ನೋಟು ರದ್ದತಿ: ಉದ್ದೇಶ ಮತ್ತು ಅನಪೇಕ್ಷಿತ ಪರಿಣಾಮ (ಭಾಗ ೨) - ಟಿ.ಆರ್.ಭಟ್
ಈ ಹಿಂದಿನ ನೋಟು ರದ್ದತಿಗಳು:
೧೯೪೬ ನೇ ಇಸವಿಯಲ್ಲಿ ಆಗಿನ ಬ್ರಿಟಿಷ್ ಸರಕಾರ ೫೦೦, ೧೦೦೦ ಮತ್ತು ೧೦೦೦೦ ರುಪಾಯಿ ನೋಟುಗಳನ್ನು ರದ್ದುಪಡಿಸಿತ್ತು. ಮುಂದೆ ೧೯೭೮ ರಲ್ಲಿ ಮೊರಾರ್ಜಿ ದೇಸಾಯಿ ಸರಕಾರ ೧೦೦೦, ೫೦೦೦ ಮತ್ತು ೧೦೦೦೦ ರುಪಾಯಿ ನೋಟುಗಳನ್ನು ರದ್ದುಪಡಿಸಿತ್ತು, ಅದರ ಉದ್ದೇಶ ಕಾಳಧನವನ್ನು ಹತೋಟಿಗೆ ತರಲೆಂದು ಆಗಿನ ಸರಕಾರವೂ ಹೇಳಿಕೊಂಡಿತ್ತು. ೧೯೭೮ರಲ್ಲಿ ಒಟ್ಟು ೯೧೭೦ ಕೋಟಿ ರುಪಾಯಿ ಮೌಲ್ಯದ ನೋಟುಗಳಲ್ಲಿ ೭೩ ಕೋಟಿ (೦.೮%) ಮಾತ್ರ ಅಧಿಕ ಮೌಲ್ಯದ ನೋಟುಗಳಾಗಿದ್ದವು.
೨೦೧೬ರ ಆರಂಭದಲ್ಲಿ ಸುಮಾರು ೧೭.೫೦ ಲಕ್ಷ ಕೋಟಿ ರುಪಾಯಿಯಷ್ಟು ಹಣ ಚಲಾವಣೆಯಲ್ಲಿತ್ತು; ಅದರಲ್ಲಿ ೫೦೦ ಮತ್ತು ೧೦೦೦ದ ನೋಟುಗಳ ಮೌಲ್ಯ ೧೪.೫೦ ಲಕ್ಷ ಕೋಟಿ. ಇವು ಹಿಂದಿನ ೧೫ ವರ್ಷಗಳ ಅವಧಿಯಲ್ಲಿ ಚಲಾವಣೆಗೆ ಬಂದ ನೋಟುಗಳು. ಇದರ ಶೇಕಡಾ ೮೬ ಪಾಲು ಅಧಿಕ ಮೌಲ್ಯದ, ರದ್ದತಿಗೊಂಡ ನೋಟುಗಳೇ. ಈ ಕಾರಣದಿಂದಾಗಿ ಈಗಿನ ನೋಟುರದ್ದತಿಯ ಪರಿಣಾಮ ತೀವ್ರವಾಗಿತ್ತು.
ಆರ್ಥಿಕತೆಯ ಮೇಲೆ ಹೊಡೆತ:
ಅಮಾನ್ಯಗೊಂಡ ನೋಟುಗಳ ಪ್ರಮಾಣ ಬೃಹತ್ತಾಗಿದ್ದಾಗ ಅವುಗಳನ್ನು ಬದಲಾಯಿಸುವ ಸೌಕರ್ಯ ಎಲ್ಲೆಡೆಯಲ್ಲಿ ಸುಲಭವಾಗಿ ಲಭ್ಯವಾಗಬೇಕಿತ್ತು. ಆದರೆ ಬ್ಯಾಂಕುಗಳಲ್ಲಿ ಅಸಾಧ್ಯ ಒತ್ತಡದಿಂದಾಗಿ ಬದಲಾವಣೆ ಮಾಡಿಕೊಳ್ಳುವದೂ ದುಸ್ತರವಾಗಿತ್ತು. ದೇಶದಲ್ಲಿರುವ ಸುಮಾರು ೨೨೦,೦೦೦ ಸ್ವಯಂಚಾಲಿತ ನಗದು ಯಂತ್ರ (ಎಟಿಎಂ) ಗಳನ್ನು ಹೊಸತಾಗಿ ಬಂದ ೨೦೦೦ ದ ಮತ್ತು ಭಿನ್ನ ಗಾತ್ರದ ಹೊಸ ೫೦೦ರ ನೋಟುಗಳಿಗೆ ಅಳವಡಿಸಿಕೊಳ್ಳಲು ಕನಿಷ್ಠ ಕಾಲಾವಕಾಶ ಬೇಕಿತ್ತು. ವರದಿಗಳ ಪ್ರಕಾರ, ೨೦೧೭ರ ಫೆಬ್ರವರಿ ಅಂತ್ಯದ ತನಕವೂ ಅನೇಕ ಎಟಿಏಂ ಗಳಲ್ಲಿ ಬೇಕಾದಷ್ಟು ನಗದು ಸಿಗುತ್ತಿರಲಿಲ್ಲ.
