ಬಿಡುಗಡೆಯ ಹಾಡುಗಳು (ಭಾಗ ೬) - ತಿರುಮಲೆ ರಾಜಮ್ಮ
ತಿರುಮಲೆ ರಾಜಮ್ಮ (ಭಾರತಿ) ೧೯೦೦ ನವೆಂಬರ್ ೨೦ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ ಸಂಖ್ಯೆ ಬೆರಳೆಣಿಕೆಯಷ್ಟು ಇಲ್ಲವೆಂಬುದನ್ನು ನೆನೆದಾಗ ಇನ್ನಷ್ಟು ಅಚ್ಚರಿ ಎನಿಸುತ್ತದೆ.
ರಾಜಮ್ಮನವರ ಮಾತೃ ಭಾಷೆ ತೆಲುಗು. ತೆಲುಗು ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಅದರಲ್ಲೂ ದೇಶಭಕ್ತ ಸಾಹಿತಿ ಎನಿಸಿಕೊಂಡಿದ್ದ ‘ವೀರೇಶಲಿಂಗಂ’ ಅವರ ಸಾಹಿತ್ಯವನ್ನು ಓದಿ ಮೆಚ್ಚಿಕೊಂಡಿದ್ದರು. ಕ್ರಮೇಣ ಕನ್ನಡದಲ್ಲೂ ಆಸಕ್ತಿ ಮೂಡಿತು. ಸಂಗೀತದಂತೆಯೇ ರಾಜಮ್ಮನವರಿಗೆ ಸಾಹಿತ್ಯದಲ್ಲೂ ಚಿಕ್ಕಂದಿನಿಂದಲೇ ಪರಿಶ್ರಮವಿತ್ತು. ರವೀಂದ್ರನಾಥ ಠಾಕೂರರ `ಧೃಢಪ್ರತಿಜ್ಞೆ’ ಎನ್ನುವ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ.ತಪಸ್ವಿನಿ, ಮಹಾಸತಿ ವಾತ್ಸಲ್ಯ ತರಂಗ ಲೀಲಾ ಅವರ ಕಾವ್ಯ ನಾಟಕಗಳು. ಸ್ವರ್ಗ, ನಿರಸನ, ಉನ್ಮತ್ತ ಭಾಮಿನಿ, ದುಂದುಭಿ ಎಂಬ ಕಿರು ನಾಟಕಗಳನ್ನು ರಚಿಸಿದ್ಧಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಶ್ರೇಷ್ಠ ಸಾಹಿತಿ ಎಂಬ ಗೌರವ, ಬೆಂಗಳೂರು ಅಮೆಚೂರ್ ನಾಟಕ ಸಂಘದ ಸ್ಪರ್ಧೆಯಲ್ಲಿ “ಸುಖಮಾರ್ಗ' ನಾಟಕಕ್ಕೆ ಬಹುಮಾನ ಪಡೆದಿದ್ದಾರೆ.
‘ಬಿಡುಗಡೆಯ ಹಾಡುಗಳು' ಕೃತಿಯಲ್ಲಿ ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಪ್ರಕಟ ಮಾಡಿದ್ದೇವೆ.
ಸ್ವರಾಜ್ಯ ಮಂಗಳ
(ರಾಗ: ಕಲ್ಯಾಣಿ, ರೂಪಕತಾಳ)
ಜೈ ಭಾರತ ಭೂಮಿಗೆ ಮಾತೆಗೆ
ಜೈಪಾವನ ಮೂರ್ತಿಗೆ
ಸನ್ಮಂಗಳವಾಗಲಿ ಸತತ ॥೦॥
ಸ್ವರಾಜ್ಯಾಭಿಲಾಷಿಗಳಿಗೆ
ಸರಕಾರದ ಸಹಾಯ ತೊರೆದ
ವೀರಭಾರತೀಯರಿಗೆ ॥೧॥
ಧಾರುಣಿಯಲಿ ಜೀವಿತವನು
ಸ್ವರಾಜ್ಯಕ್ಕೆ ಧಾರೆಯೆರೆದ
ಧೀರಕರ್ಮ ವೀರರಿಗೆ ॥೨॥
ದೇಶಸೇವೆಯಿಂದ ಸುಖಿಪ
ದೇಶಾಭಿಮಾನಿಗಳಿಗೆ
ದೇಶ ಬಾಂಧವರಿಗೆ ಸದಾ ॥೩॥
(ಮುದ್ರಿತ)
ಇನ್ನೊಂದು ಪಾಠ
ದೇಶಸೇವೆಯಿಂದ ಸುಖಿಪ
ದೇಶಾಭಿಮಾನಿಗಳಿಗೆ
ದೇಶ ಬಾಂಧವರಿಗೆ ಸದಾ ॥೧॥
ಭೀಷ್ಮ ದ್ರೋಣ ಪರಶುರಾಮ
ಭೀಮಾರ್ಜುನಾದಿ ಸುತರ
ಧೀರಕರ್ಮ ವೀರರಿಗೆ ॥೨॥
ರಾಮಕೃಷ್ಣ ಪರಮಹಂಸ
ವಿವೇಕಾನಂದ ಸುತರ
ಪೆತ್ತ ವೀರ ಮಾತೆಗೆ ॥೩॥
(ಸಂಗ್ರಹ: ಶ್ರೀಮತಿ ಚಿ ನ ವೆಂಕಮ್ಮ, ಬೆಂಗಳೂರು)