ಬಣ್ಣದ ತಗಡಿನ ತುತ್ತೂರಿ.... :)

ಬಣ್ಣದ ತಗಡಿನ ತುತ್ತೂರಿ.... :)

ಬರಹ

ಜಿ.ಪಿ.ರಾಜರತ್ನಂ - ಶತಮಾನದ ಕವಿಯ ಪರಿಚಯ ಶಿಶು ಗೀತೆಗಳ ಮೂಲಕ...

ಪದ್ಯ ಶುರುವಾದ ಸಮಯ:

೧೯೩೨ರಲ್ಲಿ ರತ್ನ ಎಂ.ಎ ಪಧವೀಧರರಾಗಿದ್ದರು.ಆ ಕಾಲದಲ್ಲಿ ಕನ್ನಡ ಎಂ.ಎ ಮಾಡಿದವರ ಸಂಖ್ಯೆ ತೀರಾ ಕಡಿಮೆ...ಆದರೂ ಅವರು ಕಲಿತಿದ್ದ ವಿದ್ಯೆಯನ್ನು ಉಪಯೋಗಿಸುವ ಯಾವ ಉದ್ಯೋಗ ಸಿಕ್ಕಿರಲಿಲ್ಲ. ಮುಂದೆ ಏನು ಮಾಡಬೇಕೆನ್ನೋದು ತೊಚದೇ ಇದ್ದ ಸಮಯ. ಆರೋಗ್ಯ ಕೆಟ್ಟಿದ್ದರಿಂದ ಅವರ ತಂದೆ ರಜ ತೆಗೆದುಕೊಳ್ಳಬೇಕಾಗಿ ಬಂದಾಗ, ತಂದೆಯ ಜಾಗಕ್ಕೆ ಬದಲಿಯಾಗಿ ರತ್ನ ಹೋದರು. ಅವರ ತಂದೆ ಮಿಡ್ಲಿಸ್ಕೂಲಿನ ಎರಡು ಮೂರನೇ ತರಗತಿಗಳಿಗೆ ಪಾಠ ಹೇಳುತ್ತಿದ್ದರು. ಅವರ ಬದಲಿಗೆ ಹೋದ ರತ್ನರಿಗೂ ಅದೇ ಪಾಠ ಬಿತ್ತು...!!

ಎಂ.ಎ ಪರೀಕ್ಷೆ ಪಾಸುಮಾಡಿದವರಿಗೆ ಮಿಡ್ಲಿಸ್ಕೂಲ್ ಪಾಠ ಮಾಡುವುದು ಏನು ಕಷ್ಟವೇ....?! ಎಂದುಕೊಂಡು ಯಾವ ಪೂರ್ವ ಸಿದ್ಧತೆಗಳಿಲ್ಲದೆ ತರಗತಿಗೆ ಹೋದರು. ಆವತ್ತು ಮಾಡಬೇಕಾದ ಪಠ್ಯ ಭಾಗವನ್ನ ಓದಿಕೊಂಡರು.

"ಎಂಟು ಗೇಣಿನ ದೇಹ...ರೋಮಗಳೆಂಟು ಕೋಟಿಯು...ಮೂಳೆಯರವತ್ತೆಂಟು...ಇತ್ಯಾದಿ....ಈ ದೇಹ ಕಟ್ಟಿಕೊಂಡು ಏಕೆ ಗೊಳಾಡುತ್ತೀ...ಪರಮಾತ್ಮನನ್ನ ಧ್ಯಾನಿಸಿ ಪರಲೋಕಕ್ಕೆ ಹೋಗು ಮಗು" ಎಂದು ಮೊದಲಾಗುವ ಹರಿಭಕ್ತಿ ಸಾರದ ಪದ್ಯ ಪಾಠವನ್ನು ಎರಡನೇ ತರಗತಿಯ ಮಕ್ಕಳಿಗೆ ಭೊದಿಸಬೇಕಾಗಿತ್ತು!!!ಅದನ್ನ ಹೇಗೆ ಮಾಡುವುದೆಂದು ದಿಕ್ಕು ಕಾಣದೆ, ಮುಂದಿನ ಗದ್ಯ ಪಾಠವನ್ನ ಓದಿದರು

