ನನ್ನ Some ಶೋಧನೆ!!

ನನ್ನ Some ಶೋಧನೆ!!

ಬರಹ

ಸಾತ್ವಿಕ್ ಅವರ ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ? ಪ್ರಶ್ನೆ ಈ ಲೇಖನವನ್ನ ಬರೆಯಲು ಪ್ರೇರೇಪಿಸಿತು :) 

ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಮುಗಿಸಿ, ಪ್ರಥಮ ಪಿ.ಯು.ಸಿ ಕಾಲೇಜಿಗೆ ಸೇರಿದ ಸಮಯ. ಹೊಸ ಕಾಲೇಜು, ಹೊಸ ಗೆಳತಿಯರು, ವಿಜ್ಞಾನದ ವಿಷಯಗಳು, ಭೌತ,ಸಸ್ಯ,ಜೀವ,ರಾಸಾಯನಿಕ ಶಾಸ್ತ್ರದ ಪ್ರಯೋಗಗಳು, ಗಣಿತ ಸಮೀಕರಣಗಳು....ಅದೂ ಎಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ....... ಎಲ್ಲವೂ ಹೊಸತೇ :)

ಒಂದಿನ ಮಧ್ಯಾಹ್ನ ನಾನು ಕಾಲೇಜಿನಿಂದ ಮನೆಗೆ ವಾಪಾಸ್ಸಾಗಿಊಟ ಮಾಡಿ ಟಿ.ವಿ. ಮುಂದೆ ಹಾಜರ್ರು. ನನ್ನ ತಮ್ಮ ಕೂಡ ಆವಾಗಲೇ ಬಂದ. ಅದ್ಯಾರೋ ಸ್ನೇಹಿತರು ಕೊಟ್ರು ಅಂತ ಒಂದು ಚಿಕ್ಕ ಸೀಸೆಯಲ್ಲಿ ಪಾದರಸವನ್ನ ತಂದಿದ್ದ. ಅಮ್ಮನಿಗೆ ಕಾಣದ ಹಾಗೆ ನನ್ನ ಬಳಿ ತಂದು ಒಮ್ಮೆ ಆ ಸೀಸೆಯನ್ನ ಜೋರಾಗಿ ಅಲುಗಾಡಿಸಿ ತೋರಿಸಿದ. ಒಂದು ದೊಡ್ಡ ಹನಿಯಂತಿದ್ದ ಪಾದರಸ ಒಡೆದು ಅನೇಕ ಚಿಕ್ಕ ಚಿಕ್ಕ ಹನಿಗಳಾದವು. ಮತ್ತೊಮ್ಮೆ ನಿಧಾನವಾಗಿ ಸೀಸೆಯನ್ನ ತಿರುಗಿಸಿದರೆ ಮತ್ತೆ ಮೊದಲಿನ ದೊಡ್ಡ ಹನಿಯಾಯ್ತು. ಇಷ್ಟಕ್ಕೆ ನಿಲ್ಲದ ಅವನು ಪೇಪರಿನ ಮೇಲೆ ನಿಧಾನವಾಗಿ ಸುರುವಿಈಗ ಅದು ಹೇಗೆ ಹರಿದಾಡತ್ತೆ ಅಂತ ತೋರಿಸಿದ್ದು ನನ್ನ ಕುತೂಹಲ ಕೆರಳಿಸಿತು. ಮತ್ತೆ ಪೇಪರಿನ ಮೂಲೆಯಲ್ಲೊಂದು ಚಿಕ್ಕ ಮಡಿಕೆ ಮಾಡಿ ಅದರಿಂದ ಪುನಃ ಪಾದರಸವನ್ನ ಸೀಸೆಯೊಳಗೆ ಹಾಕಿ....ಇದು ನನ್ನದು....ತೆಗೆದರೆ ನೋಡು ಅಂತ ಕಟ್ಟಾಜ್ಞೆಯೊಂದಿಗೆ ಟೇಬಲ್ ಮೇಲೆ ಸೀಸೆಯನ್ನಿಟ್ಟ. ನಾನು ಟೀವಿ ನೋಡುತ್ತಲೇ ಇದ್ದೆ.

