ಬದುಕು - ಬದಲಾವಣೆ

ಬದುಕು - ಬದಲಾವಣೆ

ಬರಹ

ನಾನು ಓದಿದ ಪುಸ್ತಕ Spencer Johnson ಬರೆದ Who moved my cheese? ನ ರೂಪಾಂತರ.

ಅದೊಂದು ಏಳು ಸುತ್ತಿನ ಕೋಟೆ. ಒಳಗಿನ ಹರವಾದ ನೆಲದಲ್ಲಿ ಹಲವಾರು ನಾಲೆಗಳು ಅಡ್ಡಡ್ಡವಾಗಿ ಉದ್ದುದ್ದವಾಗಿ ಹಾದು ಹೋಗಿವೆ. ಒಂದಕ್ಕೊಂದು ಸಂಪರ್ಕವಿದ್ದರೂ ಅದು ಗೋಜಲು ಗೋಜಲಾಗಿ ಸಂಕೀರ್ಣಮಯವಾಗಿದೆ. ಅಲ್ಲಿ ನಮ್ಮ ಹೆಬ್ಬೆರಳು ಗಾತ್ರದ ಇಬ್ಬರು ಪುಟ್ಟ ಮನುಷ್ಯರಿದ್ದಾರೆ. ಒಬ್ಬನ ಹೆಸರು ಗುಟುರು ಮತ್ತೊಬ್ಬ ಗಮಾರ. ಆ ಇಬ್ಬರಿಗಾಗಿ ಒಂದು ಸ್ಥಳದಲ್ಲಿ ಶುಭ್ರವಾದ ಸುವಾಸನಾಯುಕ್ತವಾದ ಭರ್ಜರಿ ಬೆಣ್ಣೆಯನ್ನು ದೊಡ್ಡ ಗಾತ್ರದಲ್ಲಿ ಇಡಲಾಗಿದೆ. ಅವರಿಬ್ಬರೂ ಪ್ರತಿ ಬೆಳಗ್ಗೆ ಅಲ್ಲಿಗೆ ಬಂದು ಇಡೀ ದಿನ ಬೆಣ್ಣೆ ಮೆಲ್ಲುತ್ತಾ ಕೂಡುತ್ತಾರೆ. ಪ್ರತಿ ದಿನ ಬಂದು ಇಡೀ ದಿನ ತಿಂದರೂ ಆ ಬೆಣ್ಣೆ ಪೂರೈಕೆ ನಿರಂತರವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿನಿತ್ಯ ಹೊಸ ರೀತಿಯ ಉನ್ನತ ಗುಣಮಟ್ಟದ ಬೆಣ್ಣೆ ಪೂರೈಕೆಯಾಗುತ್ತದೆ. ಆ ಇಬ್ಬರು ಮನುಷ್ಯರಲ್ಲದೆ ಅಲ್ಲಿ ಇನ್ನಿಬ್ಬರೂ ಇರುತ್ತಾರೆ. ಅವರು ಮನುಷ್ಯರಾಗಿರದೆ ಮೂಸು ಮತ್ತು ಮುನ್ನುಗ್ಗು ಎಂಬ ಪುಟ್ಟ ಇಲಿಗಳಾಗಿದ್ದಾರೆ. ಆದರೆ ಗುಟುರು ಮತ್ತು ಗಮಾರರು ಈ ಇಲಿಗಳ ಬಗ್ಗೆ ತಲೆಕಡಿಸಿಕೊಂಡವರಲ್ಲ. ಕ್ಷುದ್ರ ಜೀವಿಗಳು ಹೇಗಾದರೂ ಬದುಕಿಕೊಳ್ಳಲಿ ಎಂಬುದು ಅವರ ಭಾವನೆ.