ಅವುಗಳ ಭೌತಿಕ ಸಾಮರ್ಥ್ಯಕ್ಕೂ ಮಿತಿ ಇದ್ದು ರದ್ದುಗೊಂಡ ೫೦೦ ಮತ್ತು ೧೦೦೦ದ ನೋಟುಗಳ ಬದಲಿಗೆ ಅಷ್ಟೇ ಮೌಲ್ಯದ ೧೦೦ರ ನೋಟುಗಳನ್ನು ಎಟಿಎಂಗಳಲ್ಲಿ ತುಂಬಿಸಲು ಸಾಧ್ಯವಿಲ್ಲದೆ ವಾರಕ್ಕೆ ಇಷ್ಟೇ ನಗದನ್ನು ಪಡಕೊಳ್ಳಬಹುದೆಂಬ ಹೊಸ ನಿಯಮವನ್ನು ಕಾರ್ಯಗತಗೊಳಿಸಲಾಯಿತು. ಹೊಸ ನೋಟುಗಳ ಪೂರೈಕೆ ಕಡಿಮೆಯಿದ್ದುದರಿಂದ ಚೆಕ್ಕು ನೀಡಿ ಪಡೆಯಬಹುದಾದ ನಗದಿಗೂ ಮಿತಿಯನ್ನು ಹೇರಲಾಯಿತು. ದೇಶದ ೬೪೧,೦೦೦ ಹಳ್ಳಿಗಳಲ್ಲಿರುವ ಸಹಕಾರಿ ಬ್ಯಾಂಕುಗಳಿಗೆ ನೋಟು ಬದಲಾಯಿಸುವ ಹಕ್ಕನ್ನು ಕೊಟ್ಟಿರಲಿಲ್ಲ.
ಈಗಾಗಲೇ ಲಭ್ಯವಿರುವ ಮಾಹಿತಿಯ ಪ್ರಕಾರ ನೋಟು ರದ್ದತಿಯಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳು ಹಿಂಜರಿದಿವೆ. ಕೃಷಿಕರಿಗೆ ತಮ್ಮ ಬೆಳೆಯನ್ನು ಮಾರಲು ಕಷ್ಟವಾದದ್ದು ಮಾತ್ರವಲ್ಲ ಮುಂದಿನ ಬೆಳೆಗೆ ಬೇಕಾದ ವಸ್ತುಗಳನ್ನು ಕೊಳ್ಳುವಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂತು. ಕೃಷಿಕಾರ್ಮಿಕರಿಗೆ ತಮ್ಮ ದುಡಿಮೆಗೆ ಕೂಲಿ ಕ್ಲಪ್ತಕಾಲದಲ್ಲಿ ಸಿಗದೆ ಸಮಸ್ಯೆ ಉಂಟಾಯಿತು. ನಗರ ಪ್ರದೇಶಗಳಲ್ಲಿನ ದುಡಿಯುವ ವರ್ಗಕ್ಕೂ ಇದೇ ಸಮಸ್ಯೆ ಬಂತು. ಅಲ್ಲಿ ಬಹುತೇಕ ಮಂದಿ ಗುತ್ತಿಗೆ ಆಧಾರಿತ ಕೆಲಸಗಾರರಾಗಿ ದುಡಿಯುತ್ತಿದ್ದವರು, ವಾರಕ್ಕೊಮ್ಮೆ ವೇತನ ಸಿಗುತ್ತಿರುವವರು ಸಮಯಕ್ಕೆ ಸರಿಯಾಗಿ ಹಣ ಸಿಗದೆ ಕಷ್ಟಕ್ಕೆ ಒಳಗಾದರು. ಕಿರಾಣಿ ಅಂಗಡಿಗಳು, ಬೀದಿಯಲ್ಲಿರುವ ಗೂಡಂಗಡಿಗಳು, ಕೈಗಾಡಿಗಳಲ್ಲಿ ವ್ಯಾಪಾರ ಮಾಡುವ ಸ್ವ-ಉದ್ಯೋಗಿಗಳು, ತರಕಾರಿ ಮತ್ತು ಹಣ್ಣು ಮಾರುವ ಸಣ್ಣಸಣ್ಣ ವ್ಯಾಪಾರಿಗಳು, ಸಣ್ಣ ಮಟ್ಟಿನ ಸಾರಿಗೆ ವಾಹನ ಓಡಿಸುವವರು - ಹೀಗೆ ಅರ್ಥವ್ಯವಸ್ಥೆಯ ತಳಮಟ್ಟದಲ್ಲಿ ದುಡಿದು ಸಂಪಾದಿಸುವ ಜನಸಾಮಾನ್ಯರಿಗೆ ನೋಟುಗಳ ಅಭಾವದ ಬಿಸಿ ಹೆಚ್ಚು ತಾಗಿತು. ಹಳ್ಳಿಗಳಿಂದ ದುಡಿದು ಸಂಪಾದಿಸಲು ನಗರ ಪ್ರದೇಶಗಳಿಗೆ ಬಂದ ವಲಸೆ ಕಾರ್ಮಿಕರು ದಾರಿಕಾಣದೆ ಮತ್ತೆ ತಮ್ಮ ಊರುಗಳಿಗೆ ಹೋಗಬೇಕಾಗಿ ಬಂತು. ದೇಶದಲ್ಲಿ ಒಂದು ಅಂದಾಜಿನಂತೆ ೧೫ ಕೋಟಿ ಕೂಲಿ ಕಾರ್ಮಿಕರಿದ್ದಾರೆ; ೨೫ ಕೋಟಿ ಸ್ವ-ಉದ್ಯೋಗಿಗಳಿದ್ದಾರೆ. ನೋಟು ರದ್ದತಿಯಿಂದಾಗಿ ದಿನ-ದಿನ ದುಡಿದು ಸಂಪಾದನೆ ಮಾಡುವ ಈ ೪೦ ಕೋಟಿ ಜನರು ತೀವ್ರವಾದ ಸಂಕಷ್ಟಕ್ಕೆ ಗುರಿಯಾದರು ಎಂದು ವರದಿಯಾಗಿದೆ.
ಕೇರಳದಂತಹ ರಾಜ್ಯದಲ್ಲಿ ಮೂರರಲ್ಲಿ ಒಂದಂಶ ಬ್ಯಾಂಕು ಠೇವಣಿಗಳು ಸಹಕಾರೀ ರಂಗದ ಸಂಸ್ಥೆಗಳಲ್ಲಿದ್ದು ಅವುಗಳನ್ನೇ ನಂಬಿದ್ದ ಗ್ರಾಹಕರು ಅತಂತ್ರಪರಿಸ್ಥಿತಿಯನ್ನು ಎದುರಿಸಬೇಕಾಯಿತು.
ಇದಲ್ಲದೆ ನೋಟುಗಳ ಅಭಾವದಿಂದಾಗಿ, ಅವು ಸಿಗುವುದರ ಕುರಿತಾದ ಅನಿಶ್ಚಿತತೆಯಿಂದಾಗಿ, ಮಧ್ಯಮ ವರ್ಗದವರೂ ತಮ್ಮ ದೈನಂದಿನ ಆರ್ಥಿಕವ್ಯವಹಾರಗಳನ್ನು ಕಡಿತಗೊಳಿಸಬೇಕಾಗಿ ಬಂತು. ಬ್ಯಾಂಕುಗಳ ಮುಂದೆ ಸರದಿಯಲ್ಲಿ ನಿಂತು ಹಣ ಪಡೆಯುವ ಕಷ್ಟ ತಪ್ಪಿಸಲು ಅತ್ಯಂತ ಅಗತ್ಯದ ವಸ್ತುಗಳನ್ನು ಮಾತ್ರ ಖರೀದಿಸಿ, ಮನೆಯಲ್ಲಿಯ ಆಪದ್ಧನವಾಗಿರಲಿ ಎಂದು ಸಿಕ್ಕಿದ ನೋಟುಗಳನ್ನು ಶೇಖರಿಸಿಡಲು ಆರಂಭಿಸಿದರು.
ತಮ್ಮ ಸರಕುಗಳಿಗೆ ಜನಸಾಮಾನ್ಯರಿಂದ ಬೇಡಿಕೆ ಕಡಿಮೆಯಾದಾಗ ಕಾರ್ಖಾನೆಗಳು ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಬಲವಂತವಾಗಿ ತಡೆಹಿಡಿಯಬೇಕಾಯಿತು. ಇದರಿಂದಾಗಿ ಅಲ್ಲಿದ್ದ ಗುತ್ತಿಗೆಯ ಕೆಲಸಗಾರರಿಗೆ ಉದ್ಯೋಗವಿಲ್ಲದೇ ಅವರ ಸಂಪಾದನೆಗೂ ಏಟು ಬಿತ್ತು.
