ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’

ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’

 

(೭೨)

೧೯೮೮, ಚಿತ್ರಕಲಾ ಪರಿಷತ್ತು

 ಹಸಿವೆಯಿಂದ ಆ ರಾತ್ರಿ ಪರಿಷತ್ತಿನ ಕೆಂಟೀನಿನಲ್ಲಿ ತರುಣ್ ಚಂಗಪ್ಪನ ತಂತ್ರಗಾರಿಕೆಯಿಂದ ತಿನ್ನಲು ಕರ್ನಾಟಕದಲ್ಲಿ ತಯಾರಿಸಲಾದ ಕೇರಳ ಚಿಪ್ಸು, ಖಾರಕಡಿಲೆಕಾಯಿ ಬೀಜ ಮುಂತಾದವುಗಳ ಪ್ಲಾಸ್ಟಿಕ್ ಚೀಲಗಳು ಹಾಗೂ ಥಮ್ಸ್‌ಅಪ್ ಬಾಟಲಿಗಳನ್ನು ಸುಮಾರು ಖಾಲಿ ಮಾಡಿದ್ದಾಗಲೂ, ಹುಲಿಯನ್ನು ತೋಳವೆಂದು ಕೊಂದ ಬಿರುದಾಂಕಿತ ವಾಚ್‌ಮನ್ ದೊಡ್ಡಯ್ಯನ ಗಮನವನ್ನು ಕೆಂಟೀನಿನಿಂದ ದೂರ ಸರಿಸಲು ಒಂದಿಡೀ ವಿದ್ಯಾರ್ಥಿ ತಂಡದ ಝಡ್ ಕೆಟಗರಿಯು ಯತ್ನಿಸುತ್ತಿದ್ದಾಗಲೂ ವೀರಾನಿಗೆ ಒಂದು ಚಿಂತೆ ಹತ್ತಿಕೊಂಡಿತ್ತು. ಚಿಂತೆ ಎಲ್ಲರಿಗೂ ಇದ್ದದ್ದೇ ಆದರೂ ಆಗ ವೀರಾನಿಗೆ ಸ್ವಲ್ಪ ಹೆಚ್ಚೇ ಹತ್ತಿಕೊಂಡಿತ್ತು. ಮೊದಲ ಚಿಪ್ಸ್ ಪೊಟ್ಟಣವು ಒಡೆದು ಕೆಂಟೀನಿನ ಒಳಗೇ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದು ನಾಳೆ ’ಚಿಪ್ಸ್-ಹ್ಯಾಂಡಾಗಿ’ (’ರೆಡ್-ಹ್ಯಾಂಡಾಗಿ’ ಎಂಬ ಪದಕ್ಕೆ ಸಂವಾದಿಯಾಗಿ) ಅಂದು ರಾತ್ರಿ ಅಲ್ಲಿ ತಂಗಿದ್ದ ವಿದ್ಯಾರ್ಥಿಗಳೆಲ್ಲರನ್ನೂ ಮೇಷ್ಟ್ರ ಕೈಗೆ, ಕೆಂಟೀನ್ ಪಾಂಡು ಮೂಲಕ ಸಿಲುಕಿಸಿಹಾಕಬಹುದಾಗಿತ್ತು. ವೀರಾನಿಗೆ ಹೇಗಾದರೂ ಮಾಡಿ ಆ ರಾತ್ರಿಯೇ ಚಿಪ್ಸನ್ನು ಗುಡಿಸಿ ಹಾಕಬೇಕಿತ್ತು. ಏಕೆಂದರೆ ಗೆಳೆಯರು ಈ ಕಳ್ಳತನದಲ್ಲಿ ಸಿಕ್ಕಿಹಾಕಿಕೊಂಡರೆ ಕೇವಲ ಒಬ್ಬೊಬ್ಬರು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಿದ್ದರು. ವೀರಾ ಸಿಕ್ಕಿಬಿದ್ದಲ್ಲಿ, ಆತನ ತಂದೆ, ತಂದೆಯ ತಂದೆ-ಇಬ್ಬರೂ ಕಲಾವಿದರು ಮತ್ತು ಮೇಷ್ಟ್ರಿಗೆ ಬೇಕಾದವರಾಗಿದ್ದರಿಂದ ಒಂದಿಡೀ ಕಲಾವಂಶವೇ ಅಪವಾದಕ್ಕೆ ಸಿಲುಕಿದಂತಾಗುತ್ತಿತ್ತು. ಆದ್ದರಿಂದ ಮೂವರ ಮಾನವನ್ನು ತಾನೊಬ್ಬನೇ ತೆಗೆಯಲಿದ್ದೇನೆಂಬ ಭಯದಲ್ಲಿದ್ದ ಮೂರು ಪಟ್ಟು ಭಯಬಿದ್ದಿದ್ದ. ಗೆಳೆಯರೆಲ್ಲರೂ ಸಿಕ್ಕಿಬೀಳುವ ಭಯದಲ್ಲಿ ನಡುಗಿದರೆ ಈತ ಮಾತ್ರ ನಡು-ನಡು-ನಡುಗುತ್ತಿದ್ದ.
