ನಮ್ಮಜ್ಜಿ!!! (ಹಾಸ್ಯ - ಲೇಖನ)

ನಮ್ಮಜ್ಜಿ!!! (ಹಾಸ್ಯ - ಲೇಖನ)

ಬರಹ

ನಮ್ಮಜ್ಜಿ!!! (ಹಾಸ್ಯ - ಲೇಖನ)

ಡಾ: ಮೀನಾ ಸುಬ್ಬರಾವ್.

"ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ

ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್ ಮನೆ ಯಾವುದು?, ಯಾರಿಗೆ ನೀರು?, ಯಾರಿಗೆ ಮದುವೆ ನಿಶ್ಚಯ ಆಗಿದೆ?,

ಯಾರ ಮದುವೆ ಮುರಿದ್ ಹೋಯ್ತು?, ಯಾರಿಗೆ ಕಾಲ್ ಕುಂಟಾಯ್ತು? ಅಂತ ಓಡಾಡ್ಕೊಂಡಿರ್ತೀಯಲ್ಲಾ, ವಯಸ್ಸಾಯ್ತು ದಂಡಕ್ಕೆ,

ಇಷ್ಟೇ ಸಾಲ್ದು ಅಂತ ನಿನಗೆ ಋಷಿ ಪಂಚಮಿ ಬೇರೆ ಮಾಡಿಸ್ಬೇಕು ನಾನು. ಬಲ್ ಚೆನ್ನಾಗಿದೆ." ಎಂದು ನಮ್ಮ ತಂದೆ ನಮ್ಮ

ಅಜ್ಜಿಯನ್ನು ಆಗಾಗ್ಗೆ ಬೈಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಇದಕ್ಕೆಲ್ಲಾ ಕಾರಣ ಎಂದರೆ ನಮ್ಮ ಅಜ್ಜಿ, ಬೇರೆ ಅವರ

ವಯಸ್ಸಿನ ಅಜ್ಜಿಯವರಂತೆ ಇರಲಿಲ್ಲ. ಈ ನಮ್ಮಜ್ಜಿ ಸರ್ವಕಾಲಕ್ಕೂ ಸಕಾಲಿಕ ಎಂಬಂತೆ ಕಾಲದ ಎಲ್ಲಾ

ಬದಲಾವಣೆಗಳಿಗೂ ಸರಿಸಾಟಿಯಾಗಿ ಬದುಕಿದ್ದು, ಒಂದು ತರಹ "ವಿಚಿತ್ರ ಆದರೂ ನಿಜ" ವಾದ ವ್ಯಕ್ತಿಯಾಗಿದ್ದರು.

ಬೈದ ಮಾತ್ರಕ್ಕೆ ಮಾತೃ ಪ್ರೇಮಕ್ಕೇನೂ ಕಡಿಮೆ ಇರಲಿಲ್ಲ, ಒಂದು ರೀತಿಯಲ್ಲಿ ಮಾತೃ ಪ್ರೇಮ ಜಾಸ್ತಿಯಾಗಿ ಸಲಗೆಯೂ

ಅತಿಯಾಗಿ ನಮ್ಮ ತಂದೆ ಹೀಗೆ ಹೇಳುತ್ತಿದ್ದರೇನೋ ಎಂದನಿಸಿತ್ತು.

ನಮ್ಮ ಮನೆಯವರಿಗೆ, ನೆಂಟರು ಇಷ್ಟರಿಗಷ್ಟೇ ಅಜ್ಜಿಯಾಗಿರಲಿಲ್ಲ, ಇಡೀ ಊರಿಗೇ ಪ್ರೀತಿಯ ಅಜ್ಜಿಯಾಗಿತ್ತು ನಮ್ಮಜ್ಜಿ.

ಹಾಸ್ಯ ಪ್ರವೃತ್ತಿಯನ್ನು ಹೊಂದಿದ ಈ ಅಜ್ಜಿಗೆ ಹವ್ಯಾಸಗಳು ಹಲವಾರು ಮತ್ತು ಪ್ರಸಂಗಗಳು ಪರಿ ಪರಿ ಯಾಗಿದ್ದವು.