ಊಟ ಮುಗಿಸಿ ತಮ್ಮ ಸ್ಕೂಲಿಗೆ ಹೊರಟುಹೋದ. ಅಲ್ಲಿಯವರೆಗೂ ಕುತೂಹಲ ತಡೆದಿಟ್ಟುಕೊಂಡಿದ್ದ ನನಗೊಂದು ಛಾನ್ಸ್....!! :) ನಿಧಾನವಾಗಿ ಸೀಸೆಯ ಮುಚ್ಚಳ ತೆಗೆದೆ (ರಾಸಾಯನಿಕ ವಸ್ತುವನ್ನ ಬರಿಗೈಯಲ್ಲಿ ಮುಟ್ಟಬಾರದು ಅಂತ ತಿಳಿದಿದ್ರೂ, ಏನೂ ಆಗೋಲ್ಲ ಅನ್ನೋ ಧೈರ್ಯದ ಮೇಲೆ) ಪಾದರಸವನ್ನ ಬರಿಗೈಯಲ್ಲಿ ಸ್ವಲ್ಪ ಒತ್ತಡದಲ್ಲಿ ಮುಟ್ಟಿದೆ. ಅದು ಚಿಕ್ಕ ಚಿಕ್ಕ ತುಣುಕುಗಳಾದವು..ಮತ್ತೆ ಬೆರಳಿಗೇನಾದ್ರು ಆಯ್ತಾ ಅಂತ ಒಮ್ಮೆ ನೋಡಿದೆ ಏನೂ ಆಗಿರಲಿಲ್ಲ. ಅದೇ ಧೈರ್ಯದ ಮೇಲೆ ಪಾದರಸವನ್ನ ಬಲಗೈ ಅಂಗಳದಲ್ಲಿ ಸುರುವಿಕೊಂಡು..ಬಲಗೈಯಿಂದ ಎಡಗೈಗೆಮತ್ತೆ ಎಡಗೈಯಿಂದ ಬಲಗೈಗೆ ಸುರಿದಾಡೋದು ಮಜಾ ಅನ್ನಿಸ್ತು.. :)

ಬೆಳ್ಳಿ ಬಣ್ಣದ ಭಾರದ ದ್ರವ ರೂಪದ ಮೂಲವಸ್ತು.... ಪಾದರಸ...!! ಕೈಲಿದ್ದ ಪಾದರಸವನ್ನ ಹಾಗೆ ಹಿಡಿದಿಟ್ಟು ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಹಾಡನ್ನ ನೋಡತೊಡಗಿದೆ. ಅಡುಗೆ ಮನೆಯಿಂದ ಅಮ್ಮ  ಕರೆದಾಗ, ಬಂದೆಮ್ಮಾ ಅಂತ ಹೇಳಿ.... ನನ್ನ ಕೈ ನೋಡಿಕೊಂಡಾಗ.....ನನಗೆ ಒಂದು ಕ್ಷಣ ಸಕತ್ ಭಯ ಆಗೋಯ್ತು.....ಈಗ ಅಮ್ಮ ಕೇಳಿದ್ರೆ ಏನು ಹೇಳೋದು,ಅಪ್ಪಂಗೆ ಏನು ಹೇಳಲಿ,ತಗೋಬೇಡಾ ಅಂತೇಳಿದ್ರೂ ಯಾಕೆ ತೆಗೆದೆ? ಅಂತ ತಮ್ಮ ದಬಾಯಿಸಿದರೆ ಏನು ಮಾಡೋದು ಅಂತ ಒಂಥರಾ ಭಯವಾಗೊಯ್ತು.

ನಾನು ಈ ಪಾದರಸವನ್ನ ಮುಟ್ಟಿದ್ದು, ನನ್ನ ತಮ್ಮ ಅದನ್ನ ಮನೆಗೆ ತಂದದ್ದು, ಅದ್ಯಾರೋ ಇವನಿಗೆ ಕೊಟ್ಟದ್ದು...ಅಯ್ಯೋ…..ಇವಿಷ್ಟೂ ನಡೀದೆ ಇದ್ದಿದ್ದರೆ….ಈವತ್ತು ಎಷ್ಟು ಒಳ್ಳೆಯ ದಿನವಾಗಿರ್ತಿತ್ತು...ನನಗೆ ಗ್ರಹಚಾರ ತಪ್ಪಿದ್ದಲ್ಲ...ಅಂತ ಮನಸ್ಸಿನಲ್ಲಿ ಗೊಣಗಿಕೊಳ್ತಾ...ಪಾದರಸವನ್ನ ಸೀಸೆಯಲ್ಲಿ ಹಾಕಿಟ್ಟು..ಅದನ್ನ, ತಮ್ಮನನ್ನ, ನನ್ನನ್ನೂ ಶಪಿಸಿಕೊಳ್ತಾ ಕೈತೊಳೆಯಲು ಓಡಿದೆ...