 
     ಎಲ್ಲರೂ ಬೇಡಬೇಡವೆಂದರೂ ಬೇಕುಬೇಕಾಗಿಯೇ ಆತ ಕೆಂಟೀನಿನ ಹಿಂದಕ್ಕೆ ಹೋದ. ಹಿಂದಿನ ಭಾಗದ ಕಾಂಪೌಂಡು ಭಾಗವನ್ನು ಮಾತ್ರ ಅದ್ಯಾವ ಕಾರಣಕ್ಕೋ ಸಿಮೆಂಟಿನಿಂದ ನಿರ್ಮಿಸುವ ಬದಲಿಗೆ ಮರದ ತುಂಡಿನಿಂದ ಮಾಡಲಾಗಿತ್ತು. ಆತ ಹತ್ತಾರು ನಿಮಿಷ ನಾಲ್ಕಾರು ಮೊಳೆಗಳನ್ನು ಅವುಗಳ ತುದಿಯಿಂದ ಹೊರತೆಗೆಯಲು ಪ್ರಯತ್ನಿಸಿದ. ಜೋರಾಗಿ ಒಮ್ಮೆಲೆ, ಕ್ಷಣಾರ್ಧದಲ್ಲಿ ಆ ಹಲಗೆಯನ್ನು ಎಳೆದುಹಾಕುವ ಬದಲಿಗೆ ಕ್ರಮೇಣ, ನಿಧಾನವಾಗಿ ಚೂರು ಚೂರಾಗಿ ಅದನ್ನು ಬಿಡಿಸತೊಡಗಿದ. ಕಡಿಮೆ ಅವಧಿಯಲ್ಲಿ ಆ ಕೆಲಸವನ್ನು ಮುಗಿಸಿ, ಸದ್ದು ಮಾಡಿ ದೊಡ್ಡಣ್ಣನ ಗಮನವನ್ನು ಇತ್ತ ಸೆಳೆವ ಬದಲಿಗೆ, ನಿಧಾನವಾಗಿ ಸದ್ದಿಲ್ಲದಂತೆ ತೆಗೆಯಲು ಯತ್ನಿಸುತ್ತಿದ್ದ. ಆತನ ಐಡಿಯ ಇದ್ದದ್ದು ತಾನು ಸ್ವತಃ ತನ್ನ ದೇಹವನ್ನು ಕೆಂಟೀನಿನ ಒಳಕ್ಕೆ ತೂರಿಸಿ ಆದಷ್ಟೂ ಕೈಚಾಚಿ ಚಿಪ್ಸನ್ನೆಲ್ಲ ಗುಡಿಸಿ ಹೊರತೆಗೆವುದಾಗಿತ್ತು. ಎಡವಟ್ಟನಾದ ಆತ ಇದ್ದಕ್ಕಿದ್ದಂತೆ ಇಷ್ಟೋಂದು ತಾಳ್ಮೆಯಿಂದ ಕೆಲಸ ಮಾಡುತ್ತಿದ್ದುದನ್ನು ಕಂಡು, "ಇದ್ಯಾರಮ್ಮಾ, ನಮ್ಮ ವೀರಾನ ವೇಷದಲ್ಲಿ ಅನೇಖನೇ ಬಂದಂತಿದೆ", ಎಂದು ತಮಾಷೆಯಾಗಿ ಪಿಸುಗುಟ್ಟಿದ ವಿಕ್ಷಿಪತ ಶೇಖರನಿಗೆ. ’ಆಹ’ ಎಂದು ಶೇಖರನನ್ನು ಕೆಲವರು ಪೋಲಿಯಾಗಿ ರೇಗಿಸುತ್ತಿದ್ದುದಕ್ಕೆ ಕಾರಣ ಆತನ ಹೆಸರೇ, ’ಆಕೆಯನ್ನು ಹಲ್ಲಾಡಿಸು--ಶೇಕ್ ಹರ್’ ಎಂದಾಗಿದ್ದರಿಂದ ಎಂಬ ತರಲೆ ಜೋಕು ಕೆಲವರಿಗೆ ಖುಷಿಯನ್ನು ಕೊಟ್ಟಷ್ಟೇ ಹಲವರಿಗೆ ಪಿ.ಜೆ (ಪೂರ್ ಜೋಕ್) ಎನ್ನಿಸಿಬಿಟ್ಟಿತ್ತು. 
 
     ವೀರಾ ಕ್ರಮೇಣ ತನ್ನ ದೇಹವನ್ನು ತೂರಿಸಲು ಸಾಕಾಗುವಷ್ಟು ಮರದ ಹಲಗೆಯನ್ನು ಕೆಂಟೀನಿನ ಹಿಂಬದಿಯಿಂದ ಬೇರ್ಪಡಿಸಿದ್ದ. ಅರ್ಧ ದೇಹ ಒಳತೂರಿಸಿದ. ಕೇರಳ ಚಿಪ್ಸು ಸಿಕ್ಕಿದ ಕಡೆಯೆಲ್ಲಾ ಆಯತೊಡಗಿದ, ಆಸೆಯಾದಂತೆಲ್ಲಾ ಕೆಲವನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ್ದ. ಆಗಲೇ ಆತನಿಗೆ ಅದೇನೋ ಅಗೋಚರವಾದ ಯೋಚನೆ ಬಂದುಬಿಟ್ಟುತ್ತು. ’ಸದ್ದು ಮಾಡುತ್ತ ಒಮ್ಮೆಲೆ ರಭಸದಿಂದ ತೆರೆಯಲ್ಪಡುವ ಮರದ ರಿಪೀಸು, ನಿಧಾನವಾಗಿ ತೆಗೆದಾಗ ಸದ್ದು ಮಾಡುವುದಿಲ್ಲವೇಕೆ?’ ಎಂಬ ಯಃಕಶ್ಚಿತ್ ಪ್ರಶ್ನೆಯದಾಗಿತ್ತದು. ’ಜಗತ್ತು ಇರುವುದೇ ಹೀಗಲ್ಲವೆ’ ಎಂಬ ಸುಲಭ ಉತ್ತರ, ವೀರಾ ತನಗೆ ತಾನೇ ನೀಡಿಕೊಂಡ ಈ ಉಪಶಮನದ ಉತ್ತರವು ಸ್ವತಃ ಆತನಿಗೇ ಸಮಾಧಾನ ತರಲಿಲ್ಲ!
