ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!

ನಾ ಬರೆದ ಮೊದಲ ಪ್ರೇಮಪತ್ರಕ್ಕೆ ಬಂದಿತ್ತು ಬಹುಮಾನ!

ಬರಹ

ಎರಡು ವರ್ಷಗಳ ಹಿಂದೆ ನಮ್ಮ ಕಾಲೇಜಿನಲ್ಲಿ ನಡೆದ ಘಟನೆಯಿದು. ನನ್ನ ಆಪ್ತ ಸ್ನೇಹಿತನೊಬ್ಬ ನನ್ನ ಗೆಳತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆ ಕನ್ನಡದ ಹುಡುಗಿ ಮತ್ತು ಇವ ಮಲಯಾಳಿ. ಅವರಿಬ್ಬರು ಮನಸ್ಸಲ್ಲೇ ಪ್ರೀತಿಸುತ್ತಿರುವುದು ನಮ್ಮ ಗುಂಪಿನ ಎಲ್ಲಾ ಸ್ನೇಹಿತರಿಗೆ ಗೊತ್ತು. ಅಂತೂ ವ್ಯಾಲೆಂಟೈನ್ಸ್ ದಿನ ಬಂದಾಗ ಆತ ಆಕೆಯನ್ನು ಪ್ರೊಪೋಸ್ ಮಾಡುವುದಾಗಿ ತೀರ್ಮಾನಿಸಿಯೇ ಬಿಟ್ಟ. ಅದೇನೋ 'ಐ ಲವ್ ಯು' ಅಂತಾ ನೇರವಾಗಿ ಅವಳಲ್ಲಿ ಹೇಳಬಹುದು ಆದ್ರೆ ಅಷ್ಟು ಸಾಲದು ತಾನು ಆಕೆಯನ್ನು ಎಷ್ಟು ಪ್ರೀತಿಸುತ್ತಿದ್ದೇನೆಂದು 'ಪ್ರೇಮಪತ್ರ' ಬರೆದು ಆಕೆಗೆ ತಿಳಿಸಬೇಕೆಂದು ಅವನ ಹಂಬಲವಾಗಿತ್ತು.

ಹೌದು... ಪ್ರೇಮಪತ್ರವೇನೋ ಬರೆಯುವುದು ಸರಿ. ಆದ್ರೆ ಆಕೆಗೆ ಮಲಯಾಳಂ ಓದಲು ತಿಳಿದಿಲ್ಲವಲ್ಲಾ? ನೀನು ಇಂಗ್ಲಿಷ್್ನಲ್ಲಿ 'ಲವ್ ಲೆಟರ್್' ಬರಿ ಎಂದು ಸಲಹೆಯಿತ್ತೆ. ಅದು ಅವನಿಗೆ ಸರಿಹೋಗಲಿಲ್ಲ. ಇಂಗ್ಲಿಷ್್ನಲ್ಲಿ ಬರೆದರೆ ಅದು ಮನದ ಭಾಷೆಯಾಗುವುದಿಲ್ಲ. ಬರೆಯಲೂ ಪದಗಳಿಗೆ ತಡಕಾಡಬೇಕಾಗುತ್ತದೆ. ಕೆಲವೊಮ್ಮೆ 'ಗಟ್ಟಿ' ಇಂಗ್ಲಿಷ್ ಬಳಸಿದರೆ ಆಕೆಗೆ ಅರ್ಥವಾಗದೇ ಹೋದರೆ? ಮಾತ್ರವಲ್ಲ ಏನಾದರೂ ಸ್ಪೆಲಿಂಗ್ ಮಿಸ್ಟೇಕ್ ಬಂದರೆ ಅದೂ ಕಷ್ಟನೇ. ಏನೇ ಆದ್ರೂ ಇಂಗ್ಲಿಷ್ ಸಹವಾಸ ಬೇಡ ಎಂದು ಖಡಾಖಂಡಿತವಾಗಿ ನುಡಿದ.

ನೀನು ಅವಳಿಗೆ ಒಂದು ಎಸ್ಸೆಮ್ಮೆಸ್ ಕಳಿಸಿ ಬಿಡು ಎಂದು ನಾವು ಸಲಹೆ ನೀಡಿದೆವು. ಅದೆಲ್ಲಾ ಮಾಮೂಲಿ. ಒಂದೋ ಎರಡು ದಿನ ಇನ್್ಬಾಕ್ಸ್್ನಲ್ಲಿ ಇರಬಹುದು. ಆಮೇಲೆ ಡಿಲೀಟ್ ಮಾಡಿ ಬಿಡ್ತಾಳೆ. ಸಮ್್ಥಿಂಗ್ ಸ್ಪೆಷಲ್ ಆಗಿರಬೇಕು. ಅವಳಿಗೆ ಆ ಕ್ಷಣ ಎಂದೂ ನೆನಪಿನಲ್ಲಿ ಉಳಿಯುವಂತಿರಬೇಕು ಎಂದು ಅವನ ಪ್ರೇಮದ ಕ್ಲಾಸು ಆರಂಭಿಸಿದ. ಎಲ್ಲರಿಗೂ ಇದು ಕೇಳಿ ಕೇಳಿ ಸಾಕಾಗಿತ್ತು.

ಹೀಗಿರುವಾಗ ಅವ ನಿರೀಕ್ಷೆಯಲ್ಲಿದ್ದ ವ್ಯಾಲೆಂಟೈನ್ಸ್ ದಿನ ಬಂದೇ ಬಿಟ್ಟಿತು. ಬೆಳಗ್ಗೆ ಕ್ಲಾಸಿಗೆ ಬಂದವನೇ ನನ್ನಲ್ಲಿ "ಏನಾದರೂ ಆಗಲಿ. ನನಗೆ ಕನ್ನಡದಲ್ಲಿ ಒಂದು ಪ್ರೇಮ ಪತ್ರ ಬರೆದುಕೊಡು. ನಾನು ಮಲಯಾಳಂಲ್ಲಿ ಹೇಳುತ್ತೇನೆ ನೀನು ಅದನ್ನು ತರ್ಜುಮೆ ಮಾಡಿ ಬರೆದು ಬಿಡು" ಎಂದು ಹೇಳಿದ. ಹೀಗೆ ನಾವಿಬ್ಬರೂ ಕ್ಲಾಸಿಗೆ ಚಕ್ಕರ್ ಹೊಡೆದು ಕ್ಯಾಂಟೀನ್್ಗೆ ಲಗ್ಗೆಯಿಟ್ಟೆವು. ಪೆನ್ನು ಪೇಪರ್ ಎಲ್ಲಾ ರೆಡಿ. ಅವ ಆತನ ಪ್ರೇಮ ನಿವೇದನೆಯನ್ನು ಹೇಳುತ್ತಾ ಹೋದ. ಕೇಳಲು ತುಂಬಾ ಖುಷಿಯಾಗಿರುತ್ತಿತ್ತು. ಆದರೆ ಅದನ್ನು ತರ್ಜುಮೆ ಮಾಡುವಷ್ಟು ಶಕ್ತಿ ನನ್ನಲಿರಲಿಲ್ಲ. ಅವ ಹೇಳುವ ಒಂದೊಂದು ವಾಕ್ಯಕ್ಕೂ ಸಮಾನವಾದ ಕನ್ನಡಾರ್ಥ ಹುಡುಕಿ ನಾನಂತೂ ಸುಸ್ತಾಗಿದ್ದೆ. ಕೊನೆಗೆ ಅದನ್ನು ನಾನೇ ಓದಿ ನೋಡಿದಾಗ ಅಯ್ಯೋ ಇದೇನು ಪ್ರೇಮಪತ್ರವಾ? ಅಥವಾ ಅಂಗಡಿಗೆ ಹೋಗಿ ಓದಿ ಹೇಳುವ ಸಾಮಾನುಗಳ ಚೀಟಿಯೋ ಅಂಥಾ ಅನಿಸಿಬಿಟ್ಟಿತ್ತು.