ಗುಟುರು ಮತ್ತು ಗಮಾರರು ಪ್ರತಿನಿತ್ಯ ಶುಭ್ರ ವಸ್ತ್ರಗಳನ್ನು ಧರಿಸಿ ಬೆಣ್ಣೆಯೆಡೆಗೆ ಬರುತ್ತಾರೆ. ಪಾದರಕ್ಷೆಗಳನ್ನು ಕಳಚಿ ಒಂದೆಡೆ ಇಡುತ್ತಾರೆ. ತಮ್ಮ ಕೈಚೀಲವನ್ನೂ ಜೋಪಾನವಾಗಿ ಇಡುತ್ತಾರೆ. ಮೇಲೊಂದು ಅಂಗವಸ್ತ್ರ ಧರಿಸಿ ಬೆಣ್ಣೆ ಮೆಲ್ಲಲು ತೊಡಗುತ್ತಾರೆ. ಸಂಜೆ ಮನೆಗೆ ತೆರಳುವಾಗ ಸಾಕಷ್ಟು ಬೆಣ್ಣೆಯನ್ನು ಹೊತ್ಯೊಯ್ಯುತ್ತಾರೆ. ಹೀಗೇ ನಿರಂತರ ನಡೆಯುತ್ತಲೇ ಇರುತ್ತದೆ. ಮೂಸು, ಮುನ್ನುಗ್ಗು ಎಂಬ ಇಲಿಗಳಾದರೋ ಎಷ್ಟಾದರೂ ಕೊಳಕು ಜೀವಿಗಳು. ಅವು ಬೆಳಿಗ್ಗೆ ಬಂದು ಪಾದರಕ್ಷೆಗಳನ್ನು ಬಿಚ್ಚಿ ತಮ್ಮ ಕೊರಳಿಗೇ ನೇತಾಡಿಸಿಕೊಂಡು ಬೆಣ್ಣೆ ಮೆಲ್ಲತೊಡಗುತ್ತವೆ. ಅಪಾಯ ಎದುರಾದರೆ ಕೂಡಲೇ ಓಡಿ ಹೋಗಬಹುದೆಂಬುದು ಅವರ ಭಾವನೆ. ಒಂದಂತೂ ಅಪಾಯದ ವಾಸನೆ ಎಲ್ಲಾದರೂ ಕಂಡೀತೇನೋ ಎಂದು ಮೂಸುತ್ತಲೇ ಇರುತ್ತದೆ. ಇನ್ನೊಂದು ಅಪಾಯದ ಗಾತ್ರವನ್ನು ಅಂದಾಜಿಸಿ ಮುನ್ನುಗ್ಗುವ ಇಲ್ಲವೇ ಪರಾರಿಯಾಗುವ ಸೂಚನೆ ನೀಡುತ್ತದೆ.

ಹೀಗೇ ಒಂದು ದಿನ ಅವರು ಊಹಿಸಿದಂತೆಯೇ ಅಪಾಯ ಎದುರಾಗುತ್ತದೆ. ಬೆಣ್ಣೆಯ ಪೂರೈಕೆ ನಿಂತು ಹೋದುದನ್ನು 'ಮೂಸು' ಗಮನಿಸುತ್ತದೆ. ಇರುವ ಪರ್ವತದಂಥ ಬೆಣ್ಣೆ ಕ್ರಮೇಣ ಕಡಿಮೆಯಾಗುತ್ತಿರುವುದೂ ಗೋಚರವಾಗುತ್ತದೆ. 'ಮೂಸು' 'ಮುನ್ನುಗ್ಗು'ಗಳು ವಾಸ್ತವವನ್ನರಿತು ಬೇರೆ ಬೆಣ್ಣೆ ತಾಣವನ್ನು ಹುಡುಕತೊಡಗುತ್ತವೆ. ದಿನವೂ ಅವು ಬಂದು ತಮಗೆ ಬೇಕಾದಷ್ಟು ಬೆಣ್ಣೆ ತಿಂದು ಹೊಸ ಕ್ಷೇತ್ರದ ಅನ್ಷೇಷಣೆಗೆ ತೊಡಗುತ್ತವೆ. ಹೀಗೆ ಅವು ಆ ನಿಟ್ಟಿನಲ್ಲಿ ಸಫಲವೂ ಆಗುತ್ತವೆ.

