ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ! ಇ-ಲೋಕ-17(6/4/2007)

ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ! ಇ-ಲೋಕ-17(6/4/2007)

ಬರಹ

ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ!

 ಅಮೆರಿಕಾದ ವಾರಪತ್ರಿಕೆ ವೀಕ್‌ಮ್ಯಾಗಜೀನ್ ಎಪ್ರಿಲ್ ತಿಂಗಳ ಮೂರನೇ ವಾರದ ಸಂಚಿಕೆಯನ್ನು ಪರಿಸರದ ಬಗೆಗೆ ಪ್ರಕಟಿಸಲಿದೆ. ಈ ವಿಶೇಷ ಸಂಚಿಕೆಯನ್ನು ಮುದ್ರಿಸದೆ, ಇದನ್ನು ಅಂತರ್ಜಾಲ ತಾಣ http://theweekmagazine.com/ದಲ್ಲಿ ಲಭ್ಯವಾಗಿಸಿ,ಪತ್ರಿಕೆಯನ್ನು ಮುದ್ರಿಸಲು ಬಳಕೆಯಾಗುವ ಕಾಗದ ಉಳಿಸಿ,ಅದರ ಮೂಲಕ ಪರಿಸರ ರಕ್ಷಣೆಗೆ ತನ್ನ ಅಳಿಲುಸೇವೆ ನೀಡಲು ಪತ್ರಿಕೆ ನಿರ್ಧರಿಸಿದೆ. ಈ ಸಂಚಿಕೆ ಅಂತರ್ಜಾಲದಲ್ಲಿ ಒಂದೇ ವಾರ ಲಭ್ಯವಿರುತ್ತದೆ. ಸಂಚಿಕೆಯ ಪೂರ್ತಿ ವೆಚ್ಚವನ್ನು ಭರಿಸಲು ಕಂಪೆನಿಯೊಂದು ಮುಂದೆ ಬಂದಿರುವುದು ಇನ್ನೊಂದು ವಿಶೇಷ. ಪತ್ರಿಕೆಯ ಪ್ರತಿ ವಾರದ ಸಂಚಿಕೆಯೂ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದರೂ, ಅದು ಸಂಚಿಕೆಯ ಆಯ್ದ ಭಾಗಗಳನ್ನಷ್ಟೇ ಓದುಗರಿಗೆ ನೀಡುತ್ತದೆ. ಪ್ರತೀ ತಿಂಗಳೂ ಸರಾಸರಿ ಒಂದೂವರೆ ಲಕ್ಷ ಹೊಸ ಆನ್‌ಲೈನ್ ಓದುಗರು ಲಭ್ಯವಾಗುತ್ತಾರೆ. ಪತ್ರಿಕೆಯ ಪ್ರಸಾರ ವಾರಕ್ಕೆ ನಾಲ್ಕು ಲಕ್ಷ. ಚಿಕಾಗೋ ಸನ್‌ ಟೈಮ್ಸ್, ಟೊರೊಂಟೋ ಸ್ಟಾರ್‍ ಅಂತಹ ಮುಂಜಾವಿನ ಪತ್ರಿಕೆಗಳು, ಮಧ್ಯಾಹ್ನದ ಆವೃತ್ತಿಯನ್ನು ಹೊಸದಾಗಿ ಹೊರಡಿಸಲು ಆರಂಭಿಸಿದರೂ,ಅವನ್ನು ಅಂತರ್ಜಾಲದಲ್ಲಿ ಮಾತ್ರಾ ಒದಗಿಸುವ ಪ್ರಯೋಗ ನಡೆಸುತ್ತಿವೆ. ಈ ಮೂಲಕ ಅಂತರ್ಜಾಲದಲ್ಲಿ ಹೆಚ್ಚಿನ ಜಾಹೀರಾತು ಗಳಿಸುವುದು ಅವುಗಳ ಉದ್ದೇಶ. ಇನ್ನು ಕೆಲವು ನಿಯತಕಾಲಿಕಗಳು ತಮ್ಮ ಮುದ್ರಣ ನಿಲ್ಲಿಸಿ, ಅಂತರ್ಜಾಲ ತಾಣದ ಮೂಲಕ ಮಾತ್ರಾ ಓದುಗರನ್ನು ತಲುಪುತ್ತವೆ. ಇಂತಹ ಪತ್ರಿಕೆಗಳಲ್ಲಿ ಪ್ರಖ್ಯಾತ ಟೈಮ್ಸ್‌ ವಾರ್ನರ್‍ ಗುಂಪಿನ ಪತ್ರಿಕೆಯೂ ಇದೆ.

