ನಿಷ್ಪಾಪಿ ಸಸ್ಯಗಳು (ಭಾಗ ೬) - ಅಗ್ನಿಶಿಖೆ
ಮಳೆಯೆಂದಿಗೂ ನಮಗೆ ಕಿರಿಕಿರಿಯೆನಿಸಬಾರದು. ಪ್ರಕೃತಿಯಲ್ಲಿ ಹಸಿರೆಂಬ ಜ್ಯೋತಿ ಉರಿಯಬೇಕಾದರೆ ಮಳೆಯೆಂಬ ತೈಲವನ್ನು ಬಾನು ಎರೆಯಲೇ ಬೇಕು. ಸೊಬಗಿನ ವೃಕ್ಷರಾಶಿಯ, ತರು ಲತೆಗಳ ನಡುವೆ ಹಂದರ ಕುಸಿಯದಂತೆ ಬಿಳಲುಗಂಬಗಳ ಮೇಲೇರಿ ಬೆಂಕಿಯ ಜ್ವಾಲೆಯಂತೆ ಆಕರ್ಷಕವಾಗಿ ಅರಳಿ ಕಣ್ಮನ ಸೆಳೆಯುವ ರೂಪಸಿಯೇ ಅಗ್ನಿಶಿಖೆ ಎಂಬ ವಿಷಕಾರಿ ಸುಂದರಿ.
ಕಾಳಿಂಗದ ವಿಷಕ್ಕೂ ಒಂದೊಮ್ಮೆ ಪ್ರತಿವಿಷವಾಗಬಲ್ಲ ಸ್ವಲ್ಪ ಹೆಚ್ಚು ಸೇವಿಸಿದರೆ ಉಸಿರಾಟಕ್ಕೇ ಆತಂಕವೊಡ್ಡಬಲ್ಲಂತಹ ಈ ಸಸ್ಯ ವನ್ನು ಕರಡಿಕಣ್ಣಿನ ಗೆಡ್ಡೆ, ಅಕ್ಕತಂಗಿ ಬಳ್ಳಿ, ಲಾಂಗುಲಿಕ ಎಂದೂ ಕನ್ನಡದಲ್ಲಿ ಕರೆಯುತ್ತಾರೆ.
ಗ್ಲೋರಿಯೋಸ ಸುಪರ್ಬ (Gloriosa superba) ಎಂದು ವೈಜ್ಞಾನಿಕ ಹೆಸರಿರುವ ಈ ಸಸ್ಯ ಲಿಲಿಯೇಸಿ (Liliaceae) ಕುಟುಂಬಕ್ಕೆ ಸೇರಿದೆ. ಕಳ್ಳಿ ಕುರುಚಲು, ಬೇಸಿಗೆಯಲ್ಲಿ ಎಲೆಯುದುರುವ ನಿತ್ಯಹರಿದ್ವರ್ಣ ಹಾಗೂ ಉಷ್ಣವಲಯದ ಸಸ್ಯಾವರಣದಲ್ಲಿ ಬೆಳೆಯುವ ಈ ಅಗ್ನಿ ಶಿಖ ಭಾದ್ರಪದ ಮಾಸದಲ್ಲಿ ಕಾಣಿಸುತ್ತದೆ. ಗಣೇಶಚತುರ್ಥಿಯ ಸಂದರ್ಭದಲ್ಲಿ ಇದರ ಹೂಗಳು ಎಲ್ಲೆಡೆಯೂ ಲಭ್ಯವಿದ್ದು ಗೌರೀ ಹಬ್ಬದಲ್ಲಿ ಶ್ರೇಷ್ಠ ಪುಷ್ಪವೆಂದೆನಿಸಿದೆ. ಆದ್ದರಿಂದಲೇ ಇದಕ್ಕೆ ಗೌರೀ ಹೂವೆಂದೂ ಕರೆಯುತ್ತಾರೆ.
ದೀರ್ಘಕಾಲಿಕ ಸಸ್ಯವಾದ ಅಗ್ನಿಶಿಖ ಕರ್ನಾಟಕದ ಪಶ್ಚಿಮಘಟ್ಟ ಗಳ ಕಾಡುಗಳಲ್ಲಿ ಸರ್ವೇಸಾಮಾನ್ಯ ವಾಗಿ ಬೆಳೆಯುವ ಸಸ್ಯವಾಗಿದೆ. ಮಳೆನೀರು ಬಿದ್ದೊಡನೆ ಗಡ್ಡೆಗಳು ಮೂರ್ನಾಲ್ಕು ಟಿಸಿಲುಗಳಾಗಿ ಹಬ್ಬತೊಡಗುತ್ತವೆ. ತೊಟ್ಟುಗಳೇ ಇರದ ಭರ್ಚಿಯಂತಹ ಎರಡು ಮೂರಿಂಚು ಉದ್ದದ ಎಲೆಗಳ ಮೊಣಚಾದ ತುದಿಗಳು ಸುರುಳಿಯಾಗಿದ್ದು ಹಂದರವೇರಲು ಸಹಾಯಕವಾಗಿರುತ್ತವೆ. ಎಲೆಗಳ ಬುಡಗಳಿಂದ ಉದ್ದನೆಯ ತೊಟ್ಟಿನಲ್ಲಿ ತಿಳಿಹಸಿರಾದ ಮೊಗ್ಗುಗಳು ಕಾಣಿಸಿಕೊಳ್ಳುತ್ತದೆ. ತಿರುಚಿದಂತಿರುವ 6 ಎಸಳುಗಳು ಅರಳುತ್ತಿದ್ದಂತೆ ಎಸಳುಗಳ ಕೆಳಭಾಗ ಬಂಗಾರದಂತೆ ಹಳದಿಯಾಗಿದ್ದು ಎಸಳಿನ ಮೇಲರ್ಧವು ನಸುಗೆಂಪಾಗಿ ಕಂಗೊಳಿಸುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಸಂಪೂರ್ಣ ಅರಳಿದ ಹೂವಿನ ಬುಡ ಕೇಸರಿಯಾಗಿ ಮೇಲ್ಭಾಗ ಗಾಢ ಕೆಂಪಾಗುತ್ತದೆ. ಆರೆಂಟು ದಿನ ಇರುವ ಈ ಹೂವಿನ ಬಣ್ಣ ಕೊನೆಕೊನೆಗೆ ಸಂಪೂರ್ಣವಾಗಿ ಗಾಢ ಕೆಂಪಾಗಿ ಬದಲಾಗುತ್ತದೆ. ಹೂವಿನ ಹೊರಸುತ್ತಿನ ಪುಷ್ಪಪಾತ್ರಾ ಪತ್ರಕಗಳು (Calyx) ಮತ್ತು ಒಳಸುತ್ತಿನ ಪುಷ್ಪದಳಗಳು ಒಂದೇ ರೂಪ ಮತ್ತು ಬಣ್ಣ ಹೊಂದಿರುತ್ತವೆ. ಆದುದರಿಂದ ಅವುಗಳನ್ನು ಪೆರಿಯಾಂತ್ ಗಳೆನ್ನುತ್ತಾರೆ. ಈ ಪೆರಿಯಾಂತ್ ತೊಟ್ಟಿನ ಕಡೆ ಬಾಗಿದ್ದರೆ ಕೇಸರಗಳು ವಿರುದ್ಧ ದಿಕ್ಕಿನೆಡೆ ಬಾಗಿರುತ್ತದೆ. ಈ ಅಗ್ನಿಶಿಖ ಚಿಟ್ಟೆಯಂತೆ ಕಾಣುವ ಹೂವು, ಪುಷ್ಪರಾಶಿಗೊಂದು ವಿಶಿಷ್ಟ ರೀತಿಯ ಕೊಡುಗೆ.
20 ಅಡಿಗಳವರೆಗೆ ಏರಬಲ್ಲ ಈ ಬಳ್ಳಿಯ ಗೆಡ್ಡೆ, ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಏಳು ಮಧ್ಯಮ ತರದ ವಿಷಯುಕ್ತ ಗಡ್ಡೆಗಳಲ್ಲೊಂದು. ಕುಷ್ಟ, ವ್ರಣ, ಕ್ರಿಮಿ, ಅಸ್ತಮಾ, ಉರಿಯೂತ, ಪರಾವಲಂಬಿ ಚರ್ಮರೋಗ, ಜ್ವರನಿವಾರಕ, ಪ್ರತಿವಿಷವಾಗಿಯಲ್ಲದೆ ಹಲವಾರು ರೋಗಗಳಿಗೆ ಔಷಧಿಯಾಗಿದೆ. ಎಲೆ ಅಂಗಾಂಶದಿಂದಲೂ ಇಂದು ಬೆಳೆಸಲ್ಪಡುವ ಈ ಬಳ್ಳಿಯನ್ನು ಅಲಂಕಾರಕ್ಕಾಗಿಯೂ ಬೆಳೆಸುತ್ತಾರೆ.
ಬಹಳ ಮೃದುವಾದ ಈ ಬಳ್ಳಿಯನ್ನು ಪರ್ಯಾಯವಾಗಿ ಗ್ಲೋರಿಯಸ್ ಲಿಲ್ಲಿ ಎನ್ನುತ್ತಾರೆ. ತೆಲುಗಿನಲ್ಲಿ ಗೌರಮ್ಮ ಪೂವು, ಕಾಲಿಗೆ ಚುಚ್ವಿದ ಮುಳ್ಳು ಹೊರಹೋಗಲು ಸಹಾಯಕವಾದ್ದರಿಂದ ಹಿಂದಿಯಲ್ಲಿ ಕಲಿಹಾರಿ ಎಂಬ ಹೆಸರಿದೆ. ಇದು ಜಿಂಬಾಬ್ವೆಯ ರಾಷ್ಟ್ರೀಯ ಪುಷ್ಪವಾಗಿ ಗೌರವ ಪಡೆದ ಪುಷ್ಪವಾಗಿದೆ. ತಮಿಳುನಾಡಿನಲ್ಲಿದು ರಾಜ್ಯ ಪುಷ್ಪವಾಗಿದೆ. ತಾಯಿಗೆ ಹೊಡೆದವನ ಕೈ ಈ ಹೂವಿನ ಎಸಳಿನಂತೆ ವಕ್ರಗತಿಗೀಡಾಗುತ್ತದೆ ಎಂಬ ನಂಬಿಕೆ ತುಳುನಾಡಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಬಹು ವಿರಳವಾಗಿ ಕಾಣಸಿಗುವ ಈ ಅಗ್ನಿಶಿಖವನ್ನು ನಾವು ಸಂರಕ್ಷಿಸುವ ಅಗತ್ಯವಿದೆ. ಕಾಡು ನಾಶವಾಗುತ್ತಾ ಸಾಗುವಾಗ ಇಂತಹ ನಿಷ್ಪಾಪಿ ಸಸ್ಯಗಳೂ ಕಣ್ಮರೆಯಾಗುತ್ತವೆ. ಸೃಷ್ಟಿಯ ಕೊಡುಗೆಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕಲ್ಲವೇ.....? ಏನಂತೀರಾ… ಮುಂದಿನ ವಾರ ಮತ್ತೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ.
ಚಿತ್ರ -ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