"ಹೊರಗಿನವರಿಗೆ ಉಪಕಾರಿ ಮನೆಗೆ ಮಾರಿ " ಯಂತಾಗುತ್ತಿತ್ತು ಕೆಲವೊಮ್ಮೆ. ಜೀವನದಲ್ಲಿ ಸುಸ್ತೇ ಕಾಣದ ಈ ಅಜ್ಜಿ

ನಮಗೆಲ್ಲಾ ಕೊಟ್ಟಿರುವ ಕಾಣಿಕೆ ಕಲ್ಪನೆಗೆ ಮೀರಿದೆ. ನಾವೆಲ್ಲಾ ನಮ್ಮ ಇಡೀ ಜೀವಮಾನ "ಅಜ್ಜಿಯನ್ನು ನೆನಪಿಸಿಕೊಂಡು"

ನಗುವಷ್ಟು ವಸ್ತು ವಿಷಯವಾಗಿದೆ. ಮೂರು ನಾಲ್ಕು ತಲೆಮಾರು ಜನರನ್ನು ನೋಡಿ ತನ್ನ ಜೀವನದಲ್ಲಿ ಕಾಲಾನುಸಾರ

ಬಹಳಷ್ಟು ಮಾರ್ಪಾಡು ಮಾಡಿಕೊಂಡಿತ್ತು. ನಾವಷ್ಟೇ ಏನು ನೀವೂ ಕೂಡ ನಮ್ಮಜ್ಜಿಯ ಬಗ್ಗೆ ಓದಿ ನಕ್ಕು ಅವರನ್ನು ನೆನ

ಪಿಸಿಕೊಳ್ಳುವುದರಲ್ಲಿ ಭಾಗವಹಿಸಬಹುದು. ಇಲ್ಲಿದೆ ಕೆಲವು ಹವ್ಯಾಸಗಳ ಹಾಸ್ಯ ಪ್ರಸಂಗಗಳು !!!

ಡಾ: ಕ್ಲಿನಿಕ್ ( ಆಸ್ಥಾನದಲ್ಲಿ) ನಲ್ಲಿ ಅಜ್ಜಿ ವೈದ್ಯರೊಡನೆ------------

(ಯಮನ ಮತ್ತು ಮೃತ್ಯುವಿನ ಭಯವೊಂದೇ ಜೀವನದಲ್ಲಿ ಅಜ್ಜಿಯನ್ನು ಹೆದರಿಸಿದ್ದು. ಅಜ್ಜಿಗೆ ಬೇರ್ಯಾವ ಅಂಜಿಕೆಯ ಅಳುಕೂ

ಇರಲಿಲ್ಲ. ಹಾಗೆ ನೋಡಿದರೆ ಆರೋಗ್ಯವೇನು ಅಪರೂಪವಾಗಿರಲಿಲ್ಲ. ಏನೋ ಒಂದು ತರ ಬದುಕುವ ಆಸೆ, ಸಾವಿನ ಭಯವಷ್ಟೆ.

ಅಜ್ಜಿ ಜೀವನದಲ್ಲಿ ಹೆಚ್ಚು ಭೇಟಿಕೊಟ್ಟ ಸ್ಥಳ ದೇವಸ್ಥಾನವಲ್ಲ " ಡಾಕ್ಟರ ಆಸ್ಥಾನ" ( ಡಾ: ಕ್ಲಿನಿಕ್)

ಅಜ್ಜಿ: ಡಾಕ್ಟ್ರೇ, ಚೆನ್ನಾಗಿದೀರ? ಇಲ್ಲೇ ಸೀನಯ್ಯ ನ ನೋಡಕ್ಕೆ ಬಂದಿದ್ದೆ.( ಅವರಿಗೆ ಹುಶಾರಿಲ್ಲ) ಹಾಗೇ ನನಗೂ

ಸ್ವಲ್ಪ ಎದೆನೋವಿತ್ತು, ತೋರಿಸ್ಕೊಂಡು ಹೋಗೋಣ ಅಂತ ಬಂದೆ.( ಅಪಾಯಿಂಟ್ಮೆಂಟ್ ಇತ್ತಾ ಅಂತ ಕೇಳಬೇಡಿ, ಹಾಗಂದರೇನು ಅಂತ

ಈ ಡಾಕ್ಟ್ರಿಗಾಗಲಿ ಅಥವಾ ಅಜ್ಜಿಗಾಗಲೀ ಸುತರಾಮ್ ಗೊತ್ತಿಲ್ಲ)

ಡಾ: ಅಜ್ಜೀ ಇವತ್ ಸೋಮ್ವಾರ ಯಾಕ್ ಬಂದ್ರಿ? ನಿಮ್ಗೇ ಗೊತ್ತಲ್ಲಾ ಸಂತೆ ದಿನ ಜನ ಜಾಸ್ತಿ ಅಂತಾ, ಒಂದ್ ಮಾತ್ ಹೇಳ್ ಕಳಿಸಿದ್ದ್ರೆ

ನಾನೆ ರಾಘವೇಂದ್ರ ಸ್ವಾಮಿ ಮಠಕ್ಕೆ ಬಂದಾಗ ನೋಡ್ತಿದ್ದೆ. ಹೋಗಲಿ ಬಿಡಿ ಇಲ್ಲಿ ಕೂತ್ಕೊಳ್ಳಿ, ಬೇಗ್ ನೋಡಿ ಬಿಡುತ್ತೇನೆ ಎಂದು

