ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೧)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೧)

ಬರಹ

*****ಭಾಗ ೧೧

ನಾನು ಕೂಡಿ ಬಂದ ಸಾರ್ಥವು ವ್ಯಾಪಾರಕ್ಕೆಂದು ಹೊರನಾಡುಗಳಿಗೆ ಹೊರಟಿತ್ತು. ನನಗೆ ಸಿಂಧೂ ನದಿಯನ್ನು ದಾಟಿ ಹೋಗುವ ಇಚ್ಛೆ ಇರಲಿಲ್ಲ. ಹಾಗಾಗಿ ಸಾರ್ಥ ಮುನ್ನಡೆದಂತೆ ಜಾಲಂಧರದಲ್ಲೇ ಉಳಿದುಕೊಂಡೆ.

ಜಾಲಂಧರ - ಐದು ನದಿಗಳ ದೇಶ. ಜಾಲಂಧರ ರಾಜಧಾನಿಯ ಸುತ್ತಳತೆ ಸುಮಾರು ೬-೭ ಕ್ರೋಶಗಳಿದ್ದಿರಬಹುದು. ಕಾಳು, ಬೇಳೆ, ಬಹು ಮುಖ್ಯವಾಗಿ ಭತ್ತ ಬೆಳೆಯಲು ಬಹು ಅನುಕೂಲವಾದ ನೆಲ. ಸುತ್ತ ದಟ್ಟ ಕಾಡು-ಮೇಡುಗಳು, ಹೂವು ಹಣ್ಣುಗಳಿಗೆ ಕೊರತೆಯೇ ಇಲ್ಲ. ಇಲ್ಲಿಯ ವಾತಾವರಣ ಶೈತ್ಯಮಯವಾಗಿದ್ದು ಜನರು ಧೀರರೆನಿಸಿದರೂ, ಸ್ವಲ್ಪ ತಾಳ್ಮೆಗೆಟ್ಟವರು. ವೈದಿಕ ಧರ್ಮದ ಅನುಯಾಯಿಗಳು ಇಲ್ಲಿ ಸ್ವಲ್ಪ ಕಡಿಮೆಯೇ ಇದ್ದರು. ಶಂಕರನೇ ಇವರ ಆರಾಧ್ಯ ದೇವ. ಬುದ್ಧನನ್ನನುಸರಿಸುವವರು ಹೆಚ್ಚಾಗಿದ್ದರು. ಕೇವಲ ಮೂರು ದೇವಾಲಯಗಳಿದ್ದರೂ ಐವತ್ತಕ್ಕೂ ಹೆಚ್ಚು ವಿಹಾರಗಳಿದ್ದವು.

ನಾನು ದೂರದ ದೇಶದಿಂದ ಬಂದ ಪ್ರಯಾಣಿಕನೆಂದು ಹೇಳಿಕೊಂಡು ನದಿಯ ತೀರದಲ್ಲಿದ್ದ ಶಂಕರನ ದೇವಾಲಯದಲ್ಲಿ ತಂಗಿದೆ. ಊಟಕ್ಕೆ ತೊಂದರೆ ಇರಲಿಲ್ಲ. ಸ್ನಾನ ಸಂಧ್ಯಾವನಾದಿಗಳಿಗೂ ಆಪತ್ತು ಇರಲಿಲ್ಲ. ಬಂದು ನಾಲ್ಕೈದು ದಿನಗಳಾಗಿದ್ದವು. ನದಿಯ ತೀರದಲ್ಲಿ ಸಂಧ್ಯಾವಂದನೆ ಮುಗಿಸಿ ಬಂಡೆಗಳ ಮೇಲೆ ಕುಳಿತು ಜಪದಲ್ಲಿ ತೊಡಗಿದ್ದೆ. ಯಾರೋ ಪ್ರಾಣವೇ ಹೋದಂತೆ ಅರಚಾಡುತ್ತಿರುವುದು ಕೇಳಿಸಿತು. ನನ್ನ ಜಪವು ಕದಳಿ, ತಿರುಗಿ ನೋಡಿದೆ.