 
     ವೀರಾನಿಗೆ ಇದ್ದಕ್ಕಿದ್ದಂತೆ ನಗು ಬಂದುಬಿಟ್ಟಿತು. ಎಲ್ಲರನ್ನೂ ಲೇವಡಿ ಮಾಡುವ ತಾನು, ಈಗ, ಸ್ವಲ್ಪ ದಿನಗಳ ಹಿಂದೆ ಪ್ರಶ್ನಾಮೂರ್ತಿ ತ್ರಿಶಂಕು ಸ್ಥಿತಿಯಲ್ಲಿ ಇದ್ದಂತಹ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಂತಹ ಸ್ಥಿತಿಯಲ್ಲಿರುವ ಐರನಿ, ವ್ಯಂಗ್ಯ ಬಹಳ ಮೋಜಿನದೆನ್ನಿಸಿಬಿಟ್ಟಿತು. ಆತನ ರುಂಡ ಭಾಗವು ಕ್ಯಾಂಟೀನಿನ ಒಳಗೂ, ಮುಂಡ ಮತ್ತು ಆತನೇ ಅಂದು ಹೇಳಿದ್ದ ’ಕುಂಡ ಭಾಗ’ಗಳು ಮಾತ್ರ ಹೊರಗಿತ್ತು. ಕಟ್ಟಡದ ಹಿಂದಿನ ಮರದ ಹಲಗೆಯು ಆತನ ಸೊಂಟವನ್ನು ಗಟ್ಟಿಯಾಗಿ ಹಿಡಿದಿರಿಸಿಬಿಟ್ಟಿತ್ತು. ಚಿಪ್ಸನ್ನು ಆಯಲು ಆತ ಮುಂದೆ ಮುಂದೆ ಕೈಚಾಚಿದಂತೆಲ್ಲಾ ಅತನ ಕಟಿಭಾಗದ ಆಯಕಟ್ಟಿನ ಅತಿ ತೆಳುವಾಗಿದ್ದ ಪ್ರದೇಶವು, ಕಾಂಕ್ರೀಟಿನ ಗೋಡೆ ಮತ್ತು ದಪ್ಪ ಮರದ ಹಲಗೆಯ ನಡುವೆ ಇಕ್ಕಳಕ್ಕೆ ಸಿಲಕಿದಂತೆ ಸಿಕ್ಕಿಹಾಕಿಕೊಂಡಿತ್ತು. ಅದೊಂದು ದಿನ ರಾತ್ರಿ ’ಬೆನ್‌ಹರ್’ ಎಂಬ ಅದ್ಭುತ ದೃಶ್ಯಾವಳಿಗಳ ಸಿನೆಮವನ್ನು ಕಾಲೇಜಿನಿಂದಲೇ ಪ್ಲಾಝಾ ಥಿಯೇಟರಿನ ಸೆಕೆಂಡ್ ಶೋಗೆ ಹೋಗಿ ನೋಡಿಯಾದ ಮೇಲೆ ಕೊನೆಯಲ್ಲಿ ಗಮನಿಸಿದ್ದು, ಕುಡುಕನೊಬ್ಬ ಥಿಯೇಟರಿನಲ್ಲೇ ನಿದ್ರೆ ಮಾಡುತ್ತಿದ್ದುದನ್ನು! ಕಣ್ಣೆದುರಿಗಿನ ಅದ್ಭುತವನ್ನು ಆಸಡ್ಡೆ ಮಾಡುವಾತನ ಅದ್ಭುತದ ವ್ಯಾಖ್ಯೆಯು ಮತ್ಯಾರದ್ದೋ ಸಾಮಾನ್ಯ ನೆಲೆಯಲ್ಲಿ ಮನೆಮಾಡಿರುತ್ತದೆ ಎಂದರಿತ ವೀರಾ. ಅಷ್ಟರಲ್ಲಿ ದೊಡ್ಡಯ್ಯ ದೊಡ್ಡದಾಗಿ ಮಮಾ, ಬಿಡಾ, ಅನೇಖ ಮತ್ತು ಪ್ರಶ್ನಾಮೂರ್ತಿಯೊಂದಿಗೆ ಮಾತನಾಡುತ್ತಾ ಇತ್ತಲೇ ಬರುತ್ತಿರುವ ಸದ್ದು ಕೇಳಿಸಿತ್ತು. ಯಾವ ಸ್ಥಿತಿಯಲ್ಲಿ ತನ್ನಂತಹ ಬುದ್ಧಿವಂತ ಇರಲಾರನೆಂದೂ, ಕೇವಲ ಪ್ರಶ್ನಾಮೂರ್ತಿಯಂತಹ ದಡ್ಡ ಮಾತ್ರ ಇರಲು ಸಾಧ್ಯವೆಂದು ವೀರಾ ಭಾವಿಸಿದ್ದನೋ, ಅಂತಹ ದಡ್ಡನ ಎದಿರು ಬುದ್ಧಿವಂತನಾದ ತಾನು ದಡ್ಡನಾಗಿ ನಿರೂಪಿತನಾಗುವ ಪ್ರಮೇಯ ತೀರ ಹತ್ತಿರದಲ್ಲಿತ್ತು ಅಥವ ಆ ಪ್ರಮೇಯವು ಈಗಾಗಲೇ ಈತನನ್ನು ಅಕ್ಷರಶಃ ಇಕ್ಕಳದಲ್ಲಿ ಸಿಲುಕಿಸಿಬಿಟ್ಟಿತ್ತು. 
