ಬಾಯಿ ಫ್ರೆಂಡು..!
ಬಾಯಿದ್ದವ ಬರಗಾಲದಲ್ಲಿಯು ಬದುಕುವ - ಎನ್ನುವುದು ನಾಣ್ಣುಡಿ. ಬಾಯಿ-ಫ್ರೆಂಡಿರುವತನಕ ಎಲ್ಲೆಡೆಯೂ ಸಲ್ಲುತ್ತಾ, ಎಲ್ಲವನ್ನು ನಿಭಾಯಿಸಿಕೊಳ್ಳುವ ಛಾತಿ ತೋರುತ್ತ ಅಡೆತಡೆಗಳನ್ನೆಲ್ಲ ಸಂಭಾಳಿಸಿಕೊಂಡು ಮುನ್ನಡೆಯಲು ಸರಾಗವಾಗುತ್ತದೆಯೆನ್ನುವುದು ಅನುಭವದ ಮಾತು. ಆ ಕಾರಣದಿಂದಲೆ ಮಿಕ್ಕಿದ್ದೇನೂ ಸದ್ಗುಣಗಳು ಇರುವಂತೆ ಕಾಣದಿದ್ದರೂ, ಬಾಯೊಂದು ಸರಿಯಿತ್ತೆಂದರೆ ಅದನ್ನೆ ಸರಿಸೂಕ್ತವಾಗಿ ಬಳಸಿ ಎಲ್ಲರನ್ನು ಮರುಳು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬಹುದಾದ ಪುಂಡು ಪುಢಾರಿ ನಾಯಕರ ಗುಂಪನ್ನು ನಾವು ಕಾಣಲು ಸಾಧ್ಯವಾಗುವುದು.
ಆ ಬಾಯಿ-ಫ್ರೆಂಡನ್ನು ಬದಿಗಿರಿಸಿ, ಈ ಆಧುನಿಕ ಜಗದಲ್ಲಿ ಹೆಚ್ಚೆಚ್ಚು ಸಹಜ ಸಾಮಾನ್ಯವಾಗುತ್ತಿರುವ ಇನ್ನೊಂದು ಟ್ರೆಂಡ್ 'ಬಾಯ್-ಫ್ರೆಂಢ್'. ಆ ಬಾಯಿ ತನ್ನ ಮಾತಿನ ಆಯ್ಕೆಯಲ್ಲಿ ಹೇಗೆ ಹುಷಾರಾಗಿರಬೇಕೊ, ಹಾಗೆ ಈ ಬಾಯ್-ನ ಆಯ್ಕೆಯಲ್ಲು ಹುಷಾರಿಯಿರಬೇಕಂತೆ. ಏಮಾರಿದರೆ ಬದುಕಿನ ಗಾಲಿಗೆ ಬೀಳುವ ಪೆಟ್ಟಿನ ಘಾಸಿಯನ್ನು ಮೊದಲೆ ಅರಿತು, ನಿರೀಕ್ಷಿಸಿ, ನಿಯಂತ್ರಿಸಿ ನಿಭಾಯಿಸಿಕೊಂಡು ಹೋಗಬೇಕಂತೆ.. ಇಲ್ಲೂ ಸರಿಯಾಗಿ ಸಂಭಾಳಿಸಿಕೊಂಡು ಹೋದರೆ ಭವಿಷ್ಯದ ಸುಗಮ ಚಾಲನೆಗೊಂದು ಸುಲಲಿತ ಬಂಡಿಯೇರಿದ ನಿರಾಳ. ಕೆಲವರು ತಾವೆ ಹುಡುಕಿಕೊಂಡು ಫ್ರೆಂಡು ಮಾಡಿಕೊಂಡರೆ ಮಿಕ್ಕವರಿಗೆ ಹಿರಿಯರ ಸಾರಥ್ಯದಲ್ಲಿ ಜತೆಯಾಗುವ ಭಾಗ್ಯ. ಹೇಗಾದರು ಕ್ಲಿಕ್ಕಾದರೆ ಸುಖ, ಕಿಕ್ಕಾದರೆ ನರಕ.
ಒಟ್ಟಾರೆ ಬಾಯಿ-ಫ್ರೆಂಡು ಮತ್ತು ಬಾಯ್-ಫೆಂಡು ಎರಡೂ ಒಟ್ಟಾಗಿ ಹಿಟ್ ಆಗುವ ಸೌಭಾಗ್ಯ ದೊರಕಿದರೆ ಅವರದು ಪುಣ್ಯವಂತರ ಸಂತತಿಯೆಂದೆ ಹೇಳಬೇಕು. ಎಲ್ಲರಿಗೂ ದೊರಕದ ಆ ಭಾಗ್ಯಕ್ಕೆ ವಿಶೇಷ ಅಭಿನಂದನೆಯನ್ನು ಸಲ್ಲಿಸಬೇಕು.
