ಬಾಳಿಗೊಂದು ಚಿಂತನೆ - 237
ನಮ್ಮ ಬದುಕಿನ ಆಡೊಂಬಲದಲ್ಲಿ ಸುಖ-ದು:ಖ, ನೋವು-ನಲಿವು, ಚಿಂತೆ, ಸಂತಸ, ಸಡಗರ, ಸಂಭ್ರಮ ಎಲ್ಲವೂ ಅಡಕವಾಗಿದೆ. ಸಮಯ, ಸಂದರ್ಭಕ್ಕೆ ಸರಿಯಾಗಿ ನಮ್ಮ ವ್ಯವಹಾರ, ವರ್ತನೆಗಳಿರುತ್ತದೆ. ಆರೋಗ್ಯವಾಗಿದ್ದಾಗ ನೆಮ್ಮದಿಯಿರುತ್ತದೆ. ಅನಾರೋಗ್ಯ ಕಾಡಿದಾಗ ಚಿಂತೆ, ಬೇನೆ, ಬೇಸರಿಕೆಯಿರುತ್ತದೆ. ಕೈಯಲ್ಲಿ ಹಣವಿದ್ದಾಗ ಎಲ್ಲವನ್ನೂ ಕೊಳ್ಳಬಲ್ಲೆ ಎಂಬ ಹುಂಬತನ, ಒಣಧೈರ್ಯ, ನನಗ್ಯಾರು ಗಣ್ಯವೇ ಅಲ್ಲ ಎಂಬ ಧೋರಣೆ ಇಣುಕಿದರೂ ಇಣುಕಬಹುದು. ಕೈಯಲ್ಲಿ ಕಾಸಿಲ್ಲದಾಗ ಎಲ್ಲವೂ, ಎಲ್ಲರನ್ನು, ಆ ದೇವರನ್ನು ಸಹ ನೆನಪಾಗುವುದು ಸಹಜ. ಸೋಲು-ಗೆಲುವುಗಳು ಶಾಶ್ವತವೇ? ಖಂಡಿತಾ ಅಲ್ಲ. ಹಾಗಾದರೆ ಇದಕ್ಕೆಲ್ಲ ದಾರಿಯೊಂದು ಇರಲೇಬೇಕಲ್ಲ? ಅದೇ ಹಾಸಿಗೆಯಿದ್ದಷ್ಟೇ ಕಾಲು ಚಾಚುವುದು. ಕಂಡದ್ದನ್ನೆಲ್ಲ ಆಶಿಸದೆ ಇರುವುದು. ಪ್ರತಿಯೊಂದರಲ್ಲೂ ತೃಪ್ತಿ, ನೆಮ್ಮದಿ ಕಾಣುವುದು. ಎದೆಯ ಗೂಡಲಿ ಯಾವ ಚಿಂತೆಯನ್ನೂ ಬಚ್ಚಿಡದಿರುವುದು. ನೋವು-ನಲಿವುಗಳನ್ನು ಆಪ್ತರಲ್ಲಿ ಹೇಳಿ ಹೃದಯವನ್ನು ಹಗುರ ಮಾಡಿಕೊಳ್ಳುವುದು, ಗಟ್ಟಿತನವನ್ನು ಬೆಳೆಸಿಕೊಳ್ಳುವುದು. ಪ್ರಾರ್ಥನೆ, ಧ್ಯಾನ, ಮೌನ, ನಿಷ್ಠೆಯ ದುಡಿಮೆ, ಪ್ರಾಮಾಣಿಕತನ ಬದುಕಿನ ಅವಿಭಾಜ್ಯ ಅಂಗಗಳು. ಮಾತು ಬೇಕು, ಹಾಗೆಂದು ಒಡಕು ಉಂಟುಮಾಡುವ, ಮನೆ ಮುರಿಯುವ ಮಾತುಗಳಿಗೆ ತಿಲಾಂಜಲಿ ಬಿಡೋಣ.
ನಮ್ಮ ನಮ್ಮ ಅಂಗಳವನ್ನು ಮೊದಲು ಸ್ವಚ್ಛ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಮೇಲೆ ಬೇರೆಯವರ ಅಂಗಳದಲ್ಲಿ ಕಸವಿದೆಯೆಂದು ಹೇಳಬೇಕು. ಇದನ್ನು ಎಲ್ಲರೂ ಪಾಲಿಸಿದರೆ ಈ ವಿಶ್ವವೇ ಶುಚಿಯಾಗಿ ನೈರ್ಮಲ್ಯದಿಂದಿರಬಹುದು. ಯಾವಾಗಲೂ ಅಹಂ ಯಾಕೆ? ಹಣ್ಣುಗಳ ಭಾರಕ್ಕೆ ಗಿಡದ ರೆಂಬೆ-ಕೊಂಬೆಗಳು ಹೇಗೆ ಬಾಗುತ್ತದೋ ಹಾಗೆ ನಾವೂ ಬಾಗೋಣ.ತಲೆಯೆತ್ತಿ ನೋಡುವ ಸಂದರ್ಭ ಬಂದಾಗ ಮೊದಲು ಬಾಗಲು ಕಲಿತು, ಆ ಮೇಲೆ ತಲೆಯೆತ್ತಲು ಕಲಿತರೆ ನಮಗೇ ಒಳ್ಳೆಯದು. ನಮ್ಮೀ ಜೀವನವೊಂದು ಪಾಠಶಾಲೆಯಂತೆ. ಕಲಿತು ಮುಗಿಯದು.
ಮನ್ಯ ಡಿ.ವಿ.ಜಿಯವರು ಹೇಳಿದಂತೆ
*ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ*
*ಕೊರತೆಯೊಂದನು ನೀನು ನೆನೆನೆನೆದು ಕೊರಗಿ*
*ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ*
*ನರಳುವುದು ಬದುಕೇನೋ-ಮಂಕುತಿಮ್ಮ*
ನಾಲ್ಕು ಜನಕ್ಕೆ ಸಾಧ್ಯವಾದರೆ ಉಪಕಾರ ಮಾಡಬಹುದು, ಹಂಚಿ ಉಣಬಹುದು, ಅದರಲ್ಲಿ ಸಂತಸವಿದೆ. ಆದರೆ ಅಪಕಾರ ಮಾಡಬಾರದು. ಇತರರ ಕಣ್ಣೀರು ಶಾಪವಾಗಿ ಕಾಡಬಹುದು. ಬೇರೆಯವರ ಕಣ್ಣೀರು ಒರೆಸಿದರೆ ಅದು ಪುಣ್ಯದ ಕೆಲಸವಾಗಬಹುದು. ಕಣ್ಣೀರಿಗೆ ಕಾರಣರಾಗಬಾರದು. ಸರಿಯಾದ ಗುರಿಯೊಂದಿಗೆ ಸರಿಯಾದ ದಾರಿಯಲ್ಲಿ ಸಾಗಿ ಬದುಕನ್ನು ಕಟ್ಟಿಕೊಳ್ಳೋಣ.
-ರತ್ನಾ ಕೆ.ಭಟ್,ತಲಂಜೇರಿ
(ಕಗ್ಗ: ಮಂಕುತಿಮ್ಮನ ಕಗ್ಗ)
ಚಿತ್ರ ಕೃಪೆ: ಇಂಟರ್ನೆಟ್ ತಾಣ