ಬದುಕಿನಲ್ಲಿ ಸವಾಲುಗಳನ್ನು ಒಪ್ಪಿಕೊಳ್ಳದವರೇ ನಿಜವಾದ ಅಂಗವಿಕಲರು
ಇದೊಂದು ಅಪರೂಪದ ಯಶೋಗಾಥೆ. ಸಾವಿನಂಚಿನಿಂದ ಬದುಕನ್ನು ಸೆಳೆದುಕೊಂಡು ಇತಿಹಾಸದಲ್ಲಿ ಹೆಸರು ಬರೆದವಳ ಕತೆ. ತನ್ನ ಕನಸಿನ ಬೆಂಬತ್ತಿ ಹಿಮಾಲಯವನ್ನು ಹತ್ತಿದವಳ ಕತೆ. ರೈಲಿನಲ್ಲಿ ನಡೆದ ದುರಂತದಲ್ಲಿ ಬದುಕು ದುರಂತದ ಹಳಿ ಹಿಡಿದರೂ ಅದನ್ನು ಛಲದಿಂದ ಸಾಧನೆಯ ಹಳಿಯೆಡೆಗೆ ಸಾಗಿಸಿದ ಛಲಗಾರ್ತಿ ಅರುಣಿಮಾ ಸಿನ್ಹಾ.
ಅರುಣಿಮಾ ಸಿನ್ಹಾ ಭಾರತದ ಉತ್ತರಪ್ರದೇಶದ ಅಂಬೇಡ್ಕರ್ನಗರದವರು. ಈಕೆ ರಾಷ್ಟ್ರಮಟ್ಟದ ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರ್ತಿ. ಈಕೆ ಏಪ್ರಿಲ್ 11, 2011ರಂದು ಕೇಂದ್ರಸರ್ಕಾರದ ಸಿಐಎಸ್ಎಫ್ ಪರೀಕ್ಷೆ ತೆಗೆದುಕೊಳ್ಳಲು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆ ಸಮಯದಲ್ಲಿ ದರೋಡೆಕೋರರು ಇವರ ಕತ್ತಿನ ಸರ ಕಿತ್ತುಕೊಳ್ಳಲು ಬಂದಾಗ ಅರುಣಿಮಾ ಪ್ರತಿಭಟಿಸಿದರು. ಚಲಿಸುತ್ತಿದ್ದ ರೈಲಿನಿಂದ ದುಷ್ಕರ್ಮಿಗಳು ಇವರನ್ನು ತಳ್ಳಿದಾಗ ರೈಲಿನ ಚಕ್ರಗಳಿಗೆ ಈಕೆಯ ಕಾಲು ಸಿಕ್ಕಿ ಕಾಲು ಕಳೆದುಕೊಳ್ಳಬೇಕಾಯಿತು. ತೀವ್ರ ಪೆಟ್ಟಾಗಿ ಕೊಳೆಯುತ್ತಿದ್ದ ಕಾಲಿನೊಂದಿಗೆ ಆಸ್ಪತ್ರೆಗೆ ದಾಖಲಾದ ಅರುಣಿಮಾ ಅವರ ಜೀವ ಉಳಿಸುವ ಸಲುವಾಗಿ ವೈದ್ಯರು ಆಕೆಯ ಕಾಲನ್ನು ತೆಗೆಯಬೇಕಾಯಿತು.
