ಬಿಳಿ ಹುಬ್ಬಿನ ಪಿಕಳಾರ ಹಕ್ಕಿ

ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಚಳಿಗಾಲ ಮುಗಿದು ಆಗಲೇ ಬೇಸಿಗೆಕಾಲ ಪ್ರಾರಂಭವಾಗಿದೆ. ಬೇಸಿಗೆಯ ಸೆಕೆ ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯ ಕಾರಣದಿಂದಲೂ ಸೆಕೆ ಇನ್ನೂ ಹೆಚ್ಚಾಗಿ ಕಾಡುತ್ತಿದೆ. ಮಾರ್ಚ್ ತಿಂಗಳಿನಲ್ಲೇ ಮೇ ತಿಂಗಳಿನ ಖಾರ ಬಿಸಿಲು ಎಲ್ಲಾ ಕಡೆ ಅನುಭವಕ್ಕೆ ಬರ್ತಾ ಇದೆ.
ಕಳೆದ ವಾರ ತರಬೇತಿಯೊಂದರಲ್ಲಿ ಭಾಗವಹಿಸಲಿಕ್ಕೆ ಅಂತ ಬೆಂಗಳೂರಿಗೆ ಹೋಗಿದ್ದೆ. ಆ ತರಬೇತಿಯಲ್ಲಿ ಒಂದಿಷ್ಟು ಹವ್ಯಾಸಿ ಪಕ್ಷಿ ವೀಕ್ಷಕರು, ಮಕ್ಕಳಿಗೆ ಪಕ್ಷಿಗಳ ಬಗ್ಗೆ ಹೇಳಿಕೊಡುವ ಆಸಕ್ತರು ಇದ್ದರು. ಹಾಗಾಗಿ ಸಂಜೆ ಮತ್ತು ಬೆಳಗಿನ ಬಿಡುವಿನಲ್ಲಿ ಹತ್ತಿರದ ಪ್ರದೇಶಗಳಿಗೆ ಹೋಗಿ ಪಕ್ಷಿ ವೀಕ್ಷಣೆ ಮಾಡೋಣ ಅಂತ ನಿರ್ಧಾರ ಮಾಡಿದೆವು. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಇಲ್ಲಿ ಹಿಂದೆ ಸಂಶೋಧಕರಾಗಿ ಕೆಲಸ ಮಾಡಿದ್ದ ಹರೀಶ್ ನಮ್ಮ ಜೊತೆಗಿದ್ದರು. ಅವರು ಅಲ್ಲಿನ ಸಸ್ಯೋದ್ಯಾನದ ಆಸು ಪಾಸಿನ ಜಾಗಗಳಲ್ಲಿ ಪಕ್ಷಿ ವೀಕ್ಷಣೆಗೆ ಹೋಗೋಣ ಅಂತ ನಮ್ಮನ್ನ ಕರೆದುಕೊಂಡು ಹೋದರು. ಸುತ್ತಮುತ್ತಲಿನ ಹಕ್ಕಿಗಳನ್ನು ನೋಡ್ತಾ ಒಂದು ಕಡೆ ಕುರುಚಲು ಕಾಡು ಇರುವ ಪ್ರದೇಶಕ್ಕೆ ತಲುಪಿದೆವು. ನಮ್ಮ ಜೊತೆಗಿದ್ದ ಅತ್ತಿವೇರಿಯ ಮಹೇಶ್ ಪೊದೆಗಳ ಕಡೆಗೆ ಒಂದು ಹಕ್ಕಿ ಇರುವ ಸೂಚನೆ ಕೊಟ್ರು. ನಾವು ನಮ್ಮ ಬೈನಾಕುಲರ್ ಹಿಡಿದು ಆ ಕಡೆಗೆ ನೋಡಿದಾಗ ಅಲ್ಲೊಂದು ಬುಲ್ ಬುಲ್ ಗಾತ್ರದ ಹಕ್ಕಿ ಕಾಣಿಸಿತು. ಸಾಮಾನ್ಯವಾಗಿ ಬುಲ್ ಬುಲ್ ಗಳಿಗೆ ಇರುವ ಜುಟ್ಟು