ನಾ ಗೌರವಿಸುವ ಶಿಕ್ಷಕಿಯ ಹೇಗೆ ಮರೆಯಲಿ?
ನಿನ್ನೆ ತಾನೇ "ಶಿಕ್ಷಕರ ದಿನ" ಮುಗಿದಿದೆ. ಆದರೆ ಪೂಜೆ, ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯ ನಡೆಸುವಾಗಲೆಲ್ಲಾ ಪುರೋಹಿತರು "ನಿಮಗೆ ವಿದ್ಯೆ ಕಲಿಸಿದ ನಿಮ್ಮ ಗುರುಗಳನ್ನು, ತಾಯಿ ತಂದೆಯನ್ನು ನೆನಪಿಸಿಕೊಳ್ಳಿ" ಅಂತ ಹೇಳುವುದು ಸರ್ವೇ ಸಾಮಾನ್ಯ. ತಾಯಿ-ತಂದೆಯನ್ನು ನೆನಪಿಸಿಕೊಳ್ಳಿ ಅಂದಾಗ ಯಾವುದೇ ಗೊಂದಲ ಇರುವುದಿಲ್ಲ. ಆದರೆ ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳಿ ಅಂದಾಗ ಯಾರನ್ನು ನೆನಪಿಸಿಕೊಳ್ಳಲಿ ಅಂತ ಏನೊ ಒಂದು ರೀತಿಯ ಗೊಂದಲವಾಗಿ ಬಿಡುತ್ತದೆ. 1ನೇ ಈಯತ್ತೆಯಿಂದ ಕಾನೂನು ವ್ಯಾಸಂಗ ಮುಗಿಸಿ ಕಿರಿಯ ವಕೀಲನಾಗಿ ವೃತ್ತಿ ಜೀವನ ನಡೆಸುವಲ್ಲಿಯವರೆಗೆ ನನಗೆ ಒದಗಿದ ಗುರುಗಳ ಸಂಖ್ಯೆ ಎಷ್ಟು ಅಂತ ಕೇಳಿದರೆ ಸರಿಯಾಗಿ ಲೆಕ್ಕ ಹಾಕದೆ ಹೇಳುವಂತಿಲ್ಲ. ಹಾಗಿರುವಾಗ "ನಿಮ್ಮ ಗುರುಗಳನ್ನು ನೆನಪಿಸಿಕೊಳ್ಳಿ" ಅಂತ ಪುರೋಹಿತರು ಸೂಚಿಸಿದರೆ ಯಾರನ್ನಂತ ನೆನಪಿಸಿಕೊಳ್ಳಲಿ? ಅಲ್ಲವೇ?!
ಆದರೆ.... ಪುರೋಹಿತರ ಆ ಸಲಹೆ ಕಿವಿಗೆ ಬೀಳುತ್ತಲೇ ನನ್ನ ನೆನಪಿಗೆ ಮೊದಲು ಬರುವ ಗುರುಗಳೆಂದರೆ ಈ ಫೋಟೋದಲ್ಲಿರುವವರು. ನೆನಪಿಗೆ ಬರುವ ಗುರುಗಳ ಪಟ್ಟಿಯಲ್ಲಿ ಇವರ ಹೆಸರಿಗೆ ಮೊದಲ ಸ್ಥಾನ. ಅದಕ್ಕೆ ಕಾರಣ ಇಲ್ಲದಿಲ್ಲ.