ವಿಚಿತ್ರ ವಸ್ತ್ರಧಾರಿಯೆಂಬುದನ್ನು ಗುರುತಿಸಿದ್ದಷ್ಟೆ. ಪಾಪ ಆತನು ನಡೆದು ಹೋಗುವಾಗ ನೋಡದೆ ನಾಗಪ್ಪವೊಂದನ್ನು ತುಳಿದಂತಿತ್ತು. ಈಗ ನಾಗಪ್ಪ ಕೋಪದಿಂದ ಹೆಡೆ ಎತ್ತಿ ಅವನನ್ನು ಕುಕ್ಕುವುದರಲ್ಲಿತ್ತು. ಅವನಿನ್ನೂ ಕೂಗಾಡುತ್ತಲೇ ಇದ್ದ - ಓಡಿಹೋಗಲೂ ಯತ್ನಿಸುತ್ತಿರಲಿಲ್ಲ, ನಾಗಪ್ಪನನ್ನು ಹೊಡೆಯಲೂ ಯತ್ನಿಸುತ್ತಿರಲಿಲ್ಲ.

"ಓಡು ಓಡು" ಎಂದು ಮೊದಲು ಕೂಗಿದೆ, ನಂತರ ನಾನಿರುವ ಸ್ಥಳ ನೆನಪಿಸಿಕೊಂಡು ಸಂಸ್ಕೃತಲ್ಲಿ ಹೇಳಿದೆ. ನನ್ನ ಕೂಗು ಅವನ ಮೇಲೆ ಯಾವ ಪರಿಣಾಮವನ್ನೂ ಬೀರಿದಂತೆ ಕಾಣಲಿಲ್ಲ. ನನಗೆ ಅಲ್ಲಿಯ ಭಾಷೆ ಗೊತ್ತಿರಲಿಲ್ಲ. ಅವನು ಸನ್ನೆಗಳನ್ನು ನೋಡುವ ಸ್ಥಿತಿಯಲ್ಲಿರಲಿಲ್ಲ. ನಿಧಾನವಾಗಿ ಅವನಬಳಿ ಹೋದೆ. ನನಗೂ ಅಂಜಿಕೆ, ಹಿಂಜರಿತ. ಏನು ಮಾಡುವುದೆಂದು ಗೊತ್ತಿರಲಿಲ್ಲ. ಒಂದು ಬಡಿಗೆಯಿಂದ ನಾಗಪ್ಪನನ್ನು ದೂರತಳ್ಳುವೆ ಎಂದು ನಿರ್ಧರಿಸಿ ಬಡಿಗೆಗೆ ಅತ್ತಿತ್ತ ನೋಡಿದೆ. ಅಷ್ಟರೊಳಗೆ ನಾಗಪ್ಪ ಅವನನ್ನೊಮ್ಮೆ ಕುಕ್ಕಿ ಹರಿದು ಹೋಯಿತು.

