ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ

ಬತ್ತಿದ ಕೆರೆಯಲ್ಲಿ ಮಳೆ ನೀರು ಬಿತ್ತಿ

ಬರಹ

ಅದು ೨೦೦೩ರ ಸಮಯ.

ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಅನ್ನದಾನಸ್ವಾಮಿಗಳು ಒಂದು ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ನರೇಗಲ್‌ನ ತಮ್ಮ ಸಂಸ್ಥೆಯ ಪ್ರೌಢಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿದ್ದವು. ಇನ್ನೆರಡು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಕೇವಲ ಅರ್ಧ ಇಂಚು ನೀರು ಯಾವ ಕ್ಷಣದಲ್ಲಾದರೂ ಕಡಿಮೆಯಾಗುವ ಲಕ್ಷಣವಿತ್ತು. ಸತತ ಮೂರನೇ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿದ್ದ ಈ ಪ್ರದೇಶದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೇಗೆ ನೀರು ಪೂರೈಸುವುದು? ಎಂದು ಸ್ವಾಮಿಗಳು ಚಿಂತಿತರಾಗಿದ್ದರು.

ಇಂಥದೇ ಚಿಂತೆ ನರೇಗಲ್ಲಿನ ದೊಡ್ಡ ಕೆರೆಯಲ್ಲಿ ಕೊಳವೆ ಬಾವಿ ತೋಡಿಸಿದವರಿಗೂ ಕಾಡತೊಡಗಿತ್ತು. ಎರಡು ದಶಕಗಳ ಹಿಂದೆ ಇಡೀ ಪಟ್ಟಣದ ನೀರಿನ ಅಗತ್ಯ ಪೂರೈಸಿ, ನೂರಾರು ಎಕರೆಗಳ ಪೈರಿಗೆ ಒಂದು ಅವಧಿಗೆ ನೀರುಣಿಸುತ್ತಿದ್ದ ನರೇಗಲ್ಲಿನ ಕೆರೆಯಲ್ಲಿ ಹೂಳು ತುಂಬಿ, ಮಳೆಯಿಲ್ಲದೇ ಬತ್ತಿಹೋಗಿತ್ತು. ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ, ನೀರು ಮೊಗೆಯುವ ಉದ್ದೇಶ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಹತಾಶರಾಗಿದ್ದರು.

ಪರಿಸ್ಥಿತಿ ತೀರ ಕೈ ಕೊಡುವ ಲಕ್ಷಣಗಳು ಕಂಡಾಗ ಅವರಿಗೆ ನೆನಪಾಗಿದ್ದು ‘ಕೆರೆ ನಿರ್ಮಿಸಿ, ನೀರಿನ ಬರ ತಪ್ಪಿಸಿ’ ಎಂದು ಹೇಳುತ್ತಿದ್ದ ಅಯ್ಯಪ್ಪ ಮಸಗಿ. ಅದೇ ರೋಣ ತಾಲೂಕಿನ ಈ ಜಲ ತಜ್ಞನನ್ನು ಕರೆಸಿ ಬತ್ತಿದ ಕೊಳವೆಬಾವಿಗಳ ಜವಾಬ್ದಾರಿಯನ್ನು ಒಪ್ಪಿಸಲಾಯಿತು. ಸ್ಥಳ ಪರಿಶೀಲನೆ ನಡೆಸಿದ ಅಯ್ಯಪ್ಪ, ಬಾವಿಗಳಿದ್ದ ಪ್ರದೇಶದಲ್ಲಿ ಮಳೆ ನೀರಿನ ಹರಿವು ಯಾವ ದಿಕ್ಕಿಗಿದೆ ಎಂದು ಪರಿಶೀಲಿಸಿದರು. ಬಾವಿಯ ಸುತ್ತ ಇದ್ದ ಮೂರು ಎಕರೆ ಬೀ(ಪಾ)ಳು ಜಮೀನನ್ನು ತಮ್ಮ ಜಲ ಸಂವರ್ಧನೆ ಪ್ರಯೋಗಕ್ಕೆ ಆರಿಸಿಕೊಂಡರು. ಸುತ್ತಮುತ್ತಲಿನ ಭೂಮಿಯಲ್ಲಿ ಎಲ್ಲೇ ಮಳೆ ಬಿದ್ದರೂ ಅದು ಬಂದು ಈ ಮೂರು ಎಕರೆ ಪ್ರದೇಶಕ್ಕೆ ಬಂದು ಸೇರುವಂತೆ ಎಂಟು ಅಡಿ ಎತ್ತರದ ಒಡ್ಡು ಹಾಕಿ, ಬತ್ತಿದ ಕೊಳವೆ ಬಾವಿಯ ಸುತ್ತ ಸಣ್ಣ ಕೆರೆ ನಿರ್ಮಿಸಿದರು. ನರೇಗಲ್ಲಿನ ಜನ ನಿತ್ಯ ಬಂದು ನೋಡಿ ‘ಇದೇನು ಹುಚ್ಚೋ’ ಎಂದುಕೊಂಡು ವಾಪಸ್ಸಾಗುತ್ತಿದ್ದರು. ಅವರಿಗೆ ಅಯ್ಯಪ್ಪ ಮಸಗಿಯವರ ಪ್ರಯೋಗ ಒಂದಿಷ್ಟೂ ಅರ್ಥವಾಗಿರಲಿಲ್ಲ.

