ಬಱಿಯ ಕಣ್ಣಿಗೆ ಕಾಣುವ ಗ್ರಹಗಳು

ಬಱಿಯ ಕಣ್ಣಿಗೆ ಕಾಣುವ ಗ್ರಹಗಳು

Comments

ಬರಹ

ನಮ್ಮ ಬಱಿಯ ಕಣ್ಣುಗಳಿಗೆ ಅಂದರೆ ದೂರದರ್ಶಕವನ್ನು ಬೞಸದೆ ನೋಡುವುದಾದರೆ ಕಣ್ಣಿಗೆ ಕಾಣುವ ಗ್ರಹಗಳು ಸೂರ್ಯ (ನಕ್ಷತ್ರವಾದರೂ ಭೂಮಿಚಲನೆಯನ್ನು ತೋಱುವ ನಕ್ಷತ್ರ), ಭೂಮಿಯ ಉಪಗ್ರಹವಾದ ಚಂದ್ರ, ಶುಕ್ರ, ಗುರು, ಮಂಗಳ(ಕುಜ), ಶನಿ ಮತ್ತು ಬುಧ. ಸೂರ್ಯ ಮತ್ತು ಚಂದ್ರನನ್ನು ಬಿಟ್ಟರೆ ಪ್ರಮುಖವಾಗಿ ಸರಿಯಾಗಿ ಗುಱುತಿಸಬಲೆವೆಂದು ಭಾವಿಸಿದರೆ ಆಗ ಸ್ಪಷ್ಟವಾಗಿ ಕಣ್ಣಿಗೆ ಕಾಣುವ ಗ್ರಹಗಳು ಶುಕ್ರ (ಯಾವಾಗಲೂ ಹೊಳೆಯುವ ಗ್ರಹ. ಅದಕ್ಕೆ ಬೆಳ್ಳಿಗ್ರಹವೆನ್ನುತ್ತಾರೆ), ಗುರು ಹಾಗೂ ಮಂಗಳ. ಗುಱುತಿಸಲು ಕಷ್ಟವಾದ ಎರಡು ಗ್ರಹಗಳೆಂದರೆ ಶನಿ ಮತ್ತು ಬುಧ. ಬುಧನಂತೂ ಬೇಱೆ ಗ್ರಹ ಅಥವಾ ಚಂದ್ರನೊಟ್ಟಿಗಿರದಿದ್ದರೆ ಗುಱುತಿಸಲು ಕಷ್ಟ. ಯಾವದೇ ಗ್ರಹವಿಲ್ಲದಿದ್ದರೆ ಇದನ್ನು ನಕ್ಷತ್ರವೆಂದು ಭ್ರಮಿಸುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ಇದು ಮತ್ತು ಶುಕ್ರ ಭೂಕಕ್ಷೆಯ ಒಳಗಿರುವ ಗ್ರಹವಾಗಿರುವುದಱಿಂದ ನೆತ್ತಿಯ ಮೇಲೆ ಎಂದೂ ಕಾಣಿಸಿಕೊಳ್ಳವು. ಬುಧನನ್ನು ನೋಡಬೇಕೆಂದರೆ ಸಂದರ್ಭಕ್ಕೆ ತಕ್ಕಂತೆ ಕೆಲವು ಸಾರಿ ಸೂರ್ಯ ಹುಟ್ಟುವುದಕ್ಕೆ ಸುಮಾರು ಮುಕ್ಕಾಲು ಗಂಟೆ ಅಥವಾ ಕೆಲವು ಸಾರಿ ಸೂರ್ಯ ಮುೞುಗಿದ ಮೇಲೆ ಮುಕ್ಕಾಲು ಗಂಟೆಯೊಳಗೆ ನೋಡಬೇಕಾಗುತ್ತದೆ. ಅಲ್ಲದೇ ಬುಧ ಮತ್ತು ಶುಕ್ರ ಗ್ರಹಗಳು ಭೂಕಕ್ಶೆಯೊಳಗಿರುವುದಱಿಂದ ಇವುಗಳ ಪ್ರಕಾಶಭಾಗ ೧೦೦%ಕ್ಕಿಂತ ಯಾವಾಗಲೂ ಕಡಿಮೆಯೇ. ಭೂಮಿಯ ಪಾರ್ಶ್ವದ ಕಡೆಯಲ್ಲಿ ೦ ಡಿಗ್ರಿಯಲ್ಲಿದ್ದಾಗ ಇವುಗಳ ಕಪ್ಪು ಭಾಗ ನಮ್ಮ ಕಡೆಗಿರುವುದಱಿಂದ ಕಣ್ಣಿಗೆ ಕಾಣುವುದಿಲ್ಲ. ಸೂರ್ಯ ನಡುವಿದ್ದು ಭೂಮಿಯ ಎದುರಿನ (೧೮೦ ಡಿಗ್ರಿ ನಮಗೆ ಭಾಸವಾಗುವುದು ೦ ಡಿಗ್ರಿಯಲ್ಲಿದ್ದಂತೆ) ಪಾರ್ಶ್ವದಲ್ಲಿದ್ದಾಗ ೧೦೦% ಪ್ರಕಾಶವಾಗಿದ್ದರೂ ಸೂರ್ಯನ ಬೆಳಕಿನ ಪ್ರಖರತೆಯಲ್ಲಿ ಮುಚ್ಚಿಹೋಗಿಬಿಡುತ್ತವೆ. ಇನ್ನು ಶನಿಗ್ರಹ ದೂರದಲ್ಲಿರುವುದಱಿಂದ ಹಾಗೂ ಸಾಮಾನ್ಯವಾಗಿ ನೀಲಿಯಾಗಿ ಕಾಣುವುದಱಿಂದ ಯಾವದೇ ಪ್ರಮುಖ ಗ್ರಹ ಅಥವಾ ಚಂದ್ರ ಹತ್ತಿರದಲ್ಲಿರದಿದ್ದರೆ ಇದನ್ನು ನಕ್ಷತ್ರವೆಂದೇ ಭ್ರಮಿಸುತ್ತೇವೆ. ಶುಕ್ರ ಬೆಳ್ಳಗಿದ್ದು ಯಾವಾಗಲೂ ಪ್ರಕಾಶಿಸುವುದಱಿಂದ ಶುಕ್ರನನ್ನು ಗುಱುತಿಸುವುದು ಕಷ್ಟವೇನಲ್ಲ. ಹಾಗೆಯೇ ನಂತರ ಪ್ರಕಾಶದಲ್ಲಿ ಗುರುವೂ ಬೆಳ್ಲಗಿರುವುದಱಿಂದ ಗುರುವನ್ನು ಗುಱುತಿಸುವುದು ಕಷ್ಟವಲ್ಲ. ಮಂಗಳ (ನೀಚನಾಗಿರದಿದ್ದರೆ) ಕೆಂಪಗೆ ಕಾಣುವುದಱಿಂದ ಗುಱುತಿಸುವುದು ಅಷ್ಟು ಕಷ್ಟವಲ್ಲ. ಅಲ್ಲದೇ ಈ ಎಲ್ಲಾ ಗ್ರಹಗಳು ನಕ್ಷತ್ರಗಳಂತೆ ಮಿನುಗದೇ ಇರುವುದಱಿಂದ ಗ್ರಹವೆಂದು ಗುಱುತಿಸಬಹುದು. ಗ್ರಹಗಳು ಚಲಿಸುವುದಱಿಂದ ಪ್ರತಿದಿನ ಒಂದು ಆಕಾಶಕಾಯ ತನ್ನ ಚಲನೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ಬದಲಿಸುತ್ತಿದ್ದರೆ ಅದನ್ನು ಗ್ರಹವೆಂದು ಪರಿಗಣಿಸಬಹುದು. ಯಾವದೇ ಗ್ರಹದ ಜೊತೆಯಲ್ಲಿ ಬುಧನನ್ನು ಗುಱುತಿಸಿದರೆ ಈ ಬುಧಗ್ರಹ ಪ್ರತಿದಿನ ಏನಿಲ್ಲವೆಂದರೂ ಸುಮಾರು ೫ ಡಿಗ್ರಿ ಪೂರ್ವಕ್ಕೆ ಚಲಿಸುತ್ತದೆ. ಶನಿಗ್ರಹವನ್ನು ಗುಱುತಿಸುವುದು ಈ ತೆಱನಲ್ಲಿ ಕಷ್ಟವಾಗಬಹುದು. ಆದರೆ ಶನಿಯ ಗಾತ್ರ ಬುಧನ ಗಾತ್ರಕ್ಕಿಂತ ದೊಡ್ಡದಾಗಿರುವುದಱಿಂದ ಒಮ್ಮೆ ಗುಱುತಿಸಿದರೆ ಶನಿಯನ್ನು ಮತ್ತೆ ಮತ್ತೆ ಗುಱುತಿಟ್ಟುಕೊಳ್ಳಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet