ನಿಷ್ಪಾಪಿ ಸಸ್ಯಗಳು (ಭಾಗ ೨೦) - ಬೆಳ್ಳಟ್ಟೆ ಗಿಡ
ಸರ್ವೇ ಸಾಧಾರಣವಾಗಿ ನೀವು ದಾರಿಯ ಇಕ್ಕೆಲಗಳಲ್ಲಿ ಸಸ್ಯ ಸಂಪತ್ತು ಕೂಡ ಅಲಂಕಾರಗೊಂಡಿರುವುದನ್ನು ಖಂಡಿತವಾಗಿಯೂ ಕಾಣುತ್ತೀರಿ. ಹಸಿರು ಸಸ್ಯರಾಶಿಯ ನಡುವೆ ಪ್ರಕೃತಿ ಮಾತೆ ಹಣತೆಗಳಂತೆ ಹಚ್ಚಿಟ್ಟ ಶ್ವೇತ ಪತ್ರಗಳನ್ನು ಕಾಣುತ್ತಿರುವಿರಿ ತಾನೇ...? ಕೆನ್ನೆಗೆ ಕಿವಿಯಾಭರಣ ಅಂದ ನೀಡಿದಂತೆ ಈ ಬಿಳೀ ಎಲೆಗಳ ನಡುವೆ ಅರಶಿನ ವರ್ಣದ ನಕ್ಷತ್ರದಂತಹ ಪುಟಾಣಿ ಹೂಗಳ ನಾಟ್ಯ ನವಿಲನ್ನೇ ನಾಚಿಸುವಂತಿರುತ್ತದೆ.
ಈ ಚಿತ್ತಾರದ ಚೆಲುವಿನ ಮಿಂಚು ಚೆಲ್ಲುವ ಸಸ್ಯವೇ ಬೆಳ್ಳಟ್ಟೆ ಅಥವಾ ಬೆಳ್ಳಂಟಿ. ಪಶ್ಚಿಮ ಘಟ್ಟಗಳ ಬೆಟ್ಟ ಸಾಲಿನಲ್ಲಿ ಮಾತ್ರವಲ್ಲದೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಕರಾವಳಿ ಭಾಗಗಳಲ್ಲಿ ತಾನಾಗಿ ಬೆಳೆಯುವ ಈ ಸಸ್ಯದಲ್ಲಿ ಆಶಾಢ, ಶ್ರಾವಣ ಮಾಸಗಳಲ್ಲಿ ಹಸುರೆಲೆಗಳ ನಡುವೆ ಬಿಳಿ ಬಿಳಿಯಾಗಿ ಹೊಳೆಯುವ ಬಣ್ಣ ಮಾರ್ಪಟ್ಟ ಎಲೆಗಳು ಗೋಚರವಾಗತೊಡಗುತ್ತವೆ.
ಕಾಡಿನ ಅಲಂಕಾರವಾದ ಈ ಬೆಳ್ಳಟ್ಟೆಗೆ Mussaenda frondosa ಎಂಬ ವೈಜ್ಞಾನಿಕ ಹೆಸರಿದ್ದು Rubiaceae ಕುಟುಂಬಕ್ಕೆ ಸೇರಿದೆ. ಹೆಚ್ಚು ನೀರು, ಆರ್ದ್ರತೆ ಇರುವ ಬೆಟ್ಟ, ಗುಡ್ಡ, ತೋಡಿನ ಬದಿಗಳಲ್ಲಿ ಹುಲುಸಾಗಿ ಬೆಳೆಯುವ ಈ ಸಸ್ಯ ಪೊದೆಯಾಗಿ ಬೆಳೆಯುತ್ತದೆ ಮಾತ್ರವಲ್ಲದೆ ಬಿಸಿಲ ಕೊರತೆಯಾದಾಗ ಮರಗಳನ್ನು ಬಳಸಿ ಬಳ್ಳಿಯಂತೆಯೂ ಮೇಲೇರಬಲ್ಲದು. ಇದನ್ನು ಗುರುತಿಸಲು ಈ ಬಿಳೀ ಎಲೆಗಳು ಮೂಡಿದಾಗ ತುಂಬಾ ಸುಲಭ. ಬೆಳ್ಳಟ್ಟೆ ಒಂದು ಜಾದೂಗಾರ ಎಲೆ. ಪ್ರಕೃತಿ ಈ ಸಸ್ಯದ ಸಂತಾನಾಭಿವೃದ್ಧಿ ಗೆ ಈ ತಾತ್ಕಾಲಿಕ ಬಿಳಿ ಎಲೆಗಳ ಕೊಡುಗೆ ನೀಡಿ ಸಹಕರಿಸಿದೆ. ಎಲೆಗೂ ಸಂತಾನಾಭಿವೃದ್ಧಿ ಗೂ ಏನು ಸಂಬಂಧ ಗೊತ್ತೆ...? ಅದೇ ವಿಸ್ಮಯ ಗೊತ್ತಾ...! ದೂರದಿಂದ ಹೂಗಳಂತೆ ಆಕರ್ಷಕವಾಗಿ ಕಾಣಿಸುವ ಈ ಬಿಳಿ ಎಲೆಗಳು ಕೀಟಗಳನ್ನು ಆಕರ್ಷಿಸುತ್ತವೆ. ಮಕರಂದ ಬಯಸಿ ಹೂಗಳೆಂದು ಭ್ರಮಿಸಿ ಬಂದ ಚಿಟ್ಟೆಗಳು ಇನ್ನಿತರ ಕೀಟಗಳು ಬಿಳೀ ಎಲೆಗಳ ನಡುವೆ ಪುಟ್ಟದಾಗಿರುವ ಹೂವನ್ನು ಕಂಡು ಕೋಪಗೊಳ್ಳುತ್ತವೆ. ಬಿಳೀ ಎಲೆಗಳನ್ನು ಹರಿದುಹಾಕುವ ಜೊತೆಗೆ ಸಿಕ್ಕಷ್ಟು ಸಾಕೆಂದು ಹೂಗಳ ಮಕರಂದವನ್ನು ಹೀರಿ ಹಾರುತ್ತವೆ. ನೀವು ಬಿಳೀ ಎಲೆಗಳನ್ನು ಹತ್ತಿರದಿಂದ ಗಮನಿಸಿದಿರಾದರೆ ಹೆಚ್ಚಿನೆಲ್ಲಾ ಎಲೆಗಳು ಹರಿದಿರುತ್ತವೆ. ಬರೇ ಹಸಿರೆಲೆಗಳ ನಡುವೆ ಈ ಪುಟಾಣಿ ಹೂ ಕೀಟಗಳನ್ನು ಆಕರ್ಷಿಸಲಾರದು ಎಂದು ತಿಳಿದ ಸಸ್ಯವೇ ಹೂ ಬಿಡುವ ಕಾಲದಲ್ಲಿ ಇಂತಹ ವೇಷ ಹಾಕಿ ಸಜ್ಜಾಗಿರುವುದು ವಿಶೇಷವಲ್ಲವೆ...? ಈ ಗಿಡದಲ್ಲಿ ಅರಳುವ ಹೂ ತಿಳಿ ಕೇಸರಿಯಿಂದ ಗಾಢ ಕೇಸರಿ ಹಾಗೂ ಕೊನೆಗೆ ಕೆಂಪಾಗಿ ಬದಲಾಗುತ್ತದೆ. ಹಸಿರಾದ ಕಾಯಿಗಳು ಪಕ್ವವಾದಾಗ ಕಪ್ಪು ಬಣ್ಣವಾಗುತ್ತದೆ.
ದನಕರುಗಳಿಗೆ ಬಹಳ ಪ್ರೀತಿಯ ಸೊಪ್ಪು ಬೆಳ್ಳಟ್ಟೆಯದು. ಹಾಲು ಹಾಗೂ ಬೆಣ್ಣೆ ಹೆಚ್ಚಾಗಲು ಈ ಸೊಪ್ಪನ್ನು ರೈತರು ಹುಡುಕಿ ತಂದು ತಿನಿಸುತ್ತಾರೆ. ಸಂಸ್ಕೃತ ದಲ್ಲಿ ಶ್ರೀ ಪರ್ಣಿ ಎಂದು ಕರೆಯಲ್ಪಡುವ ಈ ಸಸ್ಯ ಆಗಸ್ಟ್ ತಿಂಗಳಿನಲ್ಲಿ ಹಸಿರು ಎಲೆಗಳ ಕೊಂಬೆಗಳ ತುದಿಯಲ್ಲಿ ಬಿಳಿಯ ಚಿಗುರುಗಳನ್ನು ಹೊಮ್ಮಿಸಿ ಮಧ್ಯದಲ್ಲಿ ಕೇಸರಿ ಹೂಗಳ ಜೋಡಿಸಿ ಭಾರತ ಮಾತೆಗೆ ನಮಿಸಿ ನಲಿದಾಡಿದಂತೆ ಗೋಚರವಾಗುತ್ತದೆ.
ಹಿಂದೆಲ್ಲ ನಮ್ಮ ಹಿರಿಯರಿಗೆ ತಲೆಗೂದಲ ಆರೈಕೆಗೆ ಶಾಂಪೂ ಇರಲಿಲ್ಲ. ಅವರಿಗೂ ತಮ್ಮ ತಲೆಕೂದಲು ಸೊಂಪಾಗಿ ಬೆಳೆಯಬೇಕು, ಹೊಳಪಿರಬೇಕು, ಗಾಳಿಯಲ್ಲಿ ಬಿಡಿಬಿಡಿಯಾಗಿ ಜೀಕುವಂತಿರಬೇಕೆಂಬ ಆಸೆ ಇದ್ದೇ ಇತ್ತು. ಸೌಂದರ್ಯ ಪ್ರಜ್ಞೆ ಎಂಬುವುದು ಇಂದು ನಿನ್ನೆಯದಲ್ಲವಲ್ಲ.... ಅವರು ಕೂದಲು ಸುಂದರವಾಗಿ ಕಾಣಲು ಈ ಬೆಳ್ಳಟ್ಟೆ ಸೊಪ್ಪನ್ನು ಸ್ವಲ್ಪ ಬಾಡಿಸಿ ಅಗತ್ಯವಿದ್ದಷ್ಟು ನೀರು ಹಾಕಿ ನೆನೆಹಾಕಿ ಬಳಿಕ ಕೈಯಿಂದ ಕಿವುಚಿ ಚೆನ್ನಾಗಿ ತಲೆ ತೊಳೆಯತ್ತಿದ್ದರು. ಕೂದಲು ನಯವಾಗಿ ಒತ್ತಾಗಿ ಬೆಳೆಯುವುದೇ ಅಲ್ಲದೆ ಕಣ್ಣಿಗೂ ತಂಪು, ಪಿತ್ತಕ್ಕೆ ಉತ್ತಮ, ಗಾಢ ನಿದ್ರೆಗೂ ಒತ್ತುಕೊಡುತ್ತದೆ. ಮಾತ್ರವಲ್ಲದೆ ಕೂದಲಿಗೆ ಉತ್ತಮ ಕಂಡೀಷನರ್ ಆಗಿ ಕಾರ್ಯ ನಿರ್ವಹಿಸುತ್ತಾ ಪ್ರಕೃತಿಯ ಕೊಡುಗೆಯಾಗಿ ಶಾಂಪೂವಿನಂತೆ ವರ್ತಿಸುತ್ತದೆ.
