ನಿಗೂಢ ಸೌಧ (ವಿಶ್ವಕಥಾಕೋಶ -೨೧)

ನಿಗೂಢ ಸೌಧ (ವಿಶ್ವಕಥಾಕೋಶ -೨೧)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ ‘ನಿಗೂಢ ಸೌಧ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಫ್ರಾನ್ಸ್ ದೇಶದ ಕಥೆಗಳಿವೆ. ಫ್ರೆಂಚ್ ಕಥೆಗಳ ಬೆಳವಣಿಗೆಯ ಕಥೆ ರೋಮಾಂಚಕಾರಿ. ಒಂದು ಸಾವಿರ ವರ್ಷ ಹಿಂದೆಯೇ ಜಾನಪದ ಗಾಯಕರು ತಮ್ಮ ಕಥನ ಕವನಗಳಲ್ಲಿ ವೀರರನ್ನು ನೆನೆದರು; ಜಂಭದ ಕೋಳಿಗಳನ್ನು ಪರಿಹಾಸ್ಯ ಮಾಡಿದರು. ಆ ಪದ್ಯ ವಸ್ತುಗಳನ್ನು ಗದ್ಯಕ್ಕೆ ಅಳವಡಿಸಿ ಸೊಗಸಾದ ಕಥೆಗಳನ್ನು ಬರೆದವನು ಇಟಲಿಯ ಬೊಕಾಚ್ಚೊ. ಅಲ್ಲಿನ ಪುನರುತ್ಥಾನದ ಸಾಹಿತ್ಯ ಶಿಲ್ಪಿ ಶ್ರೇಷ್ಟರಲ್ಲೊಬ್ಬ. ಇವನಿಗೆ ‘ಕಟ್ಟು ಕಥೆಗಳ ಕವಿ' ಎಂದು ಕರೆಯುತ್ತಿದ್ದರು. 

ಫ್ರೆಂಚ್ ಭಾಷೆಯಲ್ಲಿ ಕಥಾಪ್ರಕಾರ ಶತಮಾನಗಳುದ್ದಕ್ಕೂ ಅಡೆತಡೆ ಇಲ್ಲದೆ ಬೆಳೆಯಿತು. ೧೮ನೇ ಶತಮಾನದಲ್ಲಿ ಕಥೆಗಳು, ದಾರ್ಶನಿಕ ಕಥೆಗಳು ಬೆಳಕು ಕಂಡವು. ಇಂಥ ಕಥೆಗಳ ರಚನೆಯಲ್ಲಿ ವಾಲ್ಟೇರ್ ಅಪ್ರತಿಮನಾಗಿದ್ದ. ೧೯ ನೆಯ ಶತಮಾನದ ಸಮಯದಲ್ಲಿ ಪ್ರಾನ್ಸಿನಲ್ಲಿ ಆಧುನಿಕ ಸಣ್ಣ ಕಥೆಗಳ ಯುಗ ಆರಂಭವಾಯಿತು. 

ಈ ಪುಸ್ತಕದಲ್ಲಿ ಇರುವ ೧೧ ಕಥೆಗಳೆಂದರೆ, ನಿಗೂಢ ಸೌಧ (ಆನರೆ-ದ-ಬಾಲ್ಝಾಕ್), ಜೀನೊ ಮತ್ತು ಕೋಲೀ (ವಾಲ್ಟೇರ್), ಒಬ್ಬ ಯಹೂದಿ (ಸ್ಪೆಂಡಾಲ್), ಜೆನ್ನಿ (ವಿಕ್ಟರ್ ಹ್ಯೂಗೊ), ಪಾಶ (ಚಾರ್ಲ್ಸ್ ಬಾದ್ ಲೇರ್), ಕೊನೆಯ ಪಾಠ ( ಅಲ್ಫಾನ್ಸ್ ದಾದೆ), ಪೊತ್ತಾ (ಅನಾತೋಲ್ ಫ್ರಾನ್ಸ್), ಕೈದಿಗಳು (ಗಾಯ್ ದ ಮೊಪಾಸಾ), ಬೂತ್ವಾರ್ (ಹೆನ್ರಿ ಬಾರ್ಬೂಸ್), ವ್ಯಭಿಚಾರಿಣಿ (ಆಲ್ಬರ್ಟ್ ಕಾಮೂ), ಗೋಡೆ ( ಝೀನ್ ಪಾಲ್ ಸಾತ್ರ್)

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಬಸವರಾಜ ನಾಯ್ಕರ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೬೦ ಪುಟಗಳನ್ನು ಹೊಂದಿದೆ. ಫ್ರಾನ್ಸ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.