ಗುಟುರು, ಗಮಾರರು ಇದನ್ನೆಲ್ಲ ಗಮನಿಸುವುದೇ ಇಲ್ಲ. ಅವರು ಎಂದಿನಂತೆ ಒಂದು ದಿನ ಬಂದಾಗ ಬೆಣ್ಣೆ ಖಾಲಿಯಾಗಿರುತ್ತದೆ. ಇಬ್ಬರಿಗೂ ಒಮ್ಮೆಲೇ ನಿರಾಸೆ ಕವಿಯುತ್ತದೆ. 'ಗುಟುರು ' ಜೋರಾಗಿ ಗುಟುರು ಹಾಕುತ್ತಾ ‘ಎಲ್ಲಿ ನನ್ನ ಬೆಣ್ಣೆ? ಅದನ್ನು ಕದ್ದವರಾರು? ಅದನ್ನು ಹೊತ್ತೊಯ್ದವರು ಶತಾಯಗತಾಯ ಎಲ್ಲಿ ಮರಳಿ ತಂದಿಡಲೇಬೇಕು. ಏಕೆಂದರೆ ಅದು ನನ್ನ ಜನ್ಮಸಿದ್ಧ ಹಕ್ಕು’ ಎಂದು ಕೂಗಾಡುತ್ತಾನೆ. ಗಮಾರನೂ ಅವನೊಂದಿಗೆ ಸೇರಿ ಬೆಣ್ಣೆ ಪೂರೈಕೆ ಮಾಡುವವರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ದೂರುತ್ತಾನೆ. ಅವರು ಆ ಬೆಣ್ಣೆ ತಂದಿಡುವವರೆಗೂ ತಾವು ಆ ಜಾಗ ಬಿಟ್ಟು ಕದಲುವುದಿಲ್ಲವೆಂದು ಇಬ್ಬರೂ ಮುಷ್ಕರ ಹೂಡುತ್ತಾರೆ. ದಿನವೂ ಹೀಗೆಯೇ ನಡೆಯುತ್ತದೆ. ಉಪವಾಸದಿಂದ ಅವರು ನಿತ್ರಾಣರಾಗಿ ಅವರ ಶಕ್ತಿ ಕುಂದುತ್ತಾ ಹೋಗುತ್ತದೆ. ಗಮಾರನಿಗೇನೋ ಅನುಮಾನ, ತಮ್ಮ ಜೊತೆಯಲ್ಲೇ ಇದ್ದ ಆ ಪುಟ್ಟ ಇಲಿಗಳೆಲ್ಲಿ ಎಂದು ಪ್ರಶ್ನಿಸುತ್ತಾನೆ. ಇಬ್ಬರೂ ಆಚೀಚೆ ನೋಡಿ ಒಂದೆಡೆ ಗೋಡೆ ಒಡೆಯಲು ತೊಡಗುತ್ತಾರೆ. ವಾಸ್ತವವಾಗಿ ಗೋಡೆಯ ಆ ಬದಿಯಲ್ಲೇ ಇನ್ನೊಂದು ಬೆಣ್ಣೆಯ ದಾಸ್ತಾನು ಇರುತ್ತಾದಾದರೂ ಬಲಗುಂದಿದ ಇವರು ಅರ್ಧ ಗೋಡೆ ಕೊರೆಯುವುದರಲ್ಲೇ ಸುಸ್ತಾಗಿ ಆ ಪ್ರಯತ್ನವನ್ನು ಅರ್ಧಕ್ಕೆ ಬಿಟ್ಟು ಮತ್ತೆ ಮೊದಲಿನ ಸ್ಥಾನಕ್ಕೆ ಬಂದು ‘ಬೆಣ್ಣೆ ಕದ್ದವರಿಗೆ ಧಿಕ್ಕಾರ, ಏನೇ ಬರಲಿ ಒಗ್ಗಟ್ಟಿರಲಿ, ನಮ್ಮ ಬೆಣ್ಣೆಯನ್ನು ಮತ್ತೆ ತಂದಿಡಿ’ ಎಂದು ಕೂಗುತ್ತಾರೆ, ಕಿರುಚುತ್ತಾರೆ. ಆದರೆ ಅದು ಬರೀ ಅರಣ್ಯರೋದನವಾಗುತ್ತದೆ.

ಆದರೂ ಗಮಾರನಿಗೆ ಹೊಸ ಬೆಣ್ಣೆ ಕ್ಷೇತ್ರವನ್ನು ಹುಡುಕಬೇಕೆಂಬ ಒಳ ತುಡಿತವಿದೆ. ಅವನು ಅರ್ಧದಿನ ಇಲ್ಲಿದ್ದು ಇನ್ನರ್ಧ ದಿನ ಹುಡುಕಾಟದಲ್ಲಿ ತೊಡಗುತ್ತಾನೆ. ಹೀಗೇ ಬಹಳಷ್ಟು ಮಾರ್ಗಗಳಲ್ಲಿ ಆತ ಸಂಚರಿಸುತ್ತಾನೆ. ಮೊದಲೇ ಗೋಜಲು ಗೋಜಲಾದ ಆ ಮಾರ್ಗಗಳಲ್ಲಿ ತಾನು ಕಳೆದುಹೋಗಬಾರದೆಂದು ಮತ್ತೆ ಮತ್ತೆ ಮೊದಲಿನ ಜಾಗಕ್ಕೆ ಹಿಂದಿರುಗಿ ಬಂದು ಗುಟುರನನ್ನು ಸೇರಿಕೊಳ್ಳುತ್ತಾನೆ. ಎಂದಾದರೂ ಮತ್ತೆ ಮೊದಲಿನ ಬೆಣ್ಣೆ ಪೂರೈಕೆಯಾದೀತೆಂಬ ಸಣ್ಣ ಆಸೆಯೂ ಮನದಲ್ಲಿದೆ. ಈ ಹುಡುಕಾಟದ ವಿಷಯವನ್ನು ಗುಟುರನಿಗೆ ತಿಳಿಸಿ ಅವನನ್ನೂ ಜೊತೆಗೆ ಬರಲು ಪ್ರೇರೇಪಿಸುತ್ತಾನೆ. ಆದರೆ ಗುಟುರು ಮಾತ್ರ ಇದಕ್ಕೆ ಸುತಾರಾಂ ಒಪ್ಪುವುದಿಲ್ಲ. ಪ್ರತಿನಿತ್ಯ ಆತ ಮೊದಲಿನ ಸ್ಥಳಕ್ಕೇ ಬರುತ್ತಾನೆ. ತನ್ನ ಆಜನ್ಮ ಸಿದ್ದ ಹಕ್ಕಿನ ಪ್ರತಿಪಾದನೆ ಮಾಡುತ್ತಾನೆ ಸಂಜೆ ಹಿಂದಿರುಗುತ್ತಾನೆ.