ಇರಲಿಲ್ಲ. ದೇಹದ ಬಣ್ಣವೂ ಬಹಳ ಡಲ್. ರೆಕ್ಕೆ ಸ್ವಲ್ಪ ಕಂದು, ಹಸಿರು ಮಿಶ್ರಿತ ಹಳದಿ ಬಣ್ಣ. ತಲೆ, ಬೆನ್ನು, ಎದೆಯ ಭಾಗಗಳೆಲ್ಲ ಬೂದು ಬಣ್ಣ. ಆದರೆ ಕಣ್ಣಿನ ಸುತ್ತ ಬಿಳೀ ಬಣ್ಣದ ಅಲಂಕಾರ. ಅದರ ಕೆಳಗೆ ಸ್ವಲ್ಪವೇ ಅರಿಶಿನ ಹಚ್ಚಿದಂತಹ ಹಳದಿ. ಎದ್ದು ಕಾಣುವ ಬಿಳೀ ಬಣ್ಣದ ಹುಬ್ಬು. ಹಾಗಾಗಿಯೇ ಇದನ್ನು ಬಿಳಿ ಹುಬ್ಬಿನ ಪಿಕಳಾರ ಅಂತ ಕರೀತಾರೆ. ಬುಲ್ ಬುಲ್ ಕುಟುಂಬದ ಬೇರೆ ಯಾವ ಹಕ್ಕಿಗೂ ಈ ರೀತಿಯ ಬಿಳಿ ಹುಬ್ಬು ಇರುವುದಿಲ್ಲ.
ಗಂಡು ಮತ್ತು ಹೆಣ್ಣಿನಲ್ಲಿ ಯಾವುದೇ ವ್ಯತ್ಯಾಸ ಇರದ ಈ ಹಕ್ಕಿಗಳಿಗೆ ಕಾಡು ಹಣ್ಣುಗಳು ಮತ್ತು ಹೂವು ಮೆಚ್ಚಿನ ಆಹಾರ. ಹೂವುಗಳನ್ನು, ಅದರ ಕೇಸರ ಮೊದಲಾದ ಭಾಗಗಳನ್ನು ತಿನ್ನಲು ಹೋಗುವ ಈ ಹಕ್ಕಿಗಳು ಪರಾಗಸ್ಪರ್ಶ ಕ್ರಿಯೆಯನ್ನು ನಡೆಸಿ ಸಸ್ಯಗಳಿಗೆ ಸಹಾಯ ಮಾಡುತ್ತವೆ. ಬದಲಾಗಿ ಸಸ್ಯಗಳು ಹಣ್ಣು ಮತ್ತು ಆಶ್ರಯ ನೀಡುವ ಮೂಲಕ ಸಹಕರಿಸುತ್ತವೆ. ಹಣ್ಣುಗಳನ್ನು ತಿಂದು ಹಕ್ಕಿಗಳು ಹಿಕ್ಕೆ ಹಾಕುವಾಗ ಬೀಜ ಪ್ರಸರಣ ಮಾಡುತ್ತವೆ. ಕಾಡು ತಾನಾಗಿಯೇ ಮತ್ತೆ ಹುಟ್ಟುತ್ತದೆ.
ಮಾರ್ಚ್ ತಿಂಗಳು ಬಂತು. ಎಲ್ಲ ಕಡೆ ಮಕ್ಕಳಿಗೆ ಪರೀಕ್ಷೆ ಆರಂಭ ಆಗಿದೆ. ಈ ಹಕ್ಕಿಗಳಿಗೂ ಪರೀಕ್ಷೆ ಆರಂಭವಾಗಿದೆ. ಜೋಡಿ ಹುಡುಕಿ, ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡುವ ಕಾಲ ಬಂದಿದೆ. ಅವು ಹಾಡುತ್ತ ಓಡಾಡುತ್ತಿರಬಹುದು.
ಕನ್ನಡದ ಹೆಸರು: ಬಿಳಿ ಹುಬ್ಬಿನ ಪಿಕಳಾರ
ಇಂಗ್ಲಿಷ್ ಹೆಸರು: White-browed Bulbul
ವೈಜ್ಞಾನಿಕ ಹೆಸರು: Pycnonotus luteolus
ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