ಆರ್ಥಿಕತೆ ಸ್ಥಿರವಾಗಿದ್ದು, ಅದು ಬೆಳೆಯಬೇಕಿದ್ದರೆ ಜನರಲ್ಲಿ ಹಣವಿರಬೇಕು; ಸರಕುಗಳ ಉತ್ಪಾದನೆಯಾಗಬೇಕು; ಸಾಗಾಣಿಕೆ ನಿರಾತಂಕವಾಗಿ ನಡೆಯಬೇಕು, ಸೇವೆಗಳು ನಿರಂತರವಾಗಿ ಲಭ್ಯವಾಗಬೇಕು. ಇವುಗಳೆಲ್ಲಾ ಸ್ಥಗಿತಗೊಂಡಾಗ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುತ್ತದೆ. ೨೦೧೬ ದಶಂಬರದಿಂದ ಆರಂಭವಾದ ಹಿನ್ನಡೆಯಿಂದ ನಮ್ಮ ದೇಶ ಇನ್ನೂ ಚೇತರಿಸಿಕೊಳ್ಳಬೇಕಷ್ಟೆ.
ವಿಶ್ವಾಸಕ್ಕೆ ಪೆಟ್ಟು:
ಒಂದು ದೇಶದ ಅರ್ಥ ವ್ಯವಸ್ಥೆ ಅದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಅವಲಂಬಿಸಿದೆ. ನೀತಿಗಳು, ನಿರ್ಧಾರಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಕ್ರಮಗಳಲ್ಲಿ ಯಾವುದೇ ತರದ ಅನಿಶ್ಚಿತತೆ ಇರಕೂಡದು. ಅಧಿಕಾರ ಹೊಂದಿದ ಸಂಸ್ಥೆ ಸಾಕಷ್ಟು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು. ಈ ದೃಷ್ಟಿಯಿಂದ ಪರಿಶೀಲಿಸಿದರೆ ಭಾರತೀಯ ರಿಸರ್ವ್ ಬ್ಯಾಂಕು ತನ್ನ ವಿವೇಚನೆಯನ್ನು ಉಪಯೋಗಿಸಲಿಲ್ಲ ಎಂಬ ವರದಿಗಳು ಬಂದಿವೆ. ನೋಟು ರದ್ದತಿಯ ನಿರ್ಧಾರ ಸರಕಾರದ್ದು; ಆದರೆ ಸರಕಾರವು ಆರ್.ಬಿ.ಐ.ಯೊಂದಿಗೆ ಇದರ ಬಗ್ಗೆ ಕೂಲಂಕಷ ಸಮಾಲೋಚನೆ ನಡೆಸಿಯೇ ಇರಲಿಲ್ಲ. ನೋಟು ರದ್ದತಿಯ ಹಿಂದಿನ ದಿನ ಆರ್. ಬಿ. ಐ.ಗೆ ಸರಕಾರ ತನ್ನ ನಿರ್ಧಾರವನ್ನು ತಿಳಿಸಿ ನೋಟು ರದ್ದತಿಗೆ ಅನುಮೋದನೆಯನ್ನು ಅಪೇಕ್ಷಿಸಿತು. ಇಂತಹ ಮಹತ್ವದ ನಿರ್ಧಾರವನ್ನು ಕೈಗೊಳ್ಳುವಾಗ ಕೇಂದ್ರೀಯ ಬ್ಯಾಂಕಿನ ೨೧ ಸದಸ್ಯರಿರುವ ನಿರ್ದೇಶಕ ಮಂಡಳಿ ಪೂರ್ಣ ಸದಸ್ಯರ ಸಭೆಯಲ್ಲಿ ಚರ್ಚಿಸಬೇಕು; ಆಗಲೇ ಮಂಡಳಿಯಲ್ಲಿ ೧೧ ಸ್ಥಾನಗಳು ಖಾಲಿ ಇದ್ದು ನೇಮಕಾತಿ ಇನ್ನೂ ಆಗಿರಲಿಲ್ಲ. ಇರುವ ೧೦ ನಿರ್ದೇಶಕರಲ್ಲಿ ಒಬ್ಬ ಗವರ್ನರ್ ( ರಘುರಾಮ್ ರಾಜನ್ ಸ್ಥಾನದಲ್ಲಿ ನೇಮಕವಾದ ಊರ್ಜಿತ್ ಪಟೇಲ್) ಮತ್ತು ನಾಲ್ಕು ಮಂದಿ ಉಪ-ಗವರ್ನರುಗಳು ಸೇರಿದಂತೆ ೭ ನಿರ್ದೇಶಕರು ತುರ್ತಾಗಿ ಒಟ್ಟು ಸೇರಿ ವಿಶೇಷ ಚರ್ಚೆಯೂ ಇಲ್ಲದೆ ಕೇವಲ ಅರ್ಧ ಗಂಟೆಯಲ್ಲಿ ಸರಕಾರದ ಪ್ರಸ್ತಾವಕ್ಕೆ ಅಂಗೀಕಾರದ ಮುದ್ರೆ ಒತ್ತಿದರು.
