ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೨೦)
*****ಭಾಗ ೨೦
ಎಲ್ಲವನ್ನೂ ಯೋಚಿಸಿದ್ದ ನಾನು ಗಂಗಾನದಿಯ ಶೀತಲತೆಯನ್ನು ಎಣಿಸಿರಲಿಲ್ಲ. ಗಂಗಾನದಿ ಹಿಮಾಲಯ ಪರ್ವತಗಳಿಂದ ಮಂಜು ಕರಗಿ ನೀರಾಗಿ ಹರಿದು ಬರುವ ನದಿ. ಹಾಗಾಗಿ ನದಿ ಬಹಳ ತಂಪಾಗಿರುವುದು. ರಾತ್ರಿಯ ಚಳಿಯಲ್ಲಿ ಆ ಕೊರೆಯುವ ನೀರಿನಲ್ಲೀಜುವುದೆಂದರೆ ಏನು! ಆದರೂ ಆದಷ್ಟೂ ನೀರಿನೊಳಗೇ ಈಜಿಕೊಂಡು ಸ್ವಲ್ಪ ದೂರ ಹೋದೆ. ನದಿ ವೇಗವಾಗಿ ಹರಿಯುತ್ತಿತ್ತು, ನಾನು ಪ್ರವಾಹದೊಡನೆಯೇ ಈಜುತ್ತಿದ್ದರಿಂದ ಮುಂದೆ ಹೋಗಲು ಹೆಚ್ಚು ಶಕ್ತಿ ಪ್ರಯೋಗ ಮಾಡುವ ಅವಕಾಶವಿರಲಿಲ್ಲ. ನಂತರ ಉಸಿರಾಡಲೆಂದು ಮೇಲೆ ಬಂದು ಸುತ್ತ ನೋಡಿದೆ ಎಲ್ಲವೂ ನಿಶ್ಯಬ್ಧವಾಗಿ, ಸುರಕ್ಷಿತವಾಗಿ ಕಾಣಿಸಿತು. ಆದರೂ ಜಾಗ್ರತೆಗಾಗಿ ಮತ್ತೆ ಸ್ವಲ್ಪ ದೂರ ಮುಳುಗಿಕೊಂಡೇ ಈಜುತ್ತಾ ಹೋದೆ. ಸುಮಾರು ಐದಾರು ಕ್ರೋಶಗಳು ಹೋದ ನಂತರ ತೀರದಲ್ಲಿ ಒಂದು ವನ ಕಾಣಿಸಿತು. ನಿಧಾನವಾಗಿ ನೀರಿನಿಂದೆದ್ದು ವನದೊಳಗೆ ಹೊಕ್ಕೆ. ತಂಪನೆಯ ನೀರಿನಿಂದ ಮೈ ಮರಗಟ್ಟಿ ಹೋಗಿತ್ತು. ಮೈ ಬೆಚ್ಚಗೆ ಮಾಡಿಕೊಳ್ಳಲು ಸ್ವಲ್ಪ ಹೊತ್ತು ಅಲ್ಲಿಯೇ ಓಡಾಡಿದೆ. ನನ್ನ ಪಂಚೆಯನ್ನು ಹಿಂಡಿ ಆದಷ್ಟೂ ಒಣಗಿಸಿಕೊಂಡೆ. ನಂತರ ಸುಸ್ತಾಗಿ ಬಂಡೆಯ ಮಗ್ಗುಲಿನಲ್ಲಿ ಮಲಗಿ ನಿದ್ರೆ ಮಾಡಿದೆ.
ಮಾರನೆಯ ದಿನ ಬೆಳಗ್ಗೆ ಎಚ್ಚರವಾದರೂ ಎದ್ದು ಎಲ್ಲಿಯೂ ಹೋಗಲು ಯತ್ನಿಸಲಿಲ್ಲ. ನನ್ನನ್ನು ನಿಜವಾಗಿ ಗೂಢಚಾರನೆಂದು ಭಾವಿಸಿದ್ದರೆ ಅವರು ನನ್ನನ್ನು ಹೆಚ್ಚು ಹುಡುಕುವುದಿಲ್ಲವೆಂದು ನನಗೆ ತಿಳಿದಿತ್ತು. ಗೂಢಚಾರರು ಸೆರೆ ಸಿಕ್ಕುವುದು ಬಹಳ ವಿರಳ - ಅದೂ ಕಾರಾಗೃಹದಿಂದ ತಪ್ಪಿಸಿಕೊಂಡಮೇಲೆ ಅಸಾಧ್ಯವೆಂದೇ ಹೇಳಬೇಕು. ಅವರು ಕಲಿತ ವಿದ್ಯೆಗಳಿಂದ ಎಲ್ಲರ ಕಣ್ಣುಗಳಿಗೆ ಮಣ್ಣೆರಚಿ ಮಾಯವಾಗುವರು. ಮೇಲಾಗಿ ನಾವಿಬ್ಬರೂ ಮೃತರಾಗಿರುವೆವು ಎಂದು ಕಾವಲುಗಾರರು ಭಾವಿಸಿದ್ದರು. ಹಾಗಾಗಿ ನಾನು ಸುರಕ್ಷಿತವಾಗಿರುವೆ ಎಂದು ಅರಿತಿದ್ದೆ.