ಎಲ್ಲಾ ಚೆಕ್ ಮಾಡಿ ಹೇಳಿದ್ರು: " ಅಜ್ಜೀ ಏನೋ ಸ್ವಲ್ಪ ಹೆಚ್ಚು ಕಡಿಮೆ ಆಗಿ ಏನೋ ಸ್ವಲ್ಪ ನೋವಾಗಿದೆ, ಏನು ಭಯ ಇಲ್ಲಾ

ನೀವೇನ್ ಯೊಚನೆ ಮಾಡ್ಬೇಡಿ ಹಾರ್ಟ್ ಪ್ರಾಬ್ಲಮ್ ತರ ಕಾಣಿಸ್ತಿಲ್ಲ, ಒಂದೆರಡು ನೋವಿನ ಮಾತ್ರೆ ತಗೊಂಡ್ರೆ ಎಲ್ಲಾ ಸರಿ

ಹೋಗತ್ತೆ. ಇನ್ ಹೊರಡಿ" .

ಅಜ್ಜಿ: ಡಾಕ್ಟ್ರೇ, ಬೇರೆ ಎಲ್ಲೋ ನೋವಾಗಿದ್ರೆ ಯೋಚ್ನೆ ಇರಲಿಲ್ಲಾ " ಈ ಎದೆ ನೋವ್ ನೋಡಿ, ಅದೂ ಅಲ್ದೆ ಲೆಫ್ಟ್ ಸೈಡ್ ನಲ್ಲೇ ನೋವುತ್ತ

ಲ್ಲ ಡಾಕ್ಟ್ರೆ, ನಂಗೆ ಅದೇ ಆ ಹಾರ್ಟ್ ಅಟ್ಯಾಕ್ ಆದ್ರೆ ಅಂತ ದಿಗಿಲು".

ಡಾ: ಅಯ್ಯೋ ಅಜ್ಜೀ, ಈ ಹಾರ್‍ಟ್ ಅಟ್ಯಾಕ್ ಹೇಳಿ ಕೇಳಿ ಬರೋ ಅಂತದ್ದಲ್ಲ, ಅದು ಅನಿವಾರ್ಯವಾಗಿ ಅಘಾತವಾಗಿ ಬರುತ್ತೆ.

ಅಜ್ಜಿ: ಅದಕ್ಕೇ ಕಣಪ್ಪಾ ಅದ್ ಬರೋ ಮುಂಚೆನೇ ಮುಂಜಾಗ್ರತೇ ವಹಿಸಿ ನಿನ್ ಹತ್ರ ಪರೀಕ್ಷೆ ಮಾಡಿಸ್ಕೊಂಡ್ ಹೋಗೋಣಾಂತ

ಬಂದೆ.

ಡಾ: " ಈಗ್ ಹೇಳಿದ್ನಲ್ಲಾ ಹಾರ್ಟ್ ಪ್ರಾಬ್ಲಮ್ ತರ ಕಾಣಿಸ್ತಿಲ್ಲ ಅಂತ. ಇನ್ ಹೊರಡಿ ನಂಗೆ ತುಂಬಾ ಪೇಶಂಟ್ಸ್ ಕಾಯ್ತಾ

ಇದಾರೆ’

ಅಜ್ಜಿ: "ಹಾಗಾದ್ರೆ ಏನು ಭಯ ಇಲ್ಲ ಅಂತೀರಾ, ಹೇಗಾದ್ರು ಆಗ್ಲಿ ನಾಳೆ ಒಂದ್ ಸಲ ಬಂದು ತೋರುಸ್ತೀನಿ"

ಡಾ: " ಛೇ, ಛೇ, ಹಾಗ್ ಮಾಡ್ಬೇಡಿ ಇನ್ನೆರಡು ವಾರ ಬಿಟ್ ಬನ್ನಿ"

ಅಜ್ಜಿ: " ನನ್ ಮಗಳಿಗೆ ಬೆಂಗ್ಳೂರಲ್ಲಿ ಆ ಡಾ: ಓಂಪ್ರಕಾಶ್ ( ಡಾ: ಶಿವರಾಮ್ ಮಗ) ಅದೇನೊ ಫಾಲೋ ಅಪ್ ಅಂತ ಆಗಾಗ್ಗೆ

ನೋಡ್ತಾನೇ ಇರ್ತಾರೆ. ನನ್ ಮಗಳು ಹೋಗ್ದೇ ಇದ್ರೇ, ವಯಸ್ಸಾದ್ಮೇಲೆ ಪದೇ ಪದೇ ಬಂದು ತೋರಿಸ್ಬೇಕು ಅಂತಾರೆ.