ಇದು ಸರಿಯಾಗಿಲ್ಲ. ಈ ಪ್ರೇಮಪತ್ರ ನೀನು ಅವಳಿಗೆ ಕೊಟ್ರೆ ಅವಳು ಮುಂದೆಂದೂ ನಿನ್ನತ್ತ ತಿರುಗಿ ನೋಡಲ್ಲ ಎಂದು ನಾನು ಅಭಿಪ್ರಾಯ ಮಂಡಿಸಿದೆ. ಇದು ಕೇಳಿ ಅವನ ಮುಖದಲ್ಲಿ ಬೇಸರದ ಗೆರೆ ಕಾಣಿಸಿದಾಗ ನನ್ನ ಮನಸ್ಸನ್ನೇ ಹಿಂಡಿದಂತೆ ಅನುಭವವಾಗಿತ್ತು. ಹೋಗ್ಲಿ ಬಿಡು... ಒಂದು ಗುಲಾಬಿ ಕೊಟ್ಟು ಪ್ರೊಪೋಸ್ ಮಾಡು ಎಂದು ಸಮಾಧಾನಿಸಲು ನೋಡಿದೆ. ಅವನಿಗೆ ಪ್ರೇಮಪತ್ರ ಬಿಟ್ಟು ಬೇರೆ ಯಾವುದೇ ರೀತಿಯೂ ಸರಿಹೋಗಲಿಲ್ಲ.

ಕ್ಲಾಸಿಗೆ ಚಕ್ಕರ್ ಹೊಡೆದ ಕಾರಣ ಒಂದು ಪಿರಿಯಡ್ ಮುಗಿಯುತ್ತಾ ಬರುತ್ತಿತ್ತು. ಮುಂದಿನ ಕ್ಲಾಸಿಗೆ ಹಾಜರಾಗಬೇಕು ಎಂದು ನಾನು ಎದ್ದು ನಿಂತೆ. ಅವ ಅಲ್ಲೇ ಮಂಕಾಗಿ ಕುಳಿತಿದ್ದ. "ಹಲೋ ಬಾ ಕ್ಲಾಸಿಗೆ ಹೋಗೋಣ" ಎಂದು ಕರೆದೆ. ಅವನ ಮುಖ ಬಾಡಿತ್ತು. "ಪ್ಲೀಸ್ ....ನೀನು ನನ್ನ ಬೆಸ್ಟ್ ಫ್ರೆಂಡ್ ಅಲ್ವಾ ...ಹೇಗಾದರೂ ಮಾಡಿ ನಿನ್ನದೇ ಆದ ಪ್ರೇಮಪತ್ರವೊಂದನ್ನು ಬರೆದುಕೊಡು ಅಷ್ಟು ಸಾಕು" ಎಂದು ಬಿನ್ನವಿಸಿದ.

ನಾನು ಹುಡುಗಿ, ಇನ್ನೊಂದು ಹುಡುಗಿಗೆ ಹೇಗೆ ತಾನೇ ಪ್ರೇಮಪತ್ರ ಬರೆಯಲಿ? ನನಗಂತೂ ಪ್ರೇಮಪತ್ರ ಬರೆಯಲು ಗೊತ್ತಿಲ್ಲ. ಅವಳೂ ನನ್ನ ಗೆಳತಿಯೇ ಅವಳಿಗೆ ನಾನು ಈ ರೀತಿ ಚೀಟಿಂಗ್ ಮಾಡುವುದೇ? ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು.

ಇವನಂತೂ ನನ್ನ ಆಪ್ತ ಸ್ನೇಹಿತ. ಇವನಿಗೆ ಸಹಾಯ ಮಾಡಲು ನನಗೆ ಆಗುತ್ತಿಲ್ಲವಲ್ಲಾ ಎಂಬ ಕೊರಗು ನನಗಿತ್ತು. ಕೊನೆಗೆ ಒಂದು ಯೋಚನೆ ನನ್ನ empty ಹೆಡ್್ನಲ್ಲಿ ಥಟ್ ಅಂತಾ ಹೊಳೆಯಿತು. ಅವನ ಮುಖದಲ್ಲಿ ಮಂದಹಾಸ.