ನಾನು ಅವನ ಹತ್ತಿರ ಹೋಗಿ ಬಿದ್ದಿದ್ದ ಅವನನ್ನು ಎತ್ತಲು ಪ್ರಯತ್ನಿಸಿದೆ. ಅವನು ನನಗೇನೋ ಅರ್ಥವಾಗದ ಭಾಷೆಯಲ್ಲಿ ಗೊಣಗಿದೆ. ನಂತರ ಭಯದಿಂದಲೇ ಮೂರ್ಛೆ ಬಿದ್ದ. ನನಗಾದರೋ ಏನು ಮಾಡುವುದು ತಿಳಿಯದು. ಸರಿ, ಬೇಗನೆ ಹೋಗಿ ದೇವಾಲಯದಿಂದ ಒಂದಿಬ್ಬರನ್ನು ಕರೆತಂದು ಒಟ್ಟಿಗೆ ಅವನನ್ನೆತ್ತಿಕೊಂಡು ಹೋಗಿ ಮಂದಿರದ ಜಗಲಿಯ ಮೇಲೆ ಮಲಗಿಸಿದೆವು. ಗುರುಕುಲದಲ್ಲಿ ಸರ್ಪ ಕಡಿತಕ್ಕೆ ಮಾಡಲು ಕಲಿತ ಸುಷ್ರೂಶೆಯನ್ನು ಸ್ಮರಿಸಿದೆ. ಬೇಗನೆ ಒಂದು ಸಣ್ಣ ಬಟ್ಟೆಯ ತುಂಡನ್ನು ಹರಿದು ಅವನ ಕಾಲಿಗೆ, ನಾಗಪ್ಪನ ಹಲ್ಲಿನ ಗುರುತಿನ ಮೇಲುಭಾಗಕ್ಕೆ, ಭಿಗಿಯಾಗಿ ಕಟ್ಟಿದೆ. ಒಂದು ಲೋಹದ ಕಡ್ಡಿ ಅದರಲ್ಲಿ ಸೇರಿಸಿ ರಕ್ತ ಹರಿಯದಂತೆ ಭದ್ರಪಡಿಸಿದೆ. ವೈದ್ಯರಿಗಾಗಿ ಯಾರೋ ಹೇಳಿ ಕಳುಹಿಸಿದರು. ವೈದ್ಯರು ಬಂದು ಉಪಚಾರ ಮಾಡಿದ ನಂತರ ಜೀವಭಯವಿಲ್ಲವೆಂದರು. ಅದಕ್ಕೆ ಪ್ರತಿಯಾಗಿ ಅವನೂ ನಿದ್ದೆಯಲ್ಲೇ ಏನನ್ನೋ ಗೊಣಗಿದನು. ನಮ್ಮೆಲ್ಲರಿಗೆ ಸ್ವಲ್ಪ ನೆಮ್ಮದಿಯಾಯಿತು.

ಈಗ ನನಗೆ ಅವನನ್ನು ನೋಡುವ ವ್ಯವಧಾನವಾಯಿತು. ವಿಚಿತ್ರ ವಸ್ತ್ರಧಾರಿಯೆಂದು ಆಗಲೇ ಹೇಳಿರುವೆ. ಅವನ ಮೈಮೇಲಿದ್ದದ್ದು ಒಂದೇ ವಸ್ತ್ರ. ಕುಂಚಕವೂ ಅಲ್ಲ, ಕಚ್ಚೆಯೂ ಅಲ್ಲ. ಎರಡೂ ಕೂಡಿದಂತೆ ಕಂದು ವರ್ಣದ ಒಂದೇ ವಸ್ತ್ರ. ಪೀತವರ್ಣದ ಕಾಯ ಹೊಂದಿದ್ದ ಇವನ ತಲೆಯ ಮೇಲೆ ಒಂದು ಕೂದಲೂ ಇರಲಿಲ್ಲ. ಉದ್ದನೆಯ ಮೀಸೆ, ಗಡ್ಡವಿರಲಿಲ್ಲ. ಹುಬ್ಬು ರೆಪ್ಪೆಗಳು ಕಾಣದಂತಿದ್ದವು. ಕಣ್ಣುಗಳು ಮುಖದ ಆಕಾರಕ್ಕೆ ಹೋಲಿಸಿದರೆ ಅತೀ ಸಣ್ಣವೆನಿಸುವಂಥವು. ಅವೂ ಮುಖಕ್ಕೆ ಕೋನದ ಮೇಲೆ ನಿಂತಂತೆ ಕಾಣಿಸುತ್ತಿದ್ದವು. ಸರ್ಪ ಅವನನ್ನು ಕಡಿದ ಸಮಯ ಸ್ಮರಿಸಿದಾಗ ಅವನ ಕೈಯಲ್ಲೇನೋ ಇದ್ದಂತೆ ನೆನಪಾಯಿತು. ಕೂಡಲೆ ಆ ಸ್ಥಳಕ್ಕೆ ಹೋಗಿ ಅಲ್ಲಿ ಬಿದ್ದಿದ್ದ ಅವನ ಛತ್ರಿ-ಚೀಲಗಳನ್ನು ತಂದು ಅವನ ಬಳಿ ಇರಿಸಿದೆ.

ಸ್ವಲ್ಪ ಹೊತ್ತಿನ ಬಳಿಕ ಅವನಿಗೆ ಎಚ್ಚರವಾಯಿತು. ಅಚ್ಚರಿಯಿಂದ ಏನೇನೊ ಗೊಣಗ ತೊಡಗಿದ. ನಾನೂ ನೋಡುತ್ತಲೇ ಇದ್ದೆ. ನಿಧಾನವಾಗಿ ಅವನಿಗೆ ನಡೆದ ಸಂಗತಿಗಳು ನೆನಪಿಗೆ ಬಂದಿರಬೇಕು. ಬೆರಗನ್ನು ಬಿಟ್ಟು ಒಂದು ನಿಮಿಷ ಸುಮ್ಮನಿದ್ದ. ನಂತರ ಮೇಲೆ ನೋಡುತ್ತ ಧನ್ಯ ವಾದಗಳನ್ನು ಹೇಳಿದಂತೆ ತೋರಿತು. ಬಳಿಕ ನನ್ನ ಮುಂದೆ ಬಂದು ನಿಂತು ಏನೇನೋ ಗೊಣಗುತ್ತ ಸೊಂಟದಿಂದ ಮೇಲಿನ ಭಾಗವನ್ನು ಮತ್ತೆ ಮತ್ತೆ ಬಾಗ ತೊಡಗಿದ. ನನಗೇನು ಅರ್ಥವಾಗಲಿಲ್ಲ. ಮೊದಲು ಸಂಸ್ಕೃತದಲ್ಲಿ ಹೇಳಿದೆ, ಅವನಿಗೆ ಅರ್ಥವಾಗಲಿಲ್ಲ. ನಂತರ ನನಗೆ ಬಂದಷ್ಟು ಇಲ್ಲಿಯ ಪ್ರಾಕೃತದಲ್ಲಿ ಹೇಳಿದೆ, ಆದರೆ ಅದೂ ಅವನಿಗೆ ಅರ್ಥವಾದಂತೆ ತೋರಲಿಲ್ಲ. ಹೋಗಲಿ ಎಂದು ಕನ್ನಡದಲ್ಲೇ ಮಾತನಾಡಿದೆ - ನನ್ನ ಮುಖ ಹಾಗು ಛಾವಣಿಯನ್ನು ಬಾರಿ ಬಾರಿಯಾಗಿ ನೋಡ ತೊಡಗಿದ. ಒಂದೇ ಪದವನ್ನು ಬೇರೆ ಬೇರೆ ರೀತಿಗಳಲ್ಲಿ ಹೇಳಲಾರಂಭಿಸಿದ.

ನನಗೆ ಕಡೆಗೆ ನನ್ನ ಮಿತ್ರ ದೇವದತ್ತ ನೆನಪಿಗೆ ಬಂದ. ಇವನು ಹೇಳುತ್ತಿದ್ದದ್ದು ಏಕೋ ಏನೋ ಅವನು ಮಾತನಾಡುತ್ತಿದ್ದಂತೆ ಕೇಳಿಸಿತು. ಹಾಗಾಗಿ, ನಾನು ಕಾಮರೂಪದಲ್ಲಿ ಕಲಿತಿದ್ದ ದೇವದತ್ತನ ಭಾಷೆಯಲ್ಲಿ "ಪರವಾಗಿಲ್ಲ" ಎಂದೆ. ಆಗ ಅವನಿ ಮುಖದಲ್ಲಿ ಜ್ಯೋತಿ ಪ್ರಕಾಶ ಹೊಳೆದಂತಾಯಿತು.

"ಧನ್ಯವಾದ, ನನ್ನ ಜೀವವನ್ನು ಉಳಿಸಿದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು, ನೀವಿಲ್ಲದಿದ್ದರೆ ನಾನು ಇಂದು ಆ ತಥಾಗಥನ ಬಳಿ ಹೋಗಿರುತ್ತಿದ್ದೆ" ಎಂದು ದೇವದತ್ತನ ಆ ಪೂರ್ವದೇಶದ ಭಾಷೆಯಲ್ಲಿ ಹೇಳಿದ.

