ನಿಷ್ಪಾಪಿ ಸಸ್ಯಗಳು (ಭಾಗ ೧) - ಪಾರಿಜಾತ ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೧) - ಪಾರಿಜಾತ ಗಿಡ

ನಮ್ಮ ಸುತ್ತಮುತ್ತ ಪರಿಸರದಲ್ಲಿದ್ದ ಅದೆಷ್ಟೋ ಗಿಡ ಮರಗಳು ಇಂದು ಅಳಿವಿನಂಚಿನಲ್ಲಿದೆ. ಬಹು ಬಗೆಯ ಸಸ್ಯ ಸಂಪತ್ತುಗಳು ನಮಗೆ ಪರಿಚಯವಿಲ್ಲದೆ ಮೂಲೆಗುಂಪಾಗುತ್ತಿದೆ. ಇದ್ದ ಮರಗಳ ನೋಡಿ ಅನುಭವಿಸಿ ನಿಷ್ಪಾಪಿ ಸಸ್ಯಗಳ ಪರಿಚಯ ಸರಣಿಯಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುವ ಆಶಯ ನನ್ನದು.... ಓದಿ ಪ್ರೋತ್ಸಾಹಿಸಿ.... 

ಪಾರಿಜಾತ ಗಿಡ: ಧಾರಾಕಾರವಾಗಿ ಮಳೆ ಸುರೀತಾ ಇರಬೇಕಾದ ಕಾಲವಿದು ಅಲ್ವಾ.. ಭೂದೇವಿ ಸಸ್ಯಶಾಮಲೆಯಾಗುವ ಋತುವಿದು. ಹ್ಹಾಂ ಹೌದು, ಇದು ಮಳೆಗಾಲ. ವರ್ಷಧಾರೆಗೊಡ್ಡಿಕೊಂಡ ತರುಲತೆಗಳ ಹೊಸ ತಳಿರ, ಎಳೆ ತಳಿರ ಹಸುರ ಕಾಣುವುದೇ ಒಂದು ಚಂದ. ಧರೆಗಪ್ಪಳಿಸುವ ಮಳೆಯನ್ನು ಕಣ್ತುಂಬಾ ತುಂಬಿಕೊಳ್ಳುತ್ತಿರುವಾಗ ಸಂಜೆ ಹೊತ್ತಿಗೆ ಅರಳುವ ಹಲವಾರು ಜಾತಿಯ ಪುಷ್ಪಗಳ ಘಮ ನಮ್ಮ ಸುತ್ತಲೂ ಅಡರುತ್ತದೆ ಅಲ್ವಾ..

ನಿಜ. ನಮ್ಮ ಅಂಗಳದಲ್ಲಿ ಮುಂಜಾನೆ ಹರಡಿಕೊಳ್ಳುವ ಪಾರಿಜಾತ ಪುಷ್ಪವೂ ಕೂಡ ಹಿಂದಿನ ದಿನದ ಮುಸ್ಸಂಜೆಗೇ ನಗಲಾರಂಭಿಸುತ್ತದೆ. ಬಿಳೀ ಪಕಳೆಗಳಿರುವ ಈ ಹೂವಿನ ದಂಟು ಹವಳವನ್ನೇ ಪೋಣಿಸಿದಂತಿರುತ್ತದೆ. ಗಾಢ ಸುಗಂಧವನ್ನು ಪೂಸಿಕೊಂಡ ಈ ಪಾರಿಜಾತದ ವೈಜ್ಞಾನಿಕ ಹೆಸರು ನಿಕ್ಟಾಂಥಸ್ ಆರ್ಬೊರ್ ಟ್ರಿಸ್ಟಿಸ್ (Nyctanthes arbor tristis). ಸಸ್ಯದ ಕುಟುಂಬ ಒಲಿಯೇಸಿ (Oleaceae).

ಸಂಜೆ ಪಾರಿಜಾತ, ಹರಸಿಂಗಾರ್, ಶೇಫಾಲಿಕಾ ಎಂದೂ ಕನ್ನಡದಲ್ಲಿ ಕರೆಸಿಕೊಳ್ಳುವ ಈ ಗಿಡವು ಪುರಾಣದ ಕಥೆ ಕಾವ್ಯಗಳಲ್ಲೂ ಗುರುತಿಸಲ್ಪಟ್ಟಿದೆ. ದೊಡ್ಡ ಪೊದೆಯಂತೆ ಅಥವಾ ಸಣ್ಣ ಗಾತ್ರದ ಮರದಂತೆಯೂ ಬೆಳೆಯಬಲ್ಲ ಈ ಸಸ್ಯದ ಒರಟಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ರೆಂಬೆ ಕೊಂಬೆಗಳ ತುದಿ ಹಾಗೂ ಎಲೆಗಳ ಕಂಕುಳಲ್ಲಿ ಮೊಗ್ಗುಗಳು ಮೂಡುತ್ತವೆ.

ಕೆಮ್ಮು ದಮ್ಮು, ಚರ್ಮವ್ಯಾಧಿ, ಜ್ವರ, ಹುಳುಕಡ್ಡಿ, ಕೂದಲುದುರುವಿಕೆ ಇತ್ಯಾದಿ ಸಮಸ್ಯೆ ಗಳ ಉಪಶಮನಕ್ಕಾಗಿಯೂ ಈ ಗಿಡವನ್ನು ಬಳಸುತ್ತಾರೆ. ಅದರ ಮೊಗ್ಗನ್ನು ಕಲಾತ್ಮಕವಾಗಿ ಕಟ್ಟಿ ಆನಂದ ಪಡುವವರಿದ್ದಾರೆ. ಹಿಂದಿನಿಂದಲೂ ಬಂದ ಪ್ರತೀತಿಯಂತೆ ಒಂದು ಮನೆಯಲ್ಲಿ ನೆಟ್ಟ ಪಾರಿಜಾತ ಗಿಡದ ಹೂವುಗಳು ನೆರೆಯ ಮನೆಯಂಗಳಕ್ಕೇ ಬೀಳುತ್ತದಂತೆ. ಪಾರಿಜಾತದ ಗೆಲ್ಲುಗಳು ಅಂಕುಡೊಂಕಾಗಿ ಬೆಳೆಯುವುದರಿಂದ ಈ ಮಾತು ಹುಟ್ಟಿರಲೂ ಬಹುದೆನ್ನಿಸುತ್ತದೆ.

ಪಾರಿಜಾತದ ಗೆಲ್ಲನ್ನು ನೆಟ್ಟೂ ಹೊಸ ಗಿಡವನ್ನು ಪಡೆಯಬಹುದು. ಬೀಜವಾಗುವ ಪಾರಿಜಾತದ ಗಿಡಗಳೂ ದೊರಕುತ್ತವೆ. ನೀವೂ ನಿಮ್ಮಂಗಳದಲ್ಲಿ ಪುಟ್ಟ ಗೆಲ್ಲೊಂದನ್ನು ಊರಿದರೆ ಇರುಳ ವಾತಾವರಣ ಹಿತಕರವಾಗಿರುತ್ತದೆ. ಅದಕ್ಕೊಂದು ಮಲ್ಲಿಗೆಯ ಬಳ್ಳಿಯನ್ನು ಹಬ್ಬಿಸಿದಿರೆಂದರೆ ಸ್ವರ್ಗಕ್ಕೆ ಮೂರೇ ಗೇಣು. ಹಳೆಯ ಮನೆಗಳನ್ನು ನೀವು ನೋಡಿದಿರಾದರೆ ಬಾವಿಕಟ್ಟೆಯ ಸಮೀಪದಲ್ಲಿ ಪಾರಿಜಾತದ ಮರವೊಂದು ಇದ್ದು ಮಲ್ಲಿಗೆಯ ಬಳ್ಳಿ ಸುತ್ತಿಕೊಂಡು ಗತವೈಭವಕ್ಕೆ ಸಾಕ್ಷಿಯಾಗಿರುವುದುಂಟು. ನೀವೂ ನಿಷ್ಪಾಪಿ ಪಾರಿಜಾತದ ಗಿಡ ಸಿಕ್ಕರೆ ಗಮನಿಸುವಿರಲ್ವಾ.. ತುಂಡು ಗೆಲ್ಲು ತಂದು ನೆಟ್ಟು ಪೋಷಿಸುವ ಪ್ರಯತ್ನ ಮಾಡ್ತೀರಲ್ವಾ...

-ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