ನಾಯಿ ಪಾಡು!

ನಾಯಿ ಪಾಡು!

ಬರಹ

ನಾನು ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳುಂಟು, ಅದರಲ್ಲೊಂದು, "ನಾಯಿ" ಅನ್ನೊ ಅದ್ಭುತ ಪ್ರಾಣಿ! ಹೌದು ಬೆಳಿಗ್ಗೆ ಎಷ್ಟೋ ಜನ ತಮ್ಮ ನಾಯಿಗೋಸ್ಕರವೇ ಜಾಗಿಂಗ ಮಾಡ್ತಾರೆ. ಅವು ತಮ್ಮೆಜಮಾನರ ಜೊತೆ ಒಳ್ಳೆ ಠೀವಿಯಿಂದ ಬಾಲ ಅಲುಗಾಡಿಸಿಕೊಂಡು, ಕಂಬ, ಮರ-ಗಿಡಗಳಾದಿಗಳಡಿಯಲ್ಲಿ ವಿಶ್ರಮಿಸುತ್ತ ಸಂಬ್ರಮಿಸುವ ಪರಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ! ಯಾರಿಗೆ? ಅವುಗಳ ಯಜಮಾನರಿಗೆ, ನಮ್ಮಂಥ ಬಡಪಾಯಿಗಳಿಗಲ್ಲ! ಎಷ್ಟೋ ಜನ ತಮ್ಮ ನಾಯಿಗಳಿಗೆ ಕೊರಳ ಪಟ್ಟೀನೂ ಕಟ್ಟಿರುವುದಿಲ್ಲ. ಅವು ನಮ್ಮನ್ನು ನೋಡಿ ಹತ್ತಿರಕ್ಕೆ ಬಂದು, ಇಷ್ಟುದ್ದ ನಾಲಿಗೆ ತೋರಿಸುತ್ತ, ಮೂಸಿ ನೋಡುತ್ತಿದ್ದರೆ ನಮಗೆ ಹೃದಯ ಬಾಯಿಗೆ ಬಂದಿರುತ್ತದೆ. ಅಷ್ತರಲ್ಲೆ, ಅದ್ರ ಯಜಮಾನ ನಮ್ಮ ಮೇಲೆ ಕರುಣೆ ತೋರಿ, "ಹೇ ಟಾಮೀ, ಕಮಾನ್" ಅಂತ ಗದರಿಸುತ್ತಲೆ ತಡ ಆ ಅದ್ಭುತ ಪ್ರಾಣಿ ಚಂಗನೆ ಜಿಗಿದು ಅವರ ಬಳಿ ವಾಪಸ್ಸಾಗುತ್ತೆ. ಹಾಗೆಯೆ ನಮ್ಮ ಹ್ರುದಯದ ಬಡಿತವೂ ವಾಪಸ್ಸಾಗುತ್ತೆ! ಆದ್ರೆ ನನಗೆ ಆಶ್ಚರ್ಯ ಆಗೋ ವಿಷಯ ಅಂದ್ರೆ ನಾಯಿಗೆ ಯಾಕೆ ಬರಿ ಇಂಗ್ಲಿಶೇ ಅರ್ಥ ಆಗೋದು ಅಂತ!? ನಾಯಿಗೆ ಬಾರೊ ಇಲ್ಲಿ ಅಂತ ಕನ್ನಡದಲ್ಲಿ ಕರಿಯೊದು ತುಂಬ ಕಡಿಮೆ. ನಮ್ಮ ಹಳ್ಳಿಗಳಲ್ಲಿ ಕರೀತಾರೆ. ನಮ್ಮ ಊರಲ್ಲಿ ಒಬ್ಬ ಸಾವಜಿ ಇದ್ದ. ಅವನದೊಂದು ಹೋಟೆಲ್ಲು. ಅವ್ನ ಬಳಿ ಒಂದು ಭಯಂಕರವಾದ ನಾಯಿ ಇತ್ತು. ಅದನ್ನು ಬೆಳಿಗ್ಗೆ ಕಟ್ಟಿರುತ್ತಿದ್ದನಾದರೂ ನಮಗೋ ಭಯ. ಯಾಕಂದರೆ ಅದು ಒಮ್ಮೆ ಬಾಯಿ ಹಾಕಿದರೆ ನನ್ನ ಇಡೀ ಕಾಲನ್ನೆ ತಿಂದು ತೇಗಿಬಿಡುತ್ತಿತ್ತು. ಆತ ಮಾತ್ರ ತನ್ನ ನಾಯಿಯನ್ನು ಸ್ವಂತ ಮಗನ ಥರ ನೊಡಿಕೊಳ್ಳುತ್ತಿದ್ದ. ನಾವು ಹೆದರೋದ ನೋಡಿ ಆತ ನಗುತ್ತಿದ್ದ. "ಅವಾ ಏನು ಮಾಡಂಗಿಲ್ಲ ಬರ್ರೀ ಸರ್ರ... " ಅನ್ನುತ್ತಲೇ "ಲೇ ರಾಜಾ ಸುಮ್ಕಿರಲೆ ಕಳ್ಳ ಸೂ... ಮಗನೆ" ಅಂತ ಬಯ್ತಿದ್ದ. ನಮಗೋ ನಗು!

