ಬೀಜ ಬಿತ್ತನೆಗೆ ಮುನ್ನ... (ರೈತರೇ ಬದುಕಲು ಕಲಿಯಿರಿ-೧೪)

ಬೀಜ ಬಿತ್ತನೆಗೆ ಮುನ್ನ... (ರೈತರೇ ಬದುಕಲು ಕಲಿಯಿರಿ-೧೪)

ಬರಹ

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವದಾರಿ ತೋರುವ ಕೈಪಿಡಿ)

ಬೀಜಾಮೃತ ಸಿದ್ಧಪಡಿಸುವ ವಿಧಾನ

ಬೀಜ ಬಿತ್ತುವ ಮುನ್ನ ಅನುಸರಿಸಬೇಕಾದ ವಿಧಾನವಿದು. ಇಲ್ಲಿ ಕೊಟ್ಟಿರುವ ಪ್ರಮಾಣ ಒಂದು ಎಕರೆ ಪ್ರದೇಶಕ್ಕೆ ಮಾತ್ರ.

ಬಿತ್ತುವ ಹಿಂದಿನ ದಿನ ಸಂಜೆ ಆರು ಗಂಟೆಗೆ ಸುಮಾರು ೬೫ ಲೀಟರ್ ನೀರು ಸಂಗ್ರಹ ಸಾಮರ್ಥ್ಯವುಳ್ಳ ಸಿಮೆಂಟ್ ತೊಟ್ಟಿ ಅಥವಾ ಪ್ಲಾಸ್ಟಿಕ್ ಡ್ರಮ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಿ.

ಜೋಳ, ರಾಗಿ, ಅಲಸಂದೆ, ಶೇಂಗಾ, ಕಡಲೆ, ಅವರೆ, ಹೆಸರು, ಉದ್ದು, ಭತ್ತ, ಗೋದಿ ಮುಂತಾದ ಚಿಕ್ಕ ಕಾಳುಗಳ ಧಾನ್ಯಗಳನ್ನು ಬಿತ್ತುವವರು ೨೦ ಲೀಟರ್ ನೀರನ್ನು ಹಾಗೂ ಅಡಿಕೆ, ತೆಂಗು, ಗೆಡ್ಡೆ-ಗೆಣಸು, ಭತ್ತದ ಸಸಿ, ರಾಗಿಯ ಸಸಿ, ಅಥವಾ ಇತರ ಗಿಡಗಳ ಸಸಿಗಳನ್ನು ನೆಡುವವರು ೫೦ ಲೀಟರ್ ನೀರನ್ನು ಬೀಜಾಮೃತ ತಯಾರಿಗೆ ಬಳಸಬೇಕು.

ಈ ಪ್ರಮಾಣದ ನೀರಿಗೆ ೫ ಕೆಜಿ ಜವಾರಿ (ನಾಡ) ಆಕಳಿನ ಸಗಣಿ, ೫ ಲೀಟರ್ ಗೋಮೂತ್ರ ಮತ್ತು ೫೦ ಗ್ರಾಮ್ ಸುಣ್ಣ ಬೇಕಾಗುತ್ತದೆ.

ಇಷ್ಟನ್ನು ಸಿದ್ಧಪಡಿಸಿದ ನಂತರ ಈಗ ೫ ಕೆಜಿ ಸಗಣಿಯನ್ನು ಒಂದು ತೆಳುವಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ ಅದನ್ನು ನೀರಿರುವ ಡ್ರಮ್‌ನೊಳಗೆ ಇಳಿಬಿಡಿ. ಡ್ರಮ್‌ಗೆ ಅಡ್ಡಲಾಗಿ ಕಟ್ಟಿಗೆಯೊಂದನ್ನು ಇಟ್ಟು, ಅದಕ್ಕೆ ಸಗಣಿ ಕಟ್ಟಿದ ಬಟ್ಟೆಯನ್ನು ಕಟ್ಟಿದರಾಯಿತು. ಈ ಗಂಟು ಡ್ರಮ್‌ನ ಅಕ್ಕಪಕ್ಕದ ಪ್ರದೇಶ ಅಥವಾ ತಳವನ್ನು ತಾಕುವಂತಿರಬಾರದು. ಇನ್ನೊಂದೆಡೆ ೫೦ ಗ್ರಾಮ್ ಸುಣ್ಣವನ್ನು ಒಂದು ಲೀಟರ್ ನೀರಿರುವ ಪಾತ್ರೆಯಲ್ಲಿ ನೆನೆ ಹಾಕಿ.

ಬೀಜ ಬಿತ್ತುವ ದಿನ ಬೆಳಿಗ್ಗೆ ೬ ಗಂಟೆ ಸುಮಾರು ಡ್ರಮ್‌ನಲ್ಲಿ ಇಳಿಬಿಟ್ಟಿರುವ ಸಗಣಿ ಗಂಟನ್ನು ಚೆನ್ನಾಗಿ ಕುಲುಕಿಸಿ. ಆದರೆ ಗಂಟು ಬಿಚ್ಚಬೇಡಿ. ಐದಾರು ಬಾರಿ ಗಂಟನ್ನು ಮೇಲೆತ್ತಿ, ಕೈಯಿಂದ ಅದನ್ನು ಹಿಂಡಿ, ಅದರ ಸಾರವನ್ನು ನೀರಿಗೆ ಬೀಳಿಸಿ. ಇಷ್ಟಾದ ನಂತರ ಕರಗಿಸಿಟ್ಟ ಸುಣ್ಣದ ನೀರನ್ನು ಡ್ರಮ್‌ನಲ್ಲಿರುವ ಸಗಣಿಯ ತಿಳಿನೀರಿನಲ್ಲಿ ಬೆರೆಸಿ. ನಂತರ ೫ ಲೀಟರ್ ಗೋಮೂತ್ರವನ್ನು ಇದರಲ್ಲಿ ಸೇರಿಸಿ ಕಲೆಸಿ. ಬೀಜಾಮೃತ ಈಗ ಸಿದ್ಧ.

ನೆನಪಿಡಿ:

  • ಬೀಜಗಳನ್ನು ಬೀಜಾಮೃತದಲ್ಲಿ ಕೇವಲ ಒಂದು ನಿಮಿಷ ಮಾತ್ರ ಮುಳುಗಿಸಬೇಕು.
  • ಬೀಜಗಳು ದ್ರಾವಣದಲ್ಲಿ ಸೋರಿಹೋಗದಂತೆ ಮಾಡಲು ಅವನ್ನು ಸಣ್ಣಸಣ್ಣ ರಂಧ್ರಗಳಿರುವ ಬಿದಿರಿನ ಬುಟ್ಟಿ ಅಥವಾ ಜರಡಿಯಲ್ಲಿ ಹಾಕಿ ಬೀಜಾಮೃತದಲ್ಲಿ ಅದ್ದಿ.
  • ಒಂದು ನಿಮಿಷದ ನಂತರ ಹೊರ ತೆಗೆದು ಪ್ಲಾಸ್ಟಿಕ್ ಹಾಳೆಯ ಮೇಲೆ, ನೆರಳಿನಲ್ಲಿ ಹರಡಿ.
  • ಅವುಗಳ ತೇವ ಆರಿದ ನಂತರವಷ್ಟೇ ಬಿತ್ತಬೇಕು.
  • ಒಂದು ವೇಳೆ ಕಬ್ಬು, ಗೆಡ್ಡೆ-ಗೆಣಸು, ತೆಂಗು, ಬಾಳೆ ಮುಂತಾದ ಬೆಳೆಗಳಾದರೆ ಅವುಗಳ ಬುಡಗಳನ್ನು ಮಾತ್ರ ಬೀಜಾಮೃತದಲ್ಲಿ ಅದ್ದಿ ನೆಡಬೇಕು.
  • ಎಲ್ಲವಕ್ಕೂ ಬೀಜಾಮೃತದ ಉಪಚಾರದ ಅವಧಿ ಕೇವಲ ಒಂದು ನಿಮಿಷ ಮಾತ್ರ.


ಈ ದ್ರಾವಣದಿಂದ ನಮ್ಮ ಬೀಜಗಳು ಮೊಳಕೆಯೊಡೆಯುವುದು ಹೇಗೆ? ಅವುಗಳಿಗೆ ಬರುವ ಪ್ರಾರಂಭಿಕ ರೋಗಗಳು ನಿವಾರಣೆಯಾಗುವುದು ಹೇಗೆ?

ಉತ್ತರ ಸರಳ.

ಬೀಜಾಮೃತ ತಯಾರಿಗೆ ಬಳಸುವ ದೇಸಿ (ನಾಡ) ಆಕಳ ಸಗಣಿ, ಗಂಜಲ (ಮೂತ್ರ) ಮತ್ತು ಸುಣ್ಣಗಳಿಗೆ ತಮ್ಮದೇ ಆದ ಮಹತ್ವವಿದೆ. ಸಗಣಿ ಮತ್ತು ಗೋಮೂತ್ರಗಳು ಜೈವಿಕ ಕ್ರಿಯಾಶೀಲತೆಯನ್ನು ಚುರುಕುಗೊಳಿಸುತ್ತವೆ. ಇದರಿಂದಾಗಿ ಬೀಜಕ್ಕೆ ಪ್ರಾರಂಭಿಕ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಈ ದ್ರಾವಣದಿಂದಾಗಿ ಅಪಾಯಕಾರಿ ಸೂಕ್ಷ್ಮಜೀವಿಗಳಿಗೆ ಬೀಜದ ಮೇಲೆ ದಾಳಿ ಮಾಡುವುದು ಸಾಧ್ಯವಾಗುವುದಿಲ್ಲ. ಬೀಜ ಮೊಳಕೆಯೊಡೆಯಲು ಬೇಕಾದ ಪ್ರಾರಂಭಿಕ ಚಟುವಟಿಕೆ ದ್ರಾವಣದ ಕ್ರಿಯಾಶೀಲತೆಯಿಂದ ಚುರುಕುಗೊಳ್ಳುವುದರಿಂದ ಮೊಳಕೆಯ ವೇಗ ಹಾಗೂ ಪ್ರಮಾಣ ಹೆಚ್ಚು. ಇನ್ನು ಸುಣ್ಣ ಬೀಜಾಮೃತ ದ್ರಾವಣದ ರಸನ್ನ(ಪಿ.ಎಚ್. ಮಟ್ಟ)ವನ್ನು ಕಾಪಾಡುತ್ತದೆ. ಸಗಣಿ ಮತ್ತು ಗಂಜಲಗಳು ಹಳೆಯದಾದಷ್ಟೂ ಅವುಗಳ ಶಕ್ತಿ ಹೆಚ್ಚು.

ಬೀಜಾಮೃತದಲ್ಲಿ ಬೀಜಗಳನ್ನು ಅದ್ದುವುದರಿಂದ ಅವುಗಳ ಮೊಳಕೆಯ ಕ್ರಿಯೆ ಪ್ರಾರಂಭವಾಗುತ್ತವೆ. ಈ ಹಂತದಲ್ಲಿ ದ್ರಾವಣದಲ್ಲಿರುವ ಬೆಳವಣಿಗೆ ಪ್ರಚೋದಕ ಹಾರ್ಮೋನ್‌ಗಳು ಸಕ್ರಿಯವಾಗಿ ಬೀಜದ ಮೇಲೆ ಅಪಾಯಕಾರಿ ಸೂಕ್ಷ್ಮಜೀವಿಗಳ ದಾಳಿಯನ್ನು ಹಿಮ್ಮೆಟ್ಟಿಸುತ್ತವೆ. ಅಚ್ಚರಿ ಹುಟ್ಟಿಸುವ ಪ್ರಮಾಣದಲ್ಲಿ ಮೊಳಕೆ ಪ್ರಾರಂಭವಾಗಿ, ಪ್ರಾರಂಭಿಕ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಬೀಜಗಳು ಶಕ್ತವಾಗುತ್ತವೆ.

ಈ ರೀತಿ ಬಿತ್ತನೆ ಮಾಡಿದ ನಂತರ, ಉಳಿದ ಬೀಜಾಮೃತ ದ್ರಾವಣವನ್ನು ಹೊಲದಲ್ಲಿ ಅಲ್ಲಲ್ಲಿ ಸಿಂಪಡಿಸಿಬಿಡಿ. ಅಥವಾ ನೀರು ಹಾಯಿಸುವಾಗ ಸೇರಿಸಿಬಿಡಿ.

ಆದರೆ ಪ್ರತಿ ಬಾರಿ ಬಿತ್ತನೆ ಮಾಡುವಾಗಲೂ ಬೀಜಾಮೃತವನ್ನು ಹೊಸದಾಗಿಯೇ ಸಿದ್ಧಪಡಿಸಿಕೊಳ್ಳಲು ಮರೆಯಬೇಡಿ. ಯಾವ ಕಾರಣಕ್ಕೂ ಹಳೆಯ ಬೀಜಾಮೃತವನ್ನೇ ಬೀಜೋಪಚಾರಕ್ಕೆ ಬಳಸಬಾರದು. ಏಕೆಂದರೆ, ಅದರ ಪ್ರಭಾವದ ತೀವ್ರತೆ ಕಡಿಮೆಯಾಗಿರುತ್ತದೆ.

ಈಗ ಹೇಳಿ, ಬೀಜೋಪಚಾರಕ್ಕೆ ನೀವು ಎಷ್ಟು ಖರ್ಚು ಮಾಡಿದಿರಿ? ಸುಣ್ಣ ಬಿಟ್ಟರೆ ಉಳಿದ ಎಲ್ಲವೂ ಸುಲಭವಾಗಿ ಸಿಗುವ ವಸ್ತುಗಳೇ ಅಲ್ಲವೆ? ಒಂದು ವೇಳೆ ಬಾವಿಸ್ಟಿನ್, ಫೋರೇಟ್ ವಿಷಗಳನ್ನು ಖರೀದಿಸಿದ್ದರೆ ಆಗುತ್ತಿದ್ದ ಖರ್ಚೆಷ್ಟು? ಅದರಿಂದ ಭೂಮಿಗೆ ಹಾಗೂ ನಮಗೆ ಆಗುತ್ತಿದ್ದ ನಷ್ಟವೆಷ್ಟು? ವಿಚಾರಿಸಿ ನೋಡಿ?

(ಮುಂದುವರಿಯುವುದು)

- ಚಾಮರಾಜ ಸವಡಿ