ಪುಟ್ಟ ದೇಶ, ದಿಟ್ಟ ಹೆಜ್ಜೆ

ಪುಟ್ಟ ದೇಶ, ದಿಟ್ಟ ಹೆಜ್ಜೆ

ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ,  ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನಾವೇನಾದರೂ ಕೇಳಿದ್ದಿದ್ದರೆ ಅದು ಒಂದು ಪ್ರವಾಸಿ ತಾಣ ಎಂದು ಮಾತ್ರ. ನಮ್ಮ ಗೋವಾ ರೀತಿಯದು.  


ದಿನನಿತ್ಯ ದ ಸಾಮಗ್ರಿಗಳ ಬೆಲೆ ವಿಪರೀತ ಏರಿದ್ದು ಮಾತ್ರವಲ್ಲದೆ ನಿರುದ್ಯೋಗ ಸಮಸ್ಯೆಯೂ ಕಿತ್ತು ತಿನ್ನಲು ಆರಂಭಿಸಿದಾಗ ಜನ ಸಿಡಿದೆದ್ದರು ಟುನೀಸಿಯಾದಲ್ಲಿ. ಓರ್ವ ಯುವಕ ಆತ್ಮಹತ್ಯೆ ಮಾಡಿ ಕೊಳ್ಳುವುದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು. ಅಧ್ಯಕ್ಷ ಜೈನುಲ್ ಆಬಿದೀನ್ ಬಿನ್ ಅಲಿ ತಾನು ಆಳುವ ಜನರ ನಾಡಿಮಿಡಿತ ಅರಿಯಲು ವಿಫಲನಾದ. ಪ್ರತಿಭಟಿಸುತ್ತಿದ್ದ ಜನರನ್ನು ಬಲಪ್ರಯೋಗದ ಮೂಲಕ ಅಡಗಿಸಲು ಯತ್ನಿಸಿದ. ಹತ್ತಾರು ಜನರು ಸತ್ತರು. ಜನ ಜಗ್ಗಲಿಲ್ಲ. ಬೀದಿಗಳಿಂದ ಮನೆಗೆ ಹೋಗಲು ನಿರಾಕರಿಸಿ ಉಗ್ರವಾಗಿ ಪ್ರತಿಭಟಿಸಿದರು. ಭ್ರಷ್ಟ  ಲಂಚಗುಳಿ ಅಧ್ಯಕ್ಷನ ಸಂಬಂಧಿಯೊಬ್ಬನನ್ನು ಹಾಡು ಹಗಲೇ ಕೊಲೆ ಮಾಡಿದರು. ಇದನ್ನು ಕಂಡು ಕಂಗಾಲಾದ  ಬಿನ್ ಅಲಿ ಕಾಲಿಗೆ ಬುದ್ಧಿ ಹೇಳಿದ. ಫ್ರಾನ್ಸ್ ದೇಶ ಅಭಯ ನೀಡಲು ನಿರಾಕರಿಸಿದಾಗ ಸೌದಿ ಅರೇಬಿಯಾ ಆಶ್ರಯ ನೀಡಿತು. ನೇರವಾಗಿ ಜೆದ್ದಾ ನಗರಕ್ಕೆ ಬಂದ ಬಿನ್ ಅಲಿ. ಉಗಾಂಡಾ ದೇಶದ ಸರ್ವಾಧಿಕಾರಿ ದಿವಂಗತ ಇದಿ ಅಮೀನ್ ಮತ್ತು ಪಾಕಿನ ನವಾಜ್ ಶರೀಫ್ ರಂಥ ಭ್ರಷ್ಟ ಅತಿಥಿ ಗಳಿಗೆ ಆಶ್ರಯ ನೀಡಿದ ಕೆಂಪು ಸಮುದ್ರದ ವಧು, ಜೆಡ್ಡಾ ನಗರ ಬಿನ್ ಅಲಿಯನ್ನೂ ಸ್ವಾಗತಿಸಿತು ತನ್ನ ತೀರಕ್ಕೆ.  