 
     ಕೇವಲ ಎರಡೇ ನಿಮಿಷದಲ್ಲಿ ಅವರೆಲ್ಲಾ ಕೆಂಟೀನಿನ ಬಳಿ ಬಂದರು. ಅಲ್ಲಿ ವೀರಾ ಇರಲಿಲ್ಲ. ವ್ಯಕ್ತಿಯೊಬ್ಬ ಇಂತಹ ಇಕ್ಕಟ್ಟಿನಿಂದ ಅಷ್ಟು ಬೇಗ ತಪ್ಪಿಸಿಕೊಂಡು ಹೊರಬಂದಿರುವುದನ್ನು ಯಾರಿಗೂ ನಂಬಲಾಗಲಿಲ್ಲ. ಜುಜುಬಿ ಕಿಂಡಿಯಲ್ಲಿ ಜುಜುಬಿ ಝೀರೋ ಫಿಗರ್ ಪ್ರಶ್ನೆಯು ಹೊರಬರಲೇ ಐದಾರು ಗಂಟೆ ಕಾಲ ಹಿಡಿದಿದ್ದ ’ಆಪರೇಷನ್ ಆಮ್’ ಘಟನೆ ಎಲ್ಲರಿಗೂ ಗೊತ್ತಿದ್ದರಿಂದಲೇ ವೀರಾ ಇಷ್ಟು ಬೇಗ ತಪ್ಪಿಸಿಕೊಂಡದ್ದನ್ನು ನಂಬಲಾಗುತ್ತಿಲ್ಲವೆಂದು ಹೆಚ್ಚು ಯೋಚಿಸುವ ಕೆಲವು ಗೆಳೆಯರು ಭಾವಿಸಿದರು. ’ಪುಣ್ಯ ಗಂಡಾಂತರ ತಪ್ಪಿತಲ್ಲ’ ಎಂದುಕೊಂಡು ಎಲ್ಲರೂ ನಿರಾಳರಾದರು. ದೊಡ್ಡಯ್ಯನಿಗೆ ಅನುಮಾನ ಬಂದಿತ್ತು. "ಅನುಮಾನವಲ್ಲ ಹನುಮಾನ ಕಣೋ ದೊಡ್ಡಯ್ಯ, ನೀನು ಕೆಂಟೀನಿನೊಳಕ್ಕೆ ಇಣುಕಿ ನೋಡುತ್ತಿರುವ ರೀತಿಯು ಒಳ್ಳೇ ಪರಿಷತ್ತಿನ ಹನುಮಾನನಂತೆಯೇ ಇದೆ," ಎಂದು ಮಮಾನಿಗೆ ಆತನ ಗಮನವನ್ನು ಬೇರೆಡೆ ತಿರುಗಿಸಬೇಕಾ ಇಲ್ಲವೆ ಕೆಂಟೀನಿನೊಳಕ್ಕೇ ನೋಡಲು ಬಿಡಬೇಕಾ ತಿಳಿಯಲಿಲ್ಲ. ಏಕೆಂದರೆ ವೀರಾ ಅಷ್ಟು ಬೇಗ ತ್ರಿಶಂಕು ಸ್ಥಿತಿಯಿಂದ ಹೇಗೆ ತಪ್ಪಿಸಿಕೊಂಡ ಎಂದು ತಿಳಿಯದಾಗಿತ್ತು. ಅನಿಶ್ಚಿತ ಮನೋಭಾವದಿಂದ ಎಲ್ಲರೂ ಕೆಂಟೀನಿನೊಳಗೆ ಇಣುಕಿ ನೋಡಿದರು.
 
     ಸಣ್ಣದಾಗಿ ದೊಡ್ಡಯ್ಯ ಟಾರ್ಚು ಬೆಳಕನ್ನು ಖರ್ಚು ಮಾಡಿದ. ಕ್ಯಾಂಟೀನಿನ ಒಳಗೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕರ್ನಾಟಕದಲ್ಲಿ ತಯಾರಾದ ಕೇರಳ ಚಿಪ್ಸನ್ನು ಆಯಲು ಪ್ರಯತ್ನಿಸಿದ ಗುರುತುಗಳು ಆತನಿಗೆ ಗೋಚರವಾದಂತಾಯ್ತು. "ಅಲ್ಲೋಡು ಸಿವ್ನೆ, ಯಾರೋ ಚಿಪ್ಸಿನ ಪಾಕೆಟ್ಟನ್ನೆಲ್ಲಾ ಬೀಳಿಸಿ ಆಯಲು ಪ್ರಯತ್ನಿಸಿದ್ದಾರೆ," ಎಂಬರ್ಥದ ಮಾತನ್ನಾಡಿದ ವಾಚ್‌ಮನ್. "ಯೋವ್, ಯಾರೋ ಚೆಲ್ಲಿದ್ದಾರೆ ಅನ್ನೋದು ಸರಿ, ಆದರೆ ಅದನ್ನು ಆಯ್ದುಕೊಳ್ಳಲು ಯತ್ನಿಸಿದ್ದಾರೆ ಅಂತ ಹೇಗಯ್ಯಾ ಹೇಳ್ತೀಯ? ನಿನ್ನ ಕಣ್ಣೇನು ಫೋರೆನ್ಸಿಕ್ ಮಷೀನೇ?" ಎಂದು ತಾನು ಸ್ವತಃ ಕೇಳಿದ್ದ ಆದರೆ ಅರಿಯದ ಕೊನೆಯ ಎರಡು ಪದಗಳನ್ನು ಉಸುರಿಸಿದ್ದ ಮಮಾ. "ಅಲ್ಲೋಡು ಸಿವ್ನೆ, ಈ ಮುದಿ ಕಣ್ಣಿಗೇ ಕಾಣೋದಕ್ಕೆ ಮಷೀನು ಗಿಷೀನೆಲ್ಲಾ ಯಾಕೆ?"
"ಏನು, ಯಾರೋ ಎಲ್ಲಾದ್ರೂ ಹೆಜ್ಜೆ ಗುರ್ತು ಬಿಟ್ಟಿದ್ದಾರಾ?"
"ಇಲ್ಲ"
"ಸಗಣಿ ಬಾಚುವ ಪ್ರಯತ್ನ ಮಾಡಿದ್ರೆ ಅದರ ಗುರ್ತು ನೆಲಕ್ಕಂಟಿರುತ್ತದೆ. ಆದರೆ ಚಿಪ್ಸು ಆಯುವ ಪ್ರಯತ್ನದ ಗುರುತು ಅಂತ ಯಾವುದನ್ನ ಗುರ್ತು ಹಿಡಿದು ಹೇಳ್ತೀಯ ದೊಡ್ಡಯ್ಯ?" ಎಂದು ಪಟ್ಟು ಹಿಡಿದುಬಿಟ್ಟ ಮಮಾ.