ಸಂಜೆಯಾಗುತ್ತಿದ್ದಂತೆ ಸುತ್ತಲೂ ಸಮೀಕ್ಷೆ ನಡೆಸಿದೆ. ನಾನೊಂದು ಸ್ತೂಪದ ಹೊರಂಗಣದಲ್ಲಿರುವೆನೆಂದು ಅರ್ಥವಾಯಿತು. ಎತ್ತರದ ಶಿಖರವಿದ್ದ ಸ್ತೂಪ ಅದು. ಮುಂದೇನು ಮಾಡುವುದು ಎಂದು ಯೋಚಿಸುತ್ತ ಅದರೊಳಗೆ ಹೊಕ್ಕೆ. ಅಲ್ಲಿ ನನ್ನ ಮಿತ್ರ ವೇಂ ಸಾಂಗ್ ಕಾಣಿಸಿಕೊಂಡ. ಓರ್ವ ಬೌದ್ಧ ಭಿಕ್ಷುವಿನೊಡನೆ ಮಾತನಾಡುತ್ತಿದ್ದ. "... ಈ ಸ್ಥಳದಲ್ಲಿ ತಥಾಗಥನು ಆರು ಮಾಸಗಳ ಕಾಲ ಅನಾತ್ಮ, ದೂಃಖ, ಅನಿತ್ಯ ಹಾಗು ಅಶುದ್ಧಿಗಳ ವಿಚಾರದಲ್ಲಿ ಬೋಧಿಸುತ್ತಿದ್ದ..." ಎಂದು ಭಿಕ್ಷುವು ಹೇಳುತ್ತಿರಲು ನಾನು ನನ್ನ ಮಿತ್ರನನ್ನು ಕೂಗಿದೆ.
"ಮಿತ್ರ, ನನ್ನನ್ನು ಬಿಟ್ಟು ನೀನೊಬ್ಬನೇ ಏಕೆ ಬಂದೆ? ನನಗೇಕೆ ಹೇಳಲಿಲ್ಲ? ನಾವಿಬ್ಬರೂ ಜೊತೆಗೇ ಹೋಗುವುದಾಗೆ ಒಪ್ಪಂದ ಮಾಡಿಕೊಂಡಿರಲಿಲ್ಲವೇ?" ಎಂದು ಹೇಳಿ ಅವನಿಗೆ ದೋಷಭಾವ ಬರುವಂತೆ ಮಾಡಿದೆ. ಅವನು ತಬ್ಬಿಬ್ಬಾದ.
ಸಮಾಕುಲನಾಗಿ "ನೀನು? ಇಲ್ಲಿ? ಆದರೆ ನೀನು ಬರುವುದಿಲ್ಲ, ಊರಿಗೆ ಹೋಗುವೆ ಎಂದು ಸಂದೇಶ ಕಳುಹಿಸಿರಲಿಲ್ಲವೆ? ನನಗೆ ಕನ್ಯಾಕುಬ್ಜದಲ್ಲಿ ಶ್ರಮಣರೊಬ್ಬರು ಹೇಳಿದರು! ಅದಕ್ಕೇ ನಾನು ಒಬ್ಬನೇ ಹೊರಟು ಬಂದೆ. ಹಾಗಾದರೆ ಅದು ಸತ್ಯವಲ್ಲವೇ? ನೀನು ನನ್ನೊಡನೆ ಪ್ರಯಾಣ ಮುಂದುವರಿಸುವೆಯೇ?" ಎಂದು ಕೇಳಿದ.