ಇವರ ಹೆಸರು ಲೀಲಾವತಿ ಟೀಚರ್ (W/o ಶ್ರೀ ದಯಾನಂದ ನಾಯಕ್) ನನಗೆ 1977ರಲ್ಲಿ ಓಂತಿಬೆಟ್ಟಿನ ಬಳಿಯಿರುವ ಅಂಜಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ಈಯತ್ತೆಯಲ್ಲಿ ತಾಯಿ ಮಮತೆ ತೋರಿ ಸ್ಲೇಟು ಬಳಪ ಹಿಡಿಯುವುದನ್ನು ಹೇಳಿಕೊಟ್ಟು ಮುದ್ದಾದ ಕನ್ನಡ ಅಕ್ಷರಗಳನ್ನು ಸುಂದರವಾಗಿ ಸೃಜಿಸುವುದನ್ನು ಕಲಿಸಿಕೊಟ್ಟ ಸರಸ್ವತಿ ಸ್ವರೂಪಿಣಿ ಟೀಚರ್....ನನ್ನ ಹೃದಯ ಮಂದಿರದಲ್ಲಿ ನೆಲೆನಿಂತಾಕೆ. ನನ್ನ ಪಾಲಿನ ಪ್ರತ್ಯಕ್ಷ ದೇವತೆ. ಸರಿ ಸುಮಾರು 47 ವರ್ಷಗಳ ಹಿಂದೆ ನಸು ಹಳದಿ, ನಸು ನೀಲಿ ಹಾಗೂ ಬಿಳಿ ಬಣ್ಣದ ಸೀರೆಗಳನ್ನೇ ಹೆಚ್ಚಾಗಿ ತೊಟ್ಟು ನಿತಂಬದವರೆಗೆ ಸೊಂಪಾಗಿ ಜಡೆಯನ್ನು ಇಳಿಬಿಟ್ಟು ಕಾಡಿಗೆಯಿಂದ ತೀಡಿ ಮಾಡಿದ ಹುಬ್ಬುಗಳಡಿಯಲ್ಲಿ ಕಣ್ಣ ಕಪ್ಪು ರೆಪ್ಪೆಗಳೊಳಗಿಂದ ಮಮತೆಯ ನೋಟಬೀರಿ, ಮುಗುಳ್ನಗುವಿನ ತೋರಣ ಕಟ್ಟಿ ಹೆತ್ತ ತಾಯಿಯಂತೆ ನನ್ನ ಕೈಹಿಡಿದು ಸ್ಲೇಟಿನ ಮೇಲೆ ಅಕ್ಷರ ಮೂಡಿಸುತ್ತಿದ್ದದ್ದು ಇಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಹಚ್ಚ ಹಸಿರು. ಆ ಪವಿತ್ರ ಕೈಗಳಿಗೀಗ ಬರೋಬ್ಬರಿ 70ವರ್ಷಗಳಂತೆ. ಹಾಗಂತ ಇಂದು ಅವರೇ ಹೇಳಿದ್ದು.
ಅವರನ್ನು ನಾನು ಕಂಡದ್ದು ಅವರಿಂದ ನಾನು ಕಲಿತದ್ದು ಬರೇ ಒಂದು ವರ್ಷ ಮಾತ್ರ. ಆನಂತರ ಅವರು ಶಾಲೆಗೆ ಬರುತ್ತಿರಲಿಲ್ಲ. ಅವರು ಶಾಲೆಗೆ ಬಾರದಿರುವುದಕ್ಕೆ ಕಾರಣ ಅವರಿಗೆ ಬೇರೆ ಶಾಲೆಗೆ ವರ್ಗವಾಗಿತ್ತು ಅಂತ ನನಗೆ ಹಲವು ಸಮಯಗಳ ನಂತರ ತಿಳಿದದ್ದು. ಕಾರಣ ಶಾಲಾ ಟೀಚರ್ ಹಾಗೂ ಮೇಷ್ಟ್ರುಗಳಿಗೆಲ್ಲಾ ವರ್ಗಾವಣೆಯೆಂಬುದಿದೆ ಅಂತ ನನಗೆ ಆಗ ಆ ಬಾಲ್ಯದ ಬುದ್ಧಿಗೆ ತಿಳಿದಿರಲಿಲ್ಲ. ಆದರೆ ಮನಸ್ಸು ಅವರನ್ನು ಬಯಸುತ್ತಲೇ ಇತ್ತು. ಅದಕ್ಕೆ ಕಾರಣ ಅವರು ಮಕ್ಕಳನ್ನು ತಮ್ಮ ಮಕ್ಕಳಂತೆಯೇ ನಡೆಸಿಕೊಳ್ಳುತ್ತಿದ್ದರು. ಪ್ರೀತಿ ಮಾಡುತ್ತಿದ್ದರು. ಯಾರಾದರೂ ಅತ್ತಾಗ ಬಂದು ಅಮ್ಮನಂತೆ ತಬ್ಬಿಕೊಂಡು ಸಂತೈಸುತ್ತಿದ್ದರು.