"ಏ ಸುಮ್ನಿರಪ್ಪ. ಈ ಮುದ್ಕುನ್ನ ಅಂಗೆಲ್ಲಾ ಗೋಳಾಡಿಸ್ಬೇಡ. ಉಲೀನಾದ್ರೂ ಕೊಲ್ಬೋದು, ನಿನ್ ಅನುಮಾನಾನ ಕೊಲ್ಲೋಕಾಗಲ್ಲ ನೋಡು," ಎಂದು ಗೊಣಗಿದ ದೊಡ್ಡಯ್ಯ.
"ಇಲ್ಲ ದೊಡ್ಡಯ್ಯ. ಚಿಪ್ಸು ಬೀಳಿಸಿರುವುದಕ್ಕೆ ಸಾಕ್ಷಿ ಚಿಪ್ಸೇ ಆಗಿರುತ್ತೆ. ಆದರೆ ಅದನ್ನ ಆಯಲು ಮಾಡಿದ ಗುರ್ತು ಅಂತ ಯಾವುದನ್ನ ಹೇಳ್ತೀಯ ಅಥವ ಹಾಂಗಂತ ನಿನಗೆ ಹೇಗೆ ಅನ್ನಿಸಿತು ಅನ್ನೋದನ್ನ ನೀನಿವತ್ತು ಹೇಳಲೇ ಬೇಕು," ಎಂದು ಅನೇಖನೂ ದನಿಗೂಡಿಸಿದ.
"ಇದೊಳ್ಳೆ ಪೀಕಲಾಟಕ್ಕಿಟ್ಟುಕೊಂತಲ್ಲ. ಅಲ್ಲಪ್ಪ ನೀವೆಲ್ಲಾ ಚಿತ್ರ ಬರೀತೀರಲ್ಲ?"
"ಹೌದು?"
"ಆ ಚಿತ್ರ ಯಾವ್ದಕ್ಕೆ ಸಾಕ್ಷಿಯಾಗಿರುತ್ತೆ ಯೋಳಿ ನೋಡುಮ ಮತ್ತೆ?" ಎಂದು ಕಲಾತ್ಮಕ ಸವಾಲಾಕಿದ ದೊಡ್ಡಯ್ಯ. 
"ಏನು, ಚಿತ್ರ ಅಂದ್ರೆ ನಮ್ಮ ಮನಸ್ಸಿನ ಭಾವನೆಗಳನ್ನ ಹಾಗೇ ಹೊರಸೂಸುವುದಲ್ಲವೆ?" ಎಂದು ಕಾವ್ಯಾತ್ಮಕವಾಗಿ ಉತ್ತರಿಸಿದ ಸ್ಕೆಚ್-ಕಿಂಗ್ ರಮಾನಾಥೆಸ್ಸೆಮ್ಮೆಸ್.
"ಅಲ್ಲಾ ಸಿವ್ನೆ. ನೀನು ಗೆರೆ ಎಳೀತಿಯಲ್ಲ, ಆ ಗೆರೆ ಬಿದ್ದ ಕಾಗ್ಜಕ್ಕೆ ತನ್ ಸೀಲ ಕಳ್ಕಂಡಂಗಾಗಲ್ವೆ? ಒಂದೇ ತರ ಎರ್ಡು ಗೆರೆ ಎಳೀತೀಯ ಅಂತಿಟ್ಕೋ, ಆಗ ಒಂದೊಂದ್ ಗೆರೆ ಎಳೀವಾಗ್ಲೂ ನಿನ್ ಮನಸ್ನಾಗ ಎಲ್ಡು ಬೇರೆ ಬೇರೆ ಯೋಸ್ಣೆ ಇರಾಕಿಲ್ವ. ಅಂಗಾದ್ರೆ ಒಂದೇ ತರ ಕಾಣೋ ಆ ಎಲ್ಡು ಗೆರೆಗೊಳು ಒಂದೇ ಎಂಗಾಗ್ತದೇಳಪ್ಪ? ಇದ್ಕೆ ಉತ್ರ ಪತ್ತೆ ಮಾಡಿ ಅದು ನಿಂಗೆ ಸಿಕ್ರೆ ಅದೇ ಉತ್ರಾವ ಚಿಪ್ಸು ಗುಡಿಸಕ್ಕೆ ಯಾರೋ ನಡೆಸಿರೋ ಕರಾಮತ್ತಿನ ಗುರ್ತಿಗೂ ಉತ್ರಾ ಆಗ್ತದೆ ನೋಡ್ಕ. ಬಂದ್ಬುಟ್ರು ನಂಗ್ ಬುದ್ದಿ ಐತಾ ಇಲ್ವಾ ಅಂತ ಪರೀಕ್ಸೋಕೆ. ನಾನು ಓದಿಲ್ದೇ ಇರ್ಬೋದು ಆದ್ರೆ ಮತಿ ಇಲ್ದೋನಲ್ಲ. ಓಗ್ರಲೇ ಅತ್ಲಾಗೆ. ನಾನ್ಯಾರ್ ಗೊತ್ತಲ್ಲ, ತೋಳ ಅಂದ್ಕೊಂಡೇ ಉಲೀ ಒಡ್ದಾಕ್ದೋನು. ಬುಲ್ಡೆ ಒಡ್ದಾಕ್ ಬಿಟ್ಟೇನು ತಿರುಬೋಕಿ ನನ್ ಮಕ್ಳಾ," ಎಂದು ದೊಡ್ಡಯ್ಯ ತನ್ನ ಘನಂದಾರಿ ಪ್ರವಚನ ಮುಗಿಸಿ, ಕುಂಟು ಕಾಲಿನಲ್ಲೇ ದಢದಢನೆ ಮುಖ್ಯ ಕಟ್ಟಡದ ಕಡೆಗೆ ನಡೆಯುತ್ತ, ದೊಣ್ಣೆಯನ್ನು ಸಿಕ್ಕಸಿಕ್ಕಲ್ಲಿ ಕುಟ್ಟುತ್ತ ಹೋಗಿಬಿಟ್ಟ.
