ನೆಲೆ ಕನ್ನಡ (ಒಂದರಿಂದ ಹತ್ತು)
ಕವನ
ಒಂದು ಎರಡು ಕನ್ನಡ ನಾಡು
ಅದರಲೆ ಮಾತಾಡು
ಬಂದು ಹೋಗುವ ಮಂದಿಗು ಕಲಿಸು
ಕನ್ನಡದ ಹಾಡು ||
ಮೂರು ನಾಲ್ಕು ಕನ್ನಡ ಪಲುಕು
ದಿನವು ಬಳಸಲೆ ಬೇಕು
ನೂರು ಭಾಷೆ ಜೊತೆಯಲಿದ್ದರು
ಕನ್ನಡವಾಡುತ ಬದುಕು ||
ಐದು ಆರು ಕನ್ನಡ ತೇರು
ಏರಿ ಕಂಪನು ಬೀರು
ಹಾದಿ ಬೀದಿಯಲೆಲ್ಲ ಕನ್ನಡ
ಡಿಂಡಿಮ ಬಾರಿಸಿ ಸಾರು ||
ಏಳು ಎಂಟು ಕನ್ನಡಕೆಂಟು
ಜ್ಞಾನಪೀಠಕೆ ನಮಿಸು
ದಾಳಿಕೋರರಿಗೆ ಅಂಜದೆ ನಿಂತು
ಕನ್ನಡವನು ಬಳಸು ||
ಒಂಬತ್ತು ಹತ್ತು ಕನ್ನಡವೆ ಗತ್ತು
ಗಡಿಯಿಂದಾಚೆಗು ಬೆಳೆಸು
ಹೆತ್ತು ಹೊತ್ತಿಹ ತಾಯಿಯ ನೆಲವಿದು
ಶಾಶ್ವತವಿಲ್ಲಿಯೆ ನೆಲೆಸು ||
ಒಂದರಿಂದ ಹತ್ತು ಹೀಗಿತ್ತು
ಕನ್ನಡವ ಬಳಸುವ ಮನಸಿಟ್ಟು ||
-ಚನ್ನಕೇಶವ ಜಿ ಲಾಳನಕಟ್ಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್