ನನಗೆ ಮೊದಲಿನಿಂದಲೂ ನಾಯಿ ಕಂಡರೆ ಅಷ್ಟಕ್ಕಷ್ಟೆ; ಮತ್ತೆ ನಾಯಿಗಳಿಗೂ ನನ್ನನ್ನ ಕಂಡರೆ ಅಷ್ಟೆ ಪಂಚಪ್ರಾಣ! ಈಗಲೂ ಅಷ್ಟೆ, ನಾನು ನಾಯಿವಂತರ (ಅಲಿಯಾಸ್ ನಾಯಿ ಸಾಕಿದವರು ಅಥವಾ ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ ಹಾಕಿದವರು) ಮನೆಗೆ ಹೋಗುವುದು ತೀರಾ ಅಪರೂಪ. ಅಥವ ಅವರೂ ನನ್ನಂಥವರನ್ನು ತಪ್ಪಿಸಲೆಂದೆ ನಾಯಿ ಸಾಕುವರೋ ಗೊತ್ತಿಲ್ಲ. ಇರಲಿ.. ವಿಷಯ ಹೀಗಿರುವಾಗ ಒಂದು ಸಲ ಎನಾಯ್ತು ಅಂದ್ರೆ...

ನಮ್ಮ ಪಕ್ಕದ ಮನೆಗೆ ಹೊಸದಾಗಿ ಜೋಡಿಯೊಂದು ವಾಸವಾಗಲಿಕ್ಕೆ ಬಂದರು. ಇಬ್ಬರೇ ಬಂದರಾ? ಇಲ್ಲ ಜೊತೆಗೊಂದು ನಾಯಿಯನ್ನು ಕರೆ ತಂದರು., ಆ ಜೋಡಿ ಮನೆಲಿರುವುದೇ ಅಪರೂಪ. ಇಬ್ಬರಿಗೂ ರಾತ್ರಿ ಪಾಳಿ ಕೆಲಸ. ದಿನವೆಲ್ಲಾ ನಿದ್ದೆ, ರಾತ್ರಿಯೆಲ್ಲ ಕೆಲಸ. ಅದೇ ಅಲ್ಲವೇ ಈಗಿನ ಬಹಳಷ್ಟು ಯುವ ಜನತೆ ಮಾಡ್ತಿರೊದು! ಅವರಿಬ್ಬರ ಊಟವಂತು ಹೆಚ್ಚು ಕಡಿಮೆ ಹೊರಗೆಯೇ. ಅಡಿಗೆ ಮಡುತ್ತಿರವೆಂದಲ್ಲ, ಮಾಡುತ್ತಿದ್ದರು.. ಮುದ್ದಿನ ನಾಯಿಗೊಸ್ಕರ. ದಿನವೆಲ್ಲಾ ತೆಪ್ಪಗೆ ಬಿದ್ದಿರುತ್ತಿದ್ದ ಆ ನಾಯಿ, ರಾತ್ರಿ ಮಾತ್ರ ಹೋ ಅಂತ ಕಿರುಚುತ್ತಿತ್ತು (ಪಾಪ ಅದರದು ರಾತ್ರಿ ಪಾಳಿ ಕೆಲಸವಲ್ವೆ!). ಆದರೆ ನಮ್ಮದು ನಾಯಿ ಪಾಡು; ರಾತ್ರಿಯೂ ನಿದ್ದೆ ಇಲ್ಲ ಆದರೆ ಬೆಳಿಗ್ಗೆ ನಿದ್ದೆ ಮಾಡುವಂತಿಲ್ಲ. ಅದರ ಜೊತೆಗೆ ಇನ್ನೂ ತುಂಬಾ ಸಮಸ್ಸೆಗಳು ಶುರುವಾದವು. ನಮಗೆ ಹೊರಗೆ ಅಡ್ಡಾಡುವುದೇ ದುಸ್ತರವಾಯಿತು. ನಾನು ಅತ್ತಿತ್ತ ನೋಡಿಕೊಂಡು ಅವರ ಮನೆ ದಾಟುವ ಪರಿಸ್ಥಿತಿ, ಅದನ್ನು ನೋಡಿ ಅವರು ನಗುವರೇನೋ ಎಂದು ಒಳಗೊಳಗೆ ಅಳುಕು!

ನಾನಂತೂ ನಿರ್ಧಾರ ಮಾಡಿಬಿಟ್ಟೆ. ಅವರಿಗೆ ಹೋಗಿ ಹೇಳುವುದೆಂದು. ಏನಂತ ಹೇಳುವುದು? ಗೊತ್ತಿಲ್ಲ! ಒಟ್ಟಿನಲ್ಲಿ ನಾನು ಅವನ ಭೇಟಿಯಾಗುವ ನಿರ್ಧಾರ ಮಾಡಿಯಾಗಿತ್ತು. ಆದರೆ ಅವರ ಮನೆಗೆ ಹೋಗುವುದೆ ಒಂದು ದೊಡ್ಡ ಸಮಸ್ಯೆ. ಮನೆಗೆ ಹೋಗಿ ಭೇಟಿಯಾಗುವುದೆಂದರೆ ಅವರ ನಾಯಿ ಇದ್ದೇ ಇರುತ್ತದೆ. ಅವರು ಹೊರಗೆ ಎಲ್ಲಾದರೂ ಕಾಣುವರೋ ಎಂದರೆ, ಅವರು ಕಾಣುವುದೆ ಅಪರೂಪ. ಆ ಪುಣ್ಯಾತ್ಮ ವಾಕಿಂಗ್ ಹೋಗುವುದು ನಾಯಿ ಜೊತೆಗೆ. ಹೀಗಾಗಿ ನಾನು ಮನೆ ಯಜಮಾನನನ್ನು ಭೇಟಿಯಾಗುವುದೇ ಕಷ್ಟ ಸಾಧ್ಯವಾಗಿ ಹೊಯಿತು. ನಾನು ಅವನಿಗಾಗಿ ಹೊಂಚು ಹಾಕಿ ಕುಳಿತಿದ್ದೆ. ಆ ದಿನ ಬಂದೇ ಬಿಟ್ಟಿತು! ಆತ ಒಬ್ಬನೇ ನಿಂತಿದ್ದು ಕಾಣಿಸಿತು. ಆದರೂ, ಹತ್ತಿರದಲ್ಲಿ ಎಲ್ಲಾದರೂ ನಾಯಿ ಇರಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ನಾನೂ ಎಲ್ಲ ದಿಕ್ಕಿನಲ್ಲು ಒಂದು ಕಣ್ಣು ಹಾಯಿಸಿದೆ. ಎಲ್ಲೂ ಅದರ ಇರುವು ಕಾಣಲಿಲ್ಲ. ಯಾಕೆಂದರೆ ಅಲ್ಲೆ ಪಕ್ಕದಲ್ಲೆ ಇರುವ ಖಾಲಿ ಸೈಟು ಅದಕ್ಕೆ ಪಂಚ ಪ್ರಾಣ. ಅದು ಹೊರಗೆ ಬಂದ ತಕ್ಷಣ ಅಲ್ಲೆ ಬಹಿರ್ದೆಶೆಗೆ ಹೋಗೋದು. ಅಲ್ಲೆಲ್ಲಾದರೂ ಅಡ್ಡಡಿಕೊಂಡಿದೆಯೊ ಅಂತ ನೋಡಿದೆ. ಸರಿ, ಅವನಿರುವ ಕಡೆಗೆ ಧೈರ್ಯದಿಂದ ಮುನ್ನುಗ್ಗಿದೆ. ಅರೇ ಇದೇನಿದು? ಅವ ಒಬ್ಬನೆ ತನ್ನಷ್ಟಕ್ಕೆ ತಾನೇ ಮಾತಾಡ್ತಿದ್ದ! ನಾಯಿ ಜೊತೆ ಸಂಭಾಷಿಸಿ ಈ ತರಹ ರೂಡಿಯಾಯ್ತೆ ಪಾಪ, ಅನ್ಕೊತಿದ್ದ ಹಾಗೆ ಸ್ವಲ್ಪ ಹತ್ತಿರದಿಂದ ಗಮನಿಸಿ ನೋಡ್ದಾಗ, ಓಲೆ ತರಹ ಕಿವಿಗೆ ಬ್ಲೂ ಟೂಥ್ ಹೆಡ್ ಸೆಟ್ ಹಾಕಿದ್ದು ಕಾಣಿಸ್ತು. ಫೋನಲ್ಲಿ ಮಾತಾಡ್ತಿದ್ದ ಪಾಪ!. ಈಗಿನ ತಾಂತ್ರಿಕ ಯುಗದಲ್ಲಿ ಯಾರು ಎನು ಮಾಡ್ತಿರ್ತಾರೆ ಅಂತ ಹೇಳೊದು ತುಂಬ ಕಷ್ಟ. ಇರಲಿ, ಹಾಗೆ ಸ್ವಲ್ಪ ಹೊತ್ತು ಕಾಯ್ದೆ. ಆಸಾಮಿ ಕೊರಿಯೊದು ಮುಗಿಸೊ ಲಕ್ಷಣ ಕಾಣ್ತಿಲ್ಲ. ನನಗೆ ಅಷ್ಟರಲ್ಲೆ ನಾಯಿ ಬಂದ್ಬಿಟ್ರೆ ಅಂತ ಭಯ. ಅಂತೂ ಸ್ವಲ್ಪ ಹೊತ್ತಿಗೆ ಮುಗಿಸಿದ. ನಾನು ಪರಿಚಯದ ನಗೆ ನಕ್ಕೆ. ಅದಕ್ಕವನು ನಗಲಿಲ್ಲ ಹುಬ್ಬೇರಿಸಿ ಏನು ಎಂಬಂತೆ ನೋಡಿದ! ಅವನು ನನಗೆ ಗೊತ್ತು ಆದರೆ ಅವನಿಗೆ ನಾನು ಗೊತ್ತಿಲ್ಲವಲ್ಲ. ಹಾಳಾಗಿ ಹೊಗಲಿ, ನನಗೇನು ಅವನ ಜೊತೆ ದೋಸ್ತಿ ಮಾಡೊದಿದೆಯೆ? "ನಾನು ನಿಮ್ಮ ಪಕ್ಕದ ಮನೆಲಿದ್ದೀನಿ" ಅಂದೆ. "ಅದಕ್ಕೇನಿವಾಗ?" ಅನ್ನುವಂತಿತ್ತು ಅವನ ನೋಟ. ನಾನೇ ಮುಂದುವರಿಸಿ, "ನಿಮ್ಮ ನಾಯಿಯಿಂದ ತುಂಬಾ ದಿಸ್ಟರ್ಬ್ ಆಗ್ತಿದೆ. ರಾತ್ರಿಯೆಲ್ಲ ಬೊಗಳತ್ತೆ, ನಮಗೆ ನಿದ್ದೆನೇ ಇಲ್ಲ..." ಅಂತ ಬಡ ಬಡಿಸಿದೆ. ಅವನಿಗೆ ಕೋಪ ಬಂತು ಅಂತ ಕಾಣುತ್ತೆ. ಬರದೆ ಇರುತ್ತದೆಯೆ ಮತ್ತೆ? "ನಾಯಿ ಅಂದ್ಮೇಲೆ ಬೊಗಳೊದೆ ಅಲ್ವ?!" ಅಂದ. ಅರೆ ನನಗಿದು ಗೊತ್ತೆ ಇರಲಿಲ್ಲ! ಈಗ ನನಗೂ ಕೋಪ ಬಂತು. ನಾನು ಕಂಪ್ಲೇಂಟ ಮಾಡ್ತೇನೆ ಅಂದೆ! ಅದಕ್ಕೇನು ಆತ ಜಗ್ಗೊ ತರ ಕಾಣಲಿಲ್ಲ. ಎಲ್ಲ ವಾದ ವಿವಾದಗಳು ಆದರೂ ಕೊನೆಗೂ ಒಂದು ಒಪ್ಪಂದಕ್ಕೆ ಬರೋ ಲಕ್ಷಣಗಳು ಕಾಣಲಿಲ್ಲ. ನಾನು ಹ್ಯಾಪು ಮೋರೆಯೊಂದಿಗೆ ಮನೆಗೆ ಬಂದೆ.

