ಪದುಮನಾಭನ ಹೃದಯವೇಣಿ

ಪದುಮನಾಭನ ಹೃದಯವೇಣಿ

ಕವನ

ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ

ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ

ಧಾರಿಣೀ ದೇವಿ ಒಲಿದು ಬಾರಮ್ಮ

ಪದುಮನಾಭನ ಹೃದಯವೇಣಿಯೇ ಬಾರಮ್ಮ//

 

ದುರುಳ ರಕ್ಕಸ ಜಲಂಧರನ ಮಡದಿ

ವೃಂದಾ ದೇವಿ ನೀನಾಗಿದ್ದೆಯಮ್ಮ

ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ

ಪುರುಷೋತ್ತಮನ ವರಿಸಿ ಧನ್ಯಳಾದೆಯಮ್ಮ//

 

ಕ್ಷೀರ ಸಾಗರ ಮಥನದಿ ಉದ್ಭವಿಸಿದೆ

ಅಮೃತ ಕಲಶದೊಳಗೆ ದೇವ ಬಿಂದುವಾದೆ

ತುಳಸಿ ನಾಮಾಂಕಿತಳು ಧನ್ಯಳೋ ನೀನು

ಲಕ್ಷ್ಮೀ ನಾರಾಯಣನಿಂದ ಮಾನ್ಯಳೋ ನೀನು//

 

ಉತ್ಥಾನ ದ್ವಾದಶಿಗೆ ಪೂಜೆಯು ನಿನಗಮ್ಮ

ಧಾತ್ರೀ ಸಹಿತ ಸಕಲ ವಂದನೆಗಳು ನಿನಗಮ್ಮ

ಶ್ರೀ ಕೃಷ್ಣ ತುಲಾಭಾರದಿ ಎಸಳು ನೀನಾದೆ

ಭಾಮಾದೇವಿಯ ಗರ್ವವ ಮುರಿದೆಯಮ್ಮ//

 

ಆರೋಗ್ಯ ದಾಯಕಿ ಪರಮ ಪವಿತ್ರಳು

ದಿವ್ಯಾಭರಣ ಭೂಷಿತಳು ರತ್ನ ರೂಪಿಣಿಯೇ

ಸರ್ವ ಪಾಪಗಳ ಪರಿಹರಿಸಿ  ಪೊರೆಯಮ್ಮ

ಮಣಿಕರ್ಣಿಕಾಯೇ ಪಾಹಿಮಾಂ ಪಾಹಿಮಾಂ//

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್