ನಮ್ಮ ಊರ್ಬದಿಯ ಬದುಕಿನ ಹಾದಿ...

ನಮ್ಮ ಊರ್ಬದಿಯ ಬದುಕಿನ ಹಾದಿ...

ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂಜಿನಿಂದಾವೃತ ವಾತಾವರಣ ನೋಡಲು ನೆನಪಾಗುವ ಹಾಡು ಮಳ್ಳಿ ಮಳ್ಳಿ ಮಿಂಚುಳ್ಳಿ ಜಾಣ-ಜಾಣ ಕಾಜಾಣ ಪೂರ್ವ ಪೂರ ಕೆಂಪಾಯ್ತು.

ಹಾಗೇ ನಸುಕಿನ ಜಾವ ಬೀಸುವ ತಂಗಾಳಿ ಜೊತೆ ಗದ್ದೆ-ತೋಟಗಳ,ಕಾಡಿನ ನಡುವೆ ನಡೆದು ಸಾಗುತಿರಲು ಕಿವಿಗಿಂಪುನೀಡುವ ಹಕ್ಕಿಗಳ ಚಿಲಿಪಿಲಿ ಹಾಡಿನ ಕಲರವ. ಇವೆಲ್ಲಾ ನಮ್ಮ ಮಲೆನಾಡಿನಲ್ಲಿ ನಿತ್ಯ ಹಾಸುಹೊಕ್ಕಾಗಿರುವ ಮನಕೆ ಮುದ ನೀಡುವ ಬದುಕಿನ ಜೊತೆ ಹಾಸುಹೊಕ್ಕಾಗಿರುವ ಬದುಕಿನ ಭಾವ. ಇದೊಂದು ಕಡೆಯ ಸಂಭ್ರಮವಾದರೆ ಇನ್ನೊಂದು ಕಡೆ ನಿತ್ಯ ಜೀವನದ ಹೋರಾಟದ ಚಹರೆ ಬೇರೆಯೇ ಇದೆ. ಮಲೆನಾಡಿನ ಮನೆಗಳಲ್ಲಿ ನಸುಕಿನ ಜಾವದಿ ದೇವರ ಸುಪ್ರಭಾತದ ಸ್ವರಗಳು ಬಲು ಹಿತ, ಮನೆಯ ಹೆಂಗಳೆಯರು ಬೇಗನೆ ಏಳುವುದು ಪರಿಪಾಠ.

ಕಣ್ಣಿಗೆ ಹನಿ ನೀರು ಚುಮುಕಿಸಿ, ಬಚ್ಚಲುಮನೆಗೆ ನೀರು ತುಂಬಿಸಿ,ಅದಿಕ್ಕೆ ಬೆಂಕಿ ಒಟ್ಟುವುದರಿಂದ ನಿತ್ಯ ಕಾರ್ಯ ಶುರು. ಹಾಗೇ ಅಡುಗೆ ಮನೆಯ ಒಲೆಗೂ ಬೆಂಕಿ ಮಾಡಿ ಚಾ ಕಣ್ಣು ಮಾಡಿ ಕುಡಿದ್ರೆ ಮಾತ್ರ ಸಮಾಧಾನ.ಅದಾದ ನಂತರವೇ ನಮಗೆಲ್ಲಾ ತಲೆ ಓಡೊದು ಅಂತಾರೆ ಇಲ್ಲಿಯ ನಮ್ಮ ಜನ. ಇದರ ನಂತರದಲ್ಲಿ ಚಾಕ್ರಿ ಶುರು ಆದ್ರೆ ರಾತ್ರಿ ನಿದ್ದೆ ಬರುತನ್ಕ ಪುರ್ಷೋತ್ತಿಲ್ಲ.

