ಬಾಳಿಗೊಂದು ಚಿಂತನೆ - 47

ಬಾಳಿಗೊಂದು ಚಿಂತನೆ - 47

"ನೀನು ಹೆದರಬೇಡ ನಾನಿದ್ದೇನೆ" ಎಂದು ಹೇಳುವುದು ಜೀವನದಲ್ಲಿ ಎಲ್ಲರಿಗೂ ಆದ ಅನುಭವ. ಹೌದು, ಎಷ್ಟು ಸಮಯವಿರಬಹುದು? ಒಂದು ಹಂತಕ್ಕೆ ಬರುವಲ್ಲಿವರೆಗೆ ಮಾತ್ರ. ಒಬ್ಬ ಇದ್ದಾನೆ ಅಂಥ ಕೈಕಟ್ಟಿ ಕುಳಿತರೆ ಹೇಗೆ? ಅವನ ಅನ್ನದ ದಾರಿ ಅವನೇ ಹುಡುಕಬೇಕಲ್ಲ. ಇಲ್ಲಿ ಒಪ್ಪಬೇಕಾದ ವಿಷಯ ಯಾರಿಗೆ ಯಾರೂ ಇಲ್ಲ, ಅದಕ್ಕೊಂದು ಮಿತಿ ಇದೆ, ಅವರವರ ತಲೆ ಅಡಿಗೆ ಅವರದೇ ಕೈಗಳು. ನನಗೆ ನಾನೇ, ನಿನಗೆ ನೀನೇ ಹೊರತು ಮತ್ತಾರು ಇಲ್ಲ.

ಹಾಗಾದರೆ ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಮುಖಗವುಸು ಹಾಕಿ, ಕೈ ತೊಳೆಯಿರಿ ಆಗಾಗ, ಹೊರಗೆ ಒಟ್ಟಾರೆ ತಿರುಗಾಡಬೇಡಿ, ಜನಜಾತ್ರೆ ಬೇಡ ಇದೆಲ್ಲಾ ಹೇಳುವ ಅಗತ್ಯವಿದೆಯೇ? ನಮ್ಮ ಜೀವಕ್ಕೆ ನಾವೇ ಹೊಣೆ. ನಾವಿಂದು ಬದುಕಿ ಉಳಿದರೆ ಮಾತ್ರ ಜೀವನವಲ್ಲವೇ?

ನಮ್ಮ ಜೀವದೊಂದಿಗೆ ನಮ್ಮವರೆಲ್ಲರ ಬದುಕು ಮುಖ್ಯ ಎಂಬ ಅರಿವು, ಪ್ರಜ್ಞೆ ಬೇಡವೇ? ಇಷ್ಟೆಲ್ಲ ಹೇಳಿದರೂ ಜನ ಏನೂ ಆಗಿಲ್ಲ ಎಂಬ ಹಾಗೆ ವರ್ತಿಸುತ್ತಿದ್ದಾರೆ, ನಾವು ನೋಡ್ತಾ ಇದ್ದೇವೆ. 

ಮೊನ್ನೆ ಒಬ್ಬರ ಮನೆಯಲ್ಲಿ ಕಾರ್ಯಕ್ರಮ, ಹೋಗಲು ಸಾಧ್ಯವಿಲ್ಲ, ದೂರವಾಣಿ ‌ಸಂಭಾಷಣೆಯಲ್ಲಿಯೇ ಶುಭಹಾರೈಕೆ ತಿಳಿಸಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮತ್ತೊಬ್ಬರು ತೀರಾ ಹತ್ತಿರದ ಬಂಧುಗಳು, ಮಗನ ಮದುವೆ ಎಲ್ಲಾ ಕಳೆದು ೧೫ ದಿನಗಳ ನಂತರ ಫೋನ್ ಅವರದು, ಮದುವೆ ಕಳೆಯಿತು ಎಂದು.ಹೌದಾ? ಸಂತೋಷ , ಒಳ್ಳೆಯದಾಗಲಿ ಎಂದೆ. ಮದುವೆಗೆ ಮೊದಲೇ ಹೇಳಿಲ್ಲ, ಹೇಗೂ ಬರಲಾಗುವುದಿಲ್ಲ ಹಾಗಾಗಿ ಎಂದರು. ಇಲ್ಲಿ ನೋಡಿ ವಿಭಿನ್ನ ಮನಸ್ಸುಗಳನ್ನು ಕಾಣಬಹುದು. ಹೋಗಲಿ ಬಿಡಲಿ ಮಾಹಿತಿ ನೀಡಬೇಕು. 