ಬೆರಳಚ್ಚು ತೆಗೆದುಕೊಂಡು ಸಂಬಳ ವಿತರಿಸುವ ಏಟಿಎಂ ಯಂತ್ರಗಳು

 ಬಿಹಾರದಲ್ಲಿ ರಾಷ್ಟ್ರೀಯ ಹಳ್ಳಿಗಾಡಿನ ಉದ್ಯೋಗ ಖಾತರಿ ಯೋಜನೆ ಜಾರಿಯಲ್ಲಿದೆ. ಆದರೆ ಯೋಜನೆಯ ಫಲಾನುಭವಿಗಳಿಗೆ ವೇತನ ನೀಡುವಾಗ ಸಹಿ ಪಡೆಯುವ ಮೊತ್ತವೇ ಒಂದು,ವಿತರಣೆಯಾಗುವ ಮೊತ್ತವೇ ಬೇರೆ. ಇಂತಹ ಅಕ್ರಮವನ್ನು ತಪ್ಪಿಸಲು, ರಾಜ್ಯ ಸರಕಾರ ಬೆರಳಚ್ಚು ಗುರುತಿನ ಮೂಲಕ ಫಲಾನುಭವಿಗಳಿಗೆ ಏಟಿಎಂ ಯಂತ್ರದ ಮೂಲಕ ವೇತನ ವಿತರಿಸುವ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಕೂಲಿಗಳನ್ನು ನೇಮಿಸುವಾಗಲೇ ಅವರ ಬೆರಳಚ್ಚು ತೆಗೆದುಕೊಂಡು ಕಂಪ್ಯೂಟರಿನಲ್ಲಿ ದಾಖಲಿಸಲಾಗುತ್ತದೆ. ತಿಂಗಳಾಂತ್ಯದಲ್ಲಿ ಕೂಲಿಕಾರರು ಏಟಿಎಂ ಯಂತ್ರದಲ್ಲಿ ತಮ್ಮ ಏಟಿಎಂ ಕಾರ್ಡ್‌ನ್ನು ಯಂತ್ರದೊಳಗೆ ತುರುಕಿ,ಅದು ನೀಡುವ ಧ್ವನ್ಯಾದೇಶಗಳ ಅನುಸಾರ,ಬೆರಳನ್ನು ಸ್ಕ್ಯಾನರ್‌ನ ಮೇಲಿರಿಸಿ, ಗರಿಗರಿ ನೋಟುಗಳ ಮೂಲಕ ತನ್ನ ವೇತನ ಪಡೆಯುತ್ತಾರೆ. ಅಕ್ರಮಗಳನ್ನು ತಡೆಗಟ್ಟುವುದೇ ಅಲ್ಲದೆ, ವೇತನ ಪಡೆಯಲು ದೂರದೂರಿಗೆ ಸಾಗಿ,ತನ್ನ ಒಂದು ದಿನವನ್ನು ವ್ಯರ್ಥಗೊಳಿಸುವ ತೊಂದರೆಯನ್ನೂ ಯಂತ್ರ ಇಲ್ಲವಾಗಿಸಿದೆ.