"ದೇವರು ಎಂಬ ವ್ಯಕ್ತಿಯು ಇರುವುದೇ? ಎಂಬುದರ ಕುರಿತಾಗಿ ವಿಚಾರಪರ ರಾಯರಿಗೂ ಭಕ್ತಾಗ್ರೇಸರ ಶಾಸ್ತ್ರಿಗಳಿಗೂ ನಡೆದ ಒಂದು ಸಂವಾದ." ಬರೆದವರಿದೆ ಅದು ಇಷ್ಟವಾಗಿರಬಹುದು ಆದರೆ ಎರಡನೇ ತರಗತಿಯ ಮಕ್ಕಳಿಗೆ ಅಲ್ಲ.. 

ಎರಡನೆಯ ತರಗತಿಗೆ ಹೋದರು ಅಲ್ಲಿ ಮೊದಲನೆ ಪಾಠ: 'ಸೌವರ್ಣಮಧ್ಯ ಸ್ಥಿತಿ' ಹಾಗೆಂದರೆ? ಅರ್ಥವಾಗಲಿಲ್ಲ....ಅಲ್ಲೇ ಪಕ್ಕದಲ್ಲಿ ಇಂಗ್ಲೀಷಿನಲ್ಲಿ "The Golden Mean" ಎಂದು ಬರೆದಿದ್ದರು...!!!ಅವರ ಮೇಷ್ಟ್ರುತನದ ಮೊದಲನೆ ದಿನ ಹೀಗೆ ಆರಂಭವಾಯಿತು... :) 

"ಪರಮಾತ್ಮಾ! ಮಕ್ಕಳಿಗೆ ಹೇಳಬೇಕಾದುದನ್ನ ಸುಲಭವಾಗಿ ಸರಳವಾಗಿ ತಿಳಿಸಲು ಸಾಧ್ಯವಿಲ್ಲವೇ? ಪಠ್ಯ ಪುಸ್ತಕದ ಪಾಠಗಳು ಅರ್ಥವಾಗಲಿ ಬಿಡಲಿ ಮಾಡಿಯೇ ತೀರಬೇಕು. ಇದರ ಜೊತೆಗೆ ಮಕ್ಕಳಿಗೆ ಉಲ್ಲಾಸ ಕೊಡುವ ಉತ್ಸಾಹಗೊಳಿಸುವ ಕತೆ ಕವನಗಳನ್ನ ಕೂಡಿಸಬಾರದೇಕೆ??" ಅನ್ನೋ ಮನಸಾಯಿತು ಹಾಗೆ ಕಟ್ಟಿ ಹೇಳಿ ಕೊಟ್ಟ ಮೊದಲ ಕವನವೇ 'ತುತ್ತೂರಿ'... :)

ಬಣ್ಣದ ತಗಡಿನ ತುತ್ತೂರಿ...

ಕಾಸಿಗೆ ಕೊಂಡನು ಕಸ್ತೂರಿ...

ಎಂದು ಹೇಳಿಕೊಂಡು ಮಕ್ಕಳು ಶಾಲೆಯಲ್ಲಿ, ಮನೆಯ ಬಳಿ ಕುಣಿದಾಡುವ ಗದ್ದಲ ಕಿವಿಗೆ ಬೀಳದಿದ್ದುದು ಅಪೂರ್ವ. ಅವರ ಉಲ್ಲಾಸಕ್ಕೆ ತುತ್ತೂರಿಯೊಂದೇ ಸಾಕಾಗಿತ್ತು....ಅದೆಷ್ಟು ಸಲ ಓದಿದರೂ... ಊದಿದರೂ...ಅವರು ದಣಿದದ್ದು ಕಾಣಿಸಲಿಲ್ಲ. ಅದೇ ಪಟ್ಟಿನಲ್ಲಿ ದಿನಕ್ಕೆ ಮೂರು ನಾಲ್ಕು ಕವನಗಳಂತೆ ಬಾಲಕರೊಡನೆ ಬಾಲಕರಾಗಿ ಹೇಳಿಕೊಟ್ಟರು. 