ಪ್ರತಿಭಟಿಸುವ ಅಸ್ತ್ರವಾಗಿ ಜೀವವನ್ನು ಕಳೆದು ಕೊಳ್ಳುವುದು ತೀರಾ ಅಪರೂಪ ಮುಸ್ಲಿಂ ಜಗತ್ತಿನಲ್ಲಿ. ಹುಟ್ಟಿಗೆ ಕಾರಣನಾದ ದೇವರೇ ಕಳಿಸಬೇಕು ದೇವದೂತನನ್ನು ಜೀವ ತೆಗೆಯಲು. ಆತ್ಮಹತ್ಯೆ ಮಹಾ ಪಾಪ. ಯಾವುದೇ ಸಮಜಾಯಿಷಿ ಇಲ್ಲ ಜೀವ ಕಳೆದುಕೊಳ್ಳುವ ಕೃತ್ಯಕ್ಕೆ. ಆದರೆ ಮನುಷ್ಯ ಹಸಿದಾಗ, ನಿಸ್ಸಹಾಯಕನಾಗಿ ಗೋಡೆಗೆ ದೂಡಲ್ಪಟ್ಟಾಗ ಧರ್ಮ back seat ತೆಗೆದು ಕೊಳ್ಳುತ್ತದೆ. ಟುನೀಸಿಯಾದಲ್ಲಿ ಆದದ್ದು ಇದೇ. ಬರೀ ಅಧ್ಯಕ್ಷ ಮಾತ್ರ ಭ್ರಷ್ಠನಲ್ಲ. ಈತನ ಮಡದಿ ಸಹ ಮುಂದು ಖಜಾನೆಯ ಲೂಟಿಯಲ್ಲಿ.  ಒಂದೂವರೆ ಟನ್ನುಗಳಷ್ಟು ಚಿನ್ನವನ್ನು ತೆಗೆದುಕೊಂಡು ದೇಶ ಬಿಟ್ಟಳು. ಎಲ್ಲಿ ಆಶ್ರಯ ಸಿಕ್ಕಿತು ಎಂದು ಇನ್ನೂ ಗೊತ್ತಿಲ್ಲ.


ಜನರ ಹತ್ತಿರ ಕವಡೆಗೆ ಬರ ಬಂದಾಗ ಅಧ್ಯಕ್ಷ, ಅವನ ಪತ್ನಿ, ಅವರಿಬ್ಬರ ಸಂಬಂಧಿಕರು ಐಶಾರಾಮದಿಂದ ಬದುಕುವಾಗ ಸಹಜವಾಗಿಯೇ  ಓರ್ವ ನಿಸ್ಸಹಾಯಕ ಯುವಕ ಆತ್ಮಹತ್ಯೆಗೆ ಶರಣಾದ ದಾರಿ ಕಾಣದೆ. ತನ್ನ ಜೀವ ಕಳೆದುಕೊಳ್ಳುವ ಮೂಲಕ  ಅರಬ್ ಜಗತ್ತಿನ ಒಂದು ಅಪರೊಪದ ಕ್ರಾಂತಿಗೆ ನಾಂದಿ ಹಾಡಿದ.       