ಹೀಗೇ ಒಂದು ದಿನ ಗಮಾರ ಸುತ್ತಾಡುತ್ತಿರುವಾಗ ದಾರಿಯಲ್ಲಿ ಒಂದು ಚೂರು ಬೆಣ್ಣೆಯ ತುಣುಕು ಬಿದ್ದಿರುತ್ತದೆ. ಅದು ತನ್ನ ಭ್ರಮೆಯೇನೋ ಎಂದುಕೊಂಡರೂ ಎತ್ತಿ ಬಾಯಲ್ಲಿರಿಸಿಕೊಂಡಾಗ ಅದರ ಅನುಪಮ ಸ್ವಾದದಿಂದ ಅತೀವ ಸಂತೋಷವೆನಿಸುತ್ತದೆ. ಬಹಳ ದಿನಗಳಿಂದ ಆತ ಹಸಿದಿದ್ದನಲ್ಲವೇ? ಈಗವನಿಗೆ ಹೊಸ ಶಕ್ತಿ ಬರುತ್ತದೆ. ಮುಂದೆ ಮುಂದೆ ಮುನ್ನುಗ್ಗಿ ಸಾಗುತ್ತಾನೆ. ದೊಡ್ಡ ಭಂಡಾರವೇ ಅವನಿಗೆ ಗೋಚರವಾಗುತ್ತದೆ. ಅಲ್ಲೇ ಇದ್ದ ಮೂಸು, ಮುನ್ನುಗ್ಗು ಎಂಬ ಇಲಿಗಳು ಹಸನ್ಮುಖರಾಗಿ ಅವನನ್ನು ಸ್ವಾಗತಿಸುತ್ತಾರೆ. ಗಮಾರ ತುಂಬಾ ಸಂತೋಷದಿಂದ ಬೆಣ್ಣೆ ಮೆಲ್ಲತೊಡಗುತ್ತಾನೆ.

ಈ ಕತೆಯಲ್ಲಿ ಹಲವಾರು ತಂತ್ರಗಳಿವೆ. ಸ್ವಾಭಾವಿಕ ಗುಣಗಳುಳ್ಳ ಇಲಿಗಳು ಬದುಕುವ ದಾರಿಯನ್ನು ಮೊದಲು ಕಂಡುಕೊಳ್ಳುತ್ತವೆ. ಆದರೆ ಕೃತಕ ಜೀವನ ವಿಧಾನಗಳನ್ನು ಗಳಿಸಿಕೊಂಡಿರುವ ಮಾನವ, ನಿಧಾನಕ್ಕೆ ಆ ದಾರಿ ಕಂಡುಕೊಳ್ಳುತ್ತಾನೆ; ಕೆಲವೊಮ್ಮೆ ಕಂಡುಕೊಳ್ಳುವುದೇ ಇಲ್ಲ! ಯಾರು ತಮ್ಮ ಸುತ್ತಲಿನ ಜಗತ್ತನ್ನು ತೆರೆದ ಕಣ್ಣುಗಳಿಂದ ನೋಡಿ, ಅರಿವು ಹೆಚ್ಚಿಸಿಕೊಳ್ಳುತ್ತಾರೋ ಅವರು ಬದುಕಿ ಉಳಿಯುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕೆ ಎರವಾಗಿ ಸೋಮಾರಿಗಳಾಗುವವರು ಜೀವಕ್ಕೆ, ಬದುಕಿಗೆ ಕುತ್ತು ತಂದುಕೊಳ್ಳುತ್ತಾರೆ.

