ಪ್ರಕೃತಿಯಲ್ಲಾಗುವ ಸೋಜಿಗಗಳಿಗೆ ಕೊನೆಯುಂಟೇ?

ಪ್ರಕೃತಿಯಲ್ಲಾಗುವ ಸೋಜಿಗಗಳಿಗೆ ಕೊನೆಯುಂಟೇ?

ಒಂದು ತಿಂಗಳ ಹಿಂದೆ ನಾನು ನಮ್ಮ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ದಾಸವಾಳದ ಗಿಡದಲ್ಲಿ ಕಂಡು ಬಂದ ಅಚ್ಚರಿಯ ಸಂಗತಿಯನ್ನು ‘ಸಂಪದ' ದಲ್ಲಿ ಹಂಚಿಕೊಂಡಿದ್ದೆ. ಆಗ ಆ ಗಿಡದ ಒಂದು ರೆಂಬೆಯಲ್ಲಿ ಐದು ಎಸಳಿನ ಕೆಂಪು ದಾಸವಾಳವೂ, ಮತ್ತೊಂದು ರೆಂಬೆಯಲ್ಲಿ ಬಹು ಎಸಳಿನ ತಿಳಿ ಗುಲಾಬಿ ದಾಸವಾಳವೂ ಅರಳಿದ್ದವು. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ’ ಎನ್ನುವ ಗಾದೆಯಂತೆ ಆ ದಾಸವಾಳದ ಗಿಡದ ಬಳಿಯಲ್ಲಿದ್ದ ಮತ್ತೊಂದು ದಾಸವಾಳದ ಗಿಡದಲ್ಲೂ ಇದೇ ರೀತಿಯ ಸೋಜಿಗವೊಂದು ಕಂಡು ಬಂದಿದೆ. 

ಆದರೆ ಇಲ್ಲಿ ಮೂಲ ದಾಸವಾಳದ ಗಿಡದಲ್ಲಿ ಅರಳುತ್ತಿದ್ದುದು ತಿಳಿ ಗುಲಾಬಿ-ಆರೆಂಜ್ ಮಿಶ್ರ ಬಣ್ಣದ ಐದು ಎಸಳಿನ ದಾಸವಾಳದ ಹೂವು. ಈ ಗಿಡದಲ್ಲಿನ ಒಂದು ರೆಂಬೆಯಲ್ಲಿ ತಿಳಿ ಹಳದಿ ಬಣ್ಣದ ಐದು ಎಸಳಿನ ದಾಸವಾಳ ಅರಳಿದೆ. ಗಿಡವೊಂದರಲ್ಲಿ ಸಾವಿರಾರು ಹೂವು ಅರಳಿದ ಬಳಿಕ ಈ ಬಗೆಯ ವಿಚಿತ್ರ ವಿದ್ಯಮಾನಗಳು ಸಂಭವಿಸುತ್ತವೆ ಎಂದು ಕೇಳಿದ ನೆನಪು. ದಾಸವಾಳ ಗಿಡಕ್ಕೆ ಕಸಿ ಕಟ್ಟುವಾಗ ಬೇರೆ ಬೇರೆ ವರ್ಣದ ದಾಸವಾಳ ಗಿಡಗಳ ಕಾಂಡ ಮತ್ತು ರೆಂಬೆಯನ್ನು ಬಳಸಿದ ಪರಿಣಾಮವೂ ಆಗಿರಬಹುದು ಅಲ್ಲವೇ?

ಏನಾದರಾಗಲಿ, ನಮ್ಮ ಪ್ರಕೃತಿಯಲ್ಲಿ ನಡೆಯುವ ಕೆಲವು ಸೋಜಿಗ ಸಂಗತಿಗಳಿಗೆ ಕೊನೆಯೇ ಇಲ್ಲ. ಇಂತಹ ಘಟನೆಗಳು ನಡೆದಾಗ ಅದನ್ನು ನೋಡಿ ಆನಂದಿಸುವುದಷ್ಟೇ ನಮ್ಮ ಕೆಲಸ ಅಲ್ಲವೇ?