ಬಾಳಿಗೊಂದು ಚಿಂತನೆ - 67
ಜೀವಮಾನದಲ್ಲಿ ಒಂದೇ ಒಂದು ಒಳ್ಳೆಯ ಕೆಲಸ ಮಾಡದವನು ಪುಣ್ಯ ಸಿಗುತ್ತದೆ ಎಂದು ಹೇಳಿದರೆ ಹಾಸ್ಯಾಸ್ಪದ. ಪಾಪಕಾರ್ಯಗಳನ್ನು ಮಾಡಿ ಪೇರಿಸಿಟ್ಟ ಆತನಿಗೆ ಪುಣ್ಯವಾದರೂ ಎಲ್ಲಿಂದ ಸಿಗಬೇಕು? ಪ್ರಕೃತಿಯಲ್ಲಿ ಯಾವ ಗಿಡವನ್ನು ನೆಡುತ್ತೇವೆಯೋ ಅದೇ ಫಲವಲ್ಲವೇ ಸಿಗುವುದು. ಒಂದು ಗಾದೆ ಮಾತಿದೆ ‘ಬಿತ್ತಿದಂತೆ ಬೆಳೆ’. ನಾವು ಯಾವ ಬೀಜ ಬಿತ್ತಿ, ಆರೈಕೆ ಮಾಡುತ್ತೇವೋ ಹಾಗೆ ಫಲ ಸಿಗಬಹುದು. ಹೆಚ್ಚಿನ ನಿರೀಕ್ಷೆ ಸಲ್ಲದು, ಮಾಡಲೂ ಬಾರದು.
‘ಬೇವಿನ ಗಿಡವನ್ನು ನೆಟ್ಟು, ಮಾವಿನ ಹಣ್ಣು ಬಯಸಿದಂತೆ ಆಗಬಹುದು. ಪುಣ್ಯ ಕೆಲಸಕಾರ್ಯಗಳನ್ನು ಮಾಡೋಣ, ಪುಣ್ಯವನ್ನು ಎದುರು ನೋಡೋಣ. ನಮ್ಮ ಕೆಲಸ, ವ್ಯವಹಾರಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತದೆ. ‘ಪಾಪಪ್ರಜ್ಞೆ’ ಎಂಬುದು ಸದಾ ಎಚ್ಚರಿಕೆಯ ಕರೆಗಂಟೆಯಾಗಿದೆ. ಆದರೂ ಅದೇ ಇಚ್ಛಿಸುತ್ತೇವೆ. ಆದಷ್ಟೂ ಉತ್ತಮ ರೀತಿಯಲ್ಲಿ, ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಬದುಕು ನಡೆಸೋಣ. ಯಾವುದೇ ಕೆಟ್ಟಕೆಲಸಕ್ಕೆ ಕೈಹಾಕುವ ಮೊದಲು ಆತ್ಮಸಾಕ್ಷಿಗೆ ಮೊದಲು ಕೇಳಿಕೊಂಡು ಆತ್ಮಾವಲೋಕನ ಮಾಡಿದರೆ, ಸ್ವಲ್ಪವಾದರೂ ಕೆಟ್ಟದ್ದು ಕಡಿಮೆಯಾಗಬಹುದೇನೋ?
ನಿನ್ನೆ ಒಂದು ಕಥೆಯ ಹಂದರದಲ್ಲಿ ಓದಿದೆ 'ಓರ್ವ ಹೆಣ್ಣು ಮಗಳನ್ನು ಕೆಣಕಲು ಬಂದ ಭೂಪನಿಗೆ ನಾಗರಹಾವೊಂದು ಕಚ್ಚಿತು' ಆಗ ಎಲ್ಲರಿಗೂ ಈತ ಪಾಪಿ ಎಂದು ಗೊತ್ತಾಯಿತು. ಆದರೆ ನಿಜ ಜೀವನದಲ್ಲಿ ಹೀಗಾಗಲು ಸಾಧ್ಯವೇ? ಒಂದು ವೇಳೆ ಆಗಿದ್ದರೆ ಕಳ್ಳರು, ಸುಳ್ಳರು, ಕೊಲೆಗಡುಕರನ್ನು ಹಿಡಿಯಲು ಯಾರೂ ಬೇಡವಿತ್ತು. ಉತ್ತಮ ಸಂಸ್ಕಾರಗಳನ್ನು ಚಿಕ್ಕಂದಿನಿಂದಲೇ ಮಗುವಿಗೆ ನೀಡುತ್ತಾ ಬಂದಲ್ಲಿ ಸ್ವಲ್ಪವಾದರೂ ಪರಿಣಾಮ ಆಗಬಹುದೆಂಬ ಆಶಯ. ಪರಿಸರ ಸಹ ಆ ಮಗುವಿನ ಬೆಳವಣಿಗೆ, ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಬೇವು ಬೀಜ ಹಾಕಿ ಮಾವು ಬಯಸದೆ, ಮಾವನ್ನೇ ನೆಟ್ಟು ಪೋಷಿಸಿ, ರುಚಿಯಾದ ಮಾವನ್ನೇ ಬಯಸೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