೮೬% ನೋಟುಗಳ ರದ್ದತಿಯಿಂದ ಆಗಬಹುದಾದ ದುಷ್ಪರಿಣಾಮಗಳು ಮತ್ತು ಪರ್ಯಾಯ ವ್ಯವಸ್ಥೆಯ ಬಗ್ಗೆ ಸ್ವತಂತ್ರ ವಿವೇಚನೆಯನ್ನು ಮಾಡದ ರಿಸರ್ವ್ ಬ್ಯಾಂಕಿನ ವರ್ತನೆ ತೀವ್ರವಾದ ಟೀಕೆಗೆ ಗುರಿಯಾಯಿತು. ಈ ಟೀಕೆಗಳು ಬ್ಯಾಂಕಿನ ಹಿಂದಿನ ಗವರ್ನರುಗಳಾದ ಡಿ.ಸುಬ್ಬರಾವ್, ವೈ. ವೇಣುಗೋಪಾಲ ರೆಡ್ಡಿ ಮತ್ತು ಬಿಮಲ್ ಜಾಲಾನ್, ಉಪ-ಗವರ್ನರುಗಳಾಗಿದ್ದ ಉಷಾ ಥೋರಟ್ ಮತ್ತು ಕೆ. ಸಿ. ಚಕ್ರವರ್ತಿ ಮುಂತಾದವರಿಂದಲೇ ಬಂದುದು ಗಮನಾರ್ಹ. ಆರ್.ಬಿ.ಐ.ಯ ಉದ್ಯೋಗಿಗಳ ಸಂಘಟನೆಗಳೂ ಬ್ಯಾಂಕಿನ ನಿರ್ಧಾರದಿಂದ ಆದ ಹಾನಿಯನ್ನು ಉಲ್ಲೇಖಿಸಿ ಗವರ್ನರ್ ಊರ್ಜಿತ್ ಪಟೇಲರಿಗೆ ಮನವಿಯನ್ನೂ ನೀಡಿದವು. ಇವುಗಳ ಒಟ್ಟು ಸಾರಾಂಶ: ಇಡೀ ಅರ್ಥ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರಬಲ್ಲ ನಿರ್ಧಾರಕ್ಕೆ ರಿಸರ್ವ್ ಬ್ಯಾಂಕಿನ ಆಡಳಿತ ಮಂಡಳಿ ಸಾಕಷ್ಟು ಚಿಂತನೆ ನಡೆಸದೆ ಅನುಮೋದನೆ ನೀಡುವ ಮೂಲಕ ತನ್ನ ಸ್ವಾಯತ್ತತೆಯನ್ನು ಕಳಕೊಂಡಿದೆ, ಆ ಮೂಲಕ ಒಂದು ಸ್ವತಂತ್ರ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂದು.
ನೋಟುರದ್ದತಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ಸರಕಾರ ಮತ್ತು ರಿಸರ್ವ್ ಬ್ಯಾಂಕು ಕೂಲಂಕಷ ಅಧ್ಯಯನ ನಡೆಸಿಲ್ಲ ಎಂಬುದಕ್ಕೆ ದಿನಕ್ಕೊಂದರಂತೆ ವಾಣಿಜ್ಯ ಬ್ಯಾಂಕುಗಳಿಗೆ ನೀಡಲಾಗುತ್ತಿದ್ದ ಮತ್ತು ಬದಲಾಗುತ್ತಿದ್ದ ನಿಯಮಗಳೇ ಸಾಕ್ಷಿ. ನವಂಬರ ೮ಕ್ಕೆ ಪ್ರಧಾನಿಯವರು ನೀಡಿದ ಆಶ್ವಾಸನೆಯ ಪ್ರಕಾರ ದಶಂಬರ ೩೦ರ ತನಕ ರದ್ದಾದ ನೋಟುಗಳನ್ನು ಯಾವುದೇ ಮಿತಿ ಇಲ್ಲದೆ ಹಾಗೂ ಪ್ರಶ್ನೆಗಳಿಲ್ಲದೆ ತಮ್ಮ ತಮ್ಮ ಬ್ಯಾಂಕು ಖಾತೆಗಳಿಗೆ ತುಂಬಿಸಿಬಹುದಾಗಿತ್ತು. (ಈ ಆಶ್ವಾಸನೆ ಫೆಬ್ರವರಿ ಕೊನೆಯ ತನಕವೂ ಅನೇಕ ಪೆಟ್ರೋಲು