ಮಿಥ್ಯಾ ಚಿಕಿತ್ಸೆ ನೀಡುವ ಚೀನೀ ವೈದ್ಯ!dr.shaha

 ಉತ್ತರ ಅಮೆರಿಕಾದಂತಹ ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲೇ ತನ್ನ ಮಿಥ್ಯಾ ಚಿಕಿತ್ಸೆಯ ಮೂಲಕ ಜನರನ್ನು ಬೆರಗುಗಳಿಸುತ್ತಿರುವ ಚೀನೀ ಮೂಲದ ವೈದ್ಯ ಸುದ್ದಿ ಮಾಡುತ್ತಿದ್ದಾರೆ.ಮೂಲತಃ ಆಕ್ಯುಪಂಕ್ಚರ್‍ ಸೂಜಿ ಚಿಕಿತ್ಸೆ ನೀಡುತ್ತಿದ್ದ ಡಾ.ಶಹಾ, ಅಮೆರಿಕಾಕ್ಕೆ ಬಂದು ದಶಕಗಳೇ ಕಳೆದಿವೆ. ವಿಶ್ವಸಂಸ್ಥೆಯಿಂದ ಮಾನ್ಯತೆಯನ್ನೂ ಪಡೆದ ವೈದ್ಯನೀತ. ಆದರೀಗ ಶಹಾ ಚಿಕಿತ್ಸೆ ನೀಡುವುದು ದೈವ ಸಹಾಯದಿಂದ ಎಂದು ಹೇಳಿಕೊಳ್ಳುತ್ತಿದ್ದಾನೆ. ಹೈಟೆಕ್ ಪದಗಳನ್ನು ಬಳಸಿಕೊಂಡು ತನ್ನ ಚಿಕಿತ್ಸೆಯನ್ನು ದೈವ ತಂತ್ರಾಂಶ ಆಧಾರಿತ ಎಂದಾತ ಹೇಳುತ್ತಾನೆ.ದೇವರು ತನಗೆ ವಿವಿಧ ಚೈತನ್ಯ ತಂತ್ರಾಂಶಗಳನ್ನು ನೀಡುತ್ತಾನೆ. ಅದನ್ನು ತಾನು ಡೌನ್‌ಲೋಡ್ ಮಾಡಿ ದೇಹವೆಂಬ ಕಂಪ್ಯೂಟರಿನಲ್ಲಿ ಅಳವಡಿಸುತ್ತೇನೆ. ನವೀನ ಆವೃತ್ತಿಯ ತಂತ್ರಾಂಶ ಹೊಸ ಸೌಕರ್ಯಗಳನ್ನು ಬಳಕೆದಾರರಿಗೆ ನೀಡುವಂತೆ, ಹೊಸ ಚೈತನ್ಯ ತಂತ್ರಾಂಶಗಳು ದೇಹಕ್ಕೆ ಹೊಸ ಚೈತನ್ಯ ನೀಡುತ್ತವೆ ಎಂದು ಶಹಾ ವಿವರಿಸಿದರೆ,ಜನ ಬೆರಗಾಗಿ ನೋಡುತ್ತಾರೆ. ಈತ ಸಾರ್ವಜನಿಕರ ಎದುರು ಕ್ಯಾನ್ಸರ್‍ ಪೀಡಿತ, ಬೆನ್ನೆಲುಬು ಸಮಸ್ಯೆಯುಳ್ಳ ರೋಗಿಗಳಿಗೆ ಹೊಸ ತಂತ್ರಾಂಶ ಅನುಸ್ಥಾಪಿಸುವ ಮೂಲಕ ಪರಿಹಾರ ಒದಗಿಸಿದ ಪ್ರದರ್ಶನ ಅಂತರ್ಜಾಲದಲ್ಲಿ ವಿತರಣೆಯಾಗುತ್ತಿದೆ.ಈ ಹೊಸ ವೈದ್ಯ ಪದ್ಧತಿ ಬಗ್ಗೆ ತಜ್ಞ ವೈದ್ಯರು ಅತಿ ಎಚ್ಚರಿಕೆಯ ಪ್ರತಿಕ್ರಿಯೆ ಮಾತ್ರಾ ನೀಡುತ್ತಾರೆ. ನಂಬಿಕೆಗೆ ರೋಗಗಳನ್ನು ಗುಣ ಪಡಿಸುವ ಶಕ್ತಿ ಇದೆ. ಅದರಂತೆ ಪ್ರಾರ್ಥನೆಯೂ ರೋಗ ಚಿಕಿತ್ಸೆಯಲ್ಲಿ ಧನಾತ್ಮಕ ಪರಿಣಾಮ ನೀಡುವುದು ಸಿದ್ಧವಾಗಿದೆ. ಆ ಮಟ್ಟಿಗೆ ಶಹಾನ ಚಿಕಿತ್ಸೆ ಫಲಕಾರಿಯಾದರೆ ಆಶ್ಚರ್ಯವೇನಿಲ್ಲ ಎನ್ನುವುದು ಹೆಚ್ಚಿನವರ ನಿಲುವು. ಶಹಾ ಆಕ್ಯುಪಂಕ್ಚರ್‍ ಚಕಿತ್ಸೆಗೆ ಸೂಜಿಯನ್ನೂ ಡೌನ್‌ಲೋಡ್ ಮಾಡಿಕೊಂಡು, ಸಾಮೂಹಿಕವಾಗಿ ಸಹಸ್ರಾರು ಜನರಿಗೆ ಸೂಜಿ ಚಿಕಿತ್ಸೆ ನೀಡುವ ವಿನೂತನ ಪ್ರಯೋಗವನ್ನೂ ನಡೆಸಿದ್ದಾನೆ. ಕಂಪ್ಯೂಟರ್‍ ದ್ವಿಮಾನ ಸಂಖ್ಯಾ ಪದ್ಧತಿಯಲ್ಲಿ ಕಾರ್ಯಾಚರಿಸುತ್ತದೆ ನೋಡಿ. ರೋಗಿಗಳಿಗೆ ಅವರ ಖಾಯಿಲೆಯ ಆಧಾರದಲ್ಲಿ, ಸಂಖ್ಯೆಯನ್ನು ನೀಡಿ,ಸಂಖ್ಯೆಯಾಧರಿಸಿದ ಚೀನೀ ಶಬ್ದ(ಮಂತ್ರ) ಉಚ್ಛರಿಸಿ, ರೋಗ ಮುಕ್ತಿ ಕಾಣುವ ಇನ್ನೊಂದು ಚಿಕಿತ್ಸೆಯನ್ನೂ ನೀಡುತ್ತಾನೆ.ಈತನ ಸೃಜನಶೀಲತೆಗೆ ಭೇಷ್ ಎನ್ನಲೇ ಬೇಕು.ನೀವೇನಂತೀರಿ? *ಅಶೋಕ್‌ಕುಮಾರ್‍ ಎ