ಮನೆ ಒಳಗೆ - ಮನೆ ಹೊರಗೆ, ಅಂಗಳದ ಕೊನೆ ತುದಿವರೆಗೆ, ಗುಡ್ಸೀ-ಗುಡ್ಸೀ, ಗೋಮಯ ಹಾಕಿ ಸಾರ್ಸೀದ್ಮೇಲೆನೇ(ನೆಲ ಒರೆಸುವುದು) ಹೆಂಗಸ್ರು ಉಸ್ರ್ ಬಿಡೋದು. ಇದಾದ ಮೇಲೆ ಅಡುಗೆ ಮನೆಗೆ ಹೊಕ್ರೆ ಒಂದು ಬದಿ ಬೆಂಕಿ ಉದೊದು,ಇನ್ನೊಂದ್ ಬದಿ ಹೊಗೆ ತಕಳೊದು,ಅದ್ರಲ್ಲೇ ತಿಂಡಿ ಮಾಡ್ಬೇಕು, ರೊಟ್ಟಿನೋ, ನೀರ್ ದೋಸೆನೋ, ಇಡ್ಲಿನೋ, ಹಂಚಿನ್ ದೋಸೇನೋ, ಉದ್ದಿನ್ ದೋಸೆನೋ, ಯಾವ್ದೋ ಒಂದ್ ತಿಂಡಿ ಮಾಡ್ಲೇಬೇಕು. ಅದಕ್ಕೆ ಹಚ್ಚುಕೆ ಚಟ್ನಿನೋ, ಪಲ್ಯನೋ, ಬಾಜಿನೋ, ಸಾರೋ ಮಾಡ್ಲೇಬೇಕು. ಅದಷ್ಟೆ ಮಾಡಿದ್ರೆ ಆಗ್ಲಿಲ್ಲ ಮತ್ತೆ ಮಧ್ಯಾಹ್ನ ಊಟಕ್ಕೂ ಅಡುಗೆ ತಯಾರಿ ಮಾಡಿಟ್ಟೆ ಹೋಗ್ಬೇಕು.ಯಾಕಂದ್ರೆ ಇವ್ರೆಲ್ಲಾ ಮನೇಲೇ ಇರವ್ರಲ್ಲಾ ಜೀವ್ನ ನಡ್ಸಕ್ಕೆ ಇವ್ರೂ ಬೇರೆಕಡೆ ಹೋಗಿ ದುಡಿಲೇ ಬೇಕು.

ಸುಮಾರು ಬೆಳಿಗ್ಗೆ 8-30,9 ಗಂಟೆಗೆ ಕೆಲ್ಸಕ್ಕೆ ಹೊರಗಡೆ ಹೋದ್ರೆ ಮತ್ತೆ ಮನೆಗೆ ಬರುದು ಸಂಜೆ 6,6-30,7ಗಂಟೆ ಆಗುತ್ತೆ.ಇದರಲ್ಲಿ ಹೆಂಗಸರೂ ಸಹ ಬಂದ್ರೂ ಗಂಡಸರೂ ಸಹ ಬಂದ್ರು. ಎಲ್ಲರೂ ದುಡಿಯಲೇ ಬೇಕು, ಜೀವನ ಸಾಗಿಸ್ಲೇಬೇಕು. ಇದರ ನಡುವೆ ಪುರ್ಸೊತ್ ಮಾಡ್ಕೊಂಡು ಬರೋ ಮನೇ ಪುರುಷರ ಬಗ್ಗೆ ಹೇಳಲೇ ಬೇಕು.ಪ್ರಧಾನವಾಗಿರುವ ಪುರುಷರನ್ನ ಬಿಡಕ್ಕಾಗತ್ತಾ. ಬೆಳಿಗ್ಗೆ ಎದ್ದ ತಕ್ಷಣ ಚಾ ಕಣ್ಣೇ ಬೇಕು ಕುಡುಕೇ.ಅದಾದ ನಂತ್ರ ಕೊಟ್ಟಿಗೆ ಬದಿ ದನ ಕರುಗಳಿಗೆ ಹುಲ್ಲು ಹಾಕುವುದು, ಸೊಪ್ಪು,ದರ್ಕು,ತರೋದು,ಗದ್ದೆ ತೋಟ್ದಲ್ಲಿ ಸುತ್ತಾಕ್ ಬರುದು  ಮಾಮೂಲಿ ಕೆಲ್ಸ.ಅದನ್ನ ಮಾತ್ರ ಬಿಡುಕ್ ಆಗುದೇ ಇಲ್ಲ ಮಾರಾಯ್ರೆ ಅಂತಾರೆ ನಮ್ಮ್ ಬದಿ ಗಂಡಸ್ರು. ನಂತ್ರ ಬಂದು ದೇವರ ಪೂಜೆ ಮಾಡಿ ,ತಿಂಡಿ ತಿಂದು ಕೆಲ್ಸಕ್ಕೆ ಹೊರಗಡೆ ಹೋಗುದೆಯಾ.

ಇವೆಲ್ಲವುಗಳ ನಡುವೆ ಒಬ್ರನ್ನಾ ಮರ್ತೆ ಬಿಟ್ಟಿದ್ದಿ ಅದ್ಯಾರು ಗೊತ್ತುಂಟಾ. ಇದ್ ಇಲ್ದಿದ್ರೆ ನಮ್ದು ಬದಿ ಜನ್ರದ್ದು ಏನೂ ನಡ್ಯೊದೇ ಇಲ್ಲ. ಎಲ್ಲರೂ ಮುದ್ದಿಸೋ ಮುತ್ತಿನ ಹವಳ ಎಷ್ಟ್ ತಿಂದ್ರೂ ಸಾಲೂದಿಲ್ಲ ಚಪ್ಪರಿಸುವ ಕವ್ಳ್(ತಾಂಬೂಲ..ಎಲೆ,ಅಡಿಕೆ,ಸುಣ್ಣ,ತಂಬಾಕು) ಇದ್ರೆ ಮಾತ್ರ ನಮ್ದು ಕೆಲ್ಸ ನಡ್ಯೋದು,ತಲೆ ಓಡೊದು ಅನ್ನೊದ್ರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಸಂಜೆ ಮನೆಗೆ ಸೇರಿದ್ಮೇಲೆ ಮತ್ತೆ ಕಸಗುಡಿಸುವುದು, ಪಾತ್ರೆ,ಬಟ್ಟೆ ತೊಳೆಯುವುದು, ಮತ್ತೆ ರಾತ್ರಿ ಊಟಕ್ಕೆ ತಯಾರಿ ಮಾಡುವುದು ಇವೆಲ್ಲಾ ನಮ್ಕಡೆ ಹೆಂಗಸ್ರದ್ದೆ ಕೆಲ್ಸ ಒಂದ್ ಘಳಿಗೆ ಪುರ್ಸೋತ್ತಿಲ್ಲ. ಮತ್ತೆ ಅದೇ ಜೀವನ ಚಕ್ರ ಹಾಗೇ ದಿನನಿತ್ಯ ತಿರುಗ್ತಾ  ಇರುತ್ತೆ. ಮುಖ್ಯವಾಗಿ ಇದರ ನಡುವೆ ಇನ್ನೂ ಹಲವು ಅಂಶಗಳು ಗಮನಕ್ಕೆ ಬಾರದಿರುವುದು ಕಂಡುಬಂದಿರುತ್ತದೆ. 

ಮನೆ,ತೋಟ,ಗದ್ದೆಗಳು,ಊರ್ಬದಿಯ ಮುದ್ದು ಮಕ್ಳು,ಅಜ್ಜ-ಅಜ್ಜಿ ಮನೆಯ ಎಲ್ಲಾ ಜನರು. ನಾಯಿ, ಬೆಕ್ಕು, ಕೋಳಿ, ಕುರಿ, ದನ, ಕರು, ಎಮ್ಮೆ, ಕೋಣ, ಎತ್ತು ಅದು ಇದು ಪ್ರೀತಿಯಿಂದ ಸಾಕಿದ ಪ್ರಾಣಿಗಳಿಂದಲೆ ಈ ಮಲೆನಾಡಿನ ಹಳ್ಳಿಗಳು ಸೊಗಸಾಗಿರೋದು. ಅಲ್ಲಲ್ಲಿ ಹಂಚಿನ ಮನೆಗಳು,ಹುಲ್ಲಿನ ಹಾಸು ಮನೆಗಳು,ಸಿಮೆಂಟ್ ಸ್ಲೇಪ್ ಮನೆಗಳು,ದನದ ಕೊಟ್ಟಿಗೆ ಮನೆಗಳು,ಬಚ್ಚಲು ಮನೆಗಳು ಕಾಣಲು ಸಿಗುತ್ತವೆ. ಮನೆಯ ಸುತ್ತ ಬಣ್ಣದ ಹೂವಿನ ಗಿಡಗಳು,ಹಸಿರು ಗದ್ದೆ- ಬಯಲುಗಳು,ಮುಗಿಲೆತ್ತರದ ತೆಂಗಿನ ಮರಗಳು,ಅಡಿಕೆ ತೋಟಗಳು,ಬಾಳೆಯ ಬನಗಳು,ಹರಿವ ಹಳ್ಳಗಳು,ತುಂಬಿದ ಕೆರೆಗಳು, ಕುಡಿಯುವ ನೀರಿನ ಬಾವಿಗಳು, ಊರಿನ ದೇವಸ್ಥಾನ, ಊರಿನ ಸುಂದರ ಶಾಲೆ, ಆಟದ ಬಯಲು, ಮನೆಗಳಲ್ಲಿ ಸೈಕಲ್ ಗಳು, ಬೈಕ್ ಗಳು, ಅಲ್ಲಲ್ಲಿ ಕಾರುಗಳು, ಟ್ಯಾಕ್ಟರ್ ಗಳು, ಊರಿಲ್ಲೊಂದು ಅಂಗ್ಡಿ, ಮಣ್ಣು ರಸ್ತೆಗಳು, ಅದರಲ್ಲೇ ಓಡಾಡುತಿರುವ ನಾವುಗಳು, ಗೆಳೆಯರು, ಗೆಳತಿಯರು ಆಡೋ ಆಟಗಳು, ಸುತ್ತೋ ಕಾಡುಗಳು, ಆಗಾಗ ನಡೆಸುವ ಶಿಖಾರಿಗಳು, ಕಾಡುವ ದೆವ್ವ-ಭೂತದ ಭಯ ಒಂದೆರಡಲ್ಲಾ ಹೇಳುತ್ತಾ ಹೋಗಿದ್ರೆ ಮುಗಿಯುವುದಿಲ್ಲ.

ಮಲೆನಾಡಿನ ಭಾಗಗಳಲ್ಲಿ ತಿನ್ನುಕ್ ಏನ್ ಕಮ್ಮಿಯಿಲ್ಲಾ. ಮಳೆಗಾಲ ಶುರುವಾದ್ರೆ ಮೀನು, ಏಡಿ, ಬಿದಿರು ಕಳಲೆ, ಅಣಬೆ ಇವೆಲ್ಲಾ ನಮ್ಮಲ್ಲಿ ಮಾತ್ರ ಬನ್ನಿರಿ ಆಯ್ತಾ. ಸೀಜನ್ ಗೆ ತಕ್ಕಂತೆ ಕಾಡಿಗೆ ಅಂಟಿಕೊಂಡಿರುವ ನಮ್ಮ ಜೀವನದ ಅರ್ಧ ಭಾಗ ನಡೆಯೋದೆ ಕಾಡಿನ ನೆರವಿಂದ ಯಾಕಂದ್ರೆ ಮಳೆಗಾಲ ಶುರುಗೆ ಉಪ್ಪಾಗೆಕಾಯಿ, ಹಾಗೇ ಪತ್ರಿಕಾಯಿ, ನಂತ್ರ ಬೇಸಿಗೆಯಲ್ಲಿ ಗೇರುಬೀಜ, ಮುರುಗುಲ ಹುಳಿ, ಸೀಗೆಕಾಯಿ, ದಾಲ್ಚಿನ್ನಿ,ಸುರಗಿ ಮೊಗ್ಗು ಒಟ್ಟಾಕೊದೆಯಾ ಎಷ್ಟಾಗುತ್ತೋ ಅಷ್ಟು. ಅದನ್ನೇ ಮಾರಿ ಜೀವ್ನ ನಡ್ಸವ್ರೂ ,ನಡಸ್ತಾ ಇರವ್ರೂ ಬಹುಪಾಲು ಮಂದಿ.

ಇನ್ನೂ ಕಸಬು ಇದೆ. ಬೆತ್ತದ ಹೆಡಿಗೆ, ಬುಟ್ಟಿ, ಚೋಳಿ, ಮರ, ಹೂವಿನ ಬುಟ್ಟಿ, ನೇಯ್ಗೆ ಮಾಡಿ ಜೀವನ ನಡ್ಸೋರೂ ಕೂಡಾ ಅನೇಕರಿದ್ದಾರೆ. ಇನ್ನೂ ಹೇಳ್ಬೆಕಾಗಿರೋದು ತುಂಬಾ ಇದೆ. ಬೇಸ್ಗೆಲಿ ಗೊಬ್ಬರದ ಕಂಬ್ಳ, ಮಳೆಗಾಲ್ದಲ್ಲಿ ಗದ್ದೆ ನಾಟಿ, ನಂತ್ರ ಅಡಿಕೆ ಕೊಯ್ಲು, ಗದ್ದೆ ಕೊಯ್ಲು, ಭತ್ತ,ಮಾಡೋದು, ಗಿರಣಿಗೆ ಹೋಗಿ ಅಕ್ಕಿ ಮಾಡಿಸ್ಕ ಬರೋದು. ನಡುವೆ ಬರುವ ಹಬ್ಬಗಳು, ಊರ ದೇವರ ಉತ್ಸವಗಳು. ಮನೆಗಳಲ್ಲಿನ ವಿಶೇಷಗಳು, ಬಂಧು-ಬಳಗ,ನೆಂಟ್ರು-ಇಷ್ಟ್ರು ಜೊತೆಗಿನ ಸಂಬಂಧಗಳು, ನೆರೆಮನೆಗಳ ಜೊತೆಗಿನ ಕೊಡು-ತೆಗೆದುಕೊಳ್ಳುವ ಪದ್ಧತಿಗಳು. ಇನ್ನೂ ಇದೆ ಹೇಳುತ್ತಾ ಸಾಗಿದರೆ ಮುಗಿಯದ ಹಳ್ಳಿ ಜೀವನದ ನೆಮ್ಮದಿ ತುಂಬಿದ ನಮ್ಮ ಬದುಕಿನ ಹಾದಿ..

-ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಚಿತ್ರ ಕೃಪೆ: ಇಂಟರ್ನೆಟ್ ತಾಣ