ಸುದಾಮನ ಚರಿತ್ರೆಯಲ್ಲಿ, ಆತ ಲಕ್ಷ್ಮೀ ದೇವಿಗಾಗಿ ಈ ಗಿಡದ ಎಲೆಗಳನ್ನೇ ಅರ್ಪಿಸುವ ಕತೆ ಇದೆ. ಆದ್ದರಿಂದಲೇ ತುಳಸಿ, ಬಿಲ್ವ, ಶಮೀ ಪತ್ರೆಗಳಂತೆ ಈ ಶ್ವೇತ ಪತ್ರೆಯೂ ಧಾರ್ಮಿಕ ಕಾರ್ಯಗಳಲ್ಲಿ ಮಹತ್ವ ಪಡೆದಿದೆ. ಇದರ ಬಿಳೀ ಎಲೆಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಸಕ್ಕರೆಯ ಪಾಕದಲ್ಲಿ ಅದ್ದಿದಾಗ ದೊರಕುವ ಬಹು ರುಚಿಯ ಕಜ್ಜಾಯವು ಗಣಪನಿಗೆ ವಿಶೇಷ ನೈವೇದ್ಯವಾಗಿದೆ. ಗೌರೀಪೂಜೆ, ಗಣಪನ ಪೂಜೆ, ಅಷ್ಟಮಿ ಪೂಜೆ, ಲಕ್ಷ್ಮೀ ಪೂಜೆ, ಸತ್ಯನಾರಾಯಣ ಪೂಜೆಗಳಲ್ಲಿ ಬೆಳ್ಳಟ್ಟೆಯ ಬಿಳಿ ಎಲೆಗಳನ್ನು ಬಳಸುವರು. ಈ ಸಸ್ಯದ ಎಲೆಯನ್ನು ಹಿಸುಕಿದ ನೀರನ್ನು ತಂಪಿಗೆಂದು ಸೇವಿಸುತ್ತಾರೆ. ಬೋಂಡಾ, ತಂಬುಳಿ, ಪತ್ರೊಡೆಗಳನ್ನು ಮಾಡುತ್ತಾರೆ. ತಾಯಿ ಕಪ್ಪು, ಮಗಳು ಬೆಳ್ಳಿ , ಮಗಳ ಮಗಳು ಚಿನ್ನದಂತ ಗುಬ್ಬಿ (ಹೊನ್ನ ಗೊಂಬೆ) ಎಂದು ಈ ಸಸ್ಯದ ಬಗ್ಗೆ ಬಹು ಜನಪ್ರಿಯ ಒಗಟಿದೆ.
ಈ ನಿಷ್ಪಾಪಿ ಸಸ್ಯವು ಹಲವಾರು ರೋಗಗಳ ನಿವಾರಣೆಗಾಗಿಯೂ ಮನುಷ್ಯರಿಗೆ ಸಹಾಯಕವಾಗಿದೆ. ಇದರ ಪುಟಾಣಿ ಹೂಗಳು ಸರ್ಪಸುತ್ತಿಗೆ ರಾಮಬಾಣವಾದರೆ ಕಾಂಡದ ಕಷಾಯವು ಮೂತ್ರಪಿಂಡದ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಹಳದಿ ರೋಗ, ಕುಷ್ಠ, ಬಾಯಿಹುಣ್ಣು, ಕಫ, ರಕ್ತಹೀನತೆಗೆ ಔಷಧಿಯಾಗಿ ಬಳಕೆಯಲ್ಲಿದೆ. ನಾಯಿ ಬೆಕ್ಕುಗಳ ಕೆಲ ರೋಗಗಳಿಗೂ ಹಿರಿಯರು ಈ ಸಸ್ಯವನ್ನು ಔಷಧವಾಗಿ ಬಳಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಇದನ್ನು ಅಲಂಕಾರಿಕ ಸಸ್ಯವಾಗಿ ದೇಶ ವಿದೇಶಗಳಲ್ಲಿ ಬೆಳೆಯುತ್ತಿರುವುದನ್ನು ಕಾಣುತ್ತೇವೆ. ಆದರೂ ಮಲೆನಾಡಿನ ಸಸ್ಯ ಸಂಪತ್ತು ಸೊರಗುತ್ತಿರುವಾಗ ಬೆಳ್ಳಟ್ಟೆಯನ್ನು ಉಳಿಸಿಕೊಳ್ಳಬೇಕಾದುದು ಅನಿವಾರ್ಯವೇ ಸರಿ.
ಚಿತ್ರ- ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು