ಬಾಂಧವ್ಯ ಅರಸಿ

ಬಾಂಧವ್ಯ ಅರಸಿ

ಬರಹ

ಭಾರತಕ್ಕೀಗ brand new ವಿದೇಶಾಂಗ ಸಚಿವರು. brand India ವನ್ನು ವಿಶ್ವಕ್ಕೆ ಪ್ರಸ್ತುತಪಡಿಸಲು ಇದಕ್ಕಿಂತ ಪ್ರಶಸ್ತ ಸಮಯ ಬೇರೆ ಇಲ್ಲ. ೭೭ ವರ್ಷದ ಸೋ. ಮ. ಕೃಷ್ಣ ಈ ಹುದ್ದೆಗೆ ಬೇಕಾದ ವಯಸ್ಸಿನ ಪ್ರಬುದ್ಧತೆಯನ್ನೂ, ಆಧುನಿಕ ದ್ರುಷ್ಟಿಕೊನವನ್ನೂ ತಂದಿದ್ದು ಚಾಣಕ್ಯ ಪುರಿ ( ನಮ್ಮ ವಿದೇಶಾಂಗ ಸಚಿವಾಲಯ ) ಗೆ ನವ ಚೈತನ್ಯವನ್ನು ತರುವ ಅವರ ಜವಾಬ್ದಾರಿ ಬಹಳ ಹಿರಿದು. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇ ದಿನೇ ಹೆಚ್ಚುತ್ತಿದ್ದು ಇದನ್ನು ಮನಗಂಡು ಬೇಕಾದ ಎಲ್ಲಾ ಸಂಪನ್ಮೂಲಗಳನ್ನೂ ಉಪಯೋಗಿಸಿ ಪ್ರಭಾವಶಾಲಿ ರಾಷ್ಟ್ರವಾಗಿ ಹೊಮ್ಮಬೇಕಾದ ಅಗತ್ಯವಿದೆ. ಇದುವರೆಗಿನ ವಿದೇಶಾಂಗ ಸಚಿವಾಲಯದ ಸಾಧನೆ ಹೇಳಿ ಕೊಳ್ಳುವ ಮಟ್ಟದಲ್ಲಿಲ್ಲ. ಹಳೆತಲೆಗಳ ಹಳೆ ಹಳಸಲು ವಿಚಾರಗಳಿಂದ ಭಾರತಕ್ಕೆ ಲಾಭವಾಗಿದ್ದು ಕಡಿಮೆಯೆಂದೇ ಹೇಳಬೇಕು. ಇದನ್ನು ಹೇಳುವಾಗ ನಮ್ಮ ನೆರೆಹೊರೆಯಲ್ಲಿ ನಮಗಿರುವ ಮರ್ಯಾದೆ , ಆದರದ ಬಗ್ಗೆ ಸ್ವಲ್ಪ ಕಣ್ಣಾಡಿಸೋಣ.

ಹಿಂದೂ ಮಹಾ ಸಾಗರದ ಮಾಣಿಕ್ಯ
ಶ್ರೀಲಂಕ ಪರಂಪರಾಗತವಾಗಿ ಭಾರತದ ಮಿತ್ರ. ಈ ಚಿಕ್ಕ ದ್ವೀಪ ರಾಷ್ಟ್ರಕ್ಕೆ ಹಿರಿಯನ್ನನಾಗಿ ಬಹಳಷ್ಟು ಗೌರವಗಳನ್ನು ಸಂಪಾದಿಸಿದ್ದೆವು. ತಮಿಳರ ಸಮಸ್ಯೆ ಮತ್ತ್ತು ತಮಿಳು ಭಯೋತ್ಪಾದಕ ಸಂಘಟನೆ LTTE ನಡೆಸಿದ ಹಿಂಸೆ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದವು. ಸ್ಥಳೀಯ ಸಂವೇದನೆಗಳಿಗೆ ಪ್ರತಿಸ್ಪಂದಿಸುವ ಅವಶ್ಯಕತೆ ಶ್ರೀಲಂಕೆ ನಮ್ಮ ಪ್ರಭಾವ ವಲಯದಿಂದ ಹೊರ ಹೋಗುವಂತೆ ಮಾಡಿತು. ಒಮ್ಮೆ ತಮಿಳು ಭಯೋತ್ಪಾದಕರು ನೂರಾರು ಸೈನಿಕರನ್ನು ತಮ್ಮ ಪ್ರದೇಶದಲ್ಲಿ ಸುತ್ತುವರಿದಾಗ ಲಂಕಾ ಭಾರತದ ಸಹಾಯಾ ಯಾಚಿಸಿತು. ಮೀನ ಮೇಷ ಎಣಿಸ ತೊಡಗಿದ ಸರಕಾರ ಅವರ ಸಹಾಯಕ್ಕೆ ಬರದಾದಾಗ ಪಾಕಿಸ್ತಾನ ತನ್ನ ಯುದ್ಧ ವಿಮಾನಗಳನ್ನು ಕಳಿಸಿ ಸೈನಿಕರನ್ನು ರಕ್ಷಿಸಿದರು. ಪ್ರಭಾಕರನ ಸಾವಿನೊಂದಿಗೆ ಮುಗಿದ ಇತ್ತೀಚಿನ ಮಿಲಿಟರಿ ಕಾರ್ಯಾಚರಣೆಯಲ್ಲೂ ಪಾಕ್ ಪರೋಕ್ಷವಾಗಿ ಲಂಕೆಗೆ ಸಹಾಯ ಒದಗಿಸಿತೆಂದು ವರದಿ. ಈ ಹಸ್ತಕ್ಷೇಪದೊಂದಿಗೆ ಶ್ರೀ ಲಂಕಾ ಸರಕಾರ ಪಾಕನ್ನು ತನ್ನ ನಿಜವಾದ ಮಿತ್ರ ಎಂದು ಪರಿಗಣಿಸಿತು. ಅಷ್ಟೇ ಅಲ್ಲ, ಜಿಯಾ ಉಲ್ ಹಕ್ ಒಮ್ಮೆ ಶ್ರೀಲಂಕಾ ಭೇಟಿಯ ವೇಳೆ ಅವರಿಗೆ ಸುಸಜ್ಜಿತವಾದ ಆಸ್ಪತ್ರೆಯ ಉಡುಗೊರೆಯನ್ನೂ ನೀಡಿ ವಿಶ್ವಾಸ ಗಳಿಸಿದ್ದರು. ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಸ್ಥಾನಕ್ಕೆ ಭಾರತದ ಶಶಿ ತರೂರ್ ( ಈಗ ಅವರು ಸಂಸದರು ) ಸ್ಪರ್ದಿಸಿದಾಗ ದೂರದ ದೇಶಗಳ ಬೆಂಬಲ ಇರಲಿ, ಶ್ರೀ ಲಂಕೆಯ ಬೆಂಬಲವೂ ಸಿಗದೇ ಹೋದದ್ದು ನಮ್ಮ ಕಾರ್ಯ ಕ್ಷಮತೆಗೆ ಹಿಡಿದ ಕೈಗನ್ನಡಿ.
ಮಹಾ ಗೋಡೆ
ಚೀನಾ ಎಂದಿಗೂ ನಮ್ಮ ಮಿತ್ರನಲ್ಲ ಎಂದು ಸಮಯ ಸಿಕ್ಕಾಗಲೆಲ್ಲ ಮನವರಿಕೆ ಮಾಡಿ ಕೊಡುತ್ತಿರುತ್ತದೆ. ಚೀನಾದ ಆಗಸದೆತ್ತರದ ಆಸೆಗಳಿಗೆ ನಾವು ಅದರ ಮಹಾ ಗೋಡೆಯಂತೆಯೇ ತೊಡಕು. ನಮ್ಮ ೩೮ ಸಾವಿರ ಚದರ ಕಿಲೋ ಮೀಟರ್ ಪ್ರದೇಶವನ್ನು ( ಅದರಲ್ಲಿ ನಮ್ಮ ಕೆಲವು ಪುಣ್ಯ ಕ್ಷೇತ್ರಗಳೂ ಸೇರಿವೆ) ಕಬಳಿಸಿದ್ದು ಸಾಲದೇ ಅರುಣಾಚಲ ಪ್ರದೇಶವೂ ನಮ್ಮದು ಎಂದು ಹೇಳಿ ದಿಗಿಲು ಹುಟ್ಟಿಸಿದರು. ಚೀನಾದೊಂದಿಗೆ ಕಾದಾಡುವುದಕ್ಕಿಂತ ಅವರ ವಿಶ್ವಾಸವನ್ನು ಗಳಿಸುವುದೇ ಭಾರತಕ್ಕಿರುವ ದಾರಿ ಮತ್ತು ಸವಾಲು.

