ಬಾಳಿಗೊಂದು ಚಿಂತನೆ - 118

ಬಾಳಿಗೊಂದು ಚಿಂತನೆ - 118

ಏನೂ ತಿಳಿಯದ, ಅರಿವಿರದ ಓರ್ವನಿಗೆ ತಿಳಿಸುವುದು, ಬೋಧಿಸುವುದು ಸುಲಭ. ಆತನ ಮನಸ್ಸು ನಿರಾಳ ಮತ್ತು ಪರಿಶುದ್ಧವಾಗಿರುತ್ತದೆ. ಎಲ್ಲವನ್ನೂ ತಿಳಿದವನಿಗೆ ಹೇಳುವುದು ಮತ್ತೂ ಸುಲಭ. ಸ್ವಲ್ಪತಿಳಿದವ, ಅಲ್ಪ ಜ್ಞಾನಿಯ ಹತ್ತಿರ ವ್ಯವಹಾರ ಮಾಡುವಾಗ ಉಡಾಫೆ ಗುಣ ಕಾಣಬಹುದು. ಇಂಥವರಿಗೆ ಬೋಧಿಸುವುದು ಬಹಳ ಕಷ್ಟ. ಇವರನ್ನು ಒಪ್ಪಿಸುವುದು ಸಹ ಕಷ್ಟ. ಗರ್ವ, ಅಹಂ ಸೇರಿಕೊಂಡು ಹೇಳಿದ್ದನ್ನು ಕೇಳುವ ಸ್ವಭಾವ ಅವರಲ್ಲಿ ಇಲ್ಲ. ಅಂಥವರ ಕೈಗೆ ಅಧಿಕಾರ ಸಿಕ್ಕರೆ ಎಲ್ಲವೂ ಮುಗಿದ ಹಾಗೆ.

*ಅಜ್ಞ:ಸುಖಮಾರಾಧ್ಯ*

*ಸುಖತರಮಾರಾಧ್ಯತೇ ವಿಶೇಷಜ್ಞ:/*

*ಜ್ಞಾನಲವದುರ್ವಿದಗ್ಧಂ*

*ಬ್ರಹ್ಮಾಪಿ ನರಂ ನ ರಂಜಯತಿ*//

ಭತೃಹರಿಯ ನೀತಿ ಶತಕದ ಈ ಶ್ಲೋಕದಂತೆ ಇದನ್ನುಹೇಳುತ್ತಾ, ವಿಶೇಷಜ್ಞನಿಗೆ ಸಂತೋಷ ತರಲೂ ಮತ್ತೂ ಸುಲಭ, ತಿಳಿಯದವನಿಗೆ ತಿಳಿಸುವುದು ಸುಲಭ, ಆದರೆ ಅಲ್ಪಜ್ಞಾನದಿಂದ ಕೊಬ್ಬಿದವನನ್ನು  ಸಾಕ್ಷಾತ್ ಬ್ರಹ್ಮನಿಗೂ ಸರಿಪಡಿಸಲು ಸಾಧ್ಯವಿಲ್ಲ. ಈ ಅಲ್ಪರು ಯಾರು ಹೇಳಿದ್ದನ್ನು ಕೇಳಲಾರರು. ತಾನೇ ಸರ್ವಜ್ಞ ಎನ್ನುವರು. ಹಾಗಾಗಿ ಸಾಧ್ಯವಿದ್ದರೆ ಅವರ ಮನಸ್ಸನ್ನು ಪರಿವರ್ತನೆ ಮಾಡುವ. ಇಲ್ಲದಿದ್ದರೆ ಅವರಿಂದ ಸ್ವಲ್ಪ ದೂರವೇ ಇರುವುದು ಕ್ಷೇಮ. ಅಹಂಗೆ ಮದ್ದಿಲ್ಲ. ಹಿರಿಯ ಅನುಭವಿಗಳು ಹೇಳಿದಂತೆ 'ಅಹಂಕಾರಕ್ಕೆ ಉದಾಸೀನವೇ ಮದ್ದು'. ಇಲ್ಲದಿದ್ದರೆ ನಾವು ಮಾಡುವ ಕರ್ತವ್ಯ ಮಾಡಬೇಕು. ಮಾತ್ರ ನಿಯತ್ತಿರಲಿ. ನಮಗೆ ನಾವೇ ಮೋಸಮಾಡಬಾರದು. ಆತ್ಮಶುದ್ಧವಿರಲಿ. ಪ್ರಳಯವಾಗಲಿ, ಮಳೆ ಬರಲಿ, ಬಿಸಿಲಿರಲಿ, ಭೂಕಂಪವಾಗಲಿ ಸೂರ್ಯ ಚಂದ್ರ, ಆಕಾಶಕಾಯಗಳು ತಮ್ಮ ಪಥವ, ತಮ್ಮ ಕರ್ತವ್ಯವ ಮಾಡದಿರದ ಉದಾಹರಣೆ ಇದೆಯೇ? ಪ್ರಕೃತಿ ಯಾವತ್ತೂ ತನ್ನ ಕೆಲಸವನ್ನು ಮರೆಯುವುದಿಲ್ಲ. ಕ್ರಿಮಿಕೀಟಗಳಿಂದ, ಪ್ರಾಣಿಪಕ್ಷಿಗಳಿಂದ ನಾವು ಕಲಿಯುವುದು ಬಹಳಷ್ಟಿದೆ. ನಾವು ನಮ್ಮ ಜೀವನದ ಹಾದಿಯನ್ನು ಅವುಗಳನ್ನು ನೋಡಿಯಾದರೂ ಬದಲಾಯಿಸಿಕೊಂಡು ರೂಪಿಸಿಕೊಳ್ಳೋಣ.

-ರತ್ನಾ ಭಟ್ ತಲಂಜೇರಿ 

 (ಶ್ಲೋಕ: ನೀತಿಶತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