ಡಾ: ಸರಿ ಅಜ್ಜೀ "ನಿಮಗೂ ಫಾಲೋ ಅಪ್ ಅಂತ ಇನ್ನೆರಡು ವಾರ ಬಿಟ್ ಬನ್ನಿ" ಅಂತ ಹೇಳಿದ್ನಲ್ಲ"

( ಹೀಗೇ ಇನ್ನೊಂದು ಸಲ ಅಜ್ಜಿಗೆ ಎದೆನೋವು ಬಂದಾಗ, ಡಾ: ಅಜ್ಜಿಯಿಂದ ತಪ್ಪಿಸಿಕೊಳ್ಳಲು "ಹಾರ್ಟ್ ಎದೆಗುಂಡಿಲಿ ಇಲ್ಲ, ಹೊಟ್ಟೆ

ಕೆಳಗೆ ಕಾಲ್ ಹತ್ತಿರ ಇರೋದು" ಅಂತ ಹೇಳಿಬಿಟ್ಟಿದ್ದರು. ಅಜ್ಜಿ ಸುಮ್ಮನಿರದೆ " ನೀವು ಹೇಳೋದು ಸರಿಯಾದರೆ ಎರಡು ಹಾರ್ಟ್

ಗಳು ಇರಬೇಕಲ್ವೆ ? ಅದೆಲ್ ಸಾಧ್ಯ, ಒಂದೇ ಹಾರ್‍ಟ್ ಇರೋವಾಗ" ಎಂದು ಹೇಳಿ ಬಂದು ನಮ್ಮಗಳ ಹತ್ತಿರ ಕನ್ಫರ್ಮ್ ಮಾಡಿ
ಕೊಳ್ಳುತ್ತಿದ್ದರು.)

ಗ್ರಂಥಾಲಯದಲ್ಲಿ ಅಜ್ಜಿಯ ಅವಾಂತರ-------------

( ಡಾ: ಕ್ಲಿನಿಕ್ ಬಿಟ್ಟರೆ, ಮುಂದಿನ ಹೆಚ್ಚು ಭೇಟಿ ಕೊಟ್ಟ ಸ್ಥಳ "ಗ್ರಂಥಾಲಯ". ಅಜ್ಜಿಗೆ ಕಥೆ ಪುಸ್ತಕ ಓದು

ವುದೂ ಒಂದು ಹವ್ಯಾಸವಾಗಿತ್ತು. ಮೇಲೆ ಹೇಳಿದಂತೆ ಪುರಾಣ ಪುಣ್ಯ ಕಥೆಗಳಲ್ಲಾ, ಸಾಮಾಜಿಕ ಕಾದಂಬರಿ ಅದ್ರಲ್ಲೂ

ಲೌವ್ ಸ್ಟೋರಿ ಅಂದರೆ ತುಂಬಾ ಪ್ರಿಯವಾಗಿತ್ತು. ನಮ್ಮನ್ನೆಲ್ಲಾ( ಮೊಮ್ಮಕ್ಕಳನ್ನ) ದುಂಬಾಲು ಬಿದ್ದು ಲೈಬ್ರರಿಗೆ ಕರೆದು

ಕೊಂಡು ಹೋಗು ಎಂದು ಕೇಳುತ್ತಿದ್ದರು. ಪುಸ್ತಕ ಆರಿಸಲು ಅಲ್ಲಾ, ಅವರೇ ಲೈಬ್ರರಿಯನ್ ಸಹಾಯದಿಂದ ಪುಸ್ತಕ ಆರಿಸುತ್ತಿ

ದ್ದರು. ನಾವು ಜೊತೆಯಲ್ಲಿ ಹೋಗಬೇಕಾಗಿದ್ದು ಅಜ್ಜಿ ದಾರಿಯಲ್ಲಿ ಬೀಳದ ಹಾಗೆ( ಲಾರಿ, ಕಾರು ಹಸು ಕರುಗೆ ಡಿಕ್ಕಿ

ಹೊಡೆದು) ನೋಡಿಕೊಳ್ಳಲು. (ದಾರಿಯಲ್ಲಿ ಬಿದ್ದು ಪ್ರಾಣ ಹೋದರೆ, ಅದೂ ಲೌವ್ ಸ್ಟೊರಿ ತರುವಾಗ, "ಎಂಥ ವಿಪರ್ಯಾಸ ಈ

ವಯಸ್ಸಿನಲ್ಲಿ"). ಸ್ಥಳೀಯ ಪಬ್ಲಿಕ್ ಮತ್ತು ಪ್ರೈವೇಟ್ ಲೈಬ್ರರಿಯನ್ಸ್ ಅಜ್ಜಿಗೆ ಚಿರಪರಿಚಿತರು.