ನೀರು ಹಾಕಿದರೂ ಊಹು...ಬಿಸಿನೀರುಊಹು...ಸೋಪು ಹಾಕಿ ಉಜ್ಜಿದರೂ ಊಹು..ಏನೂ ಆಗಲೇ ಇಲ್ಲ...... :(

ನನ್ನ ಎಡಗೈ ಬೆರಳಲ್ಲಿದ್ದ ಚಿನ್ನದ ಉಂಗುರ.....ಪಾದರಸದ ಬೆಳ್ಳಿ ಬಣ್ಣಕ್ಕೆ ತಿರುಗಿತ್ತು...!!

ಆಗಲೇ ಕಣ್ಣಂಚಿನಲ್ಲಿ ಹನಿಗೂಡಿತ್ತು... ಮನಸ್ಸಿನಲ್ಲಿ ಒಂದೊಂದಾಗೆ ಉಂಗುರದ ಹಿನ್ನೆಲೆಯ ಚಿತ್ರಣಗಳು ಮೂಡುತ್ತಿದ್ದವು….. ಚಿನ್ನದುಂಗುರದ ಬೆಲೆ ಬಹಳ..ಅದಲ್ದೇ ಅಪ್ಪ ನನ್ನ ಹುಟ್ಟಿದ ಹಬ್ಬಕ್ಕೆ ಅಂತ ಪ್ರೀತಿಯಿಂದ ತೆಗೆದು ಕೊಟ್ಟದ್ದು....ಅದರ ಡಿಸೈನ್ ಕೂಡ ನನ್ನ ಸ್ವಂತದ್ದು...ಆ ದಿನ ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸಿಕೊಂಡು ಅಪ್ಪನ ಜೊತೆ ಬಂಗಾರದಂಗಡಿಗೆ ನಾನೂ ಹೋಗಿದ್ದೆ. ಅಂಗಡಿಯವ ಅವನ ಬಳಿಯಿರೋ ಎಲ್ಲಾ ಡಿಸೈನಿನ ಉಂಗುರಗಳನ್ನ ನಮಗೆ ತೋರಿಸುವ ಮೊದಲೇ ನಾನು ಬರೆದ ಚಿತ್ರವನ್ನ ಅವನ ಮುಂದಿಟ್ಟಿದ್ದೆ....ಆ ಡಿಸೈನ್ ನೋಡಿ ಅಂಗಡಿಯವ ದಂಗಾಗಿದ್ದ..ಹೌದು ನನಗೆ ಇದೇ ಡಿಸೈನ್ ಬೇಕು ಅಂತ ಪಟ್ಟು ಹಿಡಿದಾಗ ಅವ ಪ್ರಯತ್ನಿಸುತ್ತೇನೆ ಅಂತ ಹೇಳಿದ.

ಷಡ್ಭುಜ ನಕ್ಷತ್ರದ ನಡುವೆ ಪ್ರಶ್ನಾರ್ಥಕ ಚಿನ್ಹೆ...!!!! ಹೌದ್ರೀ ಈಗ ನೀವು ದಂಗಾಗಬೇಡಿ.. :) 

ಹುಟ್ಟು ಹಬ್ಬದ ದಿನ ಅಪ್ಪ ನನಗೆ ಆ ಉಂಗುರದ ಡಬ್ಬಿಯನ್ನ ಕೊಟ್ಟಾಗ ನಾನು ಸಕತ್ ಆತುರದಲ್ಲಿದ್ದೆ...ಕಡು ಗುಲಾಬಿ ಬಣ್ಣದ ಕಾಗದದ ಒಳಗೆ ಮಿಣ್ಣನೆ ಮಿರುಗುತ್ತಿತ್ತು ಚಿನ್ನದುಂಗುರ.. :) ತೆಗೆದು ನೋಡಿದಾಗ ಷಡ್ಭುಜವೋಗಿ....ರಾಂಬಸ್ ಆಕೃತಿಯ ರೀತಿಯಾಕಾಯ್ತು??? ಅನ್ನೋ ಪ್ರಶ್ನಾರ್ಥಕ ಚಿನ್ಹೆ ನನ್ನ ನೋಟದಲ್ಲಿತ್ತು!!!!

ಬಂಗಾರದಂಗಡಿಯವನಿಗೆ ಷಡ್ಭುಜ ನಕ್ಷತ್ರ ಮಾಡ್ಲಿಕ್ಕೆ ಆಗಲಿಲ್ವಂತೆಅದಕ್ಕೇ ಈ ರೀತಿ ಮಾಡಿದಾನೆ ಅಂತ ಅಪ್ಪ ಸಮಾಧಾನ ಮಾಡಿದ ಮೇಲೆಹೋಗಲಿ ಬಿಡು ಚೆನ್ನಾಗಿದೆಯಲ್ಲ ಸಾಕು ಅಂದ್ಕೊಂಡೆ. 

ಇಷ್ಟೆಲ್ಲಾ ಹಿನ್ನೆಲೆಯುಳ್ಳ ಚಿನ್ನದುಂಗುರದ ಗತಿ ಹೀಗಾಗಿತ್ತು. ಏನು ಮಾಡಲೂ ತೋಚದೆ ಕೊನೆಗೆ...ಇದೂ ಒಂದು ಹೊಸ ಸಂಶೋಧನೆಯಾಗಿದ್ದರೆ ???!!! ಅನ್ನೋದು ಹೊಳೆದಾಗ ಸ್ವಲ್ಪ ನಿರಾಳವೆನಿಸಿ ಒಂದೆರಡು ಬಾರಿ ದೀರ್ಘ ಉಸಿರನ್ನೆಳೆದುಕೊಂಡು ರಾಸಾಯನಿಕ ಶಾಸ್ತ್ರ ಪುಸ್ತಕದಲ್ಲಿದ್ದ ಎಲ್ಲಾ ಪಾಠಗಳನ್ನ ತಡಕಾಡಿದೆಸಿಕ್ತು….ಬಂಗಾರದ ಬಗ್ಗೆ ಇದೆ...ಆದರೆ ಪಾದರಸದೊಡನೆ ಪ್ರತಿಕ್ರಿಯೆಯ ಬಗ್ಗೆ ಇಲ್ಲ..ಸರಿ ಆದದ್ದಾಗಲಿ ಅಂತ ನೋಟ್ಸ್ ಹಿಡಿದು ಸೈಕಲ್ ಜೊತೆಗೆ ನಮ್ಮ ಕೆಮಿಸ್ಟ್ರಿ ಲೆಕ್ಚರ್ ಮನೆ ಕಡೆ ಹೊರಟೆ.

 

ಅವರಿಗೆ ನಡೆದದ್ದನ್ನೆಲ್ಲಾ ವಿವರಿಸಿದ ಮೇಲೆ....ಅವರು ಅವರ ಎಮ್ಮೆಸ್ಸಿ ಗ್ರಂಥಗಳನ್ನ ಹುಡುಕಾಡಿ ವಿಚಾರವನ್ನ ಹೇಳಿದರು...

ಪಾದರಸ ಬಂಗಾರದೊಡನೆ ಸೇರಿ (ಒಂದು ದ್ರವ ಮತ್ತು ಒಂದು ಘನ ಲೋಹ ಸೇರಿದರೆ) ಅಮಾಲ್ಗಂ ಆಗತ್ತೆ.

ಈ ಉಂಗುರವನ್ನ ಹೆಚ್ಚಿನ ಉಷ್ಣತೆಯಲ್ಲಿ (ಬೆಂಕಿಯಲ್ಲಿ) ಕಾಯಿಸಿದರೆ ಪಾದರಸವನ್ನ ಬಂಗಾರದಿಂದ ಬೇರ್ಪಡಿಸಬಹುದು. ನಾಳೆ ಕೆಮಿಸ್ಟ್ರಿ ಲ್ಯಾಬ್ಗೆ ಉಂಗುರ ತಗೊಂಡು ಬನ್ನಿ ವಿಚಾರ ಮಾಡೋಣ ಅಂದರು….ಇದು ಇನ್ನೂ ಪೇಚಾಟಕ್ಕೆ ತಂದಿಟ್ಟಿತು. ಇದು ಹೊಸ ಸಂಶೋಧನೆಯೇನಲ್ಲ ಅಂತ ಅರಿವಾದೊಡನೆ ಅಲ್ಲಿಂದ ಜಾಗ ಖಾಲಿ ಮಾಡೋದು ಬಹಳ ಸೂಕ್ತ ಅನ್ನಿಸಿತು.