ಒಟ್ಟಿನಲ್ಲಿ ಸಂಬಂಧಗಳು, ಸಂಭಾಷಣೆಗಳು, ಸ್ನೇಹ ಎಲ್ಲಾ ದೂರವಾಗುತ್ತಿದೆಯೇ? ಸಾಮಾಜಿಕ ಅಂತರ ಈ ರೀತಿ ಪರಿವರ್ತನೆ ಆಗಿದೆಯೇ ಅನ್ನಿಸ್ತಾ ಇದೆ.ದೂರವಿದ್ದರೂ ನಾಲ್ಕು ಮಾತನಾಡಲು ಖಂಡಿತಾ ಬರವಿಲ್ಲ, ಆದರೆ ಮನಸ್ಸು ಬೇಕು ಅಷ್ಟೆ. ನನ್ನಷ್ಟಕ್ಕೇ ನಾನಿದ್ದರೆ ರಗಳೆ ಇಲ್ಲ ಎನ್ನುವ ಮಟ್ಟಿಗೆ ನಮ್ಮ  ಮನೋಸ್ಥಿತಿ ತಲುಪಿಯಾಗಿದೆ. ಮೊದಲಿನಂತಾಗಲು ಬಹಳ ಸಮಯ ಬೇಕು.

ಒಬ್ಬರನ್ನೊಬ್ಬರು ಉಳಿಸುತ್ತೇನೆ, ಉಳಿಸಬಹುದು ಎಂಬ ಭ್ರಮೆಯ ಬಿಟ್ಟು ಹೊರಬಂದು ಬದುಕಲು ಕಲಿಯೋಣ. ಮುಖ್ಯವಾಗಿ ಜನಜಂಗುಳಿಯಲ್ಲಿ ಒಬ್ಬರಾಗಿ ನಾವು, ನಮ್ಮ ಸುತ್ತಮುತ್ತಲಿನವರು ಸೇರದ ಹಾಗೆ ಜಾಗೃತೆ ವಹಿಸೋಣ. ಒಂದಷ್ಟು ಅನಾರೋಗ್ಯದಲ್ಲಿರುವವರಿಗೆ ದೂರವಾಣಿಯಲ್ಲಿ ಅವರ ಬಿಡುವು ನೋಡಿಕೊಂಡು ಧೈರ್ಯದ ಮಾತುಗಳನ್ನು ಹೇಳೋಣ. ನಮ್ಮ ಜವಾಬ್ದಾರಿ ನಿಭಾಯಿಸೋಣ.

ಉಪಕರ್ತುಂ ಪ್ರಿಯಂ ವಕ್ತುಂ ಕರ್ತುಂ ಸ್ನೇಹ ಮಕೃತ್ತಿಮಮ್/

ಸಜ್ಜನಾಂ ಸ್ವಭಾವೋಯಂ ಕೇನೇಂದುಃ ಶಿಶಿರೀಕೃತಃ//

ಉಪಕಾರ ಮಾಡಲು, ಪ್ರಿಯವಾದ, ಸ್ನೇಹದಿಂದ ಕೂಡಿದ ಮಾತುಗಳನ್ನು ಹೇಳಲು, ಕೃತ್ತಿಮತೆ ಇಲ್ಲದ ಗೆಳೆತನ ಮಾಡಲು ಒಳ್ಳೆಯವರಿಗೆ ಯಾರೂ ಹೇಳಿಕೊಟ್ಟಿಲ್ಲ. ಅದು ಅವರ ರಕ್ತದಲ್ಲೇ ಇದೆ. ಸ್ವಭಾವದಲ್ಲಿದೆ. ಯಾರದೋ ಮಾತಿಗೆ ಚಂದ್ರ ತಂಪಾಗಲಿ, ಬೆಳಕಾಗಲಿ ನೀಡುವುದಿಲ್ಲ, ಹೂಗಳು ಅರಳುವುದಿಲ್ಲ.ಎಲ್ಲಾ ಅದರದರ ಸ್ವಭಾವ.

(ಸರ಼ಳ ಸುಭಾಷಿತ ಸಂಗ್ರಹ)

-ರತ್ನಾ ಕೆ.ಭಟ್, ತಲಂಜೇರಿ.