ಬಾಳಿಗೊಂದು ಚಿಂತನೆ - 233

ಬಾಳಿಗೊಂದು ಚಿಂತನೆ - 233

'ನಂಬಿಕೆ' ಎನ್ನುವ ಮೂರಕ್ಷರದಲ್ಲಿ ಬದುಕೇ ಅಡಗಿದೆ ಎಂದರೂ ತಪ್ಪಾಗಲಾರದ 'ನಂಬಿ ಕೆಟ್ಟವರಿಲ್ಲವೋ' ದಾಸವಾಣಿ ಕೇಳಿದ್ದೇವೆ. ಯಾರನ್ನು, ಯಾವಾಗ, ಎಷ್ಟು ನಂಬಬೇಕು ಅದು ಅವರವರಿಗೆ ಬಿಟ್ಟ ವಿಚಾರ. ಓರ್ವ ಪೂರ್ತಿ ಮೋಸಹೋಗುವಲ್ಲಿವರೆಗೂ ನಂಬುವುದಿದೆ. ಅದು ಅವನ ಮೂರ್ಖತನವೋ, ಅನುಕಂಪವೋ ಹೇಳಲಾಗದು. 'ನಾಲಿಗೆಯೊಳು ನಂಬಿಕೆ ಅಡಗಿದೆ' ಆಡುವ ಮಾತುಗಳು ನಯವಂಚನೆಯಿಂದ ಕೂಡಿದಾಗ ಅರಿವಿಗೆ ಬಾರದೆ ಹೊಂಡಕ್ಕೆ ಬಿದ್ದವರೂ ಬಹಳಷ್ಟು (ನನ್ನನ್ನೂ ಸೇರಿಸಿ) ಬಿದ್ದವರಿರಬಹುದು. ಹಣಕಾಸಿನ ವಿಷಯದಲ್ಲಿ ಹೇಳಿ ಸುಖವಿಲ್ಲ. ನಂಬಿಕೆ, ವಿಶ್ವಾಸವಿಟ್ಟು ಕಷ್ಟಕಾಲದಲ್ಲಿ ಸಹಾಯ ಮಾಡಿದರೆ ನೆನಪೇ ಇಲ್ಲದ ಕೃತಘ್ನರಾಗುತ್ತಾರೆ. ಅವರೇ ನಮಗೆ ಕೈಗಡ ,ಸಾಲ ಕೊಟ್ಟ ಹಾಗೆ ಮಾಡುವವರೂ ಇದ್ದಾರೆ.ನನ್ನ ಪರಿಚಯದವರೊಬ್ಬರು ಹಳ್ಳಿಯಲ್ಲಿ ಉತ್ತಮ ವೃತ್ತಿಯಲ್ಲಿದ್ದಾರೆ. ಎಲ್ಲರಿಂದಲೂ ಹಣ ಪಡೆದು ಪುನ: ಹಿಂದಿರುಗಿಸುವ ಅಭ್ಯಾಸವಿಲ್ಲ. ಮಾತಿನಲ್ಲಿ ನಯವಂಚಕರು. ಕೆಲಸ ಇದ್ದ ಕಾರಣ ಕೊಟ್ಟಾರೆಂದು ನಂಬಿ ಸಾಲ ಕೊಟ್ಟವರೆಲ್ಲ ಮೇಲೆ ನೋಡುವಂತಾಗಿದೆ. ನಯಾಪೈಸೆ ಕೊಡದ ಅವರು ರಾಜಾರೋಷವಾಗಿ ಮೋಟಾರ್ ಬೈಕಿನಲ್ಲಿ,ಕಾರಿನಲ್ಲಿ ಓಡಾಡುತ್ತಾ, ಐಷಾರಾಮಿ ಸ್ವಂತ ಮನೆಯನ್ನು ಸಹ ನಿರ್ಮಿಸಿದ್ದಾರೆ. ಇದು ಕಲಿಗಾಲದ ಮಹಿಮೆಯೇ ಇರಬೇಕು.

ಮಾತಿನಲ್ಲಿ, ಕೃತಿಯಲ್ಲಿ, ಸ್ನೇಹ ವಿಶ್ವಾಸದಲ್ಲಿ 'ನಂಬಿಕೆ' ಮುಖ್ಯ. ನಂಬಿಕೆಯ ಬೇರುಗಳು ಗಟ್ಟಿಯಾಗಿದ್ದರೆ ಯಾರಿಗೂ ಸಹ ಏನೂ ಮಾಡಲಾಗದು. ನಂಬಿಕೆ ಒಮ್ಮೆ ಹೋಯಿತೆಂದರೆ ಎಲ್ಲವೂ ಬುಡಮೇಲು. ಅನಂತರ ಎಷ್ಟು ಹೇಳಿದರೂ ಮೊದಲಿನಂತಾಗದು. 'ಒಡೆದ ಕನ್ನಡಿ ಜೋಡಿಸಿ ಮುಖ ನೋಡಿದಂತಾಗಬಹುದು.' ಓರ್ವ ಕಲಾವಿದರೊಬ್ಬರು ಹೀಗೆ ಒಂದು ಸಮಾರಂಭದಲ್ಲಿ ಭೇಟಿಯಾದಾಗ ಹೇಳಿದ ಮಾತು (ಅವರ ಒಡಲಾಳದ ನೋವಿನ ಧ್ವನಿ ಆಗಿತ್ತು.) ಎಲ್ಲಾ ಸಾಹಿತ್ಯದ ಪ್ರಕಾರಗಳನ್ನು ಕಲಿತು ಹಿಡಿತ ಸಾಧಿಸಿದ ಮೇಲೆ ಈಗ ಬದ್ಧ ವಿರೋಧಿಯ ಹಾಗೆ ನೋಡ್ತಾ ಇದ್ದಾನೆ.ಅದೂ ಅಲ್ಲದೆ ಆ ಸಾಹಿತಿಯನ್ನು ವೇದಿಕೆಗೆ ಬರಿಸ್ಬೇಡಿ ಎಂದು ಅಪಪ್ರಚಾರ ಮಾಡ್ತಾನಂತೆ. ಮರ ಏರಲು ಏಣಿ ಬಳಸಿ, ಹತ್ತಿದ ಮೇಲೆ ಏಣಿಯನ್ನು ಕೆಳಗೆ ದೂಡಿದಂತಿರುವವರು ಎಲ್ಲಾ ರಂಗದಲ್ಲೂ ಇದ್ದಾರೆ ನಮ್ಮೆದುರೇ. ಅಂಥವರನ್ನು ಬೇಡದ ವಸ್ತುವನ್ನು,ಕೆಟ್ಟ ವಿಚಾರಗಳನ್ನು ಸುಟ್ಟು ಬಿಡುವಂತೆ ಸುಟ್ಟುರುಹಬೇಕು. ಇಲ್ಲಿ ನಂಬಿಕೆ ಇದೆಯೋ ಅಲ್ಲಿ ವಾದ-ವಿವಾದ-ಮಾತುಕತೆಗಳಿಗೆ,ಚರ್ಚೆಗಳಿಗೆ ಬೆಲೆಯಿದೆ .ಇಲ್ಲದಲ್ಲಿ ವಾದಿಸಲೇ ಬಾರದು. 'ನಂಬಿಕೆ ದ್ರೋಹ' ಎನ್ನುವುದು 'ಹಲ್ಲಿಲ್ಲದ ಗರಗಸದಂತೆ, ಕಂಡೂ ಕಾಣದಂತೆ'.  ಚೇಳಿನ ವಿಷ ಮೊದಲು ಗೊತ್ತಾಗದು,ಅನಂತರ ಮೆಲ್ಲಮೆಲ್ಲನೆ ಮೇಲೇರುವುದು ,ಹಾಗೆಯೇ ಈ ನಂಬಿಕೆ ಸಹ.ಅವರಿಗೆ ಸಜ್ಜನ ಬಂಧುಗಳನ್ನು ನೋಯಿಸುವುದರಲ್ಲಿಯೇ ಒಂದು ರೀತಿಯ ಸುಖ.ಹಾಗಾದರೆ ನಾವು ಮಾಡಬೇಕಾದ್ದೇನು? ಯಾವುದಕ್ಕೂ ತಲೆಕೊಡದೆ, ಮನಸು ಹಾಳು ಮಾಡದೆ, ಚಿಂತೆಯ ಕೈಗೆ ಬುದ್ಧಿಯನ್ನು ಕೊಡದೆ ಪ್ರಾಮಾಣಿಕ ಕರ್ತವ್ಯ ಮಾಡುವುದನ್ನು ಬದುಕಿನ ಮಜಲುಗಳಲ್ಲಿ ಅಳವಡಿಸಿಕೊಂಡು ಬಲವಾದ ಹೆಜ್ಜೆಗಳನ್ನು ಊರಬೇಕು.

*ವಿಜಯದಾಸರ ಒಂದು ರಚನೆ*

*ಹೆತ್ತ ಮಕ್ಕಳಿಗೆ ಎತ್ತಿ ವಿಷ ಹಾಕಿದರೆ*

*ಪೆತ್ತ ತಂದೆಯು ಹೊರಗೆ ಮಾಡಿದರೆ*

*ತೊತ್ತು ಅರಸಿಗೆ* *ಪ್ರತ್ಯುತ್ತರವನಾಡಿದರದಕೆ*

*ಕತ್ತಲೆ ಬೆನ್ನತ್ತಿ ಕರಡ್ಯಾಗಿ ಬಂದರೆ--ಆರೇನು ಮಾಡುವರು?*

ಬ್ರಹ್ಮನ ಸೃಷ್ಟಿಯಲ್ಲಿ ಹಾವು-ಚೇಳು-ದುಷ್ಟ-ಒಳ್ಳೆಯವ,ವಿಷ-ಅಮೃತ ಎಲ್ಲವೂ ಇದೆ.ನಾವು ಅರ್ಥೈಸಿಕೊಳ್ಳುವುದರಲ್ಲಿ ಎಡವಬಾರದು.ಹಿತೈಷಿಯಂತೆ ಸೋಗಿನ ಮುಖವಾಡ ಹಾಕಿಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಯಾವತ್ತೂ ಮಾಡಬಾರದು.’ನಂಬಿಕೆ’ ಎಂಬ ಇಟ್ಟಿಗೆಗಳನ್ನು ಉರುಳದಂತೆ ನೋಡಿಕೊಂಡು  ಕಟ್ಟುವ ಕೆಲಸ ಮಾಡೋಣ.

-ರತ್ನಾ ಕೆ.ಭಟ್,ತಲಂಜೇರಿ

ದಾಸಪದ (ದಾಸಪದ ಸಂಗ್ರಹದಿಂದ)

ಚಿತ್ರ ಕೃಪೆ: ಇಂಟರ್ನೆಟ್ ತಾಣ