ಇದಕ್ಕೇನು ಪರಿಹಾರ ಅಂತ ರಾತ್ರಿಯೆಲ್ಲ ಯೋಚಿಸಿದೆ. ಬೇರೆ ಮನೆ ನೋಡಲೆ? ಆದರೆ ಅದು ಶಾಶ್ವತ ಪರಿಹಾರವಲ್ಲ. ಬೆಳಿಗ್ಗೆ ಹೊತ್ತಿಗೆ ಒಂದು ನಿರ್ಧರಕ್ಕೆ ಬಂದಿದ್ದೆ! ಸ್ನಾನ ಮುಗಿಸಿ ಲಗು ಬಗೆಯಲ್ಲಿ ತಿಂಡಿ ಮುಗಿಸಿ ಹೊರಟೆ. ಹೆಂಡತಿ ಕೇಳಿದ್ಲು "ಎಲ್ಲಿಗೆ ಹೋಗ್ತಿದ್ದಿರ?" ಅಂತ. "ಕಾದು ನೋಡು, ಸಂಜೆಗೆ ಒಬ್ರನ್ನ ಮನೆಗೆ ಕರ್ಕೊಂಡು ಬರ್ತೇನೆ" ಅಂದೆ...
ಸಂಜೆ ಮನೆಗೆ ಬಂದೆ, ಜೊತೆಗೊಂದು "ನಾಯಿಯನ್ನು" ಕರ್ಕೊಂಡು ಬಂದೆ. ಹೀಗೆ ನಾನು ಕೂಡ "ನಾಯಿವಂತನಾದೆ"! ಬೆಳಿಗ್ಗೆ ಅದರ ಜೊತೆಗೆ ವಾಕಿಂಗು ಹೋಗ್ತೇನೆ. ಅದರ ನೆಪದಿಂದಾದರೂ ವಾಕಿಂಗ್ ಮಾಡ್ತಾನೆ ಅಂತ ನನ್ನ ಹೆಂಡತಿಗೂ ಖುಷಿ! ಅದಕ್ಕೆ ನಾಮಕರಣವೂ ಆಗಿದೆ. ನನ್ನ ಬಾಸ್ ಹೆಸರನ್ನೆ ಅದಕ್ಕಿಟ್ಟಿದ್ದೇನೆ. ಪಕ್ಕದ ಮನೆ ನಾಯಿ ಬೊಗಳಿದಾಗೆಲ್ಲ ನಮ್ಮ "ಬಾಸ್" ಕೂಗ್ತಾನೆ. ಅದೊಂಥರ ಜುಗಲ್ ಬಂದಿ. ಮನೆಗೆ ಬರುವವರ ಸಂಖೆ ಗಣನೀಯವಾಗಿ ಇಳಿದಿದೆ. ಹೆಂಡತಿ ತವರಿಗೆ ಹೋಗೋಣವೆಂದರೆ, ನಾಯಿಯ ನೆಪ ಹೇಳಿ ನಾನಿಲ್ಲೆ ಉಳಿದುಕೊಳ್ಳುತ್ತೇನೆ. ಈಗ ಆರಾಮವಾಗಿ ನಿದ್ದೆ ಮಾಡುತ್ತೆನೆ. ನಾಯಿ ಬೊಗಳಿಲ್ಲ ಅಂದ್ರೆ ನಿದ್ದೆಯೆ ಬರದಂಥ ಪರಿಸ್ಥಿತಿ ಈಗ! ಹೊರಗೆ "ನಾಯಿ ಇದೆ.." ಬೋರ್ಡು ನೇತಾಡ್ತಿದೆ. ಬಾಸ್ ಗೆ ಕನ್ನಡವನ್ನು ಕಲಿಸಿದ್ದೇನೆ. ಬಾಸ್ ಕುತ್ಗೊ ಅಂದ್ರೆ ಕುತ್ಗೊಳ್ಳತ್ತೆ ನಿಂತ್ಗೊ ಅಂದ್ರೆ ನಿಂತ್ಗೊಳತ್ತೆ (ನಮ್ಮ ಆಫಿಸ್ ಬಾಸ್ ಗಳೆಲ್ಲ ಹೀಗೆ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ)...

ಅಂತೂ, ನಾಯಿ ಸಾಕೋದರಿಂದ ಇಷ್ಟೆಲ್ಲ ಅನುಕೂಲಗಳಿವೆ ಅಂತ ನನಗೆ ದೇವರಾಣೆಗೂ ಗೊತ್ತಿರಲಿಲ್ಲ ಬಿಡಿ!