ಇತ್ತೀಚೆಗಿನವರೆಗೆ ಅವರು ಎಲ್ಲಿಗೆ ವರ್ಗವಾಗಿ ಹೋದರು, ಎಲ್ಲಿ ತಮ್ಮ ವೃತ್ತಿಯಿಂದ ನಿವೃತ್ತಿಗೊಂಡರು ಎಂಬುದು ತಿಳಿದಿರಲೇ ಇಲ್ಲ. ನಾನು ಹಲವಾರು ಮಂದಿಯಲ್ಲಿ ಅವರ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಇತ್ತೀಚೆಗೆ ಒಂದು ದಿನ ಅವರ ಗಂಡ ಒಂದು ಮದುವೆ ಸಮಾರಂಭದಲ್ಲಿ ಕಾಣಸಿಕ್ಕಿದ್ದು ದೇವರ ಪವಾಡವೇ ಎನ್ನಬೇಕು. ಹೇಗೋ ಏನೋ ಅವರೊಂದಿಗೆ ಮಾತನಾಡುವಾಗ ಅವರು ನಾನು ಹುಡುಕುತ್ತಿದ್ದ ನನ್ನ ನಚ್ಚಿನ ಟೀಚರ್ರವರ ಗಂಡ ಅಂತ ಗೊತ್ತಾಯಿತು. ಅವರಿಂದಲೇ ನನ್ನ ಟೀಚರ್ರ ಯೋಗಕ್ಷೇಮವೂ ತಿಳಿಯಿತು.
ಈಗ ಉಡುಪಿ ತಾಲೂಕಿನ ಮರ್ಣೆ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಅವರು ತಮ್ಮ ಪತಿ, ಮಗ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳೊಂದಿಗೆ ಸುಖೀ ಜೀವನ ಸಾಗಿಸುತ್ತಿದ್ದಾರೆಂಬುದನ್ನು ಅವರ ಮಾತುಗಳಿಂದಲೇ ತಿಳಿದುಕೊಂಡೆ.
"ಶಿಕ್ಷಕರ ದಿನ"ವಾದ ನಿನ್ನೆ ನನಗೆ ಅಕ್ಷರ ಹೇಳಿಕೊಟ್ಟ ಲೀಲಾವತಿ ಟೀಚರ್ರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಬೇಕೆಂದು ನಿರ್ಧರಿಸಿ ಬೆಳಿಗ್ಗೆ ಮನೆಯಿಂದ ಹೊರಟಿದ್ದು. ಆದರೆ ಕೋರ್ಟಿನ ಕೆಲಸ ಮುಗಿಸಿ ಕೋರ್ಟಿನಿಂದ ಹೊರಗೆ ಕಾಲಿಡುವಾಗಲೇ ಸಂಜೆ ಐದೂವರೆ ಗಂಟೆಯಾದುದರಿಂದಲೂ, ಕಚೇರಿಯಲ್ಲಿ ಕಕ್ಷಿಗಾರಾರು ನನ್ನನ್ನು ಭೇಟಿಯಾಗಲು ಕಾಯುತ್ತಿದ್ದುದರಿಂದ ಅಲ್ಲಿಂದಲೇ ಟೀಚರ್ರಿಗೆ ಕರೆ ಮಾಡಿದೆ. ರಿಸೀವ್ ಆಗಲಿಲ್ಲ. ನಾನು ಕಚೇರಿಯ ಸಮೀಪ ಬರುತ್ತಲೇ ಅವರಿಂದ ನನಗೆ ವಾಪಾಸ್ ಕರೆ ಬಂತು. ನನಗೆ ಎಲ್ಲಿಲ್ಲದ ಸಂತೋಷ. ಅವರು ನನ್ನನ್ನು