ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

ಪುತ್ತೂರು ಗೋಪಾಲಕೃಷ್ಣಯ್ಯ[೧೯೦೧-೧೯೭೩]

ಬರಹ

ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು ಗೋಪಾಲಕೃಷ್ಣಯ್ಯನವರು ಗಮನಾರ್ಹರು.ಪುತ್ತೂರು ಗೋಪಣ್ಣನೆಂದೇ ಜನಪ್ರಿಯರಾಗಿದ್ದ ಶ್ರೀಯುತರು ಕಾಸರಗೋಡಿನ ಕೂಡ್ಲು ಎಂಬಲ್ಲಿ ಜನಿಸಿದರು.ಅವರಿಗೆ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಉಂಟಾಗಲು ಕಾರಣ ಕೂಡ್ಲು ಮೇಳದ ಬಯಲಾಟಗಳು ಮತ್ತು ಚೆಂಡೆಯ ಶಬ್ದ. ಆ ಕಾಲದಲ್ಲಿ ಯಕ್ಷಗಾನದ ವಿಶಿಷ್ಟವಾದ ಚೆಂಡೆಯನ್ನು ಕೇರಳದ ಕಥಕ್ಕಳಿಯಲ್ಲಿದ್ದಂತೆ,ಬಲಗೈಯಲ್ಲಿ ಕೋಲು ಮತ್ತು ಎಡಗೈಯಲ್ಲಿ ಕೋಲು ಇಲ್ಲದೆ ಬಾರಿಸುತ್ತಿದ್ದರಂತೆ.ಎಡಗೈಯಲ್ಲಿ ಸಣ್ಣ ಕೋಲೊಂದನ್ನು ಉಪಯೋಗಿಸಿ ಬಾರಿಸಿದರೆ ಇನ್ನಷ್ಟು ನಾದ ಮಾಧುರ್ಯವಾಗಬಹುದೆಂಬುದನ್ನು ತೋರಿಸಿಕೊಟ್ಟವರು ಶ್ರೀಯುತರ ಗುರುಗಳಾದ ಕೂಡ್ಲು ಶ್ರೀ ಸುಬ್ರಾಯ ಶ್ಯಾನುಭೋಗರಾದರೂ,ಅದನ್ನು ಕಾರ್ಯರೂಪಕ್ಕೆ ತಂದು, ಇತರರೂ ಅನುಕರಿಸುವಂತೆ ಮಾಡಿದವರು ಪುತ್ತೂರು ಗೋಪಣ್ಣನವರು.ಅವರು ಈ ಪದ್ಧತಿಯನ್ನು ಬಳಕೆಗೆ ತಂದು ಚೆಂಡೆವಾದನದಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿದರು.
ಶ್ರೀಯುತರ ಮತ್ತೋದು ಸುಧಾರಣೆಯೆಂದರೆ ಚೆಂಡೆಯನ್ನು ಶ್ರುತಿವಾದ್ಯವನ್ನಾಗಿ ಬದಲಾಯಿಸಿದುದು.ಅದುವರೆಗೆ ಚೆಂಡೆಯು ಕರ್ಕಶವಾದ್ಯವೆಂದೇ ಪರಿಗಣಿಸಲ್ಪಟ್ಟಿತ್ತು.ಅದರ ಧ್ವನಿಯನ್ನು ಸಾಧ್ಯವಾದಷ್ಟು ತಾರಕಕ್ಕೇರಿಸಿ, ಬಹಳ ಶಕ್ತಿಯುತವಾಗಿ ಬಾರಿಸುತ್ತಿದ್ದರು.ಚೆಂಡೆಯನ್ನು ಶ್ರುತಿಗೆ ಅಳವಡಿಸಬಹುದೆಂಬ ಶೋಧನೆಯನ್ನು ಮಾಡಿದವರು ಪ್ರಪ್ರಥಮವಾಗಿ ಪುತ್ತೂರು ಗೋಪಣ್ಣನವರು.