೨೩ ವರುಷಗಳ ಕಾಲ ಒಂದೇ ಸಮನೆ ತನ್ನ ದೇಶವವ್ವು ಕೊಳ್ಳೆ ಹೊಡೆದ ಬಿನ್ ಅಲಿ ಪಾಶ್ಚಾತ್ಯ ದೇಶಗಳಿಗೆ ಮಿತ್ರ. ಏಕೆಂದರೆ ಅಲ್ಕೈದಾ ಬಂಟರು ತನ್ನ ದೇಶದಲ್ಲಿ ನೆರೆಯೂರಲು ಈತ ಬಿಡಲಿಲ್ಲ. ಈತ ಬಿಡಲಿಲ್ಲ ಎನ್ನುವುದಕ್ಕಿಂತ ಇಲ್ಲಿನ ಜನ ಶಾಂತಿ ಪ್ರಿಯರು ಎಂದೇ ಹೇಳಬಹುದು.  ಬಹುತೇಕ ಅರಬ್ ರಾಷ್ಟ್ರಗಳಲ್ಲಿ ಅಲ್ ಕೈದಾ ದ ಪ್ರಭಾವ ಅಷ್ಟಿಲ್ಲ. ತಮ್ಮ ಆಶಯಗಳಿಗೆ ಅನುಸಾರ ಯಾರಾದರೂ ನಡೆಯುವುದಿದ್ದರೆ ಅಲ್ಲಿ ಪ್ರಜಾಪ್ರಭುತ್ವ, ಸ್ವೇಚ್ಛಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎನ್ನುವ ಮಾರುದ್ದದ ಶಾಪ್ಪಿಂಗ್ ಲಿಸ್ಟ್ ಹಿಡಿದು ಕೊಂಡು ಬರುವುದಿಲ್ಲ ಅಮೇರಿಕಾ ಮತ್ತು ಅದರ ಬಾಲಂಗೋಚಿಗಳು. ಪಶ್ಚಿಮದ ಸಮಯಸಾಧಕತನಕ್ಕೆ ಟುನೀಸಿಯಾ ಸಹ ಹೊರತಾಗಲಿಲ್ಲ. ಈ ತೆರನಾದ ಇಬ್ಬಂದಿಯ ನೀತಿಯ ಪರಿಣಾಮವೇ ೨೩ ವರ್ಷಗಳ ಅವ್ಯಾಹತ ದಬ್ಬಾಳಿಕೆ ಬಿನ್ ಅಲಿಯದು.  


ಅರಬ್ ರಾಷ್ಟ್ರಗಳಲ್ಲಿ ಟುನೀಸಿಯಾ ರೀತಿಯ ಕ್ರಾಂತಿಗಳು ಅಪರೂಪ. ಉಣ್ಣಲು, ಉಡಲು, ಸಾಕಷ್ಟಿದ್ದು ಸಾಕಷ್ಟು ಸಂಬಳ ಸಿಗುವ ನೌಕರಿ ಇದ್ದರೆ ಬೇರೇನೂ ಕೇಳದವರು ಅರಬರು. ಅರಬ್ಬರ ಈ ನಡವಳಿಕೆ ನೋಡಿಯೇ ಇಲ್ಲಿ ಸರ್ವಾಧಿಕಾರಿಗಳದು ದರ್ಬಾರು. ಊಳಿಗಮಾನ್ಯ ಪದ್ಧತಿಗೆ ಉದಾಹರಣೆಗಾಗಿ ವಿಶ್ವ ಎಲ್ಲೂ ಪರದಾಡ ಬೇಕಿಲ್ಲ. ಕೊಲ್ಲಿ ಕಡೆ ಒಂದು ಪಿಕ್ ನಿಕ್ ಇಟ್ಟುಕೊಂಡರೆ ಸಾಕು.


