ಪುಟ್ಟ ಲೇಖನವೆಂದರೆ ಹೀಗಿರುವುದೇ?

ಪುಟ್ಟ ಲೇಖನವೆಂದರೆ ಹೀಗಿರುವುದೇ?

ಬರಹ

ತುಂಬಾ ದಿನಗಳಾಯಿತು ಬರೆಯದೆ..ಆದ್ರೆ ಬರೆಯದೆ ಇರೋಕ್ಕಂತು ಆಗಲ್ಲ. ಹೆಚ್ಚಿಗೆ ಬರೆಯದೆ ಹೋದ್ರು ಪರವಾಗಿಲ್ಲ ಸ್ವಲ್ಪವಾದರೂ ಬರೆದು ನಿಮ್ಮ ಸನ್ನಿಧಿಗೆ ಒಪ್ಪಿಸಬೇಕೆಂಬುದು ನನ್ನ ಮನದ ಪುಟ್ಟ ಆಸೆ.

ಬೇಸಿಗೆ ಕಾಲವಾಗಿರುವುದರಿಂದ ಈಗಂತೂ ಎಲ್ಲೆಲ್ಲೂ ಮೈ ಸುಡುವ ಬಿಸಿಲು...ತೀರದ ದಾಹ.... ದಿನಕ್ಕೆ ನಾಲ್ಕೈದು ಸಲ ಮಜ್ಜನ ಮಾಡಿಸುಹುದು ಬೆವರು...ಮಳೆಯನು ಕೊಡದೆ ನಗುತಿಹನು ಆ ದೇವರು..

ಇದರ ಜೊತೆಗೆ ಆರ್ಥಿಕ ಹಿಂಜರಿತ ತಂದಿರುವ ಭಯದ ತಾಪ, ಸದ್ಯಕ್ಕೆ ಈಗ ತಾನೇ ಲೋಕಸಭಾ ಚುನಾವಣೆ ಮುಗಿದಿದೆ. ಯಾವ ಪಕ್ಷ ಸರ್ಕಾರ ರಚನೆ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಕೇಂದ್ರದ ವಿಚಾರ ನಮಗ್ಯಾಕೆ? ಎನ್ನುವರು ಕೆಲವರು ಇದ್ದಾರೆ. ಇನ್ನೂ ನಮ್ಮ ಬೆಂಗಳೂರಿನ ವಿಷಯಕ್ಕೆ ಬಂದರೆ ಮೆಟ್ರೋ ಕಾಮಗಾರಿ ಬಹಳ ಅದ್ದೂರಿಯಿಂದ ನಡಿತಿದೆ. ದುಡ್ಡು ಇಲ್ಲದೇ ಹೋದರೂ ಬಡವನೊಬ್ಬ "ಲಕ್ಷ್ಮೀಪತಿ" ಅಂತ ಹೆಸರು ಇಟ್ಟುಕೊಂಡ ಹಾಗೆ, ನಮ್ಮ ಬೆಂಗಳೂರಿನಲ್ಲಿ ಇರುವ ಬಹುತೇಕ ಮರಗಳೆಲ್ಲ ನೆಲಸಮವಾದರೂ "ಉದ್ಯಾನನಗರಿ" ಎನ್ನುವ ಖ್ಯಾತಿ ಎಂದೂ ಹೋಗುವುದಿಲ್ಲ ಅನ್ನಿಸುತ್ತಿದೆ! ಈ ಮೆಟ್ರೋ ಯೋಜನೆ ಹೆಸರಲ್ಲಿ ಎಂತಹ ಅಜಾನುಬಾಹು ಮರಗಳನ್ನು ಬುಡ ಸಮೇತ ಕೀತ್ತೆಸೆದರು ಎನ್ನುವ ಘೋರ ಚಿತ್ರಣಕ್ಕೆ ನಾವುಗಳು ಮೂಕ ಸಾಕ್ಷಿಯಾಗಿದ್ದೇವೆ.
ಈ ಮೆಟ್ರೋ ಕಾಮಗಾರಿಯ ಬಗ್ಗೆ ನನ್ನ ಅಭಿಪ್ರಾಯ ತಿಳಿಸಲು ಒಂದು ಪುಟ್ಟ ಕವನ ಬರೆದಿರುವೆ ಓದಿರಿ.

ಬಂತು ಬಂತು ಮೆಟ್ರೋ ರೈಲು..
ಕೀತ್ತೋಗೆಯಲು ಟ್ರಾಫಿಕ್ ಎನುವ
ತಾತ್ಕಾಲಿಕ ಜೈಲು!
ಆದರೆ ಈ ಮೆಟ್ರೋ ರೈಲು..
ಕೊಂಚ ಹೈಲು! ತೋರಿಸಲು ಹೋಗಿ ತನ್ನ ಸ್ಟೈಲು..
ಮಾಡಿಸಿತು ಹಸಿರು ಮರಗಿಡಗಳ ಕೊಯ್ಲು!
ಆಗಿಸಿತು ಉದ್ಯಾನನಗರಿಯನು ಬರಿ ಬೈಲು!

ಅಭಿವೃದ್ದಿಯ ಹೆಸರಲಿ
ಮಿತಿಮೀರಿವುದು ನಮ್ಮ ಸರಕಾರದ ಬುದ್ದಿ!
ಇನ್ನೆಲ್ಲಿಹುದು ನಾವು ಉಸಿರಾಡುವ ಗಾಳಿಯಲಿ ಶುದ್ದಿ?
-ನಿಮ್ಮ ಸುನಿಲ್ ಮಲ್ಲೇನಹಳ್ಳಿ