ಹಾಗೆ ರತ್ನರು ಶಿವರಾಮ ಕಾರಂತರ ಮಕ್ಕಳ ಕೂಟದಲ್ಲಿ ಹೇಳಿಕೊಟ್ಟ ಮತ್ತೊಂದು ಪದ್ಯ:

ದೊಡ್ಡ ಪಟ್ಟೆ ಹುಲಿ

ಕಾಡುದಾರಿಯಲಿ

ನಡುಗಿ ನಿಂತು ಹೇಳಿತಿಂತು

ಅಯ್ಯೋ ಅಪ್ಪ ಚಳಿ ||

ಮುಂದಿನ ವರ್ಷದ ಮಕ್ಕಳ ಕೂಟಕ್ಕೆ ಹೋದಾಗ ಅಲ್ಲಿಗೆ ಬಂದಿದ್ದ ಮಕ್ಕಳಿಂದ ಚುಟುಕುಗಳ ಸುರಿಮಳೆ. ಬಂದವರಲ್ಲಿ ಒಬ್ಬೊಬ್ಬನೂ ಐವತ್ತು ನೂರು ಚುಟುಕ ಹೊಸೆದು ತಂದಿದ್ದರಂತೆ..ಚಿಕ್ಕ ಹುಡುಗ ಬರೆದ ಒಂದು ಚುಟುಕ,

ಸರಕು ಇರುವ ಗಾಡಿ

ಹೋಗುತಿತ್ತು ಓಡಿ

ಕದಿಯಲೆಂದು

ಗಾಡಿ ಹಿಂದೆ

ಓಡುತಿದ್ದ ಕೇಡಿ ||

ಅವರ ತುತ್ತೂರಿ, ಕಡಲೆ ಪುರಿ, ಚುಟುಕ, ಕಲ್ಲುಸಕ್ಕರೆ, ರಸಕವಳ ಮತ್ತು ತಾರೆ ಎಲ್ಲಾ ಪದ್ಯ ಸಂಕಲನಗಳಲ್ಲಿರುವ ಪದ್ಯಗಳು "ಕಂದನ ಕಾವ್ಯ ಮಾಲೆ" ಪುಸ್ತಕದಲ್ಲಿವೆ. ಅದರಲ್ಲಿ ಒಟ್ಟು ನೂರು ಪದ್ಯಗಳಿವೆ...!! 

ಚಿಕ್ಕಂದಿನಲ್ಲಿ ಅವರ ತಾಯಿ ಇಟ್ಟ ಹೆಸರು ರಾಜ ಅಂತ. ಜಿ.ಪಿ.ರಾಜಯ್ಯಂಗಾರ್...ಹೇಗೆ ಜಿ.ಪಿ.ರಾಜರತ್ನಂ ಆದರು?? ಅನ್ನೋದು ಮಾತ್ರ ಬಹಳ ಸ್ವಾರಸ್ಯಮಯವಾದದ್ದು. ನೀವು ಅದನ್ನ ಓದಿಯೇ ಅನುಭವಿಸಬೇಕು :) ಅವರ ಹೆಸರನ್ನ ಅವರೇ ಇಟ್ಟುಕೊಳ್ಳುವ ಛಾನ್ಸು ಅದೆಷ್ಟು ಜನಕ್ಕೆ ದೊರೆತೀತು....!!! :)

---------

ಮೊನ್ನೆ "ಕಂದನ ಕಾವ್ಯ ಮಾಲೆ" ಪುಸ್ತಕದ ಪದ್ಯಗಳನ್ನ ಓದುವಾಗ....ಚಿಕ್ಕಂದಿನಲ್ಲಿ ಕಲಿತ ಪದ್ಯ...ಮತ್ತದರ ರಾಗ ಇನ್ನೂ ಮರೆತು ಹೋಗಿಲ್ಲದ್ದು ಕಂಡು ನನ್ನ ಹುಮ್ಮಸ್ಸು ಹಿಮ್ಮಡಿಯಾಗಿ....ಇನ್ನೂ ಜೋರಾಗಿ ಹಾಡಿಕೊಂಡದ್ದು ಬಹಳ ಖುಷಿ ಆಯ್ತು...!! :)