ಕವಿಭೂಷಣ ದಿ|ಕೆ.ಪಿ.ವೆಂಕಪ್ಪ ಶೆಟ್ಟರು ಶ್ರುತಿಗೆ ಸೇರಿದ ಚೆಂಡೆಯ ನಾದ ಮಾಧುರ್ಯದಿಂದ ಪುಳಕಿತರಾಗಿ ಪ್ರಸಿದ್ಧ ವಿಧ್ವಾಂಸರು ಸೇರಿದ ಯಕ್ಷಗಾನ ಕೂಟದಲ್ಲಿ,`ಯಕ್ಷಗಾನದಲ್ಲಿ ಚೆಂಡೆಯ ಕಾರ್ಯಭಾರವನ್ನು ಪ್ರಥಮತ: ವೈಭವೀಕರಿಸಿದವರೇ ಪುತ್ತೂರು ಗೋಪಾಲಕೃಷ್ಣಯ್ಯ'ಎಂದು ಹೊಗಳಿ,ಹಾರಾರ್ಪಣೆ ಮಾಡಿ ಗೌರವಿಸಿದ್ದರು.ಆ ಕಾಲದ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣಭಾಗವತರು,ಅಣ್ಣಿ ಭಾಗವತರು,ಜೋಯಿಸರು,ವೆಂಕುಭಾಗವತರು ಇವರೊಂದಿಗೆ ಗೋಪಣ್ಣನವರು ಕಟೀಲು,ಕದ್ರಿ,ಕೂಡ್ಲು,ಕೊರಕೋಡು ಮೇಳಗಳಲ್ಲಿ ಚೆಂಡೆಮದ್ದಳೆ ವಾದನಗಳ ಕಲಾವಿದರಾಗಿ ಹಲವಾರು ವರ್ಷ ತಿರುಗಾಟ ಮಾಡಿದರು.
೧೯೩೯ರಲ್ಲಿ ಶ್ರೀಯುತರು ಕೂಡ್ಲಿನಿಂದ ಪುತ್ತೂರಿಗೆ ಬಂದು ನೆಲಸಿದರು.ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತ,ಬಿಡುವಿನ ಸಮಯ ಚೆಂಡೆ ಮದ್ದಳೆಗಳ ರಚನಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಆ ಕಾಲದ ಪ್ರಸಿದ್ಧ ಕಟೀಲು,ಕದ್ರಿ,ಕೂಡ್ಲು,ಧರ್ಮಸ್ಥಳ ಮೇಳಗಳಿಗೆ ಚೆಂಡೆಮದ್ದಳೆಗಳನ್ನು ತಯಾರಿಸಿಕೊಡುತ್ತಿದ್ದರು.ಗೋಪಣ್ಣನ ಚೆಂಡೆಮದ್ದಳೆಗಳೆಂದರೆ ಸುಪ್ರಸಿದ್ಧ. ಜೋಡಾಟಗಳಲ್ಲಂತೂ ಉಭಯಪಕ್ಷಗಳಿಗೂ ಗೋಪಣ್ಣನ ಚೆಂಡೆಯೇ ಆಗಬೇಕು.ಶ್ರುತಿಗೆ ತಕ್ಕಂತೆ ಚೆಂಡೆಮದ್ದಳೆಗಳ ಉದ್ದಳತೆಗಳು ಶ್ರೀಯುತರಿಗೆ ಕರತಲಾಮಲಕ.ಖ್ಯಾತ ಚೆಂಡೆವಾದಕರಾದ ದಿ|ಕುದುರೆಕೋಡು ರಾಮಭಟ್ಟರು,ನೆಡ್ಲೆ ನರಸಿಂಹಭಟ್ಟರು,ಕಾಸರಗೋಡು ವೆಂಕಟ್ರಮಣ ಇವರೆಲ್ಲರಿಗೂ ಗೋಪಣ್ಣನವರೆಂದರೆ ಆತ್ಮೀಯ ಅಭಿಮಾನ.
ತಮ್ಮ ಈ ಉದ್ಯೋಗವು ಅಳಿದುಹೋಗದಂತೆ,ತಮ್ಮ ದ್ವಿತೀಯ ಪುತ್ರ ದಿ|ವಾಸುದೇವಯ್ಯ(ವಾಸಣ್ಣ)ನವರನ್ನು ತರಬೇತುಗೊಳಿಸಿ,ಈ ಕ್ಷೇತ್ರದಲ್ಲಿ ಮುಂದುವರಿಯುವಂತೆ ಮಾಡಿಸಿದ್ದರು.ಇಂತಹಕುಶಲಕರ್ಮಿ ಪುತ್ತೂರಿನ ಕೀರ್ತಿಯನ್ನು ಹತ್ತೂರು ಪಸರಿಸಿ,೧೯೭೩ರಲ್ಲಿ ಕೀರ್ತಿಶೇಷರಾದರು.
(ಗೋಪಾಲಣ್ಣನವರ ಜ್ಯೇಷ್ಠಪುತ್ರ ಶ್ರೀ.ಟಿ.ಪಿ.ಶ್ರೀಧರ್ ರಾವ್ ಹೇಳಿದ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಬರೆಯಲಾಗಿದೆ)