ಪ್ರವಾಸಿ ತಾಣವಾಗಿ ಪೊಸಡಿ ಗುಂಪೆ

ಪ್ರವಾಸಿ ತಾಣವಾಗಿ ಪೊಸಡಿ ಗುಂಪೆ

ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತ್ ವ್ಯಾಪ್ತಿಗೊಳಪಡುವ ಪೊಸಡಿ ಗುಂಪೆಯು ಒಂದು ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಟ್ಟರೂ ಇಲ್ಲಿ ಯಾವುದೇ  ಮೂಲಭೂತ ಸೌಕರ್ಯವಾಗಲೀ, ನಾಮ ಫಲಕವಾಗಲೀ ಇರಲಿಲ್ಲ. ಆದರೂ ಬೆಳಿಗ್ಗೆ ಮತ್ತು ಸಂಜೆ ಹೊತ್ತಲ್ಲಿ ನೂರಾರು ಜನ ಪ್ರವಾಸಿಗರು ದಾರಿ ಕೇಳಿಕೊಂಡು ಬರುತ್ತಿದ್ದು, ಮುಂದೆ ಇದೊಂದು ಪ್ರಮುಖ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆಯಬಹುದು. ಈಗಾಗಲೇ ಪೊಸಡಿಗುಂಪೆಯ ಆಸುಪಾಸಿನಲ್ಲಿರುವ ೩೫ ಎಕ್ರೆ ಸ್ಥಳವನ್ನು ಸರಕಾರವು ಸ್ವಾಧೀನಪಡಿಸಿದೆ.

೧೮ನೇ ಶತಮಾನದಲ್ಲಿ ಸರ್ವೇ ಆಫ್ ಇಂಡಿಯಾದವರು ಸ್ಥಾಪಿಸಿದ ಜಿ.ಟಿ. ಸ್ಟೇಷನನ್ನು ಪುನರ್ ನವೀಕರಿಸಿ ಕೇರಳದ ಕಂದಾಯ ಸಚಿವರಾದ ಶ್ರೀ ಚಂದ್ರಶೇಖರ್‌ರವರು ಈಗಾಗಲೇ ಉದ್ಘಾಟಿಸಿದ್ದಾರೆ. ಈಗ ಪ್ರವಾಸಿಗರು ಧರ್ಮತ್ತಡ್ಕ ಬಾಯಾರು ರಸ್ತೆಯ ಮೂಲಕ ಬಂದು, ಇದೇ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಪೊಸಡಿ ಗುಂಪೆ ಬೆಟ್ಟವನ್ನು ಹತ್ತಬೇಕಾಗಿದೆ. ಮುಂದೆ ಇದು ಪ್ರವಾಸೀ ತಾಣವಾಗಿ ಬದಲಾದರೂ, ಬೆಟ್ಟ ಹತ್ತಲು ರಸ್ತೆಯ ವ್ಯವಸ್ಥೆ ಇರುವುದಿಲ್ಲವೆಂದೂ, ಹೊಸದುರ್ಗದ ರಾಣೀಪುರದಂತೆಯೇ ಇಲ್ಲಿಯೂ ನಡೆದುಕೊಂಡೇ ಗುಡ್ಡದ ತುದಿಗೆ ತಲುಪಲು ಉತ್ತೇಜನ ನೀಡಲಾಗುತ್ತದೆ ಎಂದೂ ತಿಳಿದು ಬಂದಿದೆ. ಮುಂದಿನ ಯೋಜನೆಯಂತೆ ಧರ್ಮತ್ತಡ್ಕ, ಬಾಯಾರು ರಸ್ತೆ ಬದಿಯಲ್ಲಿ ಕಾರ್ಯಾಲಯ ಮತ್ತು ವಾಹನಗಳನ್ನು ನಿಲುಗಡೆಗೊಳಿಸಲು ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳನ್ನು ಮಾಡಲು ಉದ್ದೇಶಿಸಲಾಗಿದೆ.

ಪೊಸಡಿಗುಂಪೆಯ ಬೆಟ್ಟಗಳು ಬಾಯಾರು ಧರ್ಮತ್ತಡ್ಕ, ರಸ್ತೆಯಿಂದ ತೊಡಗಿ ಚೇವಾರು, ಬೊಟ್ಟಾರಿ ಪ್ರದೇಶದವರೆಗೆ ವಿಸ್ತರಿಸಿದೆ. ಬೊಟ್ಟಾರಿ ಪ್ರದೇಶದಲ್ಲಿಯೂ ಪ್ರವಾಸಿಗರಿಗೆ ವೀಕ್ಷಿಸಲು ಮನೋಹರ ದೃಶ್ಯಗಳಿವೆ. ಚೇವಾರಿನಿಂದ ಬೊಟ್ಟಾರಿ ಮೂಲಕ ಆವಳ ಮಠದ ಮೂಲಕ ಸಾಗುವ ಕಚ್ಚಾ ರಸ್ತೆಯೊಂದಿದೆ. ಆ ರಸ್ತೆಗೆ ಡಾಮರೀಕರಣವಾದರೆ ಪ್ರವಾಸಿಗರಿಗೆ ಆವಳ ಮಠ ಸಂದರ್ಶಿಸಲು ಸಂಪರ್ಕ ರಸ್ತೆಯಾಗಿ ತುಂಬಾ ಅನುಕೂಲವಾಗಬಹುದು. ಈಗ ನೂರಾರು ಪರಿಸರ ಪ್ರೇಮಿಗಳು ಮೂಲಭೂತ  ಸೌಕರ್ಯವಿಲ್ಲದಿದ್ದರೂ ಪೊಸಡಿಗುಂಪೆಯನ್ನು ಸಂದರ್ಶಿಸುತ್ತಿದ್ದು, ಮುಂದೆ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಿದರೆ ಇದು ಕೇರಳದಲ್ಲಿ ಹೆಸರುವಾಸಿ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಇದೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬಹುದೆಂಬ ಸತ್ಯವನ್ನು ಅರಿತ ಸರಕಾರವು ತಡವಾಗಿಯಾದರೂ ಇತ್ತ ಗಮನ ಹರಿಸಿದೆ.

-ಮನು ಶಕ್ತಿನಗರ 

ಚಿತ್ರ ಕೃಪೆ : ಇಂಟರ್ನೆಟ್ ತಾಣ