ಪುಟ್ಟಿಯ ದಿನಚರಿ

ಪುಟ್ಟಿಯ ದಿನಚರಿ

ಬರಹ

ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ
ಹತ್ತಿರ ಹೋಗಲು ನಗುತಾಳೆ
ಹಾಡಿ ಹಾಡಿ ಕುಣಿತಾಳೆ

ಹಾಲು ಬೇಕು ಅಂತಾಳೆ
ಕೊಟ್ಟರೆ ಹಾಲು ಚಲ್ತಾಳೆ
ಅಮ್ಮ ಪೆಟ್ಟು ಕೊಡುತಾಳೆ
ಪೆಟ್ಟಿಗೆ ಹೆದರಿ ಓಡ್ತಾಳೆ

ಮತ್ತೆ ಬಂದು ಕರಿತಾಳೆ
ಆಟ ಆಡು ಅಂತಾಳೆ
ಆಡಲು ಹೋದರೆ ಬೀಳ್ತಾಳೆ
ಬಿದ್ದು ಬಿದ್ದು ಏಳ್ತಾಳೆ

ಅಮ್ಮ ಅಡಿಗೆ ಮಾಡ್ತಾಳೆ
ಇವಳೂ ಹೋಗಿ ನೋಡ್ತಾಳೆ
ಊಟ ಹಾಕು ಅಂತಾಳೆ
ತರಲು ಊಟ ಓಡ್ತಾಳೆ

ಅಮ್ಮ ಹೋಗಿ ಹಿಡಿತಾಳೆ
ಹೈಚೇರ್ ಮೇಲೆ ಕೂರ್‍ಸ್ತಾಳೆ
ಭಾರೀ ಜೋರು ಮಾಡ್ತಾಳೆ
ಇವಳು ಸುಮ್ನೆ ತಿಂತಾಳೆ

ಊಟ ಮುಗಿಸಿ ಏಳ್ತಾಳೆ
ನಿದ್ದೆ ಬರುತ್ತೆ ಅಂತಾಳೆ
ಅಮ್ಮ ತಟ್ಟಿ ಹಾಡ್ತಾಳೆ
ಇವಳು ನಿದ್ದೆ ಮಾಡ್ತಾಳೆ

ನಿದ್ದೆ ಮುಗಿದು ಏಳ್ತಾಳೆ
ಮತ್ತೆ ಶುರು ಮಾಡ್ತಾಳೆ
ಅಮ್ಮ ಅಮ್ಮ ಎನುತಾಳೆ
ಕೂಗಿ ಕೂಗಿ ಅಳುತಾಳೆ

( ಹೈ ಚೇರ್ ಅಂದರೆ ಮಕ್ಕಳನ್ನು  ಬೆಲ್ಟ್ ಹಾಕಿ ಕಟ್ಟಿ ಕೂರಿಸಿ ಊಟ ಮಾಡಿಸಲೆಂದೇ ಇರುವ ಕುರ್ಚಿ )