ಬಹುವಚನದಲ್ಲಿಯೇ ಮಾತನಾಡಿಸಿ ಮುಜುಗರ ಹುಟ್ಟಿಸಿದ್ದರಿಂದ ದಯವಿಟ್ಟು ಏಕವಚನದಲ್ಲಿ ಮಾತನಾಡಿ ಅಂತ ಎಷ್ಟು ಬೇಡಿಕೊಂಡರೂ ಕೇಳದೇ "ನೀವೂ ಈಗ ದೊಡ್ಡವರಾಗಿದ್ದೀರಿ, 1ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಪೃಥ್ವಿರಾಜ ಅಲ್ಲ. ನಿಮ್ಮನ್ನು ಏಕವಚನದಲ್ಲಿ ಮಾತನಾಡಿಸುವುದು ನನಗೆ ಸಬ್ಯತೆ ಅಂತ ಅನ್ನಿಸುವುದಿಲ್ಲ" ಅಂತ ಹೇಳಿ ಮತ್ತೆ ಬಹುವಚನದಲ್ಲಿಯೇ ಮಾತು ಮುಂದುವರಿಸಿದರು. ಆ ಬಾಲ್ಯದ ದಿನಗಳನ್ನು ನಾನೂ ನೆನಪಿಸಿಕೊಂಡೆ, ಅವರೂ ನೆನಪಿಸಿಕೊಂಡು "ನಿಮ್ಮ ಬಗ್ಗೆ ಕೇಳುವಾಗ ತುಂಬಾ ಖುಷಿಪಡುತ್ತೇನೆ. ನನ್ನ ಸ್ಟೂಡೆಂಟ್ ಅಂತ ಹೇಳುವುದಕ್ಕೆ ಸಂತೋಷವಾಗುತ್ತದೆ" ಎಂದಾಗ ನನ್ನ ಕಣ್ಣುಗಳು ನನಗೆ ತಿಳಿಯದಂತೆ ತೇವವಾದವು. ನನ್ನ ಮೈ ಮನಸ್ಸು ಎಲ್ಲಾ ಅವರ ಪದತಲದಲ್ಲಿ ಪವಡಿಸಿತ್ತು. ಅವರೂ ಸಂತೋಷಪಟ್ಟರು.ಹೃದಯ ತುಂಬಿ ಹರಸಿದರು. ಇನ್ನೇನು ಬೇಕು ನನಗೆ?! ದೇವರೇ ಹರಸಿದಂತಾಯ್ತು! ಇಂದಿನ ಶಿಕ್ಷಕರ ದಿನ ನನ್ನ ಪಾಲಿಗಂತೂ ಸಂಭ್ರಮವಾಯ್ತು. ಸಾರ್ಥಕವೂ ಆಯ್ತು.
ಮಾತು ಮುಗಿಸುತ್ತಾ ಕೊನೆಯದಾಗಿ ನಿಮ್ಮ ಫೋಟೋಗಳನ್ನು ದಯವಿಟ್ಟು ಕಳುಹಿಸಿಕೊಡಿ ಅಂತ ಅವರಲ್ಲಿ ವಿನಂತಿಸಿಕೊಂಡೆ. ಸಂತೋಷದಿಂದಲೇ ಕಳುಹಿಸಿಕೊಟ್ಟರು. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಇನ್ನೊಮ್ಮೆ ಅವರನ್ನು ಮುಖತಾ ಬೇಟಿ ಮಾಡಿ ಮತ್ತೊಂದು ಲೇಖನದೊಂದಿಗೆ ಬರುತ್ತೇನೆ.
ನಿಮಗೆಲ್ಲರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು! ಶುಭವಾಗಲಿ! ನಮೋ ನಮಃ
-ಮೌನಮುಖಿ, (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)