ನನ್ನೂರಿನ ಮೂರು ಮುತ್ತುಗಳು

ನನ್ನೂರಿನ ಮೂರು ಮುತ್ತುಗಳು

ನನ್ನ ಊರು ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ಕೃಷ್ಣಾಪುರ-ಕಾಟಿಪಳ್ಳ. ಈ ವರ್ಷ ಪಿಯುಸಿ ಪರೀಕ್ಷೆಯ ಫಲಿತಾಂಶದ ಮೇಲೆ ನಾನು ಕಣ್ಣಾಡಿಸಿದಾಗ ನಾನು ಕಲಿತ ಶಾಲೆಯಾದ ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಮೂರು ಮಂದಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪಡೆದು ದಂಗಾದೆ. ಅವರೆಲ್ಲಾ ಸರಾಸರಿ ೯೫ ಶೇಕಡಾ ಅಂಕಗಳನ್ನು ಪಡೆದಿದ್ದಾರೆ. ಹಲವಾರು ಮಂದಿ ಇವರಿಗಿಂತ ಅಧಿಕ ಅಂಕ ಪಡೆದವರು ಇಲ್ಲವೇ? ಎಂದು ನೀವು ಕೇಳ ಬಹುದು. ಆ ಮೂರು ಮಂದಿ ಬಗ್ಗೆ ಒಂದಷ್ಟು ತಿಳಿಸುತ್ತೇನೆ. ಮತ್ತೆ ನಿಮ್ಮ ಅಭಿಪ್ರಾಯ ತಿಳಿಸಿ.

ನಾನು ಹೇಳಿದ ಮೂರೂ ಮಂದಿ ಒಂದೇ ಮನೆಯವರು. ತ್ರಿವಳಿಗಳು. ಮೂವರಿಗೂ ದೃಷ್ಟಿ ದೋಷವಿದೆ. ಆದರೂ ಕಲಿಯುವ, ಸಾಧಿಸುವ ಛಲವೊಂದಿದ್ದರೆ ಯಾವುದೇ ದಾರಿ ಅಥವಾ ಗುರಿ ಅಸಾಧ್ಯವೇನಲ್ಲ ಎಂಬುವುದನ್ನು ಈ ತ್ರಿವಳಿಗಳು ಸಾಧಿಸಿ ತೋರಿಸಿದ್ದಾರೆ. 

ಪಿಯುಸಿಯಲ್ಲಿ ಜೀವನ್ (೫೭೭), ಜಯೇಶ್ (೫೬೪) ಹಾಗೂ ಜಿತೇಶ್ (೫೬೦) ವಿಶೇಷ ದರ್ಜೆಯ ಅಂಕಗಳನ್ನು ಪಡೆದಿದ್ದಾರೆ. ಮೂರೂ ಮಂದಿಗೂ ಬಾಲ್ಯದಿಂದಲೂ ದೃಷ್ಟಿ ದೋಷವಿದೆ. ವಿಶೇಷ ಕನ್ನಡಕಗಳನ್ನು ಬಳಸಿದಾಗಲಷ್ಟೇ ತೀರಾ ಹತ್ತಿರದ ಅಕ್ಷರಗಳು ಕಾಣಿಸುತ್ತವೆಯಂತೆ. ಆದರೆ ಸ್ವಲ್ಪವೇ ದೂರದಲ್ಲಿರುವ ವಸ್ತುಗಳನ್ನು ಗುರುತಿಸಲೂ ಇವರು ಬಹಳ ಶ್ರಮ ಪಡಬೇಕಾಗಿದೆ. ಆದರೆ ಪ್ರತಿಭೆಗೆ ಸೀಮೆಯಿಲ್ಲ. ತುಂಬಾ ಹತ್ತಿರದಿಂದಲೇ ಓದಿ ಮನನ ಮಾಡಬೇಕಾದ ಕಷ್ಟ ಸಾಧ್ಯವಾದ ಗುರಿಯನ್ನು ಇವರು ತಲುಪಿದ್ದಾರೆ. ಕೇವಲ ಸಾಧನೆಯೊಂದೇ ಯಶಸ್ಸಿನ ಸರಳ ಸೂತ್ರವೆಂಬಂತೆ ಇವರು ತಮ್ಮ ಮನೆಯ ಬಡತನವನ್ನೂ ಮೀರಿ ಬೆಳೆದಿದ್ದಾರೆ. 

