ಬಿಡುಗಡೆಯ ಹಾಡುಗಳು (ಭಾಗ ೧೨) - ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ

ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ ಅವರ ಕುರಿತಾದ ಮಾಹಿತಿಗಳು ಸಿಗುತ್ತಿಲ್ಲ. ಆದರೆ ಅವರು ಬರೆದ ‘ಖಾದಿಯ ಹಾಡು’ ೧೯೩೧ರಲ್ಲಿ ರಾಷ್ಟ್ರಬಂಧು, ನವಯುಗ ಮತ್ತು ತಾಯಿ ನಾಡು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ೧೯೪೭ರಲ್ಲಿ ಸ್ವರಾಜ್ಯಗೀತಾಮೃತ ಎನ್ನುವ ಕವನ ಸಂಕಲನದಲ್ಲೂ ಈ ಹಾಡು ಪ್ರಕಟವಾಗಿದೆ. ಆ ಕವನ ಸಂಕಲನದಿಂದ ಈ ಹಾಡನ್ನು ಸಂಗ್ರಹಿಸಿ ‘ಬಿಡುಗಡೆಯ ಹಾಡುಗಳು’ ಕೃತಿಯಲ್ಲಿ ಪ್ರಕಟಿಸಲಾಗಿದೆ.
ಖಾದಿಯ ಹಾಡು
(‘ಕಡು ಧೀರನೆ ಶೂರನೆ’ಎನ್ನುವ ಧಾಟಿ)
ಪರದೇಶದ ಬಟ್ಟೆಯ ಬಿಡು ಬಿಡು ।
ಸುಡು ಸುಡು ॥ ದೇಶ ಬಂಧು
ಸ್ವರ್ಣ ಧರಣಿಯಾ ಸ್ವರ್ಣವನೆಲ್ಲವ ।
ಪೂರ್ಣ ವಿದೇಶಿ ವಸ್ತ್ರಕೆ ಕೊಡುವ ।
ಕರ್ಣಕಠೋರವಿಚಾರವ ಸುಡು ಸುಡು ॥೧॥
ಪರದೇಶಿಗಳಾವಾಸಕ್ಕೀಯುವ ।
ಭರತಖಂಡದ ಜೀವನಧನವ ।
ಪರಮಸ್ವದೇಶೀ ಖಾದಿಗೆ ಕೊಡು ಕೊಡು ॥೨॥
ಸಾವಿರಗಟ್ಟಲೆಯಲಿ ಭಾರತದಲಿ ।
ಸಾವರ ಕೂಳಿಲ್ಲದೆ ಹಸಿವಿಂದಲಿ ।
ಜೀವನ ಮಾರ್ಗದ ಬಟ್ಟೆಯ ಕೊಡು ಕೊಡು ॥೩॥
ಮಾನಿನಿಯರು ಹಲವರು ಬತ್ತಲೆಯಲಿ ।
ಕಾನನದೊಳಗಿರುವರು ಹಲವೆಡೆಯಲಿ ।
ಮಾನದ ಹಾದಿಯ ಖಾದಿಯ ಕೊಡು ಕೊಡು ॥೪॥
ಚರಕವ ತಿರುಗಿಸಿ, ಬಟ್ಟೆಯನೊದಗಿಸಿ ।
ಪರದೇಶೀ ವ್ಯಾಪಾರವ ನಿಲ್ಲಿಸಿ ।
ಧರೆಗೆ ಸ್ವರಾಜ್ಯದ ಬಟ್ಟೆಯ ಕೊಡು ಕೊಡು ॥೬॥
ಭಾರತ ಸ್ವಾತಂತ್ರ್ಯಾಂಬರ ಮಿತ್ರನು ।
ಧೀರ ಮಹಾತ್ಮನು ಸಾರುವ ನುಡಿಯನು ।
ದೂರದೆ ಮನ್ನಿಸಿ ಖಾದಿಯ ತೊಡು ತೊಡು ॥೬॥