ಕೊಳವೆ ಬಾವಿಯ ಸುತ್ತ ತಲಾ ೧೦ ಅಡಿ ಆಳ, ಆರು ಅಡಿ ಅಗಲ ಮತ್ತು ಎರಡು ಅಡಿ ದಪ್ಪ ಕಲ್ಲಿನ ಗೋಡೆಯನ್ನು ಕಟ್ಟಲಾಯಿತು. ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ನ ಸುತ್ತಮುತ್ತ, ಒಂದು ಚಾಕ್‌ಪೀಸ್‌ ಗಾತ್ರದ ಸುಮಾರು ೧೦೦-೧೫೦ ರಂಧ್ರಗಳನ್ನು ಕೊರೆಯಲಾಯಿತು. ಇದರ ಸುತ್ತ ೩೦ ಅಡಿ ವ್ಯಾಸ ಹಾಗೂ ಎಂಟು ಅಡಿ ಆಳದ ಗುಂಡಿ ತೆಗೆದು, ಕಲ್ಲು ಮತ್ತು ಮರಳನ್ನು ತುಂಬಲಾಯಿತು. ಮಳೆ ನೀರು ಮರಳು ಮತ್ತು ಕಲ್ಲುಗೋಡೆಯ ಮೂಲಕ ಶೋಧನೆಗೊಂಡು, ನಂತರ ಕೇಸಿಂಗ್ ಪೈಪ್‌ನಲ್ಲಿ ಕೊರೆದ ರಂಧ್ರಗಳ ಮೂಲಕ ಒಳಗೆ ಪ್ರವೇಶಿಸಬೇಕೆನ್ನುವುದು ಇದರ ಉದ್ದೇಶ. ಕೇಸಿಂಗ್ ಪೈಪ್ ಸುತ್ತ ಮೂರು ಸುತ್ತು ಪ್ಲಾಸ್ಟಿಕ್ ಜರಡಿಯನ್ನು ಸುತ್ತಿರುವುದರಿಂದ ಒಳ ಸೇರುವ ನೀರು ಶುದ್ಧವಾಗಿಯೇ ಇರುತ್ತದೆ.

ಇದು ನಡೆದಿದ್ದು ೨೦೦೩ರ ಅಗಸ್ಟ್ ತಿಂಗಳ ಕೊನೆಗೆ. ‘ಮಳೆ ಬಂದ ನಂತರ ಪರಿಣಾಮ ನೋಡಿ’ ಎಂದು ಹೇಳಿದ ಅಯ್ಯಪ್ಪ ಮಸಗಿ ಹೊರಟು ಹೋದರು. ನಿಂತು ನೋಡುತ್ತಿದ್ದ ಜನ ಕೇಸಿಂಗ್ ಪೈಪ್‌ಗೆ ರಂಧ್ರ ಕೊರೆದ ‘ಶಾಣ್ಯಾತನ’ಕ್ಕೆ ಹಣೆ ಚಚ್ಚಿಕೊಳ್ಳುತ್ತ ತಮ್ಮ ಮನೆಗಳಿಗೆ ವಾಪಸ್ಸಾದರು.

ಮುಂದೆ ಎರಡು ತಿಂಗಳವರೆಗೆ ಜೋರು ಮಳೆ ಬೀಳಲಿಲ್ಲ. ಅಕ್ಟೋಬರ್‌ನಲ್ಲಿ ಒಂದು ರಭಸದ ಮಳೆ ಬಿದ್ದಾಗ, ಮುಕ್ಕಾಲು ಭಾಗ ಕೆರೆ ತುಂಬಿತು. ಸುತ್ತ ತುಂಬಿದ್ದ ಮರಳು ಮತ್ತು ಕಲ್ಲುಗಳ ಜಾಲರಿ ಮೂಲಕ ಸೋಸಿಕೊಂಡ ನೀರು ಕೊಳವೆ ಬಾವಿಯ ಕೇಸಿಂಗ್ ಪೈಪ್ ಮೂಲಕ ಭೂಮಿಯಲ್ಲಿ ಇಂಗಿತು. ಬೆಳಿಗ್ಗೆ ಜನ ಎದ್ದು ಬರುವಷ್ಟರಲ್ಲಿ ಕೇವಲ ಕಲ್ಲುಕಟ್ಟೆಯಲ್ಲಿ ಮಾತ್ರ ಸ್ವಲ್ಪ ನೀರು ಉಳಿದಿತ್ತು.

‘ನೋಡೋಣ’ ಎಂದು ಮೋಟಾರ್ ಶುರು ಮಾಡಿದರೆ ಅರ್ಧ ಇಂಚು ನೀರು ಕೊಡುತ್ತಿದ್ದ ಕೊಳವೆ ಬಾವಿಯಿಂದ ಎರಡು ಇಂಚು ನೀರು ಚಿಮ್ಮಿ ಬರತೊಡಗಿತು. ಮೋಜು ನೋಡಲೆಂದು ಬಂದ ಜನರಿಗೆ ಆಶ್ಚರ್ಯ. ಒಂದೇ ಮಳೆಗೆ ಬಾವಿ ಮರು ಜೀವ ಪಡೆದುಕೊಂಡಿತೆ?

‘ಹೌದು’ ಎನ್ನುತ್ತಾರೆ ಅಯ್ಯಪ್ಪ ಮಸಗಿ. ಒಂದು ಎಕರೆ ಪ್ರದೇಶದಲ್ಲಿ ಕೇವಲ ಒಂದು ಇಂಚು ಮಳೆ ಬಿದ್ದರೂ ಸಾಕು, ಒಂದು ಲಕ್ಷ ೪೪೦ ಲೀಟರ್ ನೀರು ಸಂಗ್ರಹವಾಗುತ್ತದೆ. ಸುತ್ತಲಿನ ಪ್ರದೇಶಗಳಿಂದ ನೀರು ಹರಿದು ಬರುತ್ತಿದ್ದರಂತೂ ಇನ್ನೂ ಒಳ್ಳೆಯದು. ಒಂದು ವರ್ಷ ಈ ರೀತಿ ನೀರು ಸಂಗ್ರಹಿಸಿದರೆ ಎಂತಹ ಬೇಸಿಗೆಗೂ ಹೆದರಬೇಕಿಲ್ಲ. ಒಂದು ಹೆಕ್ಟೇರ್ ಜಮೀನಿಗೆ ಒಂದು ಗುಂಟೆ ಕೆರೆ ಇದ್ದರೆ ನೀರಿನ ವಿಷಯದಲ್ಲಿ ರೈತ ಸ್ವಾವಲಂಬಿಯಾಗುತ್ತಾನೆ ಎನ್ನುವುದು ಅವರ ಅಭಿಪ್ರಾಯ.

ಕೊಳವೆ ಬಾವಿಗಳ ಮರುಪೂರಣಕ್ಕಾಗಿ ಕೆರೆ ನಿರ್ಮಿಸುವುದರಿಂದ ಸಾಕಷ್ಟು ಲಾಭಗಳಿವೆ. ಕೆರೆಯ ನೀರು ಒಂದೆರಡು ದಿನಗಳಲ್ಲಿ ಪೂರ್ತಿಯಾಗಿ ಇಂಗಿಬಿಡುತ್ತದೆ. ಆಗ ಅದೇ ಜಾಗದಲ್ಲಿ ಬಿತ್ತನೆ ಕಾರ್ಯ ನಡೆಸಬಹುದು. ಕಡಿಮೆ ಅವಧಿಯಲ್ಲಿ ಅಗಾಧ ಪ್ರಮಾಣದಲ್ಲಿ ಹರಿದು ಬರುವ ನೀರನ್ನು ನೇರವಾಗಿ ಕೊಳವೆ ಬಾವಿಯ ಮೂಲಕ ಭೂಮಿಗೆ ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಕೆರೆ ನಿರ್ಮಾಣ ಅನಿವಾರ್ಯ ಎಂಬುದು ಅವರ ಅಭಿಮತ.

ಮಳೆಗಾಲ ಬರುವುದಕ್ಕೆ ಒಂದು ತಿಂಗಳು ಮುಂಚಿತವಾಗಿ ಇಂಗು ಕೆರೆ ನಿರ್ಮಿಸಿದರೆ, ಬೇಸಿಗೆಯಲ್ಲಿ ಬೆವರಬೇಕಿಲ್ಲ. ಅಂತರ್ಜಲ ಕೊಳವೆ ಬಾವಿಗಳನ್ನು ಜೀವಂತವಾಗಿಡುತ್ತದೆ. ನೀರ ನೆಮ್ಮದಿಯನ್ನು ನಿಮ್ಮದಾಗಿಸುತ್ತದೆ.

- ಚಾಮರಾಜ ಸವಡಿ