ಬಂಕುಗಳಲ್ಲಿ ಪ್ರಧಾನಿಯವರ ಚಿತ್ರವನ್ನೊಳಗೊಂಡ ಗೋಡೆಬರಹಗಳ ಮೂಲಕ ಎದ್ದು ಕಾಣುತ್ತಿತ್ತು). ಆಗಲೇ ನೋಟುಗಳ ಅಸಮರ್ಪಕ ಪೂರೈಕೆಯಿಂದ ಎಟಿಎಂಗಳಲ್ಲಿ ಹಣವಿಲ್ಲದೆ, ಬ್ಯಾಂಕು ಶಾಖೆಗಳಲ್ಲಿಯೂ ಬೇಕಾದಷ್ಟು ನಗದು ಇಲ್ಲದೆ ಜನಸಾಮಾನ್ಯರಿಗೆ ಬಿಸಿ ನಾಟಿತ್ತು. ತಮ್ಮದೇ ಹಣಕ್ಕೆ ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದಾಗ, ಪ್ರಶ್ನೆಗಳಿಗೆ ಉತ್ತರಿಸಬೇಕಾದಾಗ ಮತ್ತು ವಾಯಿದೆಯಾದರೂ ಸಾವಧಿ ಠೇವಣಿಯನ್ನು ಮರಳಿಪಡೆಯಲು ಕಷ್ಟವಾದಾಗ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಉಂಟಾಗುವುದು ಸಹಜ.
ಈ ಹಿನ್ನೆಲೆಯಲ್ಲಿ ’ನೋಟು ರದ್ದತಿಯ ನಿರ್ಧಾರ, ಪ್ರಾಮಾಣಿಕನಾಗಿ ದುಡಿದು ಸಂಪಾದಿಸುವ ಭಾರತೀಯನಿಗೆ ತೀವ್ರವಾದ ಆಘಾತವನ್ನೇ ಉಂಟುಮಾಡುತ್ತದೆ’ ಎಂಬ, ಮಾಜಿ ಪ್ರಧಾನಿ ಮನಮೋಹನ್ ಸಿಂಹರ ಹೇಳಿಕೆ ಗಮನಾರ್ಹ. (ಅವರು ಹಿಂದೆ ಆರ್. ಬಿ.ಐಯ ಗವರ್ನರ್ ಮತ್ತು ೧೯೯೧ ರಿಂದ ೧೯೯೬ ರ ತನಕ ಕೇಂದ್ರ ಸರಕಾರದ ವಿತ್ತಮಂತ್ರಿಯಾಗಿದ್ದವರು). ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಅವರಾಡಿದ ಇನ್ನೊಂದು ಮಾತನ್ನೂ ಇಲ್ಲಿ ಉದ್ಧರಿಸಬೇಕು: ’ಯುದ್ಧಸಂದರ್ಭದಲ್ಲಿ ರೇಶನ್ ಅಕ್ಕಿಗೆ ಕ್ಯೂ ನಿಂತ ಅನುಭವಿದ್ದ ನನಗೆ, ನನ್ನ ದೇಶದ ನಾಗರಿಕರು ತಮ್ಮದೇ ಹಣ ಪಡೆಯಲು ರೇಶನಿಗೆ ನಿಂತಂತೆ ಕಾಯಬೇಕಾಗಬಹುದೆಂದು ನಾನು ಊಹಿಸಿಯೂ ಇರಲಿಲ್ಲ’. ಇದೇ ಧಾಟಿಯಲ್ಲಿ ಬೆಲ್ಜಿಯಂನಲ್ಲಿ ಹುಟ್ಟಿ ಭಾರತಕ್ಕೆ ಬಂದು ನಮ್ಮ ಅರ್ಥವ್ಯವಸ್ಥೆಯ ಬಗ್ಗೆ ಅಗಾಧವಾದ ಅಧ್ಯಯನ ನಡೆಸಿ ಇಲ್ಲಿಯೇ ನೆಲೆಸಿರುವ ಜ್ಯಾನ್ ದ್ರೆಜ಼ೆಯವರೂ ಬ್ಯಾಂಕಿಂಗ್ ಕ್ಷೇತ್ರದ ವಿಶ್ವಾಸಾರ್ಹತೆಯ ಬಗ್ಗೆ ಧಕ್ಕೆಯಾಗಿದೆ ಎಂದಿದ್ದರು.
ಕಪ್ಪು ಹಣ ಬಯಲಿಗೆ ಬಂತೇ?
