ನನ್ನ ತಾಯಿ ಕನ್ನಡಾಂಬೆ

ನನ್ನ ತಾಯಿ ಕನ್ನಡಾಂಬೆ

ಬರಹ

ನಿನ್ನ ಹೇಗೆ ಮರೆಯಲಿ ತಾಯಿ
ಮೊಲೆ ಹಾಲುಣಿಸದಿದ್ದರು ತೊದಲು ನುಡಿಯ ಕಲಿಸಿದೆ
ಕೈತುತ್ತು ತಿನಿಸದಿದ್ದರು ಅನ್ನದ ಋಣವ ಹೆಚ್ಚಿಸಿದೆ
ನಿನ್ನ ತೊಡೆಯ ಮೇಲೆ ತಲೆಯಿಡದಿದ್ದರು ಹಸಿರ ಹುಲ್ಲು ಹಾಸಿದೆ
ನಿನ್ನ ಜೋಗುಳವ ಕೆಳದಿದ್ದರು ತಂಗಾಳಿಯಲಿ ನಿನ್ನ ಹಾಡು ಕೇಳಿಸಿದೆ
ನಿನ್ನ ಸ್ತುತಿಯ ಮಾಡದಿದ್ದರು ಜೋಗದ ಭೋರ್ಗರೆವ ನೀರಿನಲ್ಲಿ ನಿನ್ನ ಮಂತ್ರವ ಕೇಳಿಸಿದೆ
ಆಮೃತವ ಕುಡಿಸದಿದ್ದರು ಕಾವೇರಿಯ ನೀರು ಕುಡಿಸಿದೆ
ನಿನ್ನ ವರ್ಣನೆ ನಾ ಕೆಳಲೆಂದೇ ನೂರಾರು ಕವಿಗಳಿಗೆ ಜನ್ಮ ನೀಡಿದೆ
ನಿಧಿಯ ನೀಡುವ ಬದಲು ಜ್ಞಾನದ ದಾಹವನ್ನು ಹೆಚ್ಚಿಸಿದೆ
ದಾರಿತಪ್ಪಿ ನಡೆದಾಗ ಧರ್ಮದ ಮಾರ್ಗವನ್ನು ತೋರಿಸಿದೆ

ಆದರೆ ನಾನೇನು ಮಾಡಿದೆ ತಾಯಿ...

ಮೊಲೆ ಹಾಲ ರುಚಿಯ ಕಾಣದ ನಾನು ಹಾವಿನ ವಿಷವನ್ನುಂಡೆ
ಕಾವೇರಿಯ ನೀರು ಕುಡಿಯದ ನಾನು ಕಾವೇರಿದಂತಾದೆ
ನನ್ನ ಕಣ್ಣೀರಳಿಸಲು ಬಂದ ನಿನ್ನ ಕಣ್ಣೀರ ಸಾಗರವ ಹರಿಸಿದೆ
ಕನ್ನಡದ ಸುಗಂಧವ ಅರಿಯದ ನಾನು ಅನ್ಯ ಭಾಷೆಗೆ ಮೊರೆಹೊದೆ
ಅಕ್ಕಪಕ್ಕದವರು ನಿನ್ನ ನೋಡಿ ನಗುತಿರೆ ಅವರೊಟ್ಟಿಗೆ ಸೇರಿ ನಗೆಯಾಡಿದೆ
ನಿನ್ನ ಮಕ್ಕಳೊಂದಿಗೆ ಸ್ನೇಹ ಬಯಸುವ ಬದಲು ವೈರತ್ವವ ಪೋಷಿಸಿದೆ
ನೆರೆ ರಾಜ್ಯದವರು ನಿನ್ನ ಸೀರೆಯ ಸೆಳೆವಾಗ ಅವರೊಟ್ಟೀಗೆ ಸೇರಿ ದುಶ್ಯಾಸನನಾದೆ
ಭೀಮನಾಗಿ ನಿನ್ನ ಕಾಯುವ ಬದಲು ಹಣವನ್ನುಂಗುವ ಬಕಾಸುರನಾದೆ
ಧರ್ಮರಾಯನಾಗುವ ಬದಲು ಅಧರ್ಮದ ಧುರ್ಯೊನನನಾದೆ

ನನ್ನ ತಪ್ಪನು ಮನ್ನಿಸು
ನನ್ನ ದೇಹದೊಳಿರುವ ನಿನ್ನ ದೇಗುಲದ ಬಾಗಿಲನು ತೆರಿಸು...
ಅದರಲ್ಲಿ ನಿನ್ನ ಜ್ಞಾನದ ದೀಪವ ಬೆಳೆಗಿಸು...