"ಅಬ್ಬಾ, ಮಯೂರ ಸಿನೆಮದಲ್ಲಿ ಅಣ್ಣಾವ್ರು ಮಂತ್ರಿಮಗದೀರರನ್ನೆಲ್ಲಾ ಸಾಲಾಗಿ ಊಟಕ್ಕೆ ಬಡಿಸೋವಂತೆ ಕುಳ್ಳರಿಸಿ ಸುದೀರ್ಘ ಡೈಲಾಗ್ ಹೊಡೆದಂಗಾಯ್ತಿದು," ಎಂದು ಮಮಾ ಫರ್ಮಾನು ಹೊರಡಿಸಿದ.
"ಅದಿರ್ಲಿ ಗುರು, ದೊಡ್ಡಯ್ಯ ಹೇಳಿದ್ದನ್ನು ಸರಿಯಾಗಿ ಕೇಳಿದೆಯ. ಎರಡು ಒಂದೇ ತರಹ ಇರೋ ರೇಖೆಗಳನ್ನು ಬಿಡಿಸುವಾಗ ಅನಿವಾರ್ಯವಾಗಿ ನಮ್ಮ ಮನಸ್ಸು ಒಂದೇ ತರಹ ಯೋಚನೆ ಮಾಡಿದರೂ ಸಹ, ಎರಡು ಪರಸ್ಪರ ಭಿನ್ನವಾದ ಕಾಲಗಳಲ್ಲಿ ಅದು ಮೂಡುವುದರಿಂದ ಎರಡೂ ಒಂದೇ ತೆರನಾದ ರೇಖೆಗಳು ಅದೇ ಕಾರಣಕ್ಕಾಗಿ ಬೇರೆ ಬೇರೆ ಸಾಕ್ಷಿಗಳನ್ನು ಉಳಿಸುತ್ತವೆ-ಎಂಬ ಮಾತು ಏನದ್ಭುತ ಗುರುವೆ!" ಎಂದ ಪಾಜು ರಟೇಲ. 
(೭೩)
     ಎಲ್ಲರೂ ಟಾರ್ಚಿನ ಬೆಳಕಲ್ಲಿ ಕೆಂಟೀನಿನ ಒಳಗೆಲ್ಲಾ ನೋಡಿದರು, ಯಾವುದೋ ಪ್ರದರ್ಶನವನ್ನು ನೋಡುವವರಂತೆ. ’ಅಲ್ಲ, ಯಾವುದೋ ಪ್ರಾಣಿಸಂಗ್ರಹಾಲಯ ನೋಡಿದಂತಿಗೆ. ಒಳಗಿರುವ ತಿಂಡಿತೀರ್ಥಗಳ ಪಾಕೆಟ್ಟುಗಳೇ ಪ್ರಾಣಿಗಳು. ನಾವೆಲ್ಲಾ ಸಫಾರಿ ಹೊರಟ ಸವಾರರು’ ಎಂದ ಸ್ಕೆಚ್ಚಿಂಗ್ ಕಿಂಗ್ ರಮಾನಾಥೆಸ್ಸೆಮ್ಮೆಸ್. ಅಂಗಾದ್ರೆ ಒಳಗಿರುವ ಪ್ರಾಣಿಗಳೆಲ್ಲಾ ಈಜು ಹೊಡಿಯೋಕೆ ಎಲ್ಲೋ ಹೊರಗೋಗಿದ್ದಂತಿವೆ ಎಂದು ತನ್ನ ಮಾತನ್ನು ಚಮತ್ಕಾರಿಕವಾಗಿ ಬಳಸುವ ಮೂಲಕ ಕಾಜ್‌ರೋಪಿ ಆಕಸ್ಮಿಕವಾಗಿ ದೊಡ್ಡಯ್ಯನಿಗೆ ಕ್ಲೂ ಕೊಟ್ಟುಬಿಟ್ಟ. 
"ಹೌದಲ್ಲ, ತಿಂಡಿ ಪೊಟ್ಣಗಳು, ಬಾಟಲಿಗಳು ಎಲ್ಲಾ ಖಾಲಿಯಾಗಿದ್ದಾವಲ್ಲ! ಎಂದ ಮತ್ತೆ ಹಿಂದಿರುಗಿ ಬಂದ ದೊಡ್ಡಯ್ಯ.
"ಯೋವ್, ಇವತ್ತು ಕರ್ನಾಟಕ ಟೂರಿಸಂ ಬಸ್ಸು ಬಂದಿರ್ಲಿಲ್ವೆ?" 
"ಹೌದು"
"ಅವ್ರೆಲ್ಲಾ ತಿಂದು ಕುಡಿದು ಹೋದ್ದರಿಂದ ಇವೆಲ್ಲ ಖಾಲಿಯಾಗಿರೋದು."
"ಅಂಗಾದ್ರೆ ಚಿಪ್ಸು ಚೆಲ್ಲಿರೋದು?" ಎಂದು ತಗುಲಿಹಾಕಿಸಿದ ದೊಡ್ಡಯ್ಯ.
"ಯಾವ್ದೋ ಬೆಕ್ಕೋ ಗೂಬೇನೋ ನಾಯೀನೋ ಏನೋ ಬೀಳಿಸಿರಬೇಕು."
"ಬೆಕ್ಕು, ಗೂಬೆ ಎಲ್ಲಾ ಸರಿ. ನಾಯಿ ಎಂಗೆ ಬೀಳ್ಸಕ್ಕೆ ಸಾಧ್ಯ? ಅಂಗೇನಾದ್ರೂ ಆಕಸ್ಮಿಕವಾಗಿ ಒಳಹೊಕ್ಕಿದ್ರೂ ಅದು ಹೊರಕ್ಕೆ ಬರೋ ಸಾಧ್ಯತೆಯೇ ಇಲ್ಲ, ಮರದ ತುಂಡು ಗಟ್ಟಿಯಾಗಿ ಹಿಂದಿನ ಭಾಗದ ಮುಚ್ಚಳಿಕೆಯಾಗಿಬಿಟ್ಟಿದೆಯಲ್ಲ" ಎಂದು ದೊಡ್ಡಯ್ಯ ಬ್ಯಾಟರಿ ಬೆಳಕಿನ ಸಹಾಯದಿಂದ ತನ್ನ ಮಿದುಳಿನ ಬೆಳಕನ್ನು ಪ್ರಕಾಶಗೊಳಿಸಿದ್ದ. 