ನಾನು ಅದಕ್ಕೆ ಪ್ರತಿಯಾಗಿ "ನಾನು ಉಳಿಸಲಿಲ್ಲ, ವೈದ್ಯರು ಉಳಿಸಿದರು. ಈಗ ಹೇಗಿದ್ದೀರ?" ಎಂದೆ

"ವೈದ್ಯರನ್ನು ಕರೆತಂದಿದ್ದು ನೀವೇ ಅಲ್ಲವೆ? ಹಾಗಾಗಿ ನೀವೇ ನನ್ನನ್ನು ಉಳಿಸಿದಂತಾಯಿತು" ಎಂದು ಹೇಳಿದ

ಒಂದು ಕ್ಷಣ ಬಿಟ್ಟು ಮತ್ತೆ ಏನೋ ಗೊಣಗುತ್ತ ಕಳವಳದಲ್ಲಿ ಅತ್ತಿತ್ತ ನೋಡ ತೊಡಗಿದ. ಅವನ ಕಣ್ಣು ನಾನು ತಂದಿಟ್ಟ ಅವನ ಛತ್ರಿ-ಚೀಲಗಳ ಮೇಲೆ ಬಿತ್ತು. ಹರ್ಷದ ಕೂಗಿನೊಡನೆ ಅದರ ಮೇಲೆ ಬಿದ್ದು ಅದನ್ನು ತೆಗೆದು ನೋಡಿದ. ಮತ್ತೆ ಬಂದು ನನ್ನ ಕೈ ಹಿಡಿದು ಮತ್ತೇನೋ ಅರ್ಥವಾಗದನ್ನು ಹೇಳಿದ.

"ನೀವು ಯಾರು? ಎಲ್ಲಿಂದ ಬಂದಿದ್ದೀರಿ? ನಿಮ್ಮನ್ನು ನೋಡಿದರೆ ಇಲ್ಲಿಯವರಂತೆ ಕಾಣಿಸುತ್ತಿಲ್ಲ. ಆ ಚೀಲದಲ್ಲಿ ಅಷ್ಟು ಅಮೂಲ್ಯವಾದದ್ದೇನಿದೆ?" ಎಂದು ಕೇಳಿದೆ.

"ಈ ಚೀಲದಲ್ಲಿ ನನ್ನ ಪ್ರಾಣವೇ ಇದೆ. ನಾನು ಪ್ರಯಾಣದಲ್ಲಿ ಸಂಗ್ರಹಿಸಿದ ಗ್ರಂಥಗಳೆಲ್ಲ ಇದರಲ್ಲಿಯೇ ಇರುವುದು. ಇದನ್ನೂ ಉಳಿಸಿದ್ದಕ್ಕೆ ಮತ್ತೆ ಕೃತಜ್ಞತೆಗಳು. ಅಂದಹಾಗೆ ನಿಮ್ಮ ಹೆಸರೇನು? ನೀವು ಎಲ್ಲಿಯವರು?" ಎಂದ

ನನ್ನ ಗೂಢಚರ್ಯದ ಶಿಕ್ಷಣೆ ಕಳೆದುಕೊಂಡಿರಲಿಲ್ಲ. ಅವನು ಏನನ್ನೂ ಹೇಳದೆ ನಾನು ನನ್ನ ಸಮಾಚಾರವನ್ನು ಕೊಡುವವನಾಗಿರಲಿಲ್ಲ. "ನಾನು ದಕ್ಷಿಣದವನು, ನೀವು? ನಿಮ್ಮ ಹೆಸರೇನು? ಎಲ್ಲಿಂದ ಬಂದಿದ್ದೀರಿ?" ಎಂದು ಮತ್ತೆ ಕೇಳಿದೆ.

ಅವನಿಗೆ ಆ ಕುಟಿಲ ಅರ್ಥವಾದಂತೆ ಕಾಣಲಿಲ್ಲ. "ನಾನು ಪೂರ್ವದಲ್ಲಿರುವ ಮಹಾಚೀನ ದೇಶದವನು. ಬೌದ್ಧ ಧರ್ಮವನ್ನು ಕಲಿಯಲು, ಆಚರಿಸಲು ಆ ತಾಥಗಥನ ಪುಣ್ಯ ಕ್ಷೇತ್ರಗಳನ್ನು ನೋಡಲೆಂದು ನಿಮ್ಮ ದೇಶಕ್ಕೆ ಆಗಮಿಸಿದ್ದೇನೆ. ನನ್ನ ಹೆಸರು ವೇನ್ ಸಾಂಗ್" ಎಂದ.