ನೇಪಾಳ ಒಂದು ಪುಟ್ಟ ರಾಷ್ಟ್ರ. ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಸಹ ಈ ದೇಶಕ್ಕೆ. ಅವರನ್ನು ನಾವು ನಡೆಸಿಕೊಂಡ ರೀತಿ ಗೊತ್ತೇ ಇದೆಯಲ್ಲ. ರಾಜೀವ್ ಪ್ರಧಾನಿ ಆಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ವ್ಯಾಪಾರಕ್ಕಾಗಿ ಇದ್ದ ಮಾರ್ಗಗಳನ್ನು ಮುಚ್ಚಿ ಕೆಲ ವಾರಗಳ ವರೆಗೆ ಅಲ್ಲಿಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆವು. ಈ ಸಂದರ್ಭದಲ್ಲೇ ಚೀನಾ ಮತ್ತು ಪಾಕ ಸೇರಿಕೊಂಡು ನೇಪಾಳವನ್ನು ಬುಟ್ಟಿಗೆ ಹಾಕಿ ಕೊಂಡವು.

ಬಾಂಗ್ಲದೇಶೀಯರಿಗೂ ನಮ್ಮ ಭದ್ರತಾ ಪದೆಯವರಿಗೂ ಯಾವಗಲೂ ತಿಣುಕು. ನಮ್ಮ ರೈತರ ಜಾನುವಾರುಗಳನ್ನು ಕದಿಯುವುದರಿಂದ ಹಿಡಿದು ಅಸ್ಸಾಮಿನ ಆಂತರಿಕ ವಿಷಯಗಳ ತನಕ ಅವರ ಹಸ್ತಕ್ಷೇಪ. ಈ ದೇಶದೊಂದಿಗೆ ಸಂಬಂಧ ಸುಧಾರಿಸುವತ್ತ ಬಹಳಷ್ಟು ಪ್ರಯತ್ನ ನಡೆಯಬೇಕು.

ಇನ್ನು ನಮ್ಮ ಪಡುವಣದತ್ತ ಒಂದು ನೋಟ. ಪಾಕಿಸ್ತಾನದ ಬಗ್ಗೆ ಕಡಿಮೆ ಹೇಳಿದಷ್ಟೂ ಒಳ್ಳೆಯದೇ. ಅದರ ಹುಟ್ಟೇ (ವಿಭಜನೆ) ಸಂಶಯಾಸ್ಪದ. ಆರಂಭದಿಂದಲೇ ನಮಗೆ ಅವರು ದೊಡ್ಡ ತಲೆ ಬೇನೆ. ತಮ್ಮ ದೇಶವನ್ನು ಸರಿಯಾಗಿ ಆಳಲು ಬರದಿದ್ದರೂ ನಮ್ಮ ವಿಷಯಗಳಲ್ಲಿ ಬಹಳ ಆಸಕ್ತಿ. ಬಾಂಗ್ಲಾದೇಶದ ರಚನೆಯಲ್ಲಿ ನಮ್ಮ ಪಾತ್ರ ಅವರಿಗೆ ಈಗಲೂ ಸಹಿಸಲಸಾಧ್ಯ. ಈ ಕಾರಣಕ್ಕಾಗೆ ಅವಕಾಶ ಸಿಕ್ಕಾಗಲೆಲ್ಲ ತರಾವರಿ ಸಮಸ್ಯೆಗಳನ್ನು ನಮ್ಮ ದಾರಿಗೆ ಒಡ್ಡುತ್ತಾರೆ. ೮೦ ರ ದಶಕದಲ್ಲಿ ಸಿಕ್ಖರು ಖಲಿಸ್ತಾನದ ಬೇಡಿಕೆಯ ಹೋರಾಟ ಮಾಡಿ ನಮ್ಮ ನೆಲದಲ್ಲಿ ಬಹಳಷ್ಟು ನೆತ್ತರು ಸುರಿಸಿ ಅವಾಂತರ ಮಾಡಿದಾಗ ಅವರಿಗೆ ಪರೋಕ್ಷ ಸಹಾಯ ಮಾಡಿದ್ದು ಪಾಕಿಸ್ತಾನವೇ. ಪಾಕ ಆಕ್ರಮಿತ ಕಾಶ್ಮೀರ ಪ್ರದೇಶದ ಕೆಲ ಭಾಗವನ್ನು ಚೀನಾಕ್ಕೆ ದಾನ ಮಾಡಿ ಅಲ್ಲೂ ನಮಗೆ ಸೈನಿಕ ತೊಡಕುಗಳನ್ನು ಆರಂಬಿಸಿದರು. ಕಳೆದ ನವೆಂಬರ್ ತಿಂಗಳಿನಲ್ಲಿ ಮುಂಬೈ ನರಹತ್ಯೆಯಲ್ಲಿ ಪಾಕಿಗಳ ಕೈವಾಡ ಪುರಾವೆ ಸಹಿತ ಸಿಕ್ಕರೂ ಆರಂಭದಲ್ಲಿ ಅಲ್ಲಗಳೆದು ನಂತರ ಸಬೂತುಗಳನ್ನು ಕೇಳಿ ಪರೋಕ್ಷವಾಗಿ ತಮ್ಮ ಕೈವಾಡವನ್ನು ಒಪ್ಪಿಕೊಂಡರು. ಪಾಕಿನ ಕೈವಾಡ ದ ಮಾಹಿತಿ ಸಿಗುತ್ತಲೇ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆ ಮಾಡಿ ಕೆಲವು ಭಯೋತ್ಪಾದಕ ತಾಣಗಳನ್ನು ಧ್ವಂಸಗೊಳಿಸಿದ್ದರೆ ಮುಂದೆ ಭವಿಷ್ಯದಲ್ಲಿ ಬರುವ ಅನಾಹುತಗಳನ್ನು ತಡೆಯಬಹುದಿತ್ತು.
ಒಂದು ಮಾತನ್ನು ನಾವು ಒಪ್ಪಿಕೊಳ್ಳಲೇ ಬೇಕು. ಪಾಕಿಗಳು PR ( ಸಾರ್ವಜನಿಕ ಸಂಪರ್ಕ ) ವಿಷಯದಲ್ಲಿ ನಮಗಿಂತ ಒಂದೆರಡು ಹೆಜ್ಜೆ ಮುಂದೆಯೇ. ನವೆಂಬರ್ ನರಮೇಧದಲ್ಲಿ ಪಾಕಿಗಳ ಕೈ ಸ್ಪಷ್ಟವಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಟೀಕೆಗಳು ಕೇಳಿ ಬಂದವು ಪಾಕ್ ವಿರುದ್ಧ. ಕೂಡಲೇ ಕಾರ್ಯಪ್ರವೃತ್ತವಾದ PR ಪಡೆ ಬೆಂಕಿ ನಂದಿಸುವ ಕಾರ್ಯವನ್ನು ಸೊಗಸಾಗಿ ಮಾಡಿತು. ಮೊದಲಿಗೆ ಅಮೇರಿಕ ವಿದೇಶಾಂಗ ಕಾರ್ಯದರ್ಶಿಯನ್ನು ಮನವೊಲಿಸಿ ಭಾರತದ ಕೋಪವನ್ನು ತಣಿಸಿದ ನಂತರ ಪಾಕ್ ಅಧ್ಯಕ್ಷ ಜರ್ದಾರಿ ಅಮೆರಿಕೆಯ ಪ್ರಭಾವಶಾಲಿ ದಿನಪತ್ರಿಕೆ new york times ಗೆ ಒಂದು ಲೇಖನ ಬರೆದು ತಮ್ಮ ಅಳಲನ್ನು ತೋಡಿಕೊಂಡರು. ಭಾರತಕ್ಕಿರುವ ಶತ್ರುವೇ ನಮಗಿರುವುದು, ಅದೇ ಶತ್ರುವೇ ನನ್ನ ಮಡದಿಯನ್ನೂ ( ಬೇನಜೀರ್) ಬಲಿ ತೆಗೆದು ಕೊಂಡಿದ್ದು, ಇದನ್ನೆಲ್ಲಾ ಮಾಡುತ್ತಿರುವುದು "non state actors" ( ಮಂಗಳ ಗ್ರಹದಿಂದ ಉದುರಿದವರಿರಬೇಕು ) ಎಂದು ಹೇಳಿ ವಿಶ್ವದ ಅನುಕಂಪ ಗಳಿಸಿಕೊಂಡರು. ತಮಾಷೆ ನೋಡಿ, ನೋವಾಗಿದ್ದು ನಮಗೆ, ಅನುಕಂಪ ಅವರಿಗೆ. ಇದು PR ಕೆಲಸದ ಮೋಡಿ. ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಹಲ್ಲೆಯ ಸಮಯದಲ್ಲೂ ಜರ್ದಾರಿ ಸಾಹೇಬರು ಪತ್ರ ಬರೆದರು, ಈ ಸಲ ಮತ್ತೊಂದು ಪ್ರಭಾವಶಾಲಿ ಪತ್ರಿಕೆಗೆ, ಅಮೆರಿಕೆಯಿಂದ ಪ್ರಕಟವಾಗುವ wall street journal ಗೆ. ಭಾರತದೊಂದಿಗಿನ ಯಾವುದೇ ಸಮಸ್ಯೆಯ ವೇಳೆಯಲ್ಲಿ ಮಾಧ್ಯಮಗಳ ಕರೆಗೆ ಪ್ರಥಮವಾಗಿ ಓಗೊಡುವುದು ಪಾಕಿಗಳೆ, ನಾವಲ್ಲ. ನಾವು ಬಹಳ ತಡವಾಗಿ ಪ್ರತಿಕ್ರಯಿಸುತ್ತೇವೆ. ಪ್ರತಿಯೊಂದಕ್ಕೋ ಜಾತಕ, ಮುಹೂರ್ತ ನೋಡುವ ನಮ್ಮ ನಡೆ ಇದಕ್ಕೆ ಕಾರಣವೋ ಏನೋ. ಇನ್ನು ಮುಂದೆ ಪಾಕಿಸ್ತಾನಕ್ಕೆ ಅದರದೇ ಆದ ಶೈಲಿಯಲ್ಲಿ ಉತ್ತರ ನೀಡುವತ್ತ ಭಾರತ ಗಮನ ನೀಡಬೇಕು.
ಇನ್ನು ನಮ್ಮ ನೆರೆಹೊರೆಯನ್ನು ಬಿಟ್ಟು ಸ್ವಲ್ಪ ಹೊರಬಂದು ನೋಡಿದರೆ ಅರಬರೊಂದಿಗೆ ನಮ್ಮ ಮೈರ್ತಿ ಸಾವಿರಾರು ವರ್ಷ ಗಳದು. ಅರಬರಿಗೆ ನಮ್ಮ ಬಗ್ಗೆ ವಿಶೇಷ ಗೌರವ, ಆದರ. ಅಮೆರಿಕೆಯ ಯಹೂದಿ ಪರ ನಿಲುವಿನಿಂದ ನಷ್ಟ ಅನುಭವಿಸಿರುವ ಅರಬರಿಗೆ ನಾವು ಆಸರೆಯಾಗಬೇಕು. ನಮ್ಮ ಸಂಬಂಧವನ್ನು ಇನ್ನಷ್ಟು ಸುಧಾರಿಸಿದರೆ ವ್ಯಾಪಾರ ಮತ್ತು ಇನ್ನಿತರ ವಿಷಯಗಳಲ್ಲಿ ನಮಗೆ ಅರಬರು ಸಹಕಾರಿ ಆಗಬಲ್ಲರು.