ಇಲ್ಲಿನ ಹೆಸರುಗಳೂ ಅರ್ಥಪೂರ್ಣವಾಗಿವೆ! 'ಗುಟುರು' ಎನ್ನುವವನು ಯಾವಾಗಲೂ ಕೆಲಸ ಮಾಡದೇ ಯೋಚನೆ ಮಾಡುವ ಹಾಗೂ ಆತಂಕಗಳನ್ನು ಊಹಿಸಿಕೊಂಡು ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳುವ ಸ್ವಭಾವವನ್ನು ಪ್ರತಿನಿಧಿಸಿದರೆ, 'ಗಮಾರ' ಎನ್ನುವವನು ನೋಡುವುದಕ್ಕೆ ಪೆದ್ದನಂತಿದ್ದರೂ ಸಾಹಸೀ ಗುಣವನ್ನು ಪ್ರತಿನಿಧಿಸುತ್ತಾನೆ. ಹಾಗೆಯೇ 'ಮೂಸು' ಮತ್ತು 'ಮುನ್ನುಗ್ಗು' ಇಲಿಗಳೂ ಸಹ. ಒಂದು ಅನ್ವೇಷಣಾತ್ಮಕ ಬುದ್ಧಿ ಹಾಗೂ ಇನ್ನೊಂದು ಅನುಷ್ಠಾನಾತ್ಮಕ ಕ್ರಿಯಾಶಕ್ತಿಯನ್ನು ಪ್ರತಿನಿಧಿಸುತ್ತವೆ. ಇವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ಮಾನವನಷ್ಟು ಬುದ್ಧಿಮತ್ತೆ ಇಲ್ಲದಿದ್ದರೂ ಬದುಕಿನ ಹೋರಾಟದಲ್ಲಿ ಸುಲಭವಾಗಿ ಗೆಲ್ಲುತ್ತವೆ. ಆದರೆ ಮನುಷ್ಯರಾದ 'ಗುಟುರು' ಮತ್ತು 'ಗಮಾರ'ರಲ್ಲಿ ಒಬ್ಬನಿಗೆ ಸಾಹಸೀ ಗುಣ ಇದ್ದರೂ, ಸಂಗಾತಿಯ ಕ್ರಿಯಾತ್ಮಕ ಸಹಕಾರ ದೊರೆಯದ ಕಾರಣ, ಮಾನವ ಬುದ್ಧಿಯಂತಹ ಉನ್ನತ ಬುದ್ಧಿಮತ್ತೆ ಇದ್ದೂ ಕೂಡ ತಡವಾಗಿ, ಕಷ್ಟದಿಂದ ಬದುಕುವ ದಾರಿ ಕಂಡುಕೊಳ್ಳುತ್ತಾನೆ. ಹೀಗೆ ಕೆಲವರು ಮಾತ್ರ ಬದುಕಿನ ಹೋರಾಟದಲ್ಲಿ ಗೆಲ್ಲುತ್ತಾರೆ.

ಒಟ್ಟಾರೆ ಈ ಕತೆ ಧ್ವನಿಸುವ ಆಶಯವೆಂದರೆ ಬದಲಾವಣೆ ಎನ್ನುವುದು ಈ ವಿಶ್ವದ ನಿಯಮ. ಯಾರೂ ಇದಕ್ಕೆ ಹೊರತಲ್ಲ. ಯಾರು ಅದನ್ನು ನಿರೀಕ್ಷಿಸಿ, ಅದಕ್ಕೆ ಮೊದಲು ತಯಾರಾಗಿ ಹೊಂದಿಕೊಳ್ಳುತ್ತಾರೋ ಅವರು ನಿರಾತಂಕವಾಗಿ ಬದುಕು ಸಾಗಿಸುತ್ತಾರೆ. ಯಾರು ಬದಲಾವಣೆಗಳನ್ನು ನಿರೀಕ್ಷಿಸಲಾರರೋ, ಅದಕ್ಕೆ ಹೊಂದಿಕೊಳ್ಳಲಾರರೋ ಅವರು ಅವನತಿ ಹೊಂದುತ್ತಾರೆ. ಈಗಲೇ ಆದರೆ ಆಯ್ಕೆ ನಮ್ಮದು. ಸ್ವಲ್ಪ ಹೊತ್ತಾದರೆ ಆಯ್ಕೆಗೆ ಅವಕಾಶವೇ ಇರದು.