 
     ಎಲ್ಲರಿಗೂ ಅನ್ನಿಸಿದ್ದದ್ದು ಒಂದೇ. ನಡುವನ್ನು ಮರದ ಹಲಗೆ ಮತ್ತು ಕಾಂಕ್ರೀಟು ಗೋಡೆಯ ನಡುವೆ ಸಿಕ್ಕಿಸಿಹಾಕಿಕೊಂಡಿದ್ದ ವೀರಾ, ಇತರರೊಂದಿಗೆ ದೊಡ್ಡಯ್ಯ ಬರುವ ಸದ್ದು ಕೇಳಿ, ಹೇಗೋ ತಪ್ಪಿಸಿಕೊಂಡು ಹೊರಬಂದು, ಯಾವುದೋ ಮರಗಿಡಬಳ್ಳಿಹುಲ್ಲುಗರಿಕೆಯ್ಹ ಹಾಸಿನ ನಡುವೆ ಅವಿತುಕೊಂಡು ಎಲ್ಲಾ ನೋಡುತ್ತಿದ್ದಾನೆ ಎಂಬ ವಿಷಯವದು. ತಿಂದು, ಕುಡಿದು, ಎಲ್ಲಕ್ಕೂ ಮಿಗಿಲಾಗಿ ದೊಡ್ಡಯ್ಯನಲ್ಲಿ ಅತಿಯಾದ ಅನುಮಾನವನ್ನು ಸೃಷ್ಟಿಸದೆ ಬಚಾವಾದ ಸಮಾಧಾನದಲ್ಲಿ ಎಲ್ಲರೂ ಕೆಂಟೀನಿನಿಂದ ದೂರಕ್ಕೆ ಹೊರಟರು. 
"ಏನ್ರಯ್ಯಾ ಮಾಡ್ತಿದ್ರೀ ಇಲ್ಲಿ ಕೆಂಟೀನನ ಹತ್ರ" ಎಂದ ಮೂರನೇ ಸುತ್ತಿಗೆ ಬಂದ್ದ ದೊಡ್ಡಯ್ಯನಿಗೆ, "ಕಣ್ಣಲ್ಲೇ ಒಳಗಿರೋದನ್ನೆಲ್ಲಾ ತಿಂತಿದ್ವೀ" ಎಂದ ವಿಕ್ಷಿಪತ ಮತ್ತು ’ಅಹ’ಶೇಖರರು. 
(೭೪)
     ಎಲ್ಲರೂ ಹೋದ ಎಷ್ಟೋ ಹೊತ್ತಿನ ನಂತರ ಕೆಂಟೀನಿನ ಒಳಗೆ ಏನೋ ಅಲ್ಲಾಡಿದಂತಾಯ್ತು. ಮನುಷ್ಯರಾರೂ ನೋಡದಿದ್ದರೂ, ನೋಡದಿದ್ದಾಗಲೂ ವಸ್ತುಗಳ ತಮ್ಮದೇ ಅಸ್ತಿತ್ವವನ್ನು ಹೊಂದಿರುತ್ತವೆಯೇ ಅಥವ ಇಲ್ಲವೆ? ಇದೊಂದು ತಾತ್ವಿಕ ಪ್ರಶ್ನೆ. ಕೆಂಟೀನಿನ ಒಳಗೆ ಗ್ಯಾಸ್ ಸಿಲೆಂಡರ್ ಮೇಲೆ ಹಾಸಲಾಗಿದ್ದ ನೆಲ ಒರೆಸುವ ಬಟ್ಟೆಯು ಪಕ್ಕಕ್ಕೆ ಸ್ವಲ್ಪ ಸ್ವಲ್ಪವಾಗಿ ಸರಿಯಿತು. ಪೂರ್ತಿ ಸರಿದಾಗ ತಿಳಿದದ್ದು ಅದು ಮುಚ್ಚಿದ್ದದ್ದು ಸಿಲಿಂಡರನ್ನಲ್ಲ, ವೀರಾನನ್ನು! ದೊಡ್ಡಯ್ಯ ಬರುವ ಸದ್ದು ಕೇಳಿ, ಹಿಂದಕ್ಕೆ, ಹೊರಕ್ಕೆ ಬರಲಾಗದ ವೀರಾ ಮುಂದಕ್ಕೆ ನುಗ್ಗಿದಾಗ ಸೀದ ಕೆಂಟೀನಿನ ಒಳಕ್ಕೆ ತನ್ನ ಇಡಿಯ ದೇಹವನ್ನು ತೂರಿಸಿಬಿಡಲು ಸಫಲನಾಗಿದ್ದ, ರಾಕೆಟ್ಟಿನಂತೆ. ಒಳ ನುಗ್ಗಿದಾಕ್ಷಣ ಯೋಚಿಸಲೂ ಅವಕಾಶವಿಲ್ಲದಂತೆ ಆತ ಸಿಲಂಡರಿನ ಮೇಲಿದ್ದ ನೆಲ ಒರೆಸುವ ಬಟ್ಟೆಯನ್ನು ಮೈಲೇಲೆಳೆದುಕೊಂಡು, ಬಾಗಿ ಕುಳಿತುಬಿಟ್ಟಿದ್ದ. ದೊಡ್ಡಯ್ಯನ ಟಾರ್ಚಿನ ಬೆಳಕೂ ಸಹ ಬಟ್ಟೆಯ ಕೆಳಗಿದ್ದ ಬೆಟ್ಟದಂತಾ ಜೀವವನ್ನು ಹುಡುಕಿತೆಗೆಯಲಾಗದೇ ಹೋಯಿತು.