"ಸುಳ್ಳು ಮಿತ್ರ. ನಾನಾವ ಸಂದೇಶವನ್ನೂ ಕಳುಹಿಸಲಿಲ್ಲ. ಯಾರೋ ನಿನ್ನೊಡದೆ ವಿನೋದವಾಡಿರಬೇಕು, ಅಷ್ಟೆ! ನಿನಗೆ ಹೇಳದೆ ನಾನು ಹೊರಟು ಹೋಗುವೆನೆ? ಸಾಧ್ಯವಿಲ್ಲ!" ಎಂದು ಹೇಳಿದೆ. ಬಳಿಕ ಕನ್ಯಾಕುಬ್ಜದಿಂದ ಆದಷ್ಟು ದೂರ ಹೋಗಲೆಂದು "ನಡೆ ಈಗಲೇ ಹೊರಡೋಣ. ನಷ್ಟವಾದ ಹಲವು ದಿನಗಳನ್ನು ಪುನಃ ಗಳಿಸಲು ಪ್ರಯತ್ನಿಸೋಣ." ಎಂದು ಕೇಳಿಕೊಂಡೆ.
"ನಿನ್ನ ಸ್ಥಳದಲ್ಲಿ ಬೇರೆಯಾರನ್ನಾದರೂ ಕರೆದುಕೊಂಡು ಹೋಗುವೆನೆಂದು ನಿನ್ನ ಕುದುರೆಯನ್ನು ಕರೆದುಕೊಂಡು ಬಂದಿರುವೆ. ನಡೆ ಹೊರಡೋಣ" ಪ್ರಸನ್ನನಾಗಿ ನುಡಿದ.
ಇಬ್ಬರೂ ಹೊರಟು ರಾತ್ರಿಯೆಲ್ಲ ಪ್ರಯಾಣ ಮಾಡಿದೆವು. ಮಾರನೆಯ ದಿನ ಹಗಲಿನಲ್ಲಿ ನವದೇವಕುಲವೆಂಬ ಸ್ಥಳವೊಂದರಲ್ಲಿ ತಂಗಿದ್ದೆವು. ನನ್ನ ಮಿತ್ರನಿಗೆ ಅಲ್ಲಿಯೂ ಸ್ತೂಪ ಸಂಘಾರಮಗಳ ದರ್ಶನ ಮಾಡಿಕೊಂಡನು. ರಾತ್ರಿ ಅವನು ತನ್ನ ಅನುಭವಗಳನ್ನು ಬರೆಯುತ್ತಿದ್ದಾಗ ಅವನ ಪತ್ರಗಳನ್ನು ನಾನು ಓದುವ ಪ್ರಯತ್ನ ಮಾಡತೊಡಗಿದೆ. ಮೊದಲೇ ಹೇಳಿದಂತೆ ನಾನು ಅವನ ಭಾಷೆಯನ್ನು ಕಲಿಯಲಾರಂಭಿಸಿ ಸುಮಾರು ಪ್ರಗತಿ ಮಾಡಿದ್ದೆ. ಅದನ್ನು ಪರೀಕ್ಷಿಸಲು ಅವನ ಪತ್ರಗಳನ್ನು ಕೈಗೆತ್ತಿಕೊಂಡೆ.
"ಇದೇನು ಹರ್ಷರಾಜನ ಹೆಸರನ್ನು ಷೀಲದಿತ್ಯನೆಂದು ಬರೆದಿರುವೆ?" ಎಂದು ಕೇಳಿದೆ.
ಮುಗುಳ್ನಕ್ಕು ಅವನು ನಾನು ಓದುತ್ತಿದ್ದ ಪತ್ರವನ್ನು ತನ್ನ ಕೈಗೆ ತೆಗೆದುಕೊಂಡು "ಇದು ಷೀಲದಿತ್ಯ ಅಲ್ಲ. ಶಿ-ಲೊ-ತು-ತ-ಕಿಅ ಅಂದರೆ ಶಿಲಾದಿತ್ಯ. ಷೀಲಾದಿತ್ಯನಾದರೆ ಮತ್ತೊಂದು ರೇಖೆ ಇರುತ್ತದೆ. ಹೀಗೆ" ಎಂದು ಬರೆದು ತೋರಿಸಿದ.