ಅದೆಂತೆ ಇದ್ದರೂ, ಈ ಎರಡು 'ಬಾಯ್'ಗಳ ದ್ವಂದ್ವವನ್ನು ಸ್ವಲ್ಪ ಕಲಸು ಮೇಲೋಗರ ಮಾಡಿದ ಒಂದು ಕಿಚಡಿ ಕವನ ಈ ಕೆಳಗೆ - ಸ್ವಲ್ಪ ತಲೆ ಕೆರೆದುಕೊಳ್ಳುತ್ತಲೆ ಯಾವ ಸಾಲಿನ ಪದಕ್ಕೆ ಯಾವ 'ಬಾಯಿ' ಅಪ್ಲೈ ಆಗುತ್ತದೆನ್ನುವುದನ್ನು ನೀವೆ ನಿರ್ಧರಿಸಿಕೊಳ್ಳಿ :-)
ಬಾಯಿ ಫ್ರೆಂಡು..!
____________________________________
ನಿನಗೆ ನಿನ್ನ ಬಾಯಿ ಫ್ರೆಂಡು
ಆಡಾಡಿದಂಗೆ ಮಾತ ಗುಂಡು
ಬರಿ ಬಾಯ್ಬಿಟ್ಟರೆ ಬಣ್ಣಗೇಡು
ಸರಿ ನೋಡಿಕೊ ಆಗದಂತೆ ಕೇಡು ||
ಬಾಯ್ಫ್ರೆಂಡಿಗೆ ಮಣೆ ಮನ್ನಣೆ
ಬಾಯಿಗಳದೆ ಸಂಸಾರ ಹೊಣೆ
ಸಿಕ್ಕಿದರೆ ಸರಿ ಬಾಯ್ ಜೊತೆ
ಸಿಕ್ಕಾಗ ನವಜೀವನ ಸಂಪತ್ತೆ ||
ಬಾಯ್ ಫ್ರೆಂಢಿಲ್ಲದ ಬದುಕೆ
ತರತರದ ಯಾತನೆ ತದುಕೆ
ಪ್ರಾಯದ ಪರಿಪಕ್ವತೆ ಜೊತೆ
ಮಾಗಿದ ಮಾತಿಲ್ಲದೆ ಸೋತೆ ||
ಫ್ರೆಂಡಾಗದು ಸುಖಾಸುಮನೆ
ಗಂಡಾಗದು ಮೂಲೆಯ ಕೊನೆ
ಬಾಯಿಲ್ಲದೆ ಬದುಕದು ಕಾಲ
ಫ್ರೆಂಡಾಗಿಸಿಕೊ ಬಿಚ್ಚಿಸದೆ ಬಾಲ ||
ತಿರುಗಾಡಬೇಕು ಹೊರಗೆಲ್ಲ
ಬಾಯ್ ಫ್ರೆಂಡಿರೆ ಚಿಂತೆಯಿಲ್ಲ
ಹದ್ದುಬಸ್ತಿನಲಿರೆ ಬಾಯಿ ಫ್ರೆಂಡು
ಶಿಸ್ತು ಗಸ್ತಿನಲಿರೆ ಚಿನ್ನದ ತುಂಡು ||
Comments
ಉ: ಬಾಯಿ ಫ್ರೆಂಡು..!
ಹೊಂಗೆ ಮರದಡಿಯಲ್ಲಿರುವ ಕತೆಯ ನಾಗೇಶ್ ಮೈಸೂರು ನೀವೇನಾ
In reply to ಉ: ಬಾಯಿ ಫ್ರೆಂಡು..! by partha1059
ಉ: ಬಾಯಿ ಫ್ರೆಂಡು..!
ಪಾರ್ಥಾ ಸಾರ್ ನಮಸ್ಕಾರ - ಹೌದು ಅದು ನಾನೆ. ಆದರೆ ಪುಸ್ತಕವಿನ್ನು ನೋಡಲಾಗಿಲ್ಲ - ಹೊರದೇಶದಲ್ಲಿರೊ ಕಾರಣ.