ಈ ಪ್ರಾಂತ್ಯದಲ್ಲಿ ಪ್ರಜಾಪ್ರಭುತ್ವ ಮೊಳಕೆ ಒಡೆಯುವುದು ಕಷ್ಟದ ಕೆಲಸವೇ. ಮರಳುಗಾಡಿನಲ್ಲಿ ಹಸಿರು ಮೊಳಕೆಯೊಡೆಯಲು ಸಾಧ್ಯವೇ? ಇಲ್ಲಿನ ನಿಸರ್ಗ, ವಾತಾವರಣ, ಜನರ ನಡಾವಳಿ ಎಲ್ಲವೂ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತ. ಹಾಗಾಗಿ ನಿರಂಕುಶಾಧಿಕಾರಿಗಳ ದೊಡ್ಡ ದಂಡನ್ನೇ ಕಾಣಬಹುದು ಇಲ್ಲಿ. ಆಫ್ರಿಕಾದಲ್ಲೂ, ಏಷ್ಯಾದಲ್ಲೂ ಇರುವ ಸರ್ವಾಧಿಕಾರಿಗಳಿಗೆ ಹೋಲಿಸಿದರೆ ಇಲ್ಲಿನವರು ನಿರ್ದಯಿಗಳಲ್ಲ. ತಾವು ಹೊಡೆದ ಲೂಟಿಯಲ್ಲಿ ಜನರಿಗೂ ಒಂದಿಷ್ಟನ್ನು ಕೊಡುತ್ತಾರೆ. ಕಾರು ಕೊಳ್ಳಲು ಸಾಲ, ಉನ್ನತ ವ್ಯಾಸಂಗಕ್ಕಾಗಿ ಸಾಲ, ಮನೆ ಕಟ್ಟಲು ಸಾಲ, ಕೊನೆಗೆ ಮದುವೆಯಾಗಲೂ ಕೂಡ ಸಾಲ. ಆಹಾ, ಇಷ್ಟೆಲ್ಲಾ ಸವಲತ್ತಿರುವಾಗ ಗೋಡೆ ತುಂಬಾ ಧಿಕ್ಕಾರ ಗೀಚಿ, ಬೀದಿ ಅಲೆಯುತ್ತಾ ಮೈಕ್ ಹಿಡಿದು ಜಯಕಾರ ಕೂಗಿ ಪ್ರಜಾಪ್ರಭುತ್ವವನ್ನು ಮೆರೆಯುವುದಾದರೂ ಏತಕ್ಕೆ ಹೇಳಿ?


ತಮ್ಮ ಪಾಡಿಗೆ ತಾವು ಲೂಟಿ ಮಾಡುತ್ತಾ, ಒಂದಿಷ್ಟು ಜನಕಲ್ಯಾಣ ಮಾಡಿ ಪಾಪದ ಹೊರೆ ಹಗುರ ಮಾಡಿಕೊಳ್ಳುತ್ತಿದ್ದ ಅರಬ್ ಆಡಳಿತಗಾರರಿಗೆ ಟುನೀಸಿಯಾದ ಬೆಳವಣಿಗೆ ಬೆವರೊಡೆಸಿತು. ಭಯ ಆವರಿಸಿತು. ಅಮ್ಮಾನ್, ಕೈರೋ, ಡಮಾಸ್ಕಸ್, ರಿಯಾದ್ ನಗರಗಳ ಬೀದಿಗಳೂ ಟುನೀಸಿಯಾದ ಬೀದಿಗಳ ಹಾದಿ ಹಿಡಿದರೆ? ಕೂಡಲೇ ಅಗತ್ಯ ವಸ್ತುಗಳ ಬೆಲೆ ತಮಗೆ ತಾವೇ ಇಳಿದವು ಸಿರಿಯಾ ಮತ್ತು ಜೋರ್ಡನ್ ದೇಶಗಳಲ್ಲಿ. ಈ ಎರಡೂ ರಾಷ್ಟ್ರಗಳು ನಿದ್ದೆಯಿಂದ ಎಚ್ಚೆತ್ತು ಕೊಳ್ಳುವ ಪ್ರಯತ್ನ ಮಾಡಿದರೆ ಇವಕ್ಕೆಲ್ಲಾ ಸೊಪ್ಪು ಹಾಕಲಾರೆ ಎನ್ನುವ ಮತ್ತೊಬ್ಬ ಸರ್ವಾಧಿಕಾರಿ ಹೋಸ್ನಿ ಮುಬಾರಕ್. ಈಜಿಪ್ಟ್ ನ ಹೋಸ್ನಿ ಮುಬಾರಕ್ ೩೦ ವರುಷಗಳ ಸುದೀರ್ಘ ಅನುಭವವಿರುವ ಠಕ್ಕ. ಬೇರೆಲ್ಲಾ ಠಕ್ಕರು ಚಾಪೆ ಕೆಳಗೆ ತೂರಿಕೊಂಡರೆ ಈತ ರಂಗೋಲಿ ಕೆಳಗೆ ತೂರಿ ಕೊಳ್ಳುತ್ತಾನೆ. ಆತನಿಗೆ ಅದಕ್ಕೆ ಬೇಕಾದ ಪರಿಣತಿ ಒದಗಿಸಲು ಶ್ವೇತ ಭವನ ಸಿದ್ಧವಾಗಿದೆ ಕರಾಳ ಟ್ರಿಕ್ಕುಗಳೊಂದಿಗೆ.     


ಈಗ ಈ ಕ್ರಾಂತಿಯ ಪರಿಣಾಮ ನಾನಿರುವ ಸೌದಿಯಲ್ಲಿ ಹೇಗೆ ಎಂದು ಊಹಿಸುತ್ತಿದ್ದೀರೋ?


ಇಲ್ಲಿನ ದೊರೆ ಅಬ್ದುಲ್ಲಾ ಜನರಿಗೆ ಅಚ್ಚು ಮೆಚ್ಚು. ಜನರಿಗೆ ಬೇಕಾದ ಎಲ್ಲಾ ಸೌಕರ್ಯವನ್ನೂ ಮಾಡಿ ಕೊಡುತ್ತಾ, ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಡಾಲರುಗಳನ್ನು ಅನುದಾನ ನೀಡುತ್ತಾ ಇರುವ ಈ ದೊರೆ ಜನರ ಕ್ಷೇಮ ವನ್ನು ವೈಯಕ್ತಿಕ ಭೇಟಿ ಮೂಲಕ ನೋಡಿ ಕೊಳ್ಳುತ್ತಾರೆ. ಜನರಿಗೆ ಅನ್ಯಾಯವಾದರೆ ಎಂಥ ಪ್ರಭಾವಶಾಲಿಗಳಾದರೂ ಈ ದೊರೆಯ ನಿಷ್ಟುರ ನ್ಯಾಯದಿಂದ ತಪ್ಪಿಸಿ ಕೊಳ್ಳಲಾರರು. ಕಳೆದ ವರ್ಷ ಜೆಡ್ಡಾ ನಗರದಲ್ಲಿ ಮಳೆಯಿಂದ ಆದ ಅಪಾರ ಅನಾಹುತ ೧೫೯ ಜನರ ಪ್ರಾಣ ತೆಗೆದು ಕೊಂಡಿತ್ತು. ಜನರ ಒತ್ತಾಯದ ಮೇರೆಗೆ ಈ ಅನಾಹುತಕ್ಕೆ ನಗರಸಭೆಯ ಅಧಿಕಾರಿಗಳನ್ನು ನೇರವಾಗಿ ಹೊಣೆಯಾಗಿರಿಸಿ ಅವರುಗಳ ಮೇಲೆ criminal ದಾವೆ ಹೂಡಿ ಜೈಲಿಗೆ ಅಟ್ಟಿದರು ಇಲ್ಲಿನ ದೊರೆ. ಟುನೀಸಿಯಾದ ಕ್ರಾಂತಿ ಸೌದಿ ಬ್ಲಾಗಿಗರೂ ಕುತೂಹಲದಿಂದ ವರದಿ ಮಾಡಿದ್ದಾರೆ ಎಂದು ಅಮೆರಿಕೆಯ npr ರೇಡಿಯೋ ದ ಬಾತ್ಮೀದಾರರು ಹೇಳಿದ್ದಾರೆ.   ಸೌದಿ ಅರೇಬಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೂ ಫೇಸ್ ಬುಕ್, ಟ್ವಿಟ್ಟರ್, ಗಳನ್ನು ಬಹಿಷ್ಕರಿಸಿಲ್ಲ. ಈ ಸಾಮಾಜಿಕ ತಾಣಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕಳೆದ ದಶಕದಿಂದೀಚೆಗೆ ಇಲ್ಲಿನ ವಾರ್ತಾ ಪತ್ರಿಕೆಗಳೂ ಸಹ ಸಾಕಷ್ಟು ಮುಕ್ತವಾಗಿ ವರದಿ ಮಾಡುತ್ತಿವೆ. ಅಮೆರಿಕೆಯ ಕೆಂಗಣ್ಣಿಗೆ ಗುರಿಯಾದ al-jazeera ಟೀವೀ ಮಾಧ್ಯಮ ಕೂಡಾ ಇಲ್ಲಿ ನೋಡಲು ಲಭ್ಯ. ಅದೇ ರೀತಿ ಸೌದಿ ರಾಜ ಮನೆತನಕ್ಕೆ ವಿರುದ್ಧವಾಗಿ ಬರೆಯುವ ಗಾರ್ಡಿಯನ್, independent ಪತ್ರಿಕೆಗಳು ಇಲ್ಲಿ ಲಭ್ಯ. ವಾಣಿಜ್ಯ, ವ್ಯಾಪಾರ ಸಂಬಂಧಕ್ಕೆ ಅವಶ್ಯವಿರುವ  ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ೧೩ ನೆ ಸ್ಥಾನ ಸೌದ್ ಅರೇಬಿಯಾಕ್ಕೆ. ಮುಕ್ತತೆಗೆ ಆಹ್ವಾನ ನೀಡಿ ಸಾಮಾಜಿಕ ಅನಿಷ್ಟಗಳನ್ನು ತನ್ನ ಮಡಿಲಿಗಿರಿಸಿ ಕೊಂಡಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಮತ್ತು ಬಹರೇನ್ ದೇಶಗಳು ಸೌದಿಗಿಂತ ತುಂಬಾ ಹಿಂದಿವೆ ವಾಣಿಜ್ಯ ನೀತಿಯಲ್ಲಿ.      


ಟುನೀಸಿಯಾ ದೇಶಕ್ಕೆ ಭೇಟಿ ಕೊಟ್ಟ ಯಾರೇ ಆದರೂ ಹೇಳುವುದು ಎರಡೇ ಮಾತುಗಳನ್ನು ಸುಂದರ ದೇಶ. ಸ್ನೇಹಜೀವಿ ಜನ. ಪ್ರವಾಸೋಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ವಿದೇಶೀ ವಿನಿಮಯ ಗಳಿಸುತ್ತಾ, ತನ್ನ ರಮಣೀಯ ಆಲಿವ್ (olive) ಬಯಲುಗಳನ್ನೂ, ಸುಂದರ ತೀರ ಪ್ರದೇಶವನ್ನೂ ಜನರಿಗೆ ತೋರಿಸಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪುಟ್ಟ ಟುನೀಸಿಯಾ ದೇಶ ಇಟ್ಟಿರುವ ದಿಟ್ಟ ಹೆಜ್ಜೆ ಅದಕ್ಕೆ ಮುಳುವಾಗದೆ ಇರಲಿ ಎಂದು ಹಾರೈಸೋಣ.    


ಹೀಗೇ ಸುಮ್ಮನೆ: ಇಸ್ಲಾಮಿನ flexibility ಯ ದ್ಯೋತಕವಾಗಿ ಟುನೀಸಿಯಾ ದಲ್ಲಿ ಬಹುಪತ್ನಿತ್ವ ನಿಷಿದ್ಧ. ಇದು ಶರಿಯತ್ ಗೆ ವಿರುದ್ಧ ಎಂದು ಇಲ್ಲಿನ ಮುಲಾಗಳು ಇದುವರೆಗೂ ಅರಚಿಲ್ಲ.  


 

Comments