ನೋಟುರದ್ದತಿಯ ಪ್ರಧಾನ ಉದ್ದೇಶ ಕಪ್ಪು ಹಣವನ್ನು ಹೊರತರುವುದು ಎಂದು ಸರಕಾರ ಘೋಷಿಸಿತು. ಕಪ್ಪು ಹಣವನ್ನು ಅಧಿಕಮೌಲ್ಯದ ನೋಟುಗಳ ಕಂತೆಯ ರೂಪದಲ್ಲಿ ಶೇಖರಿಸಿಡಲಾಗುತ್ತದೆ, ಎಂಬ ಅಪಕ್ವ ಪೂರ್ವಕಲ್ಪನೆ ಈ ವಾದದ ಹಿಂದಿದೆ. ಈ ವಾದದಲ್ಲಿ ಹುರುಳಿಲ್ಲ ಎಂದು ೧೯೭೮ರ ನೋಟು ರದ್ದತಿಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಐ.ಜಿ.ಪಟೇಲರು ಅಂದೇ ಹೇಳಿದ್ದರು. ಕಪ್ಪು ಹಣವನ್ನು ನೋಟು ರದ್ದತಿಯ ಮೂಲಕ ಬಯಲಿಗೆಳೆಯಲು ಸಾಧ್ಯ ಎಂದಾಗಿದ್ದರೆ ೧೯೭೮ರ ಬಳಿಕ ಕಪ್ಪು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಏಳುತ್ತದೆ. ಈ ಸಮಸ್ಯೆಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ದೆಹಲಿಯ ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಅವರು ನೋಟುಗಳ ರೂಪದಲ್ಲಿ ಕಳ್ಳ ಸಂಪತ್ತನ್ನು ಯಾರೂ ಶೇಖರಿಸಿಡುವುದಿಲ್ಲ ಎಂದು ಹೇಳಿದ್ದಾರೆ. ಮನಮೋಹನ ಸಿಂಹರೂ ಇದೇ ಅರ್ಥದಲ್ಲಿ ಹೀಗೆ ಹೇಳಿದ್ದರು: ’ಎಲ್ಲಾ ನಗದು ಹಣ ಕಾಳಧನವಲ್ಲ ಮತ್ತು ಎಲ್ಲಾ ಕಾಳಧನ ನಗದು ರೂಪದಲ್ಲಿಲ್ಲ’. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಧಾಳಿ ನಡೆಸಿ ಸಿಕ್ಕಿದ ಅಕ್ರಮ ಸಂಪತ್ತಿನಲ್ಲಿ ಕೇವಲ ೬% ಮಾತ್ರ ನಗದು ಹಣದ ರೂಪದಲ್ಲಿದ್ದು ಉಳಿದ ಅಂಶ ಚಿನ್ನ ಮತ್ತು ಇನ್ನಿತರ ವಸ್ತುಗಳ ರೂಪದಲ್ಲಿತ್ತು ಎಂದು ವರದಿಯಾಗಿದೆ.
ಸರಕಾರ ನೀಡಿದ ೫೦ ದಿನಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕಿಗೆ ಮರಳಿ ಬಂದ ರದ್ದಾದ ನೋಟುಗಳ ಪೂರ್ತಿ ವಿವರ ನಮ್ಮ ಮುಂದೆ ಬಂದಿಲ್ಲ. ಆದರೆ ಸುಮಾರಾಗಿ ಚಲಾವಣೆಯಲ್ಲಿದ್ದ ಬಹುತೇಕ ಅಧಿಕ ಮೌಲ್ಯದ ನೋಟುಗಳು ತನಗೆ ಬಂದಿದೆ ಎಂದು ಬ್ಯಾಂಕು ಹೇಳಿಕೊಂಡಿದೆ ಎಂಬುದು ಇಲ್ಲಿ ಪ್ರಸ್ತುತವಾಗುತ್ತದೆ. ಹಾಸಿಗೆ, ತಲೆದಿಂಬು, ಕವಾಟುಗಳಲ್ಲಿ ನೋಟುಗಳ ಕಂತೆಯ ರೂಪದಲ್ಲಿ ಕಾಳಧನವನ್ನು ಅಡಗಿಸಿಟ್ಟಿದ್ದರೆ ಚಲಾವಣೆಯಲ್ಲಿದ್ದ ನೋಟುಗಳು ರಿಸರ್ವ್ ಬ್ಯಾಂಕಿಗೆ ಹೇಗೆ ಮತ್ತೆ ಬಂದವು ಎಂಬ ಪ್ರಶ್ನೆ ಏಳುತ್ತದೆ. ಅದೂ ಅಲ್ಲದೆ ೧೦೦೦ದ ನೋಟನ್ನು ರದ್ದುಗೊಳಿಸಿ ಕೂಡಲೇ ೨೦೦೦ದ ನೋಟನ್ನು ಚಲಾವಣೆಗೆ ತರುವ ನಿರ್ಧಾರ ಅಧಿಕಮೌಲ್ಯದ ನೋಟುಗಳನ್ನು ಅಮಾನ್ಯಮಾಡುವ ಉದ್ದೇಶವನ್ನು ಪ್ರಶ್ನಾರ್ಹಗೊಳಿಸುತ್ತದೆ.
ಕಳ್ಳನೋಟುಗಳ ಚಲಾವಣೆಯ ಮೇಲೆ ಆಗದ ಹತೋಟಿ?
ನೋಟುಗಳ ರದ್ದತಿಯ ಇನ್ನೊಂದು ಉದ್ದೇಶ ಕಳ್ಳನೋಟುಗಳ ಚಲಾವಣೆಯ ಮೇಲೆ ಹೊಡೆತ ನೀಡುವುದು. ಇದರ ಔಚಿತ್ಯವನ್ನು ಚಲಾವಣೆಯಲ್ಲಿ ಎಷ್ಟು ಪ್ರಮಾಣದಲ್ಲಿ ನಕಲಿ ನೋಟುಗಳಿವೆ ಎಂದು ತಿಳಿದು ಪರಿಶೀಲಿಸಬೇಕು.
ನಕಲಿ ನೋಟುಗಳ ಬಗ್ಗೆ ನಿಖರವಾದ ಅಂಕಿ ಅಂಶ ರಿಸರ್ವ್ ಬ್ಯಾಂಕಿಗಾಗಲೀ, ಕೇಂದ್ರ ಸರಕಾರಕ್ಕಾಗಲೀ ತಿಳಿದಿಲ್ಲ; ತಿಳಿಯಲು ಸಾಧ್ಯವೂ ಇಲ್ಲ. ರಿಸರ್ವ್ ಬ್ಯಾಂಕಿನ ವರದಿಯಂತೆ ಬ್ಯಾಂಕುಗಳ ಮೂಲಕ ೨೦೧೫-೧೬ಕ್ಕೆ ಪತ್ತೆ ಹಚ್ಚಲ್ಪಟ್ಟ ೫೦೦ರ ಖೋಟಾ ನೋಟುಗಳ ಪ್ರಮಾಣ ಒಟ್ಟು ೫೦೦ರ ನೋಟುಗಳ ೦.೦೦೦೦೧೬%ರಷ್ಟಿತ್ತು. ೧೦೦೦ ದ ಖೋಟಾ ನೋಟುಗಳ ಪ್ರಮಾಣ ೦.೦೦೦೦೨% ರಷ್ಟಿತ್ತು. ಪೊಲೀಸರು ವಶಪಡಿಸಿಕೊಂಡ ನಕಲಿ ೫೦೦ರ ನೋಟುಗಳ ಪ್ರಮಾಣ ೨೦೧೫ರಲ್ಲಿ ೦.೦೦೧೯% ಆಗಿದ್ದು, ೧೦೦೦ ದ ನೋಟುಗಳ ಪ್ರಮಾಣ ೦.೦೦೨೮% ರಷ್ಟಿತ್ತು.
೨೦೧೨ ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ಸರಕಾರದ ಸಲಹೆಯಂತೆ ಈ ಬಗ್ಗೆ ಅಧ್ಯಯನವನ್ನು ನಡೆಸಿತ್ತು. ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಅಗೋಸ್ತು ೨೦೧೫ರಲ್ಲಿ ಈಗಿನ ಸರಕಾರವು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಕಲಿನೋಟುಗಳು ಸುಮಾರು ೪೦೦ ಕೋಟಿ ರುಪಾಯಿಗಳಷ್ಟಿವೆ ಮತ್ತು ಅವುಗಳ ಮೌಲ್ಯ ಹಿಂದಿನ ನಾಲ್ಕು ವರ್ಷಗಳಿಂದ ಅದೇ ಮಟ್ಟದಲ್ಲಿದೆ ಎಂದೂ ತಿಳಿಸಿತ್ತು.
೪೦೦ ಕೋಟಿ ನಕಲಿ ಹಣದ ಮೇಲೆ ದಿಗ್ಬಂಧನಕ್ಕೆ ೧೪ ಲಕ್ಷ ಕೋಟಿ ಮೌಲ್ಯದ ನೋಟುಗಳನ್ನೇ ಅಮಾನ್ಯ ಮಾಡಬೇಕಿತ್ತೇ ಎಂಬ ಪ್ರಶ್ನೆಗೆ ಸುಲಭದಲ್ಲಿ ಉತ್ತರ ಸಿಗಲಾರದು.