ಕಥೆ ಓದಿದಿರಾ? ಸುಮಾರಾಗಿಯಾದರೂ ಇದಿಯಾ? :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಬಾಯಿ ಫ್ರೆಂಡು..! by nageshamysore
ಉ: ಬಾಯಿ ಫ್ರೆಂಡು..!
ಚೆನ್ನಾಗಿದೆ :)
ಆಸ್ತಿಯ ಗಳಿಕೆಯು ಅಸ್ಟೆ ವಯಸಾಯಿತು ಅಂದರೆ ನಾವು ಗಳಿಸಿದ ಆಸ್ತಿಯ ಮೇಲೆ ನಮಗೆ ಯಾವ ಒಡೆತನವು ಇರುವುದು ಇಲ್ಲ,
ಇದು ಲೌಕಿಕವಾಗಿ ಸಹ ಸತ್ಯ !
ಅದೇ ಪುಸ್ತಕದಲ್ಲಿಯೆ ನನ್ನ ಕತೆ ಸಹ ಒಂದಿದೆ !
ಪಾರ್ಥಸಾರಥಿ
In reply to ಉ: ಬಾಯಿ ಫ್ರೆಂಡು..! by partha1059
ಉ: ಬಾಯಿ ಫ್ರೆಂಡು..!
ಸೂಪರ್..! ನಿಮಗೂ ಅಭಿನಂದನೆಗಳು :-)
ನಾ ಊರಿಗೆ ಬಂದಾಗ ಪುಸ್ತಕ ತಂದು ಓದ್ತೀನಿ. ಒಂದು ಮಿಂಚಂಚೆಯಲ್ಲಿ ಆಯ್ಕೆಯಾದ ಕಥೆಗಾರರ ಹೆಸರನ್ನೆಲ್ಲ ಕಳಿಸಿದ್ದ ಹಾಗೆ ನೆನಪು . ನಾ ಎಲ್ಲರ ಹೆಸರನ್ನ ಗಮನಿಸಲಿಲ್ಲವಾಗಿ ಗೊತ್ತಾಗದೆ ಹೋಯ್ತು. ಪುಸ್ತಕ ಬಿಡುಗಡೆ ಸಮಾರ!ಭಕ್ಕೆ ಹೋಗಿದ್ದಿರಾ ?
In reply to ಉ: ಬಾಯಿ ಫ್ರೆಂಡು..! by nageshamysore
ಉ: ಬಾಯಿ ಫ್ರೆಂಡು..!
ಈ ಮೈಲ್ ವಿಳಾಸ ಕಳಿಸಿದರೆ ಸೂಕ್ತ !
ಈ ವೇದಿಕೆ ಇಲ್ಲಿಯ ಬರಹಗಳ ಅಭಿಪ್ರಾಯಕ್ಕೆ ಸೀಮಿತ
ನನ್ನ email addr : partha1059@gmail.com
In reply to ಉ: ಬಾಯಿ ಫ್ರೆಂಡು..! by partha1059
ಉ: ಬಾಯಿ ಫ್ರೆಂಡು..!
ಪಾರ್ಥಾ ಸಾರ್, ನಿಮ್ಮ ಮಾತು ನಿಜ..ಇ ಬೇರೆ ಇಮೇಲ್ ಕಳಿಸುತ್ತೇನೆ :-)
ಉ: ಬಾಯಿ ಫ್ರೆಂಡು..!
ಎರಡು ವಿಭಿನ್ನ ಆಯಾಮಗಳನ್ನು ಒಂದೇ ಪದದಲ್ಲಿ ಕಟ್ಟಿ ಕೊಟ್ಟ ಬರಹ ಬಹಳ ಚೆನ್ನಾಗಿತ್ತು ನಾಗೇಶರೇ,,,,
In reply to ಉ: ಬಾಯಿ ಫ್ರೆಂಡು..! by naveengkn
ಉ: ಬಾಯಿ ಫ್ರೆಂಡು..!
ಬಾಯ್ ಬಿಟ್ರೆ ಬಣ್ಣಗೇಡು..!!
ಸತ್ಯ ...
ಈಗೀಗ ಹಲವರು ಹಲವಾರು ವಿಷ್ಯಗಳ ಬಗ್ಗೆ ತೋಚಿದ್ದು ಮಾತಾಡುತ್ತಿರುವ ಸಂದರ್ಭದಲ್ಲಿ ಸಕಾಲಿಕ ಕುಟುಕು ಚುಟುಕು ಬರಹ ....