ಕಾಟಿಪಳ್ಳದ ಸಮೀಪವಿರುವ ಕೃಷ್ಣಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಇವರು ತಮ್ಮ ತಂದೆ ತಾಯಿ ಜೊತೆ ವಾಸಿಸುತ್ತಿದ್ದಾರೆ. ಇವರ ತಂದೆಯವರಾದ ವಿಶ್ವನಾಥರು ಕೂಲಿ ಕೆಲಸ ಮಾಡುತ್ತಾರೆ. ತಾಯಿ ಬೀಡಿ ಕಟ್ಟುತ್ತಾರೆ. ತಮ್ಮ ತಂದೆ-ತಾಯಿಯವರ ಶ್ರಮವನ್ನು ತಮ್ಮ ಬೊಗಸೆ ತುಂಬಾ ಅಂಕಗಳಿಂದ ಸಾರ್ಥಕಗೊಳಿಸಿದ್ದಾರೆ ಈ ತ್ರಿವಳಿಗಳು. ತಮ್ಮ ಕಣ್ಣಿನ ದೃಷ್ಟಿ ತೀರಾ ಮಂಜಾಗಿದ್ದರೂ ಇವರು ಪರೀಕ್ಷೆ ಬರೆಯಲು ಸಹಾಯಕನನ್ನು ಬಳಸಿಕೊಂಡಿಲ್ಲ. ತಮ್ಮ ತಮ್ಮ ಪರೀಕ್ಷೆಯನ್ನು ತಾವೇ ಬರೆದಿದ್ದಾರೆ.  ಹತ್ತನೇ ತರಗತಿಯವರೆಗೆ ಇವರ ತಾಯಿ ಉರ್ಮಿಳಾರೇ ಇವರನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಆದರೆ ಈಗ ಇವರೇ ಬಸ್ ನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದರು. ಇವರ ಅಂಕ ಗಳಿಕೆಯಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸ್ನೇಹಿತರು ನೀಡಿದ ಸಹಕಾರವನ್ನು ತ್ರಿವಳಿಗಳು ಸ್ಮರಿಸುತ್ತಾರೆ.

ತಮಗೆ ಸಿಕ್ಕಿದ ೯೫ ಶೇಕಡಾ ಅಂಕಗಳಿಂದಲೂ ಇವರು ತೃಪ್ತರಾಗಿಲ್ಲ. ಇತಿಹಾಸದಲ್ಲಿ ಪಡೆದುಕೊಂಡ ಅಂಕಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಇವರು ನಿರ್ಧರಿಸಿದ್ದಾರೆ. ಮುಂದೆ ಚಾರ್ಟಡ್ ಅಕೌಂಟೆಂಟ್ ಆಗ ಬೇಕೆಂಬ ಕನಸು ಹೊಂದಿರುವ ಇವರು ಉತ್ತಮ ಮಾರ್ಗದರ್ಶನ ದೊರೆತರೆ ಖಂಡಿತಾ ತಮ್ಮ ಗುರಿ ತಲುಪಿಯಾರು, ತಮ್ಮ ಕಾಲೇಜ್ ಜೀವನದಲ್ಲೂ ಕ್ವಿಜ್ ಮುಂತಾದ ಸ್ಪರ್ಧೆಗಳಲ್ಲಿ ಈ ತ್ರಿವಳಿಗಳು ಸದಾ ಮುಂದೆ ಇದ್ದರು ಎಂದು ಹೇಳುತ್ತಾರೆ ಇವರು ಕಲಿತ ನಾರಾಯಣ ಗುರು ಕಾಲೇಜಿನ ಪ್ರಾಂಶುಪಾಲರಾದ ಉಮೇಶ್ ಕರ್ಕೇರಾ. ಮಂಗಳೂರಿನ ಕೆಲವು ಪದವಿ ಕಾಲೇಜುಗಳು ಇವರಿಗೆ ಮುಂದಿನ ವ್ಯಾಸಾಂಗಕ್ಕೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ ಎನ್ನುತ್ತಾರೆ ಪ್ರಾಂಶುಪಾಲರು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ದಾನಿಗಳು ಅಥವಾ ಸಂಘ ಸಂಸ್ಥೆಗಳು ಈ ತ್ರಿವಳಿಗಳ ಸಾಧನೆಯನ್ನು ಗುರುತಿಸಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಬೇಕು.

ನನ್ನ ಊರಿನ ಹೆಮ್ಮೆಯ ಮೂರು ಮುತ್ತುಗಳಾದ ಜೀವನ್, ಜಯೇಶ್, ಜಿತೇಶ್ ಎಂಬ ತ್ರಿವಳಿಗಳು ತಮ್ಮ ಸಾಧನೆಯ ಛಲವನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗಬೇಕು. ಭವಿಷ್ಯದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು, ಒಳ್ಳೆಯ ಉದ್ಯೋಗಕ್ಕೆ ಸೇರಿ ತಮ್ಮ ತಂದೆ ತಾಯಿಯರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು ಎನ್ನುವುದೇ ನನ್ನ ಆಶಯ. 

 

ಚಿತ್ರ ಕೃಪೆ: ಕುಡ್ಲ ಸಿಟಿ