"ಅದೇಕೆ ಹಾಗೆ ಬರೆದಿರುವೆ. ಅದು ಹರ್ಷರಾಜನ ಬಿರುದಷ್ಟೆ. ಅವನ ಹೆಸರು ಹರ್ಷವರ್ಧನ" ಎಂದು ಹೇಳಿದೆ
ಅದಕ್ಕೆ ಅವನು "ಹರ್ಷವರ್ಧನ ಹೆಸರನು ಹೊ-ಲಿ-ಶ-ಫ-ತನ್-ನ ಎಂದು ಬರೆಯ ಬೇಕು. ಇದು ಬಹು ಉದ್ದವಷ್ಟೇ ಅಲ್ಲ ಸಂದಿಗ್ಧ ಕೂಡ. ಹಾಗಾಗಿ ಶಿಲಾದಿತ್ಯ ಬಳಸಿರುವೆ" ಎಂದು ಹೇಳಿದ.
"ಓಹ್ ಹಾಗೋ! ಸರಿ ಸರಿ." ಎಂದು ಓದುವುದನ್ನು ಮುಂದುವರೆಸಿದೆ.
ಸ್ವಲ್ಪ ಓದಿದ ಬಳಿಕ ಅವನನ್ನು ಕೇಳಿದೆ "ಇದೇನು ಮಿತ್ರ, ಹೀಗೆ ನಿಜ ಸಂಗತಿ ಬಿಟ್ಟು ತಪ್ಪು ಬರೆದಿರುವೆ?" ಎಂದು ಕೇಳಿದೆ
"ಏನು ತಪ್ಪು?" ಎಂದ, ಕೋಪದಿಂದ.
"ನೀನು ಬರೆದಿರುವುದು ನನಗೆ ಓದಲು ಬರುತ್ತದೆ. ಹರ್ಷರಾಜನೇ ಕುಮಾರ ರಾಜನ ಮೂಲಕ ನಿನಗೆ ಕರೆಯಿತ್ತನೆಂದು ಬರೆದಿರುವೆ. ಇದು ಸುಳ್ಳಲ್ಲವೆ? ನಾವೇ ಹರ್ಷರಾಜನ ಸಭೆಗೆ ಹೋಗಲಿಲ್ಲವೆ? ಮೇಲಾಗಿ ಕುಮಾರರಾಜ ಕಾಮರೂಪದ ಶ್ರೀಮಂತನಷ್ಟೆ! ಅವನು ಕಾಮರೂಪದ ದೊರೆಯಲ್ಲ!" ಎಂದು ಅವನು ಬರೆದಿದ್ದ ಅಸತ್ಯ ಸಂಗತಿಗಳನ್ನು ತೋರಿಸಲಾರಂಭಿಸಿದೆ.
ಮುಂದುವರೆಸುತ್ತ "ಹರ್ಷರಾಜನು ನಿನ್ನ ಬೋಧನೆಯನ್ನು ಕೇಳಿದ ಕಾರಣ ಮಹಾಯಾನ ಬೌದ್ಧಧರ್ಮ ಶ್ರೇಷ್ಠವೆಂದು ಒಪ್ಪಿ ಧಾರ್ಮಿಕ ಸಮಾವೇಷ ಕರೆದನೆಂದು ಹೇಳಿರುವೆ. ನಿನ್ನ ಬೋಧನೆಯಿಂದಲೇ ಹರ್ಷರಾಜ ಬೌದ್ಧ ಧರ್ಮಕ್ಕೆ ಬದಲಾಯಿಸದನೆಂದೂ ಹೇಳಿರುವೆ. ಹರ್ಷರಾಜ ಬೌದ್ಧ ಧರ್ಮಕ್ಕೆ ಬದಲಾಯಿಸಿಲ್ಲವಲ್ಲ? ಅವನು ಬ್ರಾಹ್ಮಣ ಕರ್ಮಗಳ ಅನುಯಾಯಿ! ಶಿವ-ಮಹೇಶ್ವರನ ಭಕ್ತ! ಕೇವಲ ರಾಜಕುಮಾರಿ ರಾಜ್ಯಶ್ರೀ ಬೌದ್ಧ ಧರ್ಮಕ್ಕೆ ಬದಲಾಯಿಸಿದ್ದಾಳೆ ಅದೂ ಅವಳು ವಿಂಧ್ಯಾಚಲದಲ್ಲಿ ವನವಾಸದಲ್ಲಿದ್ದಾಗ. ನೀನು ಹರ್ಷರಾಜನಿಗೆ ಬೋಧನೆ ಮಾಡಿದ್ದನ್ನು ನಾನು ಕಾಣಲೇ ಇಲ್ಲವಲ್ಲ?" ಎಂದೆ.