ಸಾಮಾನ್ಯವಾಗಿ ಲೈಬ್ರರಿ ಒಳಗೆ ಹೋದಮೇಲೆ, ಲೈಬ್ರರಿಯನ್ ಜೊತೆ ಉಭಯ ಕುಶಲೋಪರಿ ಆದಮೇಲೆ, ಸಹಸ್ರನಾಮ

ಗಳಿದ್ದರೆ ಮುಗಿಸಿ, ಹಿಂದೆ ತೆಗೆದುಕೊಂಡಿದ್ದ ಪುಸ್ತಕಗಳನ್ನು ಹಿಂತಿರುಗಿಸಿ ನಂತರ ಪುಸ್ತಕಗಳನ್ನು ಆರಿಸಲು

ಹೊರಡುತ್ತಿದ್ದರು. ಸಹಸ್ರನಾಮಾ ಅಂತ ಹೇಳಿದ್ನಲ್ಲಾ ಅದು ಈ ಶೈಲಿಯಲ್ಲಿ ಇರುತ್ತಿತ್ತು.

ಅಜ್ಜಿ: (ಲೈಬ್ರರಿಯನ್ ನ ಉದ್ದೇಶಿಸಿ) " ನೀವ್ ಹೋದ್ಸಲ ಕೊಟ್ಟಿದ್ ಬುಕ್ ಚೆನ್ನಾಗಿಲ್ರೀ, ತುಂಬಾ ಜನ ಸಾಯ್ತಾರೆ ಅದರಲ್ಲಿ.

" ಈ ಬುಕ್ ನಾನಾಗಲೇ ಎರಡು ಸಲ ಓದ್ ಬಿಟ್ಟಿದ್ದೇ, ಅದೇ ಓದಕ್ಕೆ ಬೇಜಾರ್"

"ಇದೂ ನೀವು ಪಾರ್ಟ್ ಟೂ ಕೊಟ್ ಬಿಟ್ರೀ, ನಾನಿನ್ನೂ ಪಾರ್ಟ್ ಒನ್ ಏ ಓದಿಲ್ಲಾ"

"ಇದ್ಯಾಕೆ ನೀವ್ ಪಾರ್ಟ್ ಒನ್ ಏ ಕೊಡ್ತಿದ್ದೀರಲ್ಲಾ, ನಾನ್ ಪಾರ್ಟ್ ಟೂ ಓದ್ಬೇಕು" ಹೀಗೆ ಕೆಲವು ಕೊಂಕುಗಳ ಕೇಕೆ.!!!

ಒಟ್ಟಿನಲ್ಲಿ ಲೈಬ್ರರಿಯನ್ "ಅಜ್ಜಿ ಯ ಡೈರಿ ಅಪ್ ಟು ಡೇಟ್ ಆಗಿ ಇಟ್ಟು ಅದನ್ನು ಆಗಾಗ್ಗೆ ಪರಿಶೀಲಿಸಬೇಕಾಗಿತ್ತು". (ಅಜ್ಜಿ

ಯಾವ ಯಾವ ಬುಕ್ ಓದಿದ್ದಾರೆ?, ಇವರ ಟೇಸ್ಟ್ ಏನು?, ಯಾವುದು ಮನಸ್ಸಿಗೆ ಹಿಡಿಸತ್ತೆ?, ಯಾವ ಕಡೆಗೆ ಫೀಲ್ಡ್ ವಾಲುತ್ತಿದೆ?

ಇತ್ಯಾದಿಗಳಿಗೆ ಇನ್ಫಾರ್ಮ್ಡ್ ಆಗಿರಬೇಕು ಎಂದು ಅಜ್ಜಿ ಎಕ್ಸ್ಪೆಕ್ಟ್ ಮಾಡುತ್ತಿದ್ದುದು ಒಂದು ತಮಾಷೆ.)

ಲೈಬ್ರರಿಯನ್ ಗೆ ಇದೇನು ಹೊಸದಲ್ಲದ್ದರಿಂದ ಈ ವಿಷಯದಲ್ಲಿ ಅಜ್ಜಿಯ ಕೈಲಿ ಭೇಷ್ ಎನಿಸಿಕೊಂಡಿದ್ದರು. ಒಂದೊಂದೊ ಸಲ

ಕಾದಂಬರಿಯ ಪೂರ್ಣ ಕಥೆಯನ್ನು ಜೋರಾಗಿ ಹೇಳಲು ಶುರುಮಾಡಿಬಿಡುತ್ತಿದ್ದರು. ಯಾರೂ ಜನ ಇಲ್ಲದೇ ಇದ್ದರೆ ಲೈಬ್ರರಿಯನ್

ಸುಮ್ಮನೆ ಇರುತ್ತಿದ್ದರು. ಆದರೆ, ಕೆಲವೊಮ್ಮೆ ಮುದುಕರು (ನಾವೆಲ್ಲಾ ಕರೆಯುತ್ತಿದ್ದಿದ್ದು "ಅಜ್ಜಿಯ ಬಾಯ್ ಫ್ರೆಂಡ್ಸ್") ಪೇಪರ್

ಓದುತ್ತಿದ್ದಿದ್ದೂ ಬಿಟ್ಟು ಏನೋ ಒಂದ್ ವಿಚಿತ್ರ ಪ್ರಾಣಿ ಬಂದಿದೆ ಅನ್ನೋತರಹ ಓಡಿ ಬಂದು "ಏನಜ್ಜೀ ಚೆನ್ನಾಗಿದೀರ" ? ಎಂದು

ಮಾತಿಗೆ ನಿಲ್ಲುತ್ತಿದ್ದರು. ಇದನೆಲ್ಲಾ ನೋಡಿ ನಮಗೆ " ನಾವು ಲೈಬ್ರರಿಗೆ ಬಂದ್ವೋ? ಅಥವಾ ಮದುವೆ ಮನೆಗೆ ಬಂದ್ವೋ?

ಅಂತ ಅನುಮಾನ ಬರುತ್ತಿತ್ತು. ಮನೆಯವರಿಂದ ಕದ್ದು ಲೌ ಸ್ಟೋರಿ ಓದುವ ಹುಡುಗರ ಗುಂಪು ನಮ್ಮನೆಲ್ಲಾ ಚೇಡಿಸುತ್ತಿದ್ದರು

" ಅಜ್ಜಿ ನೆವ/ ನೆಪ ಹೇಳಿ ನೀವು ಎಲ್ಲಾ ಲೌ ಸ್ಟೋರೀನೂ ಚೆಕ್ ಔಟ್ ಮಾಡ್ ತೀರಲ್ರೀ? ಎಷ್ಟ್ ದಿನಾ ಆದ್ರು ಕೊಡಲ್ಲಾ ?,

ಯಾವಾಗ ರಿಕ್ವೆಸ್ಟ್ ಮಾಡಿದ್ರೂ, ಅಜ್ಜಿ ಚೆಕ್ ಔಟ್ ಮಾಡಿದಾರೆ ಅಂತಾರಲ್ಲಾ". ಲೈಬ್ರರಿಯನ್ ಏ ನಮ್ಮ ಸಹಾಯಕ್ಕೆ ಬರ

ಬೇಕಾಗುತಿತ್ತು. ಪಬ್ಲಿಕ್ ಲೈಬ್ರರಿಯಲ್ಲಿ ಈ ಕಥೆ ಯಾದರೆ, ಪ್ರೈವೇಟ್ ಲೈಬ್ರರಿಯಲ್ಲಿ ಇನ್ನೊಂದ್ ಕಥೆ.!!!

ಖಾಸಗಿ ಲೈಬ್ರರಿಯಲ್ಲಿ ಅಜ್ಜಿ " ಶೇಷಗಿರಿ, ನೀನ್ಯಾಕೋ ಹೊಸ ಹೊಸ ಬುಕ್ ತರಿಸೋಲ್ಲಾ? ಅದಂತೂ ಸರಕಾರಿ ದು,

ನೀನ್ ಎಲ್ಲಾರ್ ಹತ್ತಿರ ದುಡ್ ಇಸ್ಕೊತೀಯ? " ಎಂದು ಹೇಳ್ಕೊಂಡೇ ಪ್ರತಿಸಾರಿಯೂ ಐದರ ಕಡಿಮೆ (ಬುಕ್ಸ್) ಚೆಕ್ ಔಟ್ ಮಾಡುತ್ತಿ

ರಲಿಲ್ಲ. ಓದಿದ್ದ ಬುಕ್ ತಗೊಂಡಿದ್ರೆ ಅದಕ್ಕೆ ದುಡ್ ಕೊಡುತ್ತಿರಲಿಲ್ಲ "ಆ ಬುಕ್ ಓದಿದ್ದೆ ಕಣೋ, ಅದರದ್ದು ಬಿಟ್ ಬೇರೇದುಕ್ಕೆ

ದುಡ್ ತಗೋ" ಎನ್ನುತ್ತಿದ್ದರು.

ಶೇಷ : ಅಜ್ಜಿ ನೀವ್ ತಿಳಿದವರು, ದೊಡ್ಡವರು, ನೀವೇ ಹೀಗ್ ಮಾಡಿದ್ರೆ ಹೇಗೆ? ನಾವ್ ಹೇಗ್ ಲೈಬ್ರರಿ ಮುಂದ್ವರಿಸೋದು?

ಅಜ್ಜಿ: "ಅಲ್ವೋ ಆ ಬುಕ್ ಓದ್ಲೇ ಇಲ್ಲಾ, ಮೊದಲನೇ ಪುಟದಲ್ಲೇ ಗೊತ್ತಾಯ್ತು ಓದಿದೀನಿ ಅಂತಾ" ( ಕಡೆಗೆ ನಾವೆಲ್ಲಾ ಸ್ಕೂಲ್ ಗೆ

ಹೋಗುವಾಗ ಅಜ್ಜಿಯ ಸಾಲವನ್ನು ತೀರಿಸಬೇಕಾಗಿತ್ತು)

ಹಲವಾರು ಸಾರಿ " ಶೇಷಗಿರಿ, ನೀನ್ ಮನೆಗೆ ವಾಪಸ್ ಬರುವಾಗ ಆ ಬುಕ್ ತಗೊಂಡವರು ಹಿಂತಿರುಗಿಸಿದ್ದರೆ, ಸ್ವಲ್ಪ

ತಂದ್ ಕೊಡಪ್ಪಾ" ಅಂತ ಹೇಳಿ ಮನೆಗೂ ಬುಕ್ ಡೆಲವರಿ ಮಾಡಿಸಿಕೊಳ್ಳುತ್ತಿದ್ದರು. ಹಾಗೆ ಮನೆಗೆ ಬಂದಾಗ ನಮ್ಮಮ್ಮನ

ಕರೆದು " ಪಾರ್ವತೀ, ಕಾಫಿ ತಗೊಂಡ್ ಬಾ ಶೇಷಗಿರಿ ಬಂದಿದಾನೆ" ಅಂತ ಅಜ್ಜಿ ಅಲಗಾಡದೆ ಕೂಗುತ್ತಿದ್ದರು. ನಮ್ಮ

ತಂದೆ ಏನಾದರೂ ಇದನೆಲ್ಲಾ ನೋಡಿದ್ರೆ " ನೀನ್ ಈ ವಯಸ್ನಲ್ಲಿ ಬುಕ್ ಓದ್ತೀಯ ಅಂತ ಎಲ್ಲರೂ ಬುಕ್ ಮನೆಗೂ ತಂದ್ ಕೊಡಬೇಕಾ?

ಪಾಪ ಅವರಿಗೇನ್ ಗೊತ್ತು? ನೀನ್ ಓದೋದು ಲೌವ್ ಸ್ಟೋರಿ ಅಂತ" ಎಂದು ಬೈದ್ ಸುಮ್ಮನಾಗುತ್ತಿದ್ದರು.

ಒಂದ್ ಸಲ ಪಬ್ಲಿಕ್ ಲೈಬ್ರರಿಗೆ ಹೊಸ ಲೈಬ್ರರಿಯನ್ ಬಂದು ಅವರಿಗೆ ಅಜ್ಜಿ ವಿಷಯ ಗೊತ್ತಿಲ್ಲದೆ ರೇಗಿ ಬಿಟ್ಟಿದ್ರು" ನಾವು ಬುಕ್ ಕೊ

ಡೋದೂ ಅಲ್ದೆ, ನಿಮಗೆ ಬುಕ್ ಹುಡುಕೋದು, ನೀವ್ ಓದಿರೋ ಬುಕ್ ಗಳ ಲಿಸ್ಟ್ ಇಡೋದು, ಇದೆಲ್ಲಾ ನಮ್ಮ ಕರ್ಮ ಅಂದ್ ಕೊಂಡ್ರೇನ್ರೀ?

ನೀ ಯಾಕಮ್ಮ ಈ ಅಜ್ಜೀನ್ ಇಲ್ಲಿ ಕರಕೊಂಡ್ ಬಂದ್ ಗಲಾಟೆ ಮಾಡಸ್ತೀಯ? ಅಂತ ನಮಗೂ ಬೈದಿದ್ರು."

ನನಗೆ ತಡಕೊಳ್ಳಲ್ಲಾಗದೆ ಅಜ್ಜೀನ ಒಂದ್ಸಲ ಕೇಳಿದೆ " ನೀ ಯಾಕೆ ಲೌ ಸ್ಟೋರಿ ಓದ್ತೀಯಾ? ಎಲ್ಲರೂ ಆಡ್ಕೊಂಡ್ ನಗ್ತಾರೆ?

ನೀ ಬೇರೆ ಅಜ್ಜಿಗಳ ತರಹ ರಾಮಾಯಣ ಮಹಾಭಾರತ ಎಲ್ಲಾ ಓದು ಇನ್ಮೇಲೆ".

ಅಜ್ಜಿ: " ನಾನ್ ಬುಕ್ ಓದೋದು ಬೇರೆ ಅವರಿಗಲ್ಲಾ ಕಣೆ ಪೆಕರೀ, ನನಗೋಸ್ಕರ. ಅಷ್ಟಕ್ಕೂ ನಾನು ಆ ರಾಮಾಯಣ ಮಹಾ

ಭಾರತ ಎಲ್ಲ ಓದಾಗಿದೆ. ಈಗ್ಲೂ ಈ ಬುಕ್ ಓದದೇ ಹೋದ್ರೆ, ಇನ್ಯಾವಾಗ ಓದ್ಲಿ ಹೇಳು? ಬೇರೆಯವರ್ ಆಡ್ಕೊಂಡ್ರೆ "ಅವರ ಹಲ್

ಕಾಣತ್ತೆ, ಬಾಯ್ ಬಿಟ್ಟು ಬಣ್ಣ ಗೇಡು ಅನ್ನಿಸಿಕೊಂಡ್ರಂತೆ" ನೀ ಸುಮ್ನಿರು. ಒಂದ್ಮಾತ್ ಹೇಳ್ತೀನಿ ಕೇಳು " ನಾವ್ ಬೇರ್‍ಎ ಅವರಿ

ಗಲ್ಲಾ ಬದುಕೋದು" ಎಂದು ಹೇಳಿ ನನ್ನನ್ನೇ " ಪೆದ್ದತನದ ಪರಮಾವಧಿ" ಎಂದು ಪರಿಗಣಿಸಿದರು.

" ಎಳೆಯ ವಯಸ್ಸಿನಲ್ಲೇ ಪತಿದೇವರನ್ನು ಕಳೆದುಕೊಂಡ ಅಜ್ಜಿ, ಲೌ ಸ್ಟೋರಿ ಓದಬೇಕಾದ ದಿನಗಳಲ್ಲಿ ವಿಧವೆಯಾಗಿ ಪುರಾ

ಣ ಪುಣ್ಯಕಥೆಗಳನ್ನು ಓದಿ, ದಾಂಪತ್ಯದ ರೋಮ್ಯಾನ್ಸ್ ಗಳಿಗೆ ಧಾಹ ಉಂಟಾಗಿ ಈಗ " ಪುಸ್ತಕದಲ್ಲಾದರೂ ರೊಮ್ಯಾನ್ಸ್

ನೋಡೋಣ " ಎಂದು ಕೊಂಡಿದ್ದಿರಬಹುದು. ನಮ್ಮ ಅಜ್ಜಿ, ಪತಿ ಇಲ್ಲದಿದ್ದರೂ ನೆಮ್ಮದಿಯಿಂದ ಬಾಳುವ ಬದುಕನ್ನು ನಿರೂಪಿಸಿಕೊಂಡು

ಯಶಸ್ವಿಯ ಬಾಳನ್ನು ಕಂಡವರಲ್ಲಿ ಒಬ್ಬರು. ಹಾಸ್ಯ ಪ್ರವೃತ್ತಿ, ಕಾರ್ಯದಲ್ಲಿ ಹುಮ್ಮಸ್ಸು ಮತ್ತು ತಲ್ಲೀನತೆ ಇದಕ್ಕೆ

ಕಾರಣವಾಗಿತ್ತು.

ಇಲ್ಲಿಗೆ ಸಾಕು ! ಇವತ್ತಿಗೆ ಈ ಅಜ್ಜಿಯ ಪುರಾಣ !! ಇನ್ನೊಮ್ಮೆ ಭೇಟಿಯಾಗೋಣ, ಬೇಕಾದರೆ ಊರಿನ ಸಂತೆಯಲ್ಲಿ ಅಥವಾ

ಪಾತ್ರೆ ಅಂಗಡಿಯಲ್ಲಿ !!!

( ಅಂದಹಾಗೆ ಅಜ್ಜಿ ಕಡೆಗೂ ಋಷಿಪಂಚಮಿ ಮಾಡೇ ಬಿಟ್ಟಿತು ! ಮಾಡಿಸಿ ಸುಸ್ತಾದವರು ಯಾರು ಗೊತ್ತೇ?, "ನಮ್ಮ ತಂದೆ")

"ರುಣಸ್ಯ ಶೇಷಮ್ ಕೃಪಣಸ್ಯ ಸೇವಾ"