ನಾನು ಪದ್ಯದ ಒಂದೆರಡು ಸಾಲುಗಳನ್ನ ಬರೀತೇನೆ...ನೀವು ನಿಮ್ಮ ನೆನಪಿನಂಗಳದಿಂದ ನೆನಪಿಸಿಕೊಂಡು ಪದ್ಯಗಳನ್ನ ಪೂರ್ತಿಮಾಡಿ :) ನೋಡೋಣ ಯಾರಿಗೆ ಎಷ್ಟು ಪದ್ಯಗಳು ನೆನಪಿವೆ ಅಂತ..ಶುರು ಮಾಡೋಣಾ.. 

1. ತುತ್ತೂರಿ

ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು ಸನಿಧಪ ಮಗರಿಸ ಊದಿದನು

2. ಊಟದ ಆಟ

ಒಂದು ಎರಡು ಬಾಳೆಲೆ ಹರಡು । ಮೂರು ನಾಕು ಅನ್ನ ಹಾಕು ।
ಐದು ಆರು ಬೇಳೆ ಸಾರು । ಏಳು ಎಂಟು ಪಲ್ಯಕೆ ದಂಟು ।
ಒಂಬತ್ತು ಹತ್ತು ಎಲೆ ಮುದುರೆತ್ತು । ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು ।।

3. ಹತ್ತು ಹತ್ತು ಇಪ್ಪತ್ತು

ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು, ಕೈಯಲಿ ಒಂದು ಕಲ್ಲಿತ್ತು ।।

ಮೂವತ್ತು ಹತ್ತು ನಲವತ್ತು, ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು, ಮರದಲಿ ಕಾಯಿ ತುಂಬಿತ್ತು ।।

ಐವತ್ತು ಹತ್ತು ಅರವತ್ತು, ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು, ಕಾಯಿಗಳೆಲ್ಲ ಉದುರಿತ್ತು ।।

ಎಪ್ಪತ್ತು ಹತ್ತು ಎಂಬತ್ತು, ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು, ಕಾಲುಗಳೆರಡು ಓಡಿತ್ತು ।।

ತೊಂಬತ್ತು ಹತ್ತು ನೂರಾಯ್ತು, ತಲುಪಿದ ಮನೆಗೆ ಸಂಪತ್ತು ।।

4. ಗಡಿಯಾರದ ಸಡಗರ

ಕೋಳಿ ಕೂಗಿತೇಳು ಕಂದ....ಸೂರ್ಯ ಪೂರ್ವದಲ್ಲಿ ಬಂದ

ಹೆಚ್ಚು ಮಲಗಲೇನು ಚೆಂದ....ಬಾ ಕಂದ ಬಾ....

ಟಿಕ್ ಟಾಕ್ ಟಿಕ್ ಟಾಕ್...ಟಿಕ್ ಟಿಕ್ ಟಿಕ್

5. ವರ್ಷಕೆ ಆರೇ ಆರು ಋತು

ಚೈತ್ರ ವೈಶಾಖ ವಸಂತ ಋತು 

6. ಕಡಲೆ ಪುರಿ

ಪುರಿ ಪುರಿ ಕಡಲೆ ಪುರಿ ಗರಂ ಗರಂ ಕಡಲೆ ಪುರಿ

ಎಲ್ಲ ಬನ್ನಿ ತೆಗೆದು ತಿನ್ನಿ ಗರಂ ಗರಂ ಕಡಲೆ ಪುರಿ

ಕಾಸಿಗೊಂದು ಸೇರು ಪುರಿ... 

7. ನಮ್ಮ ಮನೆಯ ಸಣ್ಣ ಪಾಪ

ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು 

ಎತ್ತಿಕೊಳಲು ಹೋದರದಕೆ ಕೋಪ ಬರುವುದು....