     ಕ್ರಮೇಣ ಎದ್ದು ನಿಂತ ವೀರಾ ದೂರದಿಂದ ಕೆಂಟೀನಿನ ಸಿಲ್ಹೌಟಿನೊಳಗೆ ಮಾನವಾಕಾರದ ಸಿಲ್ಹೌಟಾಗಿ ಕಾಣತೊಡಗಿದ್ದ, ನೋಡುವವರಿಗೆ ಮತ್ತು ಯಾರೂ ನೋಡದಿದ್ದಾಗಲೂ ಸಹ! ಈಗ ವೀರಾ ಕ್ರಮೇಣ ಬಾಗಿ, ಚಿಪ್ಸನ್ನೆಲ್ಲಾ ಆಯ್ದು ಅವುಗಳಲ್ಲಿ ಕೊಳೆಯಾಗಿದ್ದಿದ್ದನ್ನು ಜೇಬಿಗಿಳಿಸಿಕೊಂಡ, ಹೊರಬಂದ ಮೇಲೆ ಹೊರಗೆಸೆಯಲು. ಉಳಿದಿದ್ದನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ ಎಂದು ಈಗಾಗಲೇ ಬರೆಯಲಾಗಿದೆಯಷ್ತೇ.
 
     ಸುಮಾರು ಹೊತ್ತಾದರೂ ವೀರಾ ಕಾಣಿಸದಾದಾಗ ಎಲ್ಲರೂ ಆತನಿಗಾಗಿ ಹುಡುಕಾಡತೊಡಗಿದರು. ’ವೀರಾ, ವೀರಾ’ ಎಂದು ಪರಿಷತ್ತಿನ ತುಂಬೆಲ್ಲಾ ಪ್ರತಿಧ್ವನಿಸುವಂತೆ ಕೂಗಾಡತೊಡಗಿದರು. ಅದನ್ನು ಕೇಳಿಸಿಕೊಂಡು ವೀರಾ ಸುಮ್ಮನೆ ಕೈಬಾಯಿಯಾಡಿಸತೊಡಗಿದ. ಧ್ವನಿಗೆ ದ್ವನಿರಹಿತತೆ ಪ್ರತಿಕ್ರಿಯೆಯಾಗಲಾರದಲ್ಲ. ಕನ್ನಡ ಸಾಹಿತ್ಯ್ ಸಂಸ್ಕೃತಿಯ ಧ್ವನಿಯಲ್ಲಿ ಕನ್ನಡ ದೃಶ್ಯಕಲೆಯೆಂಬ ಧ್ವನಿರಹಿತತೆಯ ಸ್ಥಿತಿಯಂತಾಯಿತಿದು. ಕೊನೆಗೆ ವೀರಾ ಕೆಂಟೀನಿನಲ್ಲಿದ್ದ ಸೋಡಾ ಬಾಟಲಿಯ ಬಿರಿಡೆಯನ್ನು ಆಯ್ದು, ತೆಗೆದು ಎಸೆಯತೊಡಗಿದ. ಬ್ರಹ್ಮಾಸ್ತ್ರದ ಮೇಲೆ ಗುಬ್ಬಿಯನ್ನು ಪ್ರಯೋಗಿಸಿದ ಹಾಗಿತ್ತದು. ನೂರು ಅಡಿ ದೂರದಲ್ಲಿದ್ದ ಪರಿಷತ್ತಿನ ಕಟ್ಟಡದ ಬಳಿ ಹುಡುಕಾಡುತ್ತಿದ್ದ ಹುಡುಗರೆಡೆಗೆ ಎಸೆದ ಸೋಡಾ ಬಿರಿಡೆ ಕೇವಲ ಹತ್ತಡಿ ದೂರದಲ್ಲಿ ಬಿತ್ತು. ಕೊನೆಗೂ ಒಂದೆರೆದು ಸೋಡಾ ಬಿರಡೆಗಳು ಒಂದಿಪ್ಪತ್ತಡಿ ದೂರದಲ್ಲಿದ್ದ ಖಾಲಿ ಎಣ್ಣೆ ಡಬ್ಬಗಳ ಮೇಲೆ ಬಿದ್ದು ಸದ್ದು ಮಾಡಿದವು. ಆಗ ಅದರಿಂದಾಗಿ ಕೇಳಿಸಿದ ಸದ್ದನ್ನು ಮಮಾ ಮುಂದೊಮ್ಮೆ "ಎರಡು ಗಂಡು-ಹೆಣ್ಣು ಅಸ್ಥಿಪಂಜರಗಳು ಡಬ್ಬಗಳ ಮೇಲೆ ಪ್ರೀತಿ ಮಾಡುತ್ತಿರುವ ಸದ್ದಿನಂತಿತ್ತದು," ಎಂದು ವರ್ಣಿಸಿದ್ದ!
 
     ಡಬ್ಬದ ಸದ್ದು ಉಂಟಾದಾಗ ರಮಾನಾಥೆಸ್ಸೆಮ್ಮೆಸನನ್ನು ಹೊರತು ಪಡಿಸಿ ಯಾರೂ ಅವುಗಳ ಬಳಿಗೆ ಬರಲಿಲ್ಲ. ಕೆಲವರು ನಿಜಕ್ಕೂ ಅದೊಂದು ಅಗೋಚರ ಪ್ರೇತದ ಧ್ವನಿಯೆಂದು ಭಾವಿಸಿ ಅದಕ್ಕೆ ವಿರುದ್ಧವಾದ ದಿಕ್ಕಿನತ್ತ ಮುಖಮಾಡಿದ್ದರು. ರಮಾನಾಥೆಸ್ಸೆಮ್ ಮಾತ್ರ ’ಡಬ್ಬಗಳನ್ನಲ್ಲ ಅವುಗಳ ಸದ್ದನ್ನು ಚಿತ್ರಿಸುತ್ತೇನೆ’ ಎಂಬ ಅಸಾಧ್ಯ ಗುರಿ ಇರಿಸಿಕೊಂಡು ಅವುಗಳ ಬಳಿಗೆ ಬಂದ.//