ಲ್ಯಾಬಿಗೆ ತಗೊಂಡೋಗಿ ಕಾಯಿಸಿಇನ್ನೇನೋ ಮಾಡಿ...ಉಂಗುರ ಮೊದಲಿನಂತಾದರೆ ಸರಿ…..ಗ್ರಹಚಾರವಶಾತ್ ಕರಗಿ….ಆವಿಯಾಗಿಇನ್ನೋನೋ ಆದರೆ ಅಮ್ಮ ಅಪ್ಪನಿಗೆ ಹೇಳಲು ಏನೂ ಇರದೇನನ್ನ ಬಳಿ ಉಳಿಯೋದು...ಬರೀ ಪ್ರಶ್ನಾರ್ಥಕ ಚಿನ್ಹೆಯೊಂದೇ....???

 

ಮನೆಗೆ ಬಂದು ಸಂಜೆ ಅಪ್ಪ ಬರುವುದನ್ನೇ ಕಾದೆ.. ಅಪ್ಪನ ಹಾಜರಿಯಲ್ಲಿ ಅಮ್ಮನ ಬಳಿ ಮಾತಾಡಲು ಒಂಥರಾ ಧೈರ್ಯ :) ಉಂಗುರವನ್ನ ಪೇಪರಿನೊಳಗಿಟ್ಟು ಓದಲು ಪ್ರಯತ್ನಿಸಿದೆ..ಆಗಲೇ ಇಲ್ಲ ಮನಸ್ಸು ಪದೇ ಪದೇ ಉಂಗುರದ ಕಡೆಗೆ ಹೊರಳುತ್ತಿತ್ತು. ಅಪ್ಪ ಮನೆಗೆ ಬಂದ ಕೂಡಲೇ ಪಟಪಟನೆ ನಡೆದದ್ದನ್ನೆಲ್ಲಾ ಹೇಳಿ ಉಂಗುರವಿದ್ದ ಕಾಗದದ ಪೋಟ್ಟಣವನ್ನ ಅವರ ಕೈಗಿಟ್ಟೆ. ಅಪ್ಪ ಬೈಯಲ್ಲ ಅಂತ ಗೊತ್ತಿದ್ರೂ...ಅವರ ಪ್ರತಿಕ್ರಿಯೆಗೆ ಕಾದೆ. ಎಂಥಾ ಬೇಜವಭ್ದಾರಿತನ..ಪಿಯುಸಿಗೆ ಬಂದರೂ ಕೂಡ ಹುಡುಗಾಟಿಕೆ ಹೋಗಿಲ್ಲ....ಅದೂ ಇದೂ ಬೈತಾರೆ ಅಂತ ಕಾದೆ. ಆದರೆ ಬೈಯಲಿಲ್ಲ. ಈ ವಿಷಯವನ್ನ ಜಾಸ್ತಿ ತಲೆಗೆ ಹಚ್ಚಿಕೊಳ್ಳದೆ ಓದ್ಕೋ, ನಾಳೆ ಬಂಗಾರದನ್ಗಡಿಗೆ ಹೋಗಿ ಸರಿ ಮಾಡಿಸಿಕೊಂಡು ಬರ್ತೀನಿ ಅಂದ್ರು. ಅಮ್ಮಂಗೆ ಹೇಳಲಾ? ಅಂದದ್ದಕ್ಕೆ ನೀನು ಬೇಡ ನಾನು ಹೇಳ್ತೀನಿ ಅಂದದ್ದು ಕೇಳಿ...ಸದ್ಯಬದುಕುಳಿದೆ ಬಡಜೀವ ಅಂತ ನನ್ನನ್ನ ನಾನೇ ಸಂತೈಸಿಕೊಂಡು ಓದಲು ಕುಳಿತೆ. ಸ್ಕೂಲಿನಿಂದ ಬಂದ ತಮ್ಮ ಮತ್ತೆ ಪಾದರಸದ ಸೀಸೆಯೊಡನೆ ಆಡತೊಡಗಿದ...ನನಗಾಗಲೇ ಪಾದರಸದ ಬಗ್ಗೆ ಸಿಟ್ಟು ಬಂದಾಗಿತ್ತು.

ಮರುದಿನ ಸಂಜೆ ಮತ್ತೆ ಕಡು ಗುಲಾಬಿ ಕಾದಗದಲ್ಲಿ ಉಂಗುರ ತನ್ನ ಮೊದಲ ಬಣ್ಣದಲ್ಲಿ ಮಿಂಚುತ್ತಿತ್ತು :) ಅರೆ ಏನಾಗಿತ್ತಂತೆ? ಅದು ಹೇಗೆ ಸರಿಹೋಯ್ತು? ಬಂಗಾರದಂಗಡಿಯವ ಏನು ಮಾಡಿದ? ಅಂತ ನನ್ನ ಪ್ರಶ್ನೆಗಳನ್ನ ಕೇಳಿ...

ಪಾದರಸ ಬಂಗಾರವನ್ನ ತಿಂದಿತ್ತಂತೆ..ಇನ್ನೂ ಜಾಸ್ತಿ ಸಮಯ ಬಿಟ್ಟಿದ್ರೆ ಪೂರ್ತಿ ತಿಂದು ಹಾಕ್ತಿತ್ತಂತೆ....:) ಬೆಂಕಿಯಲ್ಲಿ ಕಾಯಿಸಿ ಪಾದರಸ ಬೇರ್ಪಡಿಸಿ ಕೊಟ್ಟ,  ಬಂಗಾರದ ಗಣಿಗಳಲ್ಲಿ ಪಾದರಸವನ್ನ ಬಹಳವಾಗಿ ಉಪಯೋಗಿಸ್ತಾರಂತೆ ಅಂತ ಅಪ್ಪ ಹೇಳಿದಾಗ ನನಗೆ ನಿಜವಾಗಿ ಅಚ್ಚರಿಯಾಯ್ತು..ಪಾದರಸದ ಬಗ್ಗೆ ಇದ್ದ ಸಿಟ್ಟು ಸ್ವಲ್ಪ ಕಡಿಮೆಯಾಯ್ತು...:) 

ಒಂದೆರಡು ಸಾಲು ಆ ಎರಡೂ ಲೋಹಗಳ ಬಗ್ಗೆ  :) 

ಬಂಗಾರ (Au): ಲ್ಯಾಟಿನ್ನಲ್ಲಿ Aurum ಅಂತ ಕರೆಯಲ್ಪಡುವ ಬಂಗಾರದ ಬಗ್ಗೆ ಎಲ್ಲರಿಗೂ ಗೊತ್ತಿದೆ :D 

ಪಾದರಸ (Hg): ಮೂಲವಸ್ತುಗಳ ಕೋಷ್ಟಕದಲ್ಲಿ ಬಂಗಾರದ ಪಕ್ಕವೇ ಪಾದರಸ ಇರೋದು. ಲ್ಯಾಟಿನಲ್ಲಿ-hydrargyrum ಮತ್ತು ಗ್ರೀಕ್ನಲ್ಲಿ- hydrargyros ಅಂತ ಕರೀತಾರೆ. ರೋಮನ್ ದೇವತೆ ಮೆರ್ಕ್ಯುರಿಯ ನೆನಪಾಗಿ ಈ ದ್ರವ ರೂಪದ ಮೂಲವಸ್ತುವಿಗೆ ಮೆರ್ಕ್ಯುರಿ ಅಂತ ನಾಮಕರಣ ಮಾಡಿದರೂ ಚಿಹ್ನೆ ಮಾತ್ರ Hg ಅಂತಾನೆ ಉಪಯೋಗಿಸೋದು. ಪರಿಸರ ಮಾರಕವಾದ ಪಾದರಸದ ಬಳಕೆಯನ್ನ ಬಹು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೂ ನಿಖರ ಕಾರ್ಯ ವೈಖರಿಯ ಪ್ರಭಾವದಿಂದ ಈಗಲೂ ಕೂಡ ಉಷ್ಣಮಾಪಕಗಳಲ್ಲಿ ಪಾದರಸದ ಬಳಕೆಯನ್ನ ಮಾತ್ರ ನಿಲ್ಲಿಸಿಲ್ಲ.

ಹೆಚ್ಚಿನ ವಿಚಾರ:

http://en.wikipedia.org/wiki/Mercury_(element)

http://en.wikipedia.org/wiki/Gold

ವಿ.ಸೂ:

1. ಪಾದರಸ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ, ಬರಿ ಕೈಯಲ್ಲಿ ಮುಟ್ಟೋದು ಇನ್ನೂ ಡೇಂಜರ್!!!

2. ಲೇಖನ ಓದಿ ನೀವು ಪ್ರಯೋಗ ಮಾಡಬೇಡಿ. ಹಾಗೇನಾದರೂ ಮಾಡಿ ನಿಮ್ಮ ಉಂಗುರ ಹಾಳು ಮಾಡಿಕೊಂಡರೆ ಮಾತ್ರ ನಾನು ಜವಾಬ್ದಾರಳಲ್ಲ.

ಧನ್ಯವಾದಗಳು
-ಸವಿತ