ಮಾತೇ ಮಾಣಿಕ್ಯ ,
ಅದು ಅರಿತವನೇ ಚಾಣಕ್ಯ ..!!
ಶುಭವಾಗಲಿ
\\\|||///
In reply to ಉ: ಬಾಯಿ ಫ್ರೆಂಡು..! by venkatb83
ಉ: ಬಾಯಿ ಫ್ರೆಂಡು..!
ನಮಸ್ಕಾರ ಮತ್ತು ಧನ್ಯವಾದಗಳು ಸಪ್ತಗಿರಿಗಳೆ :-) ಈಗ ಅರ್ಧ ಜಗ ನಡೆಯುವುದೆ ಬಾಯಿಯ ಶಕ್ತಿಯ ಮೇಲೆ ; ಸರಕು ಹಳಸಲಿದ್ದರೂ ಬಣ್ಣದ ಮಾತಾಡಿ ನಂಬಿಸುವ ತಾಕತ್ತಿದ್ದರೆ ಮಾರಾಟವಾಗುತ್ತದೆಯೆನ್ನುವ ಮಾರ್ಕೆಟಿಂಗ್ ಯುಗ
ಅಂದಹಾಗೆ ನೀವು ಸೂಚ್ಯವಾಗಿ ನುಡಿದ ವಿಷಯದ ಕುರಿತಾದ ನನ್ನದೊಂದು ಹಾಸ್ಯ ವಿಡಂಬನೆಯು ನಿಲುಮೆಯಲ್ಲಿ ನಿನ್ನೆ ಪ್ರಕಟವಾಗಿದೆ ( ಗುಬ್ಬಣ್ಣನ ಹರಟೆಯ ರೂಪದಲ್ಲಿ) :-)
In reply to ಉ: ಬಾಯಿ ಫ್ರೆಂಡು..! by naveengkn
ಉ: ಬಾಯಿ ಫ್ರೆಂಡು..!
ನಮಸ್ಕಾರ ನವೀನ್ ರವರೆ, ಎರಡು ಒಂದಕ್ಕೊಂದು ಸಂಬಂಧವಿರದ ಆಯಾಮಗಳೆ ಆದರೂ ಕೇವಲ ಪದಲಾಸ್ಯದ ಕಾಕತಾಳೀಯತೆಯಿಂದಾಗಿ ಸ್ಪುರಿಸಿದ ಸಾಲುಗಳಷ್ಟೆ. ತಮ್ಮ ಮೆಚ್ಚುಗೆಗೆ ಧನ್ಯವಾದಗಳು :-)
ಉ: ಬಾಯಿ ಫ್ರೆಂಡು..!
ಹ್ಹ.. ಹ್ಹ...ನಾಗೇಶರೆ, ನಿಮ್ಮ ಹೊಸ ಬಾಯ್ಫ್ರೆಂಡ್ ಕತೆ/ಕವನ ಚೆನ್ನಾಗಿದೆ :)
ನುಡಿದರೆ ಮುತ್ತಿನ ಹಾರದಂತಿರಬೇಕು ಅಂತಾರೆ...ಅಂತಾ ಇದ್ರು. ಆ ಕಾಲ ಹೋಯಿತು. ಈಗ-
ನುಡಿದರೆ ವಾರದೊಳಗೆ ಒಂದೆರಡಾದರೂ ತಲೆಹಾರಬೇಕು.. ಇದೀಗ ಕೆಟ್ಟಬಾಯ್ಫ್ರೆಂಡ್ಗಳ ಕಾಲ..ಅವರದೂ ತಪ್ಪಿಲ್ಲ. ನೂರಾರು ಸಮಾರಂಭಗಳು, ಹಲವಾರು ಸಂದರ್ಶನಗಳು, ಗೊತ್ತಿರುವ/ಗೊತ್ತಿಲ್ಲದ ಎಲ್ಲಾ ವಿಷಯಗಳ ಬಗ್ಗೆ ಅಭಿಪ್ರಾಯ ಕೇಳುವ ಟಿವಿ ಮಾಧ್ಯಮದವರು...ಮೆದುಳಿಗೂ ಬಾಯಿಗೂ ಕನೆಕ್ಷನ್ನೇ ಕಟ್ ಆಗಿದೆಯೋ ಅನಿಸುತ್ತದೆ. ಇರಲಿ...ನಿಮ್ಮ ಬಾಯ್ಫ್ರೆಂಡ್ ಐಡಿಯಾಕ್ಕೆ ಜೈ :)
>>>>>>>>>>>>>>>>>>>>
ಸಂಪದದ ಹೊಸ ಅವತಾರ ಚೆನ್ನಾಗಿದೆ. ಒಟ್ಟೊಟ್ಟಿಗೆ ರುಚಿ ಸಂಪದದ ಚಿತ್ರಗಳು ಈ ನಡು ರಾತ್ರಿಯಲ್ಲೂ ಹಸಿವು ಜಾಸ್ತಿ ಮಾಡಿತು. :)
ಲಾಗಿನ್ ಆಗಲು ಪಾಸ್ವರ್ಡ್ ಎಲ್ಲಾ ಕೊಟ್ಟಮೇಲೆ ಈ "captcha" ನೋಡಿರಲಿಲ್ಲ. ಅದೂ ನನ್ನ ನೆಟ್ ವರ್ಕ್ ಸರಿ ಇಲ್ಲದಿದ್ದುದರಿಂದ ಚಿತ್ರ ಕಾಣಿಸುತ್ತಿದೆ, ಟಿಕ್ ಮಾಡಲು ಕಾಣಿಸುವುದಿಲ್ಲ... ಅಂತೂ captcha ಆಡಲು ಚೆನ್ನಾಗಿದೆ. :)
ಒಂದು ಸಲ ಮಾತ್ರವಾ, ಅಥವಾ ಪ್ರತೀ ಸಲವೂ ಎಂಟರ್ ಆಗುವಾಗ captcha ಆಡಬೇಕಾ...ಮುಂದಿನ ಸಲ ನೋಡಬೇಕು.
ಸಂಪದದ ಹೊಸರೂಪ ಇಷ್ಟವಾಯಿತು.
In reply to ಉ: ಬಾಯಿ ಫ್ರೆಂಡು..! by ಗಣೇಶ
ಉ: ಬಾಯಿ ಫ್ರೆಂಡು..!
ಗಣೇಶ್ ಜಿ ನಮಸ್ಕಾರ ಮತ್ತು ಧನ್ಯವಾದಗಳು.. ಬಾಯಿ ಫ್ರೆಂಡು ಎಲ್ಲಾ 'ಬಾಯಿ'ಗಳಿಗೂ ಹೊಂದುವುದರಿಂದ ಅದನ್ನೆ ಬಳಸಿ ಹೊಸೆದೆ :-)
ಅಂದ ಹಾಗೆ ಹೊಸ ಲಾಗಿನ್ ನಿಂದ ನನಗು ತೊಡಕುಂಟಾಗಿದೆ. ನಾ ಬಳಸುವ ಐಪ್ಯಾಡ್, ಐ ಫೊನುಗಳಲ್ಲಿ
ಇದ್ದಕ್ಕಿದ್ದ ಹಾಗೆ ಸಂಪದದಲ್ಲಿ ಲಾಗ್ ಇನ್ ಮಾಡಲು ಆಗುತ್ತಿಲ್ಲ (ಐ ಪ್ಯಾಡ್ ಏರ್ ನ ಮೂಲಕ, ಚೈನಾದಿಂದ) . ಲಗ್ ಇನ್ ಆದ ಮೇಲೆ CAPTCHA ಎಂಟರ್ ಮಾಡಬೇಕೆಂಬ ಮಾಹಿತಿ ತೋರಿಸುತ್ತದೆ. ಆದರೆ ಅಲ್ಲಿ ಆ ಮಾಹಿತಿಯ ಟೆಕ್ಸ್ಟಿನ ಹೊರತಾಗಿ ಮತ್ತೇನೂ ಕಾಣುವುದಿಲ್ಲ. ಕ್ಲಿಕ್ಕು ಮಾಡಿದರು ಯಾವ ಪಾಪ್ - ಅಪ್ ಪರದೆಯೂ ಬರುವುದಿಲ್ಲ.. ಹೀಗಾಗಿ ಹೊಸ ಬರಹ ಪೋಸ್ಟ್ ಮಾಡಲು ಆಗುತ್ತಿಲ್ಲ. ಈ ಕಾಮೆಂಟನ್ನು ಬೇರೆ ಕಂಪ್ಯೂಟರಿನಿಂದ ಕಳಿಸುತ್ತಿದ್ದೇನೆ. ಏನೊ ತಾಂತ್ರಿಕ ಅಡಚಣೆ ಇರುವಂತೆ ತೋರುತ್ತಿದೆ..
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಬಾಯಿ ಫ್ರೆಂಡು..! by ಗಣೇಶ
ಉ: ಬಾಯಿ ಫ್ರೆಂಡು..!
ಗಣೇಷ್ ಸಾರ್ ನಮಸ್ಕಾರ
ಸಂಪದದಲ್ಲಿ ನೀವು ಹೇಳುವಂತೆ ಅದೇನೊ captcha ನನಗೂ ಸಂದೇಹವಾಯಿತು
ನಾನು ರೋಬಾಟ್ ಅಲ್ಲ ಎಂದು ಟಿಕ್ ಮಾಡಲು ಮಾತ್ರ ಅವಕಾಶವಿದೆ.
ನಾನು ರೋಬಾಟ್ ಆಗಿದ್ದಲ್ಲಿ ಏನು ಮಾಡಬೇಕೆಂದೆ ಹರಿಪ್ರಸಾದ್ ನಾಡಿಗ್ ರವರು ಹೇಳಿಲ್ಲ :)
:= ಪಾರ್ಥಸಾರಥಿ
In reply to ಉ: ಬಾಯಿ ಫ್ರೆಂಡು..! by partha1059
ಉ: ಬಾಯಿ ಫ್ರೆಂಡು..!
ನಾನೂ ಹಲವು ದಿನಗಳಿಂದ ಲಾಗಿನ್ ಆಗಲು ಪ್ರಯತ್ನಿಸಿ, ಕ್ಯಾಪ್ಚಾ ಟಿಕ್ ಮಾಡಿದರೂ ವಿಫಲನಾಗ್ತಾ ಇದ್ದೆ. ಈ ದಿನ ನಾನು ರೋಬೋಟ್ ಅಲ್ಲ ಅಂತ ಟಿಕ್ ಮಾಡಿ ಪಾಸ್ವರ್ಡ್ಗೆ ಬಂದು ಎಂಟರ್ ಒತ್ತಿದಾಗ ಲಾಗಿನ್ ಆಯಿತು. ಇದರಲ್ಲಿ ಏನೋ ಸಮಸ್ಯೆ ಇರುವಂತಿದೆ. ಈ ಬಗ್ಗೆ ಒಂದು ಮೈಲೂ ಕಳಿಸಿದ್ದೇನೆ. ಈ ಮಧ್ಯೆ ನಾನು ಯಾವುದಕ್ಕೆ ಪ್ರತಿಕ್ರಿಯೆ ಬರೆಯಲು ಹೊರಟಿದ್ದೆ ಎಂದು ಮರೆತುಹೋಗಿದೆ!
ಉ: ಬಾಯಿ ಫ್ರೆಂಡು..!
ಕೃತಿಯಲ್ಲಿನ ಕೊರತೆ ಮುಚ್ಚುವುದು ಬಾಯಿ! ಬಾಯಿದ್ದವರು ಬರದಲ್ಲೂ ಬದುಕುವರಂತೆ! ಬಾಯಿದ್ದವರು ಕೆಲಸ ಮಾಡದೆ ಶಹಭಾಸಗಿರಿ ಗಿಟ್ಟಿಸಿದರೆ, ಕೆಲಸ ಮಾಡಿಯೂ ಬಾಯಿ ಇರದವರು ಮೂಲೆಗುಂಪಾಗುವರು!!ಬಾಯಿಯ ಮಹಿಮೆಯಿದು!!
In reply to ಉ: ಬಾಯಿ ಫ್ರೆಂಡು..! by kavinagaraj
ಉ: ಬಾಯಿ ಫ್ರೆಂಡು..!
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಬಾಯ್ ಮತ್ತು ಬಾಯಿಗಳ ಮಹಿಮೆ ಈ ಡೋಂಗಿತನವೆ ಪ್ರಧಾನವಾಗಿರುವ ಆಧುನಿಕ ಕಾಲದಲ್ಲಿ ಹೆಚ್ಚು ಚಲಾವಣೆಯಲಿರುವ ನಾಣ್ಯ. ಹೀಗಾಗಿ ಕೃತಿಯಿರದಿದ್ದರು ಬಾಯಿದ್ದರೆ ಸಾಕು, ಬದುಕಬಲ್ಲ ವಿಕೃತಿಯದೆ ರಾಜಾರೋಷ. ಒಟ್ಟಾರೆ ಎಲ್ಲವನ್ನು ಸರಿತೂಗಿಸಬಲ್ಲ ರೀತಿಯ ಬಾಯ್-ಫ್ರೆಂಡಿರುವತನಕ ಭಯವಿಲ್ಲ ಅನ್ನಿ :-)