ಬೀಜರಕ್ಷಕರ ಕಾಯಕ, ಬೀಜಕಂಪೆನಿಗಳ ಹುನ್ನಾರ
ಬೌದ್ಧಿಕ ಸೊತ್ತಿನ ಅಪೀಲು ಮಂಡಲಿ 5 ಜುಲಾಯಿ 2013ರಂದು ಘೋಷಿಸಿದ ನಿರ್ಧಾರ ಗಮನಾರ್ಹ. ಜಾಗತಿಕ ಬೀಜ ಉದ್ಯಮ ಕಂಪೆನಿ ಮೊನ್ಸಾಂಟೊ ಸಸ್ಯಗಳ ಪೇಟೆಂಟಿಗಾಗಿ ಸಲ್ಲಿಸಿದ ಅರ್ಜಿಯ ಕ್ಲೈಮುಗಳನ್ನು ಭಾರತದ ಪೇಟೆಂಟುಗಳ ನಿಯಂತ್ರಕರು ತಿರಸ್ಕರಿಸಿದ್ದನ್ನು ಅಪೀಲು ಮಂಡಲಿ ತನ್ನ ಆದೇಶದಲ್ಲಿ ಎತ್ತಿ ಹಿಡಿಯಿತು.
"ಸಸ್ಯಗಳಲ್ಲಿ ಹವಾಮಾನದ ಒತ್ತಡ (ಸ್ಟ್ರೆಸ್) ಸಹನೀಯತೆ ಹೆಚ್ಚಿಸುವ ವಿಧಾನಗಳ" ಬಗ್ಗೆ ಮೊನ್ಸಾಂಟೊ ಕಂಪೆನಿ ಅರ್ಜಿ ಸಲ್ಲಿಸಿತ್ತು. ಈ "ವಿಶೇಷತೆ"ಯನ್ನು ಮೊನ್ಸಾಂಟೊ ಕಂಪೆನಿ ಅನಂತರ ಹೀಗೆ ಬದಲಾಯಿಸಿತು, "ಉಷ್ಣತೆ ಸಹನೀಯತೆ, ಉಪ್ಪಿನ ಸಹನೀಯತೆ ಮತ್ತು ಡ್ರಗ್ ಸಹನೀಯತೆ ಹೊಂದಿರುವ ಜೈವಿಕವಾಗಿ ಬದಲಾಯಿಸಿದ ಸಸ್ಯಗಳನ್ನು ಉತ್ಪಾದಿಸುವ ವಿಧಾನ." ಇಂತಹ ಸಸ್ಯದ ಕೋಶಗಳಲ್ಲಿ "ಶೀತ ಆಘಾತ ಪ್ರೊಟೀನ"ನ್ನು (ಕೋಲ್ಡ್ ಶಾಕ್ ಪ್ರೊಟೀನ್) ತೋರ್ಪಡಿಸುವ ಡಿಎನ್ಎ ಅಣುವಿನ ಮೂಲಕ ಆ ಸಸ್ಯಗಳ ಅಂತಹ ಸಹನೀಯತೆ ಹೆಚ್ಚಿಸುವ ಆವಿಷ್ಕಾರ ಎಂದು ಇದನ್ನು ಮೊನ್ಸಾಂಟೊ ಕಂಪೆನಿ ತನ್ನ ಅರ್ಜಿಯಲ್ಲಿ ವಿವರಿಸಿತ್ತು. ಎಂತಹ ವಾದಗಳು! ಈ ಗುಣಗಳನ್ನು ಹೊಂದಿರುವ ಹತ್ತಾರು ತಳಿಗಳು ಈಗಾಗಲೇ ಬಳಕೆಯಲ್ಲಿರುವ ಬಗ್ಗೆ ಅರ್ಜಿಯಲ್ಲಿ ಚಕಾರವಿಲ್ಲ.
ಮೊನ್ಸಾಂಟೊ ಕಂಪೆನಿಯ ಅರ್ಜಿಯನ್ನು ಈ ಕಾರಣಗಳಿಗಾಗಿ ತಿರಸ್ಕರಿಸುವುದಾಗಿ ಪೇಟೆಂಟ್ ಆಫೀಸ್ ದಾಖಲಿಸಿತ್ತು: (1) ಇದರಲ್ಲಿ ಯಾವುದೇ ಆವಿಷ್ಕಾರ ಇಲ್ಲ.
(2) ಶೀತ ಆಘಾತ ಪ್ರೊಟೀನಿನ ರಚನೆ ಮತ್ತು ಕಾರ್ಯಗಳು ಈಗಾಗಲೇ ದಾಖಲಾಗಿವೆ. ಅದಲ್ಲದೆ, ಸಸ್ಯಗಳನ್ನು ಜೈವಿಕವಾಗಿ ಬದಲಾಯಿಸುವ ಪರಿಣತರಿಗೆ ಇದು ಚೆನ್ನಾಗಿ ಗೊತ್ತಿದೆ.
(3) ಇದು ವಿಪರೀತ ಉಷ್ಣ, ಉಪ್ಪು ಮತ್ತು ಬರ ಪರಿಸ್ಥಿತಿಗಳಿಗೆ ಸಹನೀಯತೆ - ಇವನ್ನು ಅಧಿಕವಾಗಿ ಹೊಂದಿರುವ ಸಸ್ಯಗಳನ್ನು ಉತ್ಪಾದಿಸುವ (ಈಗಾಗಲೇ ಗೊತ್ತಿರುವ) ಪ್ರಕ್ರಿಯೆಯನ್ನು ಬಳಸುವ ವಿಧಾನ. ಇಂತಹ ಕ್ಲೈಮುಗಳು ಭಾರತೀಯ ಪೇಟೆಂಟ್ ಕಾನೂನಿನ ಸೆಕ್ಷನ್ 3(ಡಿ)ಯ ವ್ಯಾಪ್ತಿಗೆ ಒಳಪಡುತ್ತವೆ. ಅದರ ಪ್ರಕಾರ, ಈಗಾಗಲೇ ಗೊತ್ತಿರುವ ಒಂದು ಪ್ರಕ್ರಿಯೆಯ ಹೊಸ ಬಳಕೆಗೆ ಪೇಟೆಂಟ್ ನೀಡಲು ಸಾಧ್ಯವಿಲ್ಲ.
ಅದೇ ಆದೇಶದಲ್ಲಿ, ಇಂತಹ ಕ್ಲೈಮುಗಳಿಗೆ ಸೆಕ್ಷನ್ 3(ಜೆ) ಅನುಸಾರವೂ ಪೇಟೆಂಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ. ಇದರ ಪ್ರಕಾರ, ಸಸ್ಯ ಮತ್ತು ಪ್ರಾಣಿಗಳ ಉತ್ಪಾದನೆ ಮತ್ತು ಪ್ರಸರಣೆಗಾಗಿ ಜೈವಿಕ ಪ್ರಕ್ರಿಯೆಗಳ ಸಹಿತ ಸಸ್ಯ ಅಥವಾ ಪ್ರಾಣಿಗಳನ್ನು ಇಡಿಯಾಗಿ ಅಥವಾ ಆಂಶಿಕವಾಗಿ ಪೇಟೆಂಟ್ ಮಾಡಬಾರದು.
ಕೋಟಿಗಟ್ಟಲೆ ರೂಪಾಯಿ ಲಾಭ ಮಾಡಿಕೊಳ್ಳುತ್ತಿರುವ ಮೊನ್ಸಾಂಟೊ ಕಂಪೆನಿಗೆ ಇನ್ನೊಂದು ಪೇಟೆಂಟ್ ಯಾಕೆ ಬೇಕು? ಇನ್ನಷ್ಟು ಲಾಭಕ್ಕಾಗಿ, ಅಲ್ಲವೇ? ಈ ಲಾಭದ ಅಂದಾಜು ನೀವು ಮಾಡಿಕೊಳ್ಳಲಿಕ್ಕಾಗಿ, ಇಗೋ ಇಲ್ಲಿದೆ ಸತ್ಯಾಂಶ: 2002ರಿಂದ ಮೊನ್ಸಾಂಟೊ ಕಂಪೆನಿ ಭಾರತದಲ್ಲಿ ಬಿಟಿ ಹತ್ತಿ ಬೀಜಮಾರಾಟ ಮಾಡುತ್ತಿದ್ದು, ಅದರಿಂದಲೇ ಕೇವಲ ಹತ್ತು ವರುಷಗಳ ಅವಧಿಯಲ್ಲಿ ರೂ.2,000 ಕೋಟಿ ಲಾಭ (ರಾಯಧನ) ಗಳಿಸಿದೆ! (ಬಿಟಿ ಹತ್ತಿ ಬೆಳೆಸಿದ ರೈತರು ವಿಪರೀತ ನಷ್ಟ ಅನುಭವಿಸಿ ಅದರ ಕೃಷಿ ತೊರೆದಿದ್ದಾರೆ ಎಂಬುದು ಬೇರೇಯೇ ಸಂಗತಿ.)
ಭಾರತದ ಬೀಜರಕ್ಷಕರ ಉದಾತ್ತ ಗುಣದೊಂದಿಗೆ, ಕೋಟಿಕೋಟಿ ರೂಪಾಯಿ ಲಾಭ ಬಾಚಿಕೊಳ್ಳುವ ಆ ಕಂಪೆನಿಯ ಈ ಧೋರಣೆಯನ್ನು ಹೋಲಿಸಿ. ಒರಿಸ್ಸಾದ ನರಿಶೊ ಗ್ರಾಮದ ಸಣ್ಣ ಜಮೀನಿನಲ್ಲಿ 350 ದೇಸಿ ಭತ್ತದ ತಳಿಗಳನ್ನು ತನ್ನ ಮಕ್ಕಳಂತೆ ಸಂರಕ್ಷಿಸುತ್ತಿರುವ ನಟವರ ಸಾರಂಗಿ ಅಂತಹ ಒಬ್ಬ ಮಹಾನ್ ಬೀಜರಕ್ಷಕ.
ಇನ್ನೊಬ್ಬರು ಪಶ್ಚಿಮ ಬಂಗಾಲದ ದೆಬಾಲ್ ದೆಬ್. ಇವರ ಬೀಜ ಖಜಾನೆಯಲ್ಲಿರುವ ದೇಸಿ ತಳಿಗಳ ಸಂಖ್ಯೆ 700ಕ್ಕಿಂತ ಅಧಿಕ. ಇವನ್ನು ನಿಸರ್ಗದ ಅಪಾಯಗಳಿಂದ ಹಾಗೂ ದೈತ್ಯ ಕಂಪೆನಿಗಳ ರಕ್ಕಸಬಾಹುಗಳಿಂದ ಅವರು ಕಾಪಾಡುತ್ತಿರುವುದೇ ದೊಡ್ಡ ಸಾಹಸ. ಇವರಿಗೆ ಬೆಂಗಾವಲಾಗಿ ನಿಂತವರು, ಪಾರಂಪರಿಕ ಕೃಷಿಯನ್ನು ಪ್ರಚಾರ ಮಾಡುತ್ತಿರುವ ಒರಿಸ್ಸಾದ ದೆಬ್ಜೀತ್ ಸಾರಂಗಿ. ಇವರೆಂದೂ ಹಣಕ್ಕಾಗಿ ಹಪಹಪಿಸುವವರಲ್ಲ. ಪಾರಂಪರಿಕ ಸಂಪತ್ತನ್ನು ಉಳಿಸಿಕೊಳ್ಳುವುದೇ ಮುಂದಿನ ಜನಾಂಗಗಳ ಉಳಿವಿನ ಭರವಸೆ ಎಂದು ನಂಬಿ ನಡೆಯುವವರು.
ಇವರ ಬೀಜಸಂಗ್ರಹದಲ್ಲಿ ಹಲವಾರು ಅಮೂಲ್ಯ ತಳಿಗಳಿವೆ - ಬರಗಾಲ ನಿರೋಧಿ, ನೆರೆನಿರೋಧಿ ಮತ್ತು ಜವುಳುಮಣ್ಣು ನಿರೋಧಿ ತಳಿಗಳು. ಇವುಗಳ ಮಾರಾಟದಿಂದ ಕೋಟಿಗಟ್ಟಲೆ ರೂಪಾಯಿ ಲಾಭ ಮಾಡಿಕೊಳ್ಳ ಬಹುದು. ಆದರೆ, ಇವುಗಳ ಬೀಜಗಳನ್ನು ಬಿರುಗಾಳಿ, ಬರ ಹಾಗೂ ನೆರೆಗಳಿಂದ ಬಳಲಿದ ರೈತರಿಗೆ ಸಾರಂಗಿ ಹಾಗೂ ದೇಬ್ ವಿಶ್ವಾಸದಿಂದ ಕೊಡುತ್ತಾರೆ - ಪುಕ್ಕಟೆಯಾಗಿ. ಬರಗಾಲಪೀಡಿತ ರೈತರಿಗೆ ಸೊಹ್ರಾ ಮತ್ತು ನಡಿಯಾ ಫುಲೊ ಭತ್ತದ ಬೀಜಗಳ 50 ಕಿಲೋ ಚೀಲವನ್ನು ಪುಕ್ಕಟೆಯಾಗಿ ಕೊಡುತ್ತಾ ನಟವರ ಸಾರಂಗಿ ಹೇಳುವ ಮನದಾಳದ ಮಾತು, "ಇವನ್ನು ಬಿತ್ತಿ, ಬೆಳೆಸಿ, ಉಳಿಸಿ, ಹಂಚಿ." ದೊಡ್ಡ ಮನಸ್ಸಿನ ಅವರೆದುರು, ಹೆಸರಿಲ್ಲದ ಸಾವಿರಾರು ಬೀಜರಕ್ಷಕರು ಶತಮಾನಗಳಿಂದ ಉಳಿಸಿದ ತಳಿಗಳನ್ನು ಲಪಟಾಯಿಸಿ, ಪೇಟೆಂಟ್ ಪಡೆದು, ಮಾರಿ ಕೋಟಿಕೋಟಿ ರೂಪಾಯಿ ಲಾಭ ಮಾಡಿಕೊಳ್ಳುವ ದೊಡ್ಡ ಕಂಪೆನಿಗಳು ಎಷ್ಟು ಸಣ್ಣದಾಗುತ್ತವೆ, ಅಲ್ಲವೇ?
ಫೋಟೋ: 13-11-2022ರಂದು ಮೈಸೂರಿನಲ್ಲಿ ಜರಗಿದ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಬೀಜಗಳ ಪ್ರದರ್ಶನ