ನನಗೂ ಅಷ್ಟೇ ಆನಂದ.

"ಥ್ಯಾಂಕ್ಯೂ ಡಿಯರ್. ಇದಕ್ಕಾಗಿ ನಿನಗೆ 2 ಡೈರಿ ಮಿಲ್ಕ್ "ಎಂದು ಬಹುಮಾನವನ್ನೂ ಘೋಷಿಸಿ ಬಿಟ್ಟ.

ಅಬ್ಬಾ...ಏನೋ ಸಾಧನೆ ಮಾಡಿದಂತಾಗಿತ್ತು.

ಸಂಜೆ ನಾವಿಬ್ಬರೂ ಮತ್ತೆ ಭೇಟಿಯಾದೆವು.

ನಿನ್ನ ಪ್ರೇಮಪತ್ರ ನೋಡಿ ಅವಳು ಏನು ಹೇಳಿದಳು?

ಅವಳಿಗೆ ತುಂಬಾ ಇಷ್ಟವಾಯಿತು. ಅವಳ ಮುಖದಲ್ಲಿ ಉಲ್ಲಾಸದ ನಗೆ ಕಂಡೆ. ಅಷ್ಟೇ ಸಾಕು...ಅವಳೂ ನನ್ನನ್ನು ಇಷ್ಟಪಡುತ್ತಿದ್ದಾಳೆ.

ಇದು ನಿನಗೆ... ಎಂದು 2 ಡೈರಿ ಮಿಲ್ಕ್ ನನಗಿತ್ತ.

ನನಗೂ ಸಂತೋಷ. ಯಾಕೆಂದ್ರೆ ನನ್ನ ಸ್ನೇಹಿತನಿಗೆ ಸಹಾಯ ಮಾಡಿದ್ದು ಮಾತ್ರವಲ್ಲ ನಾನು ಬರೆದ ಮೊದಲ ಪ್ರೇಮಪತ್ರಕ್ಕೆ ಬಹುಮಾನವೂ ಬಂತಲ್ಲ! ಆ ಸಂತೋಷದ ಕ್ಷಣದಲ್ಲಿ ಡೈರಿ ಮಿಲ್ಕ್ ನನಗೆ ಸಾಥ್ ನೀಡಿತ್ತು.

ಇದಾದ ಮೇಲೆ ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿ ಕಾಲೇಜು ಬಳಿಯಿರುವ 'ಕ್ಯಾಂಪಸ್ ಲೈನ್್' (ಐಸ್ ಕ್ರೀಂ ಪಾರ್ಲರ್)ನಲ್ಲಿ ಗೆಳೆಯನ 'ಲವ್್' ಪ್ರೊಪೋಸಲ್ ಸಕ್ಸಸ್ ಸಲುವಾಗಿ ಪಾರ್ಟಿ ಮಾಡುತ್ತಿದ್ದೆವು. ಆಗ ಇನ್ನೊಬ್ಬ ಗೆಳೆಯ, ಅದಿರಲಿ ಮಿಥುನ್, ನೀನು ಲವ್ ಲೆಟರ್್ನಲ್ಲಿ ಏನೂಂತಾ ಬರೆದಿದ್ದೆ?. ಅದು ಓದಿದಾಕ್ಷಣ ಅವಳು ಬಿದ್ದು ಬಿಟ್ಲಾ? ಮಿಥುನ್ ನಗ್ತಾ ಇದ್ದಾ.

ಅವನಲ್ಲಿ ಯಾಕೆ ಕೇಳ್ತಾ ಇದ್ಯಾ? ಲವ್ ಲೆಟರ್ ಬರೆದವಳು ಇವಳು ತಾನೇ? ಇವಳಲ್ಲೇ ಕೇಳು ಎಂದ ಇನ್ನೊಬ್ಬ.

ಅದು ಹಾಗೆಲ್ಲಾ ಹೇಳಲು ಆಗುವುದಿಲ್ಲ ಎಂದು ನಾನು ಹೇಳಿದೆ.

ಎಲ್ಲರಿಗೂ ಕುತೂಹಲ. ಅಂತೂ ಪಟ್ಟು ಬಿಡದ ನನ್ನ ಗೆಳೆಯರು ಮಿಥುನ್್ನ ಬಾಯ್ಬಿಡಿಸುವ ಹರಸಾಹಸಕ್ಕೆ ಮುಂದಾದರು. ಇನ್ನೇನು ಹೇಳಿಯೇ ಬಿಡೋಣ ಎಂದು ನಿರ್ಧರಿಸಿದ ಮಿಥುನ್ ಆ ಲೆಟರ್್ನಲ್ಲಿ ಏನೋ ಇರಲಿಲ್ಲ. ಅದು ಬರೀ ಬಿಳಿ ಹಾಳೆ ಮಾತ್ರವಾಗಿತ್ತು! ಎಂದ.

ಎಲ್ಲರಿಗೂ ಅಚ್ಚರಿ..ಯಾರೂ ಏನೂ ಮಾತನಾಡಲೇ ಇಲ್ಲ.

ಆ ಬರೀ ಬಿಳಿ ಹಾಳೆಯನ್ನು ಮಡಚಿ ಅವಳ ಕೈಗಿತ್ತಾಗ ಅವಳಿಗೂ ಇದೇ ತರ ಆಶ್ಚರ್ಯವಾಗಿತ್ತು. ಇದೇನು? ಎಂದು ಕೇಳಿದಳು.
ನನ್ನ ಪ್ರೇಮಪತ್ರ..

ಪ್ರೇಮಪತ್ರ? ಇದರಲ್ಲಿ ಏನೋ ಬರೆದಿಲ್ಲವಲ್ಲಾ...

ನನ್ನ ಪ್ರೀತಿಯನ್ನು ವ್ಯಕ್ತ ಪಡಿಸಲು ಅಕ್ಷರಗಳೇ ಸಾಕಾಗುತ್ತಿಲ್ಲ. ಇಂತಿರುವಾಗ ಬರೀ ಪದಗಳಲ್ಲಿ ನನ್ನ ಪ್ರೀತಿಯನ್ನು ಹೇಗೆ ಬಂಧಿಯನ್ನಾಗಿ ಮಾಡಲಿ. ಅದಕ್ಕೆ ಈ ಲೆಟರ್...(ಮತ್ತೆ ಏನೆಲ್ಲಾ ಹೇಳಿದ್ದಾನೆ ಅಂತಾ ಅವ ಇಲ್ಲಿ ಹೇಳಲಿಲ್ಲ )

ಅವಳಿಗೂ ಸಂತೋಷವಾಗಿತ್ತು. ಥ್ಯಾಂಕ್ಸ್ ಅಂತ ಹೇಳಿದಳು.

ಇದನ್ನು ಹೇಳುತ್ತಾ ಮಿಥುನ್ ಪ್ರೇಮಲೋಕದ ಕನಸಲ್ಲಿ ಜಾರಿದ್ದ. ಗೆಳೆಯರೆಲ್ಲರೂ 'ಸೂಪರ್ ಐಡಿಯಾ' ಎಂದು ನನ್ನ ಕೈ ಕುಲುಕಿ," ಏ..ಮಿಥನ್ ಬಿಲ್ ಪೇ ಮಾಡು" ಎನ್ನುತ್ತಾ ಸ್ವಪ್ನಲೋಕದಲ್ಲಿದ್ದ ನನ್ನ ಗೆಳೆಯನನ್ನು ಡಿಸ್ಟರ್ಬ್ ಮಾಡಿ ಎಬ್ಬಿಸಿದರು.

ವಿ.ಸೂ: (ಇವರಿಬ್ಬರ ಲವ್ ಸಕ್ಸೆಸ್...ಮದುವೆ ಕೂಡಾ ಫಿಕ್ಸ್ ಆಗಿದೆ. )