಾನಪಟ್ಟುಕೊಳ್ಳುತ್ತೇವೆ ಕೂಡ. ಅಂದರೆ, ಎಲ್ಲರನ್ನೂ ನಾವು ಒಂದಲ್ಲ ಒಂದು ಪಕ್ಷದವರೆಂದೇ ಗುರುತಿಸಿಬಿಡುತ್ತೇವೆ.

ಹಾಗೆಂದ ಮಾತ್ರಕ್ಕೆ, ಈ ಎಲ್ಲ ರಾಜಕಾರಣಿಗಳನ್ನೂ, ಅವರ ಪಕ್ಷಗಳ ಭ್ರಷ್ಟಾಚಾರವನ್ನೂ ಪ್ರಶ್ನಿಸುವ ವ್ಯಕ್ತಿಗೆ ಅಸ್ತಿತ್ವವೇ ಇಲ್ಲವೇ? "ಎಲ್ಲ ರಾಜಕಾರಣಿಗಲೂ ಸ್ವಾರ್ಥಿಗಳು; ಅವರನ್ನು ನಾವೆಲ್ಲ ಒಟ್ಟಾಗಿ ಸೇರಿ ವಿರೋಧಿಸಬೇಕೆಂಬ" ಪ್ರಜ್ಞೆ ನಮ್ಮಲ್ಲಿ ಯಾಕೆ ಮೂಡುವುದಿಲ್ಲ. ನಮ್ಮ ದೈನಂದಿನ ಜೀವನವನ್ನು ನಾವು ರಾಜಕಾರಣದಿಂದ ಬೇರ್ಪಡಿಸಿ ಯಾಕೆ ನೋಡುವದಿಲ್ಲ?

ಧಾರ್ಮಿಕ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ಧಾರ್ಮಿಕ ಜವಾಬ್ದಾರಿಯೂ ಅಷ್ಟೇ ಮುಖ್ಯ. ಸ್ವಾತಂತ್ರ್ಯ ಹಕ್ಕನ್ನು ಪ್ರತಿಪಾದಿಸುತ್ತ, ನಮ್ಮ ಧರ್ಮವನ್ನು ಪಾಲಿಸುವ ಅನುಮತಿ ಕೊಟ್ಟರೆ, ಧಾರ್ಮಿಕ ಜವಾಬ್ದಾರಿ, ನಮ್ಮ ಧರ್ಮ ಇನ್ನೊಬ್ಬರ ಮೇಲೆ ಭಾರವಾಗದಿರುವಂತೆ ನೋಡಿಕೊಳ್ಳುವ ಲಕ್ಷ್ಮಣರೇಖೆ ಹಾಕುತ್ತದೆ. ಅಲ್ಲದೇ, ಧಾರ್ಮಿಕ ಜವಾಬ್ದಾರಿ ನಮ್ಮ ನಮ್ಮ ಧರ್ಮದ ಆಧಾರದ ಮೇಲೆ ಈ ಸಮಾಜವನ್ನು ಒಡೆಯದಿರುವಂತೆ ನೋಡಿಕೊಳ್ಳೂವಂತೆಯೂ ತಿಳಿಸುತ್ತದೆ.
ಅಂದರೆ, ಧರ್ಮ, ನಾವು, ನಮ್ಮ ಮನೆಯಲ್ಲಿ ಆಚರಿಸಿಕೊಳ್ಳಬೇಕಾದ ಸಂಪ್ರದಾಯಕ್ಕೆ ಮಾತ್ರ ಸಂಬಂಧಿಸಿದೆ. ಸಾಮಾಜಿಕವಾಗಿ, ನಾವು ಯಾವುದೇ ಧರ್ಮವನ್ನು ಬೆಂಬಲಿಸುವಂತಿಲ್ಲ. :) . ಅದು, ಹಿಂದೂ ದರ್ಮವೇ ಆಗಿರಲಿ, ಇಸ್ಲಾಂ ಧರ್ಮವೇ ಆಗಿರಲಿ ಅಥವಾ ಕ್ರಿಶ್ಚಿಯನ್- ಸಿಖ್ ಧರ್ಮಗಳೇ ಆಗಿರಲಿ. ಆದರೆ, ಈ ಸ್ವಾತಂತ್ರೋತರ ೫ ದಶಕಗಳಲ್ಲಿ ಮಾಡಿದ್ದಾದರೂ ಏನು? ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಉಳಿದೆಲ್ಲವರನ್ನೂ ಮಾನಸಿಕವಾಗಿ ಹಿಂಸಿಸಿಲಾಗಿದೆ. ಅಲ್ಪಸಂಖ್ಯಾತರ ಉದ್ಧಾರ ಮಾಡುತ್ತೇವೆ, ಎಂದು ಅವರನ್ನು ನಂಬಿಸಿ, ಇನ್ನೂ ಅವರನ್ನು ಅಲ್ಲಿಯೇ ಇಡಲಾಗಿದೆ. ಇದರಿಂದ ನಿಜವಾಗಿಯು ಹಿಂದುಳಿದವರಾರಿಗೂ ಯಾವ ಉಪಯೋಗವೂ ಆಗಿಲ್ಲ. ಆಗುವುದೂ ಇಲ್ಲ!!!

 
ನಾನು ಇಷ್ಟು ಮಾತನಾಡಿದ್ದೇ ತಡ, ಅನೇಕರು ಈಗಾಗಲೇ - "ಇವನು ಮೀಸಲಾತಿಯ ವಿರೋಧಿ.. ಹಾಗೇ ಹಿಂದುಳಿದ ವರ್ಗಗಳ ವಿರೋಧಿ.." ಎಂಬ ಅಭಿಪ್ರಾಯಕ್ಕೆ ಬಂದುಬಿಟ್ಟಿರುತ್ತಾರೆ. ಅವರಿಗೆ, ನಿಜವಾಗಿಯೂ ನಡಿಯುತ್ತಿರುವ ದೌರ್ಜನ್ಯಕ್ಕಿಂತ, "ಇನ್ನೊಬ್ಬನ್ಯಾರೋ ಅವರಬಗ್ಗೆ ಮಾತನಾಡುತ್ತಿದ್ದಾನಲ್ಲ?" ಎಂಬ ಮಾತೇ ದೊಡ್ಡದಾಗಿಯೂ ಕಂಡುಬರುತ್ತದೆ. ಇದನ್ನು ನಾನು ಅನೇಕ ಚರ್ಚೆಗಳಲ್ಲಿ ಗಮನಿಸಿದ್ದೇನೆ ಕೂಡ. ಆದರೆ, ಈ "ನಮ್ಮವ, ತಮ್ಮವ" ಎಂಬ ಶಬ್ದಗಳಸುತ್ತ ಸುತ್ತಾಡದೇ, ತಾರ್ಕಿಕವಾಗಿ ಎಲ್ಲರೂ ಯೋಚಿಸಬೇಕಾದದ್ದು ತುಂಬಾ ಅಗತ್ಯ. ಹಾಗೇ, ನಮ್ಮಲ್ಲಿರುವ ಅಸಮಾನತೆಯನ್ನು ನಿಜವಾಗಲೂ ಹೇಗೆ ಇಲ್ಲವಾಗಿಸಬೇಕು ಎಂಬೆಡೆಗೆ, ನವೀನ ರೀತಿಯಲ್ಲಿ ಯೋಚಿಸಲೂಬೇಕು.

 

ಇದು ಹಿಂದುಗಳ ಪಕ್ಷ, ಇದು, ಮುಸ್ಲಿಮರದು ಇದು ಸಿಖ್ಖರದು ಎಂದು ವಿಭಜಿಸುವಬದಲು, ನಾವು ಆ ಪಕ್ಷದ ಸಾಮಾಜಿಕ ಅಸ್ತಿತ್ವವನ್ನು ಒಮ್ಮೆ ಪ್ರಶ್ನಿಸಿನೋಡಬೇಕು. ಅದರ ಮಾನವೀಯ ಮೌಲ್ಯಗಳ ಬಗ್ಗೆ ಚರ್ಚೆಯಾಗಬೇಕು. ವಿಭಜಕ ಶಕ್ತಿಗಳ ನಿರ್ಮೂಲನೆಯಾಗಬೇಕು (ಇಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸೇರುತ್ತವೆ). ಧಾರ್ಮಿಕತೆ, ನಮ್ಮ ಮನೆಗಳಿಗೆ, ಗುಡಿ/ಮಸೀದಿ/ಚರ್ಚ್‍ಗಳಿಗೆ ಮಾತ್ರ ಸೀಮಿತವಾಗಿರಬೇಕು. ಆಗ ಮಾತ್ರ, ಸಾಮರಸ್ಯ ಸಾಧ್ಯ. ಅಲ್ಲವೇ?