ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರವಾಸಿ ಸ್ಥಳಗಳು
ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿ ಈ ವಿಷಯಗಳಲ್ಲಿ ನಮ್ಮ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ರಾಜಧಾನಿ ಬೆಂಗಳೂರಿನ ಸನಿಹದ ಕೆಲ ಸ್ಥಳಗಳೇ ಸಾಕ್ಷಿ. ಈ ಸ್ಥಳಗಳೆಲ್ಲ ಬೆಂಗಳೂರಿನಿಂದ ಕೇವಲ ಎಪ್ಪತ್ತು ಕಿಲೋಮೀಟರ್ ದೂರದಲ್ಲಿವೆ.
ದೇವರಾಯನದುರ್ಗ
ಪ್ರಸಿದ್ಧ ಯಾತ್ರಾಸ್ಥಳ ಹಾಗೂ ರಮ್ಯ ಪ್ರಕೃತಿಯ ತಾಣವಾದ ದೇವರಾಯನದುರ್ಗದಲ್ಲಿ ಬೆಟ್ಟದಮೇಲಿರುವ ಯೋಗಾನರಸಿಂಹ ದೇವಾಲಯಕ್ಕೆ ಹೋಗಲು ಬೆಟ್ಟದ ಬುಡದಿಂದ ಅರ್ಧ ದೂರದವರೆಗೆ ಉತ್ತಮವಾದ ಮತ್ತು ಅಗಲವಾದ ಟಾರ್ ರಸ್ತೆಯಿದ್ದರೂ ಸರ್ಕಾರಿ ಬಸ್‌ಗಳು ಬೆಟ್ಟದ ಕೆಳಗಿನ ಭೋಗಾನರಸಿಂಹ ದೇವಾಲಯದ ಬಳಿಯೇ ತಮ್ಮ ಟ್ರಿಪ್ ಪೂರೈಸಿ ಮರಳುತ್ತವೆ. ಸ್ವಂತ ವಾಹನವಿಲ್ಲದ ಯಾತ್ರಿಕರು ಎರಡು ಕಿಲೋಮೀಟರ್ ಉದ್ದದ ಆ ಘಾಟ್ ರಸ್ತೆಯನ್ನು ನಡೆದುಕೊಂಡೇ ಕ್ರಮಿಸಬೇಕು.
ಯೋಗಾನರಸಿಂಹ ದೇವಾಲಯದ ಪಕ್ಕದಲ್ಲಿರುವ ಪವಿತ್ರ ಪುಷ್ಕರಿಣಿ ಗಬ್ಬೆದ್ದುಹೋಗಿದೆ. ಬೇರೆ ವಿಧಿಯಿಲ್ಲದೆ ಆ ಗಲೀಜು ನೀರಿನಲ್ಲೇ ಹೆಂಗಸರು ತಲೆಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ದೇವಾಲಯದ ಹೊರಗಿರುವ ನಾಗರ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಾರೆ.
ನಾಮದ ಚಿಲುಮೆ
ಶ್ರೀರಾಮನು ಬಾಣಬಿಟ್ಟು ಬಂಡೆಯಿಂದ ನೀರು ಹೊಮ್ಮಿಸಿದನೆಂದು ಹೇಳಲಾಗುವ ನಾಮದ ಚಿಲುಮೆಯಲ್ಲಿ ಬಂಡೆಯೊಳಗಿನಿಂದ ನೀರು ಹರಿದುಬರುತ್ತದೆ. ರಾಮನು ನಾಮ ಹಚ್ಚಿಕೊಳ್ಳಲು ಆ ನೀರು ಬಳಸಿದ್ದನಂತೆ. ಬಂಡೆಯೊಳಗಿನಿಂದ ಹರಿದುಬರುವ ಆ ನೀರೀಗ ಕೆಲವೇ ಅಡಿಗಳ ದೂರದಲ್ಲಿ ಕೊಳಚೆ ನೀರಾಗಿ ದಾಸ್ತಾನಾಗುತ್ತಿದೆ. ಶ್ರೀರಾಮನು ನಾಮ ಹಚ್ಚಿಕೊಳ್ಳಲು ಬಳಸಿದ ನೀರು ಎಂಬ ನಂಬುಗೆಯ ಕಾರಣಕ್ಕಾದರೂ ಆ ನೀರನ್ನು ಕೊಳಚೆಯಾಗದಂತೆ ಕಾಪಾಡಬೇಕಾದ್ದು ಅಪೇಕ್ಷಣೀಯ. ನಾಮದ ಚಿಲುಮೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ನೌಕರರ ದಿವ್ಯ ನಿರ್ಲಕ್ಷ್ಯದಿಂದಾಗಿ, ’ಶ್ರೀರಾಮ ಮಹಾತ್ಮೆ’ಯ ಆ ನೀರೀಗ ಕೊಚ್ಚೆಗುಂಡಿಯಾಗಿದೆ.