ನನ್ನ ಮಿತ್ರನ ಮುಖ ಕೆಂಪಾಗಿ ಉಬ್ಬಿದರೂ ನಾನು ಪುನಃ ಹೇಳಿದೆ "ಧಾರ್ಮಿಕ ಸಮಾವೇಷದಲ್ಲಿ ಅವನು ಬ್ರಾಹ್ಮಣ ದೇವರುಗಳಿಗೆ ಮಾಡಿದೆ ರಾಜ್ಯೋಪಚಾರಗಳನ್ನೇ ಬುದ್ಧನ ಪ್ರತಿಮೆಗಳಿಗೂ ಮಾಡಿದ. ನೀನು ಕೇವಲ ಬುದ್ಧನ ಪ್ರತಿಮೆಯನ್ನು ಕುರಿತು ಬರೆದಿರುವೆ, ಬ್ರಾಹ್ಮಣ ದೇವತೆಗಳಿಗೆ ಸಲ್ಲಿಸಿದ ಉಪಚಾರಗಳನ್ನು ಹೇಳಿಯೇ ಇಲ್ಲವಲ್ಲ. ಇದು ಅಟಮಟಣೆಯಲ್ಲವೇ?"
ಪುನಃ ಸ್ವಲ್ಪ ಓದಿ "ಓಹೋ! ಈ ವಿಚಾರವನ್ನೂ ಬರೆದಿರುವೆಯಾ! ಹರ್ಷರಾಜನ ಪ್ರಾಣಾಪಹರಣ ಪ್ರಯತ್ನವೇನೋ ನಿಜ ಆದರೆ ಅದು ಬ್ರಾಹ್ಮಣರ ಕಾರ್ಯವಲ್ಲ - ಹೊರದೇಶ ಗೂಢಚಾರರ ಕೃತ್ಯವೆಂದು ಎಲ್ಲ್ರಿಗೂ ತಿಳಿದಿದೆ. ನೀನೇಕೆ ಅದು ಬ್ರಾಹ್ಮಣ ವರ್ಗದ ಕೃತ್ಯ, ಹರ್ಷರಾಜ ಒಂದು ಸಹಸ್ರ ಬ್ರಾಹ್ಮಣರನ್ನು ದೇಶಬ್ರಷ್ಟರಾಗಿಸಿದ ಎಂದು ಬರೆದಿರುವೆ?"
"ಧಾರ್ಮಿಕ ಸಮಾವೇಷದಲ್ಲಿ ನೀನು ಐದು ದಿನಗಳ ಕಾಲ ತರ್ಕ ಮಾಡಿದೆ, ಯಾರಿಗೂ ನಿನ್ನನ್ನು ಸೋಲಿಸಲಾಗಲಿಲ್ಲ ಎಂದು ಬರೆದಿರುವೆಯಲ್ಲ? ಅದಕ್ಕೆ ಯಾರೋ ನಿನ್ನ ಪ್ರಾಣಾಪಹರಣ ಪ್ರಯತ್ನ ಮಾಡಿದರು ಎಂದು ಹೇಳಿರುವೆಯಲ್ಲ? ನೀನು ತರ್ಕ ಮಾಡಿದ್ದು ನಾನು ನೋಡಲೇಯಿಲ್ಲವೆ? ಯಾರು ನಿನ್ನ ಪ್ರಾಣ ಹರಣ ಪ್ರಯತ್ನ ಮಾಡಿದರು?" ಪುನಃ ಕೇಳಿದೆ.
ನನ್ನ ಮಿತ್ರನ ಬಳಿ ಈ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಒಂದು ಬೃಹತ್ ಅಹ್ಂ ಪೋಶಿಸಿಕೊಂಡಿದ್ದ. ಕೋಪಗೊಂಡು ಎಲ್ಲಿಯೋ ಹೊರಟು ಹೋದ. ಅವನು ಹಿಂತಿರುಗಿದ ನಂತರ ನಾನು ಆ ವಿಚಾರ ಮತ್ತೆ ಹೇಳಲಿಲ್ಲ. ಆದರೆ ಅವನು ಬರೆದ ತಪ್ಪು ಸರಿಪಡಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೆ. ಹಾಗಾಗಿ ತಿದ್ದಲು ಪ್ರಯತ್ನ ಮಾಡಿದೆ.
ಇದ್ಯಾವುದೂ ನಮ್ಮ ಮಿತ್ರತೆಗೆ ಬಾಧೆಯಾಗಲಿಲ್ಲ. ಇಬ್ಬರೂ ಕೂಡಿ ಜಂಬೂದ್ವೀಪದಾದ್ಯಂತ ಪ್ರಯಾಣ ಮಾಡಹೊರಟೆವು.