“ಸ್ವಾವಲಂಬಿಯಾಗಿ ಬದುಕುತ್ತಿದ್ದ ನಾನು ಇದ್ದಕ್ಕಿದ್ದಂತೆ ಪರಾವಲಂಬಿಯಾಗಬೇಕಾಗಿ ಬಂದ ಅಸಹಾಯಕ ಪರಿಸ್ಥಿತಿಯನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವ ಸವಾಲುಗಳನ್ನು ಸ್ವೀಕರಿಸಲು ಇನ್ನು ಸಾಧ್ಯವಿಲ್ಲ ಎಂದು ಹತಾಶಳಾಗಿ ಎಷ್ಟೋ ಬಾರಿ ಒಂಟಿಯಾಗಿ ಅಳುತ್ತಿದ್ದೆ. ನನ್ನ ನೋಡಲು ಬಂದವರ ಕರುಣೆ ನನಗೆ ಇನ್ನಷ್ಟು ನೋವುಂಟುಮಾಡುತ್ತಿತ್ತು. ನನ್ನನ್ನು ಈ ಸ್ಥಿತಿಗೆ ತಂದ ದುಷ್ಕರ್ಮಿಗಳ ಮೇಲೆ ರೋಷ ಉಕ್ಕುತ್ತಿತ್ತು. ನಾನು ಏನಾದರೂ ಸಾಧಿಸಿ ಈ ಸಮಾಜಕ್ಕೆ ನಾನೇನು ಎಂಬುದನ್ನು ತೋರಿಸಲೇಬೇಕು ಎಂಬ ಛಲ ಹುಟ್ಟುತ್ತಿತ್ತು. ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ನಂತರ ಚೇತರಿಸಿಕೊಂಡು ಕ್ರಿಕೆಟ್ಗೆ ಮರಳಿದ್ದು, ಅಂಧನಾಗಿದ್ದರೂ ತನ್ನ 13ನೆಯ ವಯಸ್ಸಿಗೆ ವೈದ್ಯನಾದ ಡೇವಿಡ್ ಹಾರ್ಟಮನ್ ನನಗೆ ಸ್ಪೂರ್ತಿಯಾದರು. ಆ ಸಮಯದಲ್ಲೇ ನಾನು ಮೌಂಟ್ ಎವರೆಸ್ಟ್ ಏರಿದ್ದವರ ಲೇಖನ ಓದಿದೆ. ಎವರೆಸ್ಟ್ ಏರುವ ಕನಸು ನನ್ನಲ್ಲಿ ಮೊಳೆಯಲಾರಂಭಿಸಿತು.
ಈ ಕನಸು ಮೊಳೆತದ್ದೇ ತಕ್ಷಣ ನಾನು ಎವರೆಸ್ಟ್ ಶಿಖರ ಹತ್ತಿ ಬಂದಿದ್ದ ಬಚೇಂದ್ರಿ ಪಾಲ್ ಅವರನ್ನು ಸಂಪರ್ಕಿಸಿದೆ. ಆಕೆ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ತಮ್ಮನ್ನು ಬಂದು ಕಾಣಲು ಹೇಳಿದರು. ಅವರ ಬಳಿ ಒಂದು ವರ್ಷ ಪರ್ವತಾರೋಹಣದ ಅಭ್ಯಾಸ ಮಾಡಿದೆ. ಮೊದಮೊದಲಿಗೆ ತುಂಬ ಕಷ್ಟವಾಯಿತು. ಆದರೆ ಸತತ ಪ್ರೋತ್ಸಾಹ ಮತ್ತು ಪರಿಶ್ರಮಗಳ ನಂತರ ಶಿಖರ ಹತ್ತಲು ಕಲಿತೆ. ಮಾರ್ಚ್ 31 ರಿಂದ ಆರಂಭವಾದ 52 ದಿನಗಳ ಯಾತ್ರೆ ಮೇ 21ರಂದು ಹಿಮಾಲಯದ ದಕ್ಷಿಣ ತುದಿಯನ್ನು ಏರಿನಿಲ್ಲುವುದರೊಂದಿಗೆ ಮುಗಿಯಿತು.