ನನಗೆ ಹೆಸರು ಸರಿಯಾಗಿ ಕೇಳಿಸಲಿಲ್ಲವೆಂದುಕೊಂಡು "ಏನು" ಎಂದೆ

"ಪೂರ್ವ..." ಎಂದು ಮತ್ತೆ ಆರಂಭಿಸಿದ

"ಅಲ್ಲ ಅಲ್ಲ, ನಿಮ್ಮ ಹೆಸರು" ಎಂದೆ

"ವೇನ್ ಸಾಂಗ್" ಎಂದ

"ಇದೆಂಥ ಹೆಸರು" ಎಂದು ಮನಸ್ಸಿನಲ್ಲೇ ಅಂದುಕೊಂಡು "ನನ್ನ ಹೆಸರು ಶರ್ಮ - ಸೂರ್ಯ ಶರ್ಮ" ಎಂದೆ.

ನಂತರ ಅವನು ಮೊದಲ ಬಾರಿ ನನ್ನ ವೀಭೂತಿ, ಜನಿವಾರಗಳನ್ನು ಗಮನಿಸಿದನೆಂದು ಕಾಣುತ್ತದೆ. ಅವನ ಮುಖದ ಖಳೆ ಸ್ವಲ್ಪ ಕುಂದಿತು. "ನೀವು ಬ್ರಾಹ್ಮಣ ಧರ್ಮದವರೇ?" ಎಂದ

"ಹೌದು" ಎಂದು ನನ್ನ ಜನಿವಾರವನ್ನು ತೋರಿಸಿದೆ

"ತಥಾಗಥನ ಧರ್ಮವನ್ನೇಕೆ ಅನುಸರಿಸಬಾರದು..." ಎಂದು ಆರಂಭಿಸಿದ

ನಾನು ವಾತಾಪಿಯನ್ನು ಬಿಟ್ಟಾಗಿನಿಂದ ಹಲವಾರು ಬಾರಿ ಇದನ್ನು ಕೇಳಿದ್ದೆ. ಮತ್ತೆ ಕೇಳುವ ತಾಳ್ಮೆ ಇರಲಿಲ್ಲ. "ಇಲ್ಲ ನಾನು ನನ್ನ ಧರ್ಮದಲ್ಲಿ ಸಂತುಷ್ಟನಾಗಿದ್ದೇನೆ. ಧರ್ಮ ಬದಲಾವಣೆಯ ಇಚ್ಛೆ ನನಗಿಲ್ಲ" ಎಂದೆ.

"ನೀವು ಬ್ರಾಹ್ಮಣರಾದರೂ ನನ್ನ ಜೀವನವನ್ನು ಉಳಿಸಿದಿರಿ. ಪುನರ್ಜನ್ಮ ಕೊಟ್ಟ ತಂದೆಯಿದ್ದಂತೆ. ನಾನು ನಿಮ್ಮ ಮೇಲೆ ಇದೊಂದು ಕಾರಣಕ್ಕೆ ಕೋಪಗೊಳ್ಳಲಾರೆ. ನನ್ನನ್ನು ಮಿತ್ರನೆಂದು ಕಾಣುವಿರ?" ಎಂದು ಕೇಳಿದ

"ನೀವು ಧರ್ಮದ ಬಗ್ಗೆ ಮಾತನಾಡುವುದಿಲ್ಲವಾದರೆ ನಾನು ಸಿದ್ಧ" ಎಂದೆ

"ಆಯಿತು ಮಾತನಾಡುವುದಿಲ್ಲ.... ಮಿತ್ರ" ಸ್ವಲ್ಪ ಕುಂದಿದ ಉತ್ಸಾಹದಿಂದ ಹೇಳಿದ.