ನಾಮದ ಚಿಲುಮೆಯ ಎದುರಲ್ಲೇ ಅರಣ್ಯ ಇಲಾಖೆಯ ಸಿದ್ಧ ಸಂಜೀವಿನಿ ಔಷಧಿ ಸಸ್ಯವನ ಇದೆ. ಎಲ್ಲ ಔಷಧೀಯ ಸಸ್ಯಗಳನ್ನೂ ಇಲ್ಲಿ ಬೆಳೆಸಲಾಗಿದ್ದು ಅವುಗಳ ವಿವರ ತಿಳಿಸುವ ಫಲಕಗಳನ್ನು ಜೊತೆಜೊತೆಗೆ ಪ್ರದರ್ಶಿಸಲಾಗಿದೆ. ಈ ವನದಲ್ಲಿ ಬಹುಪಾಲು ಸಸ್ಯಗಳು ಒಣಗಿಹೋಗಿವೆ. ಎಷ್ಟೋ ಸಸ್ಯಗಳು ಬೋರ್ಡ್ ಮಾತ್ರಕ್ಕೇ ಸೀಮಿತವಾಗಿವೆ, ಆ ಸಸ್ಯಗಳೇ ಇಲ್ಲ. ಪ್ರಚಾರ ಮತ್ತು ಮಾಹಿತಿಯ ಕೊರತೆಯಿಂದಾಗಿ ಈ ಸಸ್ಯವನದ ಬಗ್ಗೆ ಗೊತ್ತಿಲ್ಲದೆ ಎಷ್ಟೋ ಪ್ರವಾಸಿಗರು ಚಿಲುಮೆ ಮಾತ್ರ ನೋಡಿಕೊಂಡು ಈ ಅಪೂರ್ವ ವನವನ್ನು ನೋಡದೆಯೇ ಹೊರಟುಹೋಗುತ್ತಾರೆ.
ಗೂಳೂರು
ತುಮಕೂರಿನಿಂದ ಕೇವಲ ನಾಲ್ಕು ಕಿಲೋಮೀಟರ್ ಅಂತರದಲ್ಲಿ ಗೂಳೂರು ಮತ್ತು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಕೈದಾಳ ಇವೆ. ಭೃಗುಮಹರ್ಷಿಗಳು ಸ್ಥಾಪಿಸಿದ ಗಣಪತಿಯಿಂದಾಗಿ ಗೂಳೂರು ಪ್ರಸಿದ್ಧ. ಆದರೆ ಆ ಗಣಪತಿ ಮೂರ್ತಿಯೇ ಮಾಯವಾಗಿ ಅಲ್ಲೀಗ ಮಣ್ಣಿನ ಗಣಪತಿ ಇಡಲ್ಪಟ್ಟಿದೆ. ಭೃಗುಮಹರ್ಷಿಗಳು ಸ್ಥಾಪಿಸಿದ ಗಣಪತಿ ವಿಗ್ರಹವು ಸ್ಥಳೀಯ ರಾಜಕಾರಣಕ್ಕೆ ಬಲಿಯಾಯಿತೆಂದು ನನಗೆ ಅಲ್ಲಿನ ಮುಖಂಡರೊಬ್ಬರು ತಿಳಿಸಿದರು.