ಏವರೆಸ್ಟ್ ಹಾದಿ ಸುಗಮವೇನಾಗಿರಲಿಲ್ಲ. ಒಂದು ಹಂತದಲ್ಲಿ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಹೊತ್ತಿದ್ದ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿ ತೊಂದರೆಯಾಯಿತು. ಆ ಸಮಯದಲ್ಲಿ ನಮ್ಮ ತಂಡದ ಕ್ಯಾಪ್ಟನ್ ನನಗೆ ಹಿಂತಿರುಗಲು ಕೂಡ ಹೇಳಿದರು. ಆದರೆ ನನ್ನ ಮನಸ್ಸು ಒಪ್ಪಲಿಲ್ಲ. ಎವರೆಸ್ಟ್ ಹತ್ತಿ ನಿಲ್ಲಲೇಬೇಕೆಂಬ ಒಂದೇ ಗುರಿಯೊಂದಿಗೆ ಮುಂದಕ್ಕೆ ಹೋದೆ. ಎವರೆಸ್ಟ್ ಏರಿ ನಿಂತ ಆ ಕ್ಷಣ ಅವಿಸ್ಮರಣೀಯ. ಒಂದು ಕ್ಷಣ ಇದು ಕನಸೋ ನನಸೋ ನನಗೆ ನಂಬಲಾಗಲಿಲ್ಲ. ಇಡೀ ಜಗತ್ತಿಗೆ ಕೂಗಿ ಹೇಳಬೇಕೆನ್ನಿಸಿತು ‘ನೋಡಿ ನಾನಿಲ್ಲಿದ್ದೀನಿ’. ವಾಪಸ್ಸು ಬರುವಾಗಿನ ಹಾದಿ ಕೂಡ ಸುಗುಮವಾಗಿರಲಿಲ್ಲ. ನನ್ನ ಕೃತಕ ಕಾಲು ಕಳಚಿಕೊಂಡು ಬೀಳುವಂತಾಗಿತ್ತು. ಆದರೆ ಥಂಡಿಯ ಕಾರಣದಿಂದ ನನ್ನ ಕೈಗ್ಲೌಸುಗಳನ್ನು ತೆಗೆದು ಅದನ್ನು ಸರಿಮಾಡಲು ಧೈರ್ಯಸಾಲದೆ ಕಾಲುಗಳನ್ನು ಎಳೆದುಕೊಂಡೆ ಕ್ಯಾಂಪ್ ಮುಟ್ಟಿದೆ. ಈಗ ಅನ್ನಿಸುತ್ತಿದೆ ಬದುಕಿನ ಸವಾಲುಗಳನ್ನು ಎದುರಿಸದವರು ಅಂಗವಿಕಲರು ಅಂತ.”
ಆಕೆ ತನ್ನ ಸಾಧನೆಯನ್ನು ‘ಬದುಕಿನಲ್ಲಿ ಆಸೆಗಳನ್ನು ಕಳೆದುಕೊಂಡವರಿಗೆ ಅರ್ಪಿಸಿದ್ದಾರೆ’. ನನ್ನ ಈ ಸಾಧನೆಯ ಹಿಂದೆ ನನ್ನ ಕುಟುಂಬದವರ ಬೆಂಬಲ ನಿರಂತರವಾಗಿದೆ. ನನಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದರು ಆದರದು 20 ದಿನಗಳಿಗೆ ಮುರಿದು ಬಿತ್ತು. ಆದರೆ ಈ ದುರಂತ ನನ್ನ ಸಾಧನೆಯ ಹಾದಿಗೆ ಮುಳ್ಳಾಗಲಿಲ್ಲ. ನಾನು ಮುಂದುವರೆದೆ. ಈಗಲೂ ಕೂಡ ನನ್ನ ಬದುಕು ನನ್ನ ಕನಸಿನ ಬೆಂಬತ್ತಿ ಮುಂದುವರೆಯಲಿದೆ’ ಎನ್ನುವ ಅರುಣಿಮಾ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.ತಮಗೆ ದೊರಕಿರುವ ಆರ್ಥಿಕ ನೆರವನ್ನು ಬಳಸಿಕೊಂಡು ಗ್ರಾಮೀಣ ಕ್ರೀಡಾಪ್ರತಿಭೆಗಳಿಗೆ ತರಬೇತಿ ನೀಡುವ ಅಕಾಡೆಮಿಯನ್ನು ಕಟ್ಟಬೇಕೆಂಬುದು ಅವರ ಆಸೆ.
ಬದುಕಿನ ಬಗ್ಗೆ ದೂರುವ ಮುನ್ನ ಬದುಕಿಗೆ ಬೆನ್ನು ತಿರುಗಿಸುವ ನಿರ್ಧಾರ ಮಾಡುವ ಮುನ್ನ ಇಂತಹವರನ್ನು ಒಮ್ಮೆ ನೆನಪಿಸಿಕೊಳ್ಳೋಣ.
ಚಿತ್ರ ಕೃಪೆ: http://www.jharkhandstatenews.com/no-painno-gainsays-arunima/#.UdAPDjssUW4
http://www.mid-day.com/sports/2013/may/310513-yuvraj-singh-is-my-inspiration-arunima-sinha.htm
Comments
ಅರುಣಿಮಾ ಸಿನ್ಹಾರಿಗೆ ಹ್ಯಾಟ್ಸಾಫ್