8. ಚುಟುಕ

ಝಣ ಝಣ ಝಣ ಜೇಬು ತುಂಬ ಹಣ

ಮೇಲಕೆತ್ತಿ ಕೆಳಗೆ ಬಿಡಲು ಸದ್ದು....ಠಣ್ ಠಣ ಠಣ

9. ರೊಟ್ಟಿಯಂಗಡಿಯ ಕಿಟ್ಟಪ್ಪ

ರೊಟ್ಟಿಯಂಗಡಿಯ ಕಿಟ್ಟಪ್ಪ ನನಗೊಂದು ರೊಟ್ಟಿ ತಟ್ಟಪ್ಪ..

ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು ಒಂಬತ್ತು ಕಾಸಿಗೆ ಕಟ್ಟಪ್ಪ।।

10. ನಾಯಿಮರಿ ನಾಯಿಮರಿ

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿ ಮರಿ ನಾಯಿ ಮರಿ ತಿಂಡಿ ತಿಂದು ಏನು ಮಾಡುವೆ?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯುವೆ
ನಾಯಿ ಮರಿ ನಾಯಿ ಮರಿ ಕಳ್ಳಬಂದರೇನು ಮಾಡುವೆ?
ಲೋಳ್ ಲೋಳ್ ಬೌ ಎಂದು ಕೂಗಿಯಾಡುವೆ ।।

11. ಈ ಕತೆ

ಒಂದು ಕಾಡಿನ ಮಧ್ಯದೊಳಗೆ ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು ನಾಲ್ಕು ಮರಿಗಳ ಸೇರಿಸಿ

12. ಒಂದು ಎರಡು

ಒಂದೆಂಬೋದು ಒಬ್ಬನೇ ಸೂರ್ಯ 

ಎರಡೆಂಬೋದೇನೆ ಹೆಸರ್ ಹೇಳೇ  

-----------

ನಾವು ಚಿಕ್ಕಂದಿನಲ್ಲಿ ಇನ್ನೊಂದು ಪದ್ಯ ಹಾಡುತ್ತಿದ್ದೆವು , ಇದು ಯಾರು ಬರೆದದ್ದು ಅಂತ ಗೊತ್ತಿಲ್ಲ 

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಜಾರಿ ಬಿದ್ದರಾಯ್ತು ನೋಡು

ಬಟ್ಟೆಯೆಲ್ಲ ಕೊಳೆ

ಸೋಪು ಹಾಕಿ ಒಗೆ

ನೊರೆ ಬಂತು ನೊರೆ

....ಮುಂದಿನ ಸಾಲುಗಳು ಮರೆತು ಹೋಗಿವೆ ನಿಮ್ಮಲ್ಲಿ ಯಾರಿಗಾದರೂ ನೆನಪಿದ್ರೆ ಬರೀರಿ... :)

----------

ಜಿ.ಪಿ.ರಾಜರತ್ನಂ ಬರೀ ಸಾಹಿತ್ಯಕ್ಕಷ್ಟೇ ಅಲ್ಲದೆ ಜೈನ ಮತ್ತು ಭೌದ್ಧ ಧರ್ಮದ ಅನೇಕ ಪುಸ್ತಕಗಳನ್ನ ಅನುವಾದ ಮಾಡಿದ್ದಾರೆ. ಪಾಳಿ ಭಾಷೆ ಕಲಿತು ಬೌದ್ಧ ಧರ್ಮದ ಅನೇಕ ಸೂತ್ರಗಳನ್ನ ಕನ್ನಡಕ್ಕೆ ಅನುವಾದಿಸಿದ್ದು ಸಾಧನೆಯೇ ಸರಿ. ಹೆಚ್ಚಿನ ವಿಚಾರಗಳಿಗೆ ಅವರ ಪುಸ್ತಕಗಳನ್ನ ಓದಿ. ಜೊತೆಗೆ ವಿಕಿಪೀಡಿಯದಿಂದ...

ಹಾಗೇ 'ಯೆಂಡ ಕುಡುಕ ರತ್ನ'ನ ಬಗ್ಗೆ ಯಾರದ್ರೂ ಓದಿ ಸಂಪದದಲ್ಲಿ ಬರೀರಿ.... :)

ಧನ್ಯವಾದಗಳು

ಸವಿತ