ಕೈದಾಳ
ಅಮರಶಿಲ್ಪಿ ಜಕಣಾಚಾರಿಯು ತಾನು ಕತ್ತರಿಸಿಕೊಂಡಿದ್ದ ಕೈಗಳನ್ನು ದೇವತಾನುಗ್ರಹದಿಂದ ಮರಳಿ ಪಡೆದ ಸ್ಥಳವಾದ್ದರಿಂದ ಅದು ಕೈದಳವೆಂದು ಖ್ಯಾತಿ ಹೊಂದಿತೆಂದು ಕೈದಾಳದ ಬಗ್ಗೆ ಕಥೆಯಿದೆ. ಕಥೆ ಏನೇ ಇರಲಿ, ಜಕಣಾಚಾರಿಯಿಂದ ನಿರ್ಮಾಣಗೊಂಡ ದೇವತಾಮೂರ್ತಿಗಳ ಪೈಕಿ ಅತ್ಯಂತ ಸುಂದರವಾದ ಮೂರ್ತಿ ಕೈದಾಳದ ಚೆನ್ನಕೇಶವನ ಮೂರ್ತಿಯೆಂಬುದು ನಿರ್ವಿವಾದ. ಅಂಥ ಅತಿಸುಂದರ ಶಿಲ್ಪಕಲಾಕೃತಿಯನ್ನು ಹೊಂದಿರುವ ದೇವಸ್ಥಾನವು ಪ್ರವಾಸಿಗರಿಲ್ಲದೆ ಬಿಕೋ ಅನ್ನುತ್ತಿದೆ. ಪ್ರಚಾರದ ಕೊರತೆ, ಗೂಳೂರಿನಿಂದ ಕೈದಾಳಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು, ಆ ಒಂದು ಕಿಲೋಮೀಟರ್ ಕೂಡ ಮಣ್ಣಿನ ರಸ್ತೆಯಾಗಿದ್ದು ದೂಳು ಏಳುವುದು ಮತ್ತು ದೇವಸ್ಥಾನದ ಪರಿಸರದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು ಇವು ಕೈದಾಳಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡದಿರಲು ಕಾರಣಗಳು. ನಾನು ಹೋಗಿದ್ದಾಗ ಒಂದು ಗಂಟೆಯ ಅವಧಿಯಲ್ಲಿ ಅಲ್ಲಿಗೆ ಬಂದವರು ಮೂರೇ ಜನ ಪ್ರವಾಸಿಗರು. ಅವರೂ ಒಂದೇ ಕುಟುಂಬದವರು.
ಐದು ವರ್ಷಗಳ ಕೆಳಗೆ ಸ್ಥಳೀಯನೊಬ್ಬ ಚೆನ್ನಕೇಶವ ವಿಗ್ರಹವನ್ನು ಭಗ್ನಗೊಳಿಸಿ ಇಪ್ಪತ್ತೆರಡು ಚೂರುಗಳನ್ನು ಚೆಲ್ಲಾಡಿ ಹೋಗಿದ್ದನೆಂದರೆ ಕೈದಾಳದ ಆ ದೇವಾಲಯಕ್ಕೆ ರಕ್ಷಣಾ ವ್ಯವಸ್ಥೆ ಹೇಗಿದ್ದಿರಬಹುದೆಂದು ಊಹಿಸಿ. ಈಗ ಆ ಚೂರುಗಳನ್ನು ಮೊದಲಿನಂತೆಯೇ ಜೋಡಿಸಿ ವಿಗ್ರಹವನ್ನು ಮೊದಲಿನ ಸುಸ್ಥಿಗೇ ತರಲಾಗಿದೆಯೆಂಬುದು ಬೇರೆ ವಿಷಯ. ಸರ್ಕಾರವು ದೇವಸ್ಥಾನದ ಕಡೆಗೆ ಕಣ್ಣುಹಾಯಿಸಿ ಇನ್ನಷ್ಟು ವ್ಯವಸ್ಥೆಗಳನ್ನು ಮಾಡಬೇಕಾದ ಅವಶ್ಯಕತೆಯಿದೆಯೆಂದು ದೇವಸ್ಥಾನದ ಅರ್ಚಕರಾದ ಕೆ.ವಿ.ಪಾರ್ಥಸಾರಥಿ ಅವರು ನನ್ನೊಡನೆ ಮಾತನಾಡುತ್ತ ಹೇಳಿದರು.
ಕರ್ನಾಟಕದಲ್ಲಿ ಈ ರೀತಿ ನಿರ್ಲಕ್ಷಕ್ಕೆ ಒಳಗಾದ ಅನೇಕ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಿವೆ. ಅಲ್ಲೆಲ್ಲ ಸಂಚರಿಸಿ ನಾನು ಲಾಗಾಯ್ತಿನಿಂದಲೂ ಪತ್ರಿಕೆಗಳಿಗೆ ಬರೆಯುತ್ತಲೇ ಇದ್ದೇನೆ. ಆದರೆ ಪರಿಣಾಮ ಮಾತ್ರ ಆಶಾದಾಯಕವಾಗಿಲ್ಲ. ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಆದ್ಯತೆಗಳೇ ಬೇರೆ. ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಮಹತ್ತ್ವದ ಸ್ಥಳಗಳಾಗಲೀ, ಕಲೆ, ಸಂಸ್ಕೃತಿಗಳ ಕುರುಹುಗಳಾಗಲೀ ನಮ್ಮ ನೇತಾರರಿಗೆ ಎಲ್